ಎಫ್‌ಸಿಆರ್‌ಎ ನಿಯಮ ಬಿಗಿಗೊಳಿಸಿದ ಕೇಂದ್ರ: ಎನ್‌ಜಿಒಗಳ ವಿದೇಶಿ ದೇಣಿಗೆಗೆ ಕಟ್ಟುಪಾಡು
x

ಎಫ್‌ಸಿಆರ್‌ಎ ನಿಯಮ ಬಿಗಿಗೊಳಿಸಿದ ಕೇಂದ್ರ: ಎನ್‌ಜಿಒಗಳ ವಿದೇಶಿ ದೇಣಿಗೆಗೆ ಕಟ್ಟುಪಾಡು

ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ2010ರ ಅಡಿಯಲ್ಲಿನ ವಿವಿಧ ಉಲ್ಲಂಘನೆಗಳಿಗೆ ವಿಧಿಸಲಾಗುವ ದಂಡದ ಮೊತ್ತವನ್ನು ಪರಿಷ್ಕರಿಸಲಾಗಿದ್ದು, ಹೊಸ ನಿಯಮಗಳ ಮೂಲಕ ಎನ್‌ಜಿಒಗಳ ಹೊಣೆಗಾರಿಕೆ ಹೆಚ್ಚಿಸಲಾಗಿದೆ.


Click the Play button to hear this message in audio format

ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರೇತರ ಸಂಸ್ಥೆಗಳು ವಿದೇಶಿ ದೇಣಿಗೆಯನ್ನು ಸ್ವೀಕರಿಸುವ ಮತ್ತು ಬಳಸುವ ಕುರಿತಾಗಿ ಕೇಂದ್ರ ಗೃಹ ಸಚಿವಾಲಯವು ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸಿದೆ. ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ, 2010ರ ಅಡಿಯಲ್ಲಿನ ವಿವಿಧ ಉಲ್ಲಂಘನೆಗಳಿಗೆ ವಿಧಿಸಲಾಗುವ ದಂಡದ ಮೊತ್ತವನ್ನು ಪರಿಷ್ಕರಿಸಲಾಗಿದ್ದು, ಹೊಸ ನಿಯಮಾವಳಿಗಳ ಮೂಲಕ ಎನ್‌ಜಿಒಗಳ ಹೊಣೆಗಾರಿಕೆಯನ್ನು ಹೆಚ್ಚಿಸಲಾಗಿದೆ.

ಸರ್ಕಾರ ಹೊರಡಿಸಿರುವ ಗೆಜೆಟ್ ಅಧಿಸೂಚನೆಯ ಪ್ರಕಾರ, ನಿಯಮ ಉಲ್ಲಂಘಿಸುವ ಸಂಸ್ಥೆಗಳಿಗೆ ವಿಧಿಸಲಾಗುವ ದಂಡದಲ್ಲಿ ಬದಲಾವಣೆ ತರಲಾಗಿದೆ. ದೇಣಿಗೆಯ ಶೇ.20ಕ್ಕಿಂತ ಹೆಚ್ಚು ಹಣವನ್ನು ಆಡಳಿತಾತ್ಮಕ ವೆಚ್ಚಕ್ಕೆ ಬಳಸಿದರೆ, 1 ಲಕ್ಷ ರೂಪಾಯಿ ಅಥವಾ ಮಿತಿ ಮೀರಿದ ಮೊತ್ತದ ಶೇ.5 - ಇದರಲ್ಲಿ ಯಾವುದು ಹೆಚ್ಚೋ ಅದನ್ನು ದಂಡವಾಗಿ ಪಾವತಿಸಬೇಕು. ವಿದೇಶಿ ದೇಣಿಗೆಯನ್ನು ಷೇರು ಮಾರುಕಟ್ಟೆ ಅಥವಾ ಇತರೆ ಊಹಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿದರೆ 1 ಲಕ್ಷ ಅಥವಾ ಹೂಡಿಕೆ ಮಾಡಿದ ಮೊತ್ತದ ಶೇ.30 ದಂಡ ವಿಧಿಸಲಾಗುತ್ತದೆ. ಅಲ್ಲದೆ, ಇದರಿಂದ ಬಂದ ಶೇ.100 ಆದಾಯವನ್ನು ಸರ್ಕಾರ ವಶಪಡಿಸಿಕೊಳ್ಳಲಿದೆ. ಪಡೆದ ಹಣವನ್ನು ಬೇರೆ ಉದ್ದೇಶಗಳಿಗೆ ಬಳಸಿದರೆ, ಆ ಮೊತ್ತದ ಶೇ.30 ಅಥವಾ 1 ಲಕ್ಷ ರೂಪಾಯಿ (ಯಾವುದು ಹೆಚ್ಚೋ ಅದು) ದಂಡ ವಿಧಿಸಲಾಗುವುದು ಎಂದು ಹೇಳಲಾಗಿದೆ.

ಎನ್‌ಜಿಒಗಳ ಕಾರ್ಯನಿರ್ವಹಣೆಗೆ ಹೊಸ ಷರತ್ತುಗಳು

ಸರ್ಕಾರವು ಎನ್‌ಜಿಒಗಳ ನೋಂದಣಿ ಪ್ರಕ್ರಿಯೆಯಲ್ಲಿ ದೊಡ್ಡ ಬದಲಾವಣೆಗಳನ್ನು ತಂದಿದೆ. ಇನ್ನು ಮುಂದೆ ಸಂಸ್ಥೆಗಳು ತಾವು ವಿದೇಶಿ ದೇಣಿಗೆಯನ್ನು ಯಾವ ಉದ್ದೇಶಕ್ಕಾಗಿ ಬಳಸುತ್ತೇವೆ ಮತ್ತು ಯಾವ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತೇವೆ ಎಂಬುದನ್ನು ಸ್ಪಷ್ಟಪಡಿಸಬೇಕು. ಅಷ್ಟೇ ಅಲ್ಲದೆ, ಸಾಮಾಜಿಕ ಜಾಲತಾಣಗಳ ಖಾತೆಗಳ ವಿವರಗಳನ್ನು ಸಹ ಸರ್ಕಾರಕ್ಕೆ ಸಲ್ಲಿಸುವುದು ಕಡ್ಡಾಯವಾಗಿದೆ. ಹೊಸ ನಿಯಮಗಳ ಪ್ರಕಾರ, ಧಾರ್ಮಿಕ ಚಟುವಟಿಕೆಗಳ ಹೆಸರಿನಲ್ಲಿ ಹಣ ಸ್ವೀಕರಿಸುವ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ನಿಯಮಗಳನ್ನು ವಿಧಿಸಲಾಗಿದೆ. ಧಾರ್ಮಿಕ ಶಿಕ್ಷಣ, ಸಾಂಪ್ರದಾಯಿಕ ನಂಬಿಕೆಗಳ ಸಂರಕ್ಷಣೆ ಮತ್ತು ಸತ್ಸಂಗಗಳಂತಹ ಚಟುವಟಿಕೆಗಳಿಗೆ ದೇಣಿಗೆ ಪಡೆಯಬಹುದು, ಆದರೆ ಇವುಗಳು ಮತಾಂತರ ಪ್ರಕ್ರಿಯೆಯನ್ನು ಒಳಗೊಂಡಿರಬಾರದು ಎಂದು ಸ್ಪಷ್ಟಪಡಿಸಲಾಗಿದೆ.

ವಿದೇಶಿ ಪ್ರಜೆಗಳನ್ನು ಕೀ ಫಂಕ್ಷನರೀಸ್ ಆಗಿ ಹೊಂದಿರುವ ಸಂಸ್ಥೆಗಳಿಗೆ ನೋಂದಣಿ ಅಥವಾ ಅನುಮತಿ ಸಿಗುವುದು ಕಷ್ಟವಾಗಲಿದೆ. ಭಾರತೀಯ ಮೂಲದವರಲ್ಲದ ವಿದೇಶಿ ಪ್ರಜೆಗಳಿಗೆ ಸಂಸ್ಥೆಯ ನಿರ್ವಹಣಾ ಜವಾಬ್ದಾರಿ ನೀಡುವುದನ್ನು ಸರ್ಕಾರ ಸಾಮಾನ್ಯವಾಗಿ ಒಪ್ಪುವುದಿಲ್ಲ. ನಿಷ್ಕ್ರಿಯ ಎನ್‌ಜಿಒಗಳನ್ನು ನಿಯಂತ್ರಿಸಲು, ಕಳೆದ ಎರಡು ಹಣಕಾಸು ವರ್ಷಗಳಲ್ಲಿ ಕನಿಷ್ಠ 10 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿರದ ಸಂಸ್ಥೆಗಳ ಪರವಾನಗಿ ರದ್ದಾಗಬಹುದು ಅಥವಾ ನವೀಕರಣಗೊಳ್ಳುವುದಿಲ್ಲ. ಮಧ್ಯವರ್ತಿ ಸಂಸ್ಥೆಗಳ ಮೂಲಕ ಹಣ ಬಂದರೆ, ಆ ಹಣದ ಮೂಲ ಮೂಲ ಯಾರು ಎಂಬ ವಿವರವನ್ನು ಎನ್‌ಜಿಒಗಳು ಬಹಿರಂಗಪಡಿಸಬೇಕು. ವಿದೇಶಿ ದೇಣಿಗೆ ಪಡೆಯುವ ಸಂಸ್ಥೆಗಳು ಸುದ್ದಿ ಅಥವಾ ಪ್ರಚಲಿತ ವಿದ್ಯಮಾನಗಳ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವಂತಿಲ್ಲ ಅಥವಾ ಪ್ರಕಟಿಸುವಂತಿಲ್ಲ.

ಸರ್ಕಾರದಿಂದ ಕ್ಷೇತ್ರ ತನಿಖೆ

ಪ್ರತಿ ವರ್ಷ ಸಲ್ಲಿಸುವ ವಾರ್ಷಿಕ ವರದಿಯಲ್ಲಿ ಆರ್ಥಿಕ ಹೇಳಿಕೆಗಳ ಜೊತೆಗೆ, ತಾವು ಮಾಡಿದ ಕೆಲಸಗಳ ವಿವರವಾದ ಚಟುವಟಿಕೆ ವರದಿಯನ್ನು ಲಗತ್ತಿಸುವುದು ಕಡ್ಡಾಯವಾಗಿದೆ. ಒಂದು ವೇಳೆ ಪೂರ್ವ ಅನುಮತಿ ಅಡಿಯಲ್ಲಿ ಹಣ ಪಡೆಯುತ್ತಿದ್ದರೆ, ಹಿಂದಿನ ಕಂತಿನ ಶೇ.75 ಹಣವನ್ನು ಬಳಸಿದ ನಂತರವೇ ಮುಂದಿನ ಕಂತನ್ನು ಬಿಡುಗಡೆ ಮಾಡಲಾಗುವುದು. ಈ ಬಳಕೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಫೀಲ್ಡ್ ಇನ್ಕ್ವೈರಿ (ಕ್ಷೇತ್ರ ತನಿಖೆ) ನಡೆಸಲಿದೆ. ಈಗಾಗಲೇ ನೋಂದಾಯಿತವಾಗಿರುವ ಸಂಸ್ಥೆಗಳಿಗೆ ತಮ್ಮ ಚಟುವಟಿಕೆಗಳ ಉದ್ದೇಶವನ್ನು ಸರ್ಕಾರಕ್ಕೆ ತಿಳಿಸಲು ಒಂದು ವರ್ಷದ ಕಾಲಾವಕಾಶ ನೀಡಲಾಗಿದೆ. ಅಲ್ಲದೆ, ಅಪ್ಲಿಕೇಶನ್‌ನಲ್ಲಿ ಒಂದಕ್ಕಿಂತ ಹೆಚ್ಚು ರಾಜ್ಯ ಅಥವಾ ಉದ್ದೇಶವನ್ನು ಸೇರಿಸಲು ಪ್ರತಿ ಬಾರಿ 300 ರೂಪಾಯಿ ಹೆಚ್ಚುವರಿ ಶುಲ್ಕವನ್ನು ನಿಗದಿಪಡಿಸಲಾಗಿದೆ.

ಈ ತಿದ್ದುಪಡಿಗಳು ಭಾರತದಲ್ಲಿ ಎನ್‌ಜಿಒಗಳ ಪಾರದರ್ಶಕತೆಯನ್ನು ಹೆಚ್ಚಿಸುವ ಮತ್ತು ವಿದೇಶಿ ಹಣದ ದುರುಪಯೋಗವನ್ನು ತಡೆಯುವ ಗುರಿಯನ್ನು ಹೊಂದಿವೆ. ಕಳೆದ ದಶಕದಲ್ಲಿ ವಿದೇಶಿ ದೇಣಿಗೆ ಪಡೆಯುವ ಸಂಸ್ಥೆಗಳ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಭದ್ರತೆ ಮತ್ತು ಆಂತರಿಕ ವ್ಯವಹಾರಗಳ ದೃಷ್ಟಿಯಿಂದ ಸರ್ಕಾರ ಈ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಇನ್ನು ಮುಂದೆ ಎನ್‌ಜಿಒಗಳು ತಮ್ಮ ಪ್ರತಿಯೊಂದು ರೂಪಾಯಿಯ ಬಳಕೆಯ ಕುರಿತು ಸರ್ಕಾರದ ಮುಂದೆ ಉತ್ತರದಾಯಿಗಳಾಗಿರಬೇಕಾಗುತ್ತದೆ.

Read More
Next Story