ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ಪ್ರಕರಣ: ಇಬ್ಬರು ಯುವತಿಯರು ಸೇರಿ ನಾಲ್ವರ ಬಂಧನ
x

ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ಪ್ರಕರಣ: ಇಬ್ಬರು ಯುವತಿಯರು ಸೇರಿ ನಾಲ್ವರ ಬಂಧನ

ವಿದೇಶದಲ್ಲಿ ಕುಳಿತು ಭಾರತದಲ್ಲಿ ಗ್ಯಾಂಗ್‌ಸ್ಟರ್ ಅನಿಲ್ ಪಂಡಿತ್ ಎಂಬಾತನ ಸೂಚನೆಯ ಮೇರೆಗೆ ಈ ಇಡೀ ಕೃತ್ಯ ನಡೆದಿದೆ ಎಂಬ ಆಘಾತಕಾರಿ ಸತ್ಯವನ್ನು ತನಿಖಾಧಿಕಾರಿಗಳು ಬಯಲಿಗೆಳೆದಿದ್ದಾರೆ.


Click the Play button to hear this message in audio format

ಬಾಲಿವುಡ್‌ನ ನಟ ಟೈಗರ್ ಶ್ರಾಫ್ ಅವರ ಕಾರನ್ನು ಗುರಿಯಾಗಿಸಿಕೊಂಡು ಮುಂಬೈನಲ್ಲಿ ನಡೆದಿದ್ದ ಆಘಾತಕಾರಿ ಗುಂಡಿನ ದಾಳಿ ಪ್ರಕರಣ ಸಂಬಂಧ ದೆಹಲಿ ಪೊಲೀಸರ ವಿಶೇಷ ಘಟಕವು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಇಬ್ಬರು ಯುವತಿಯರು ಸೇರಿದಂತೆ ಒಟ್ಟು ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಈ ಬಂಧನದೊಂದಿಗೆ,

ವಿದೇಶದಲ್ಲಿ ಕುಳಿತು ಭಾರತದಲ್ಲಿ ಕ್ರಿಮಿನಲ್ ನೆಟ್‌ವರ್ಕ್ ನಡೆಸುತ್ತಿರುವ ಗ್ಯಾಂಗ್‌ಸ್ಟರ್ ಅನಿಲ್ ಪಂಡಿತ್ ಎಂಬಾತನ ಸೂಚನೆಯ ಮೇರೆಗೆ ಈ ಇಡೀ ಕೃತ್ಯ ನಡೆದಿದೆ ಎಂಬ ಆಘಾತಕಾರಿ ಸತ್ಯವನ್ನು ತನಿಖಾಧಿಕಾರಿಗಳು ಬಯಲಿಗೆಳೆದಿದ್ದಾರೆ. ಬಂಧಿತರನ್ನು ಹರಿಯಾಣದ ಸೋನಿಪತ್ ಜಿಲ್ಲೆಯ ಕುನಾಲ್ (21) ಮತ್ತು ಸುಮಿತ್ (19), ಹಾಗೂ ಉತ್ತರ ಪ್ರದೇಶ ಮೂಲದ ರಾಧಾ (23) ಮತ್ತು ಬಬಿತಾ (23) ಎಂದು ಗುರುತಿಸಲಾಗಿದೆ.

ಅಮೆರಿಕದಿಂದ ಆಪರೇಷನ್: ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನಂಟು?

ದೆಹಲಿ ಪೊಲೀಸರ ವಿಶೇಷ ಘಟಕದ ಹಿರಿಯ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಈ ದಾಳಿಯ ಮಾಸ್ಟರ್‌ಮೈಂಡ್ ಅನಿಲ್ ಪಂಡಿತ್ (32). ಈತ ಪ್ರಸ್ತುತ ಅಮೆರಿಕದಲ್ಲಿ ನೆಲೆಸಿದ್ದು, ಅಲ್ಲಿಂದಲೇ ಭಾರತದಲ್ಲಿರುವ ತನ್ನ ನೆಟ್‌ವರ್ಕ್ ಮೂಲಕ ಸಂಚು ರೂಪಿಸುತ್ತಿದ್ದಾನೆ. ಈತ ಜೈಲಿನಲ್ಲಿರುವ ಕುಖ್ಯಾತ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ನಿಕಟವರ್ತಿ ಎಂದು ಹೇಳಲಾಗಿದೆ. ಕುನಾಲ್ ಇತ್ತೀಚೆಗಷ್ಟೇ ಕ್ರಿಮಿನಲ್ ಪ್ರಕರಣವೊಂದರಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದ. ಈ ವೇಳೆ ಆತನ ಹಳ್ಳಿಯ ಸ್ನೇಹಿತನೊಬ್ಬ ಆತನಿಗೆ ಅನಿಲ್ ಪಂಡಿತ್‌ನ ಸಂಪರ್ಕ ಕಲ್ಪಿಸಿದ್ದ. ನಂತರದ ದಿನಗಳಲ್ಲಿ ಕುನಾಲ್, ಸಿಗ್ನಲ್ ಅಥವಾ ಟೆಲಿಗ್ರಾಂನಂತಹ ಅತ್ಯಾಧುನಿಕ ಎನ್‌ಕ್ರಿಪ್ಟ್ ಮಾಡಿದ ಮೆಸೇಜಿಂಗ್ ಆ್ಯಪ್‌ಗಳ ಮೂಲಕ ಪಂಡಿತ್ ಜೊತೆ ಸಂಪರ್ಕದಲ್ಲಿದ್ದು, ಆತನ ಪ್ರತಿಯೊಂದು ಆದೇಶವನ್ನು ಚಾಚೂತಪ್ಪದೆ ಪಾಲಿಸುತ್ತಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.

ಶಸ್ತ್ರಾಸ್ತ್ರ ಸಾಗಣೆಗೆ ಮಹಿಳೆಯರ ಬಳಕೆ: ಬೆಚ್ಚಿಬೀಳಿಸುವ 'ಮೊಡಸ್ ಒಪೆರಾಂಡಿ'

ಪೊಲೀಸ್ ತಪಾಸಣೆಯಿಂದ ತಪ್ಪಿಸಿಕೊಳ್ಳಲು ಗ್ಯಾಂಗ್‌ಸ್ಟರ್‌ಗಳು ಹೆಣ್ಣುಮಕ್ಕಳನ್ನು ಶಸ್ತ್ರಾಸ್ತ್ರ ಕ್ಯಾರಿಯರ್‌ಗಳಾಗಿ ಬಳಸಿಕೊಂಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಅನಿಲ್ ಪಂಡಿತ್ ನೀಡಿದ ಆದೇಶದಂತೆ, ಕುನಾಲ್ ಮತ್ತು ಆತನ ಸ್ನೇಹಿತ ಸುಮಿತ್ ಪಂಜಾಬ್‌ನ ಅಮೃತಸರಕ್ಕೆ ತೆರಳಿ ಅಲ್ಲಿ ಅಕ್ರಮ ಶಸ್ತ್ರಾಸ್ತ್ರ ದಂಧೆಕೋರರಿಂದ ಒಂದು ಅತ್ಯಾಧುನಿಕ ಪಿಸ್ತೂಲ್ ಮತ್ತು 20 ಸಜೀವ ಮದ್ದುಗುಂಡುಗಳನ್ನು ಖರೀದಿಸಿದ್ದರು. ಸುಮಾರು ಎರಡು ತಿಂಗಳ ಹಿಂದೆ ಕುನಾಲ್, ರಾಧಾ ಎಂಬ ಯುವತಿಯನ್ನು ಭೇಟಿಯಾಗಿ ಆಕೆಯೊಂದಿಗೆ ನಿಕಟ ಪ್ರೇಮ ಸಂಬಂಧ ಬೆಳೆಸಿದ್ದ. ಆಕೆಯ ನಂಬಿಕೆ ಗಳಿಸಿದ ನಂತರ, ತಾನು ಮಾಡುತ್ತಿರುವ ಭೂಗತ ವ್ಯವಹಾರಗಳ ಬಗ್ಗೆ ಆಕೆಗೆ ಮನವರಿಕೆ ಮಾಡಿಕೊಟ್ಟು, ಹಣದ ಆಮಿಷವೊಡ್ಡಿ ಮುಂಬೈಗೆ ಪಿಸ್ತೂಲ್ ತಲುಪಿಸುವ ಕೆಲಸಕ್ಕೆ ಒಪ್ಪಿಸಿದ್ದ. ಅಕ್ಟೋಬರ್ 15ರಂದು ಕುನಾಲ್, ರಾಧಾ ಮತ್ತು ಆಕೆಯ ಗೆಳತಿ ಬಬಿತಾಳಿಗೆ ದೆಹಲಿ ರೈಲು ನಿಲ್ದಾಣದಲ್ಲಿ ರೈಲು ಹತ್ತಿಸಿದ್ದ. ಪಿಸ್ತೂಲ್ ಮತ್ತು ಗುಂಡುಗಳನ್ನು ರಾಧಾಳ ವ್ಯಾನಿಟಿ ಬ್ಯಾಗ್‌ನಲ್ಲಿ ಅತ್ಯಂತ ಜಾಣ್ಮೆಯಿಂದ ಬಚ್ಚಿಡಲಾಗಿತ್ತು. ಪೊಲೀಸರಿಗೆ ಯಾವುದೇ ಅನುಮಾನ ಬಾರದಿರಲಿ ಎಂಬ ಕಾರಣಕ್ಕೆ ಮಹಿಳೆಯರನ್ನು ದಾಳವಾಗಿ ಬಳಸಲಾಗಿತ್ತು ಎಂದು ಹೇಳಲಾಗಿದೆ.

ಗುಂಡಿನ ದಾಳಿ, ಆತಂಕ ಮತ್ತು ತಪ್ಪಿಸಿಕೊಳ್ಳುವ ಹರಸಾಹಸ

ಅಕ್ಟೋಬರ್ 17ರಂದು ಮುಂಬೈನ ದಾದರ್ ನಿಲ್ದಾಣ ತಲುಪಿದ ಇಬ್ಬರೂ ಮಹಿಳೆಯರು, ಸ್ಥಳೀಯ ಹೋಟೆಲ್‌ ಒಂದರಲ್ಲಿ ತಂಗಿದ್ದರು. ಅಮೆರಿಕದಿಂದ ಪಂಡಿತ್ ನೀಡಿದ ಸೂಚನೆಯಂತೆ, ಅಂದು ಬೆಳಗ್ಗೆ 11 ಗಂಟೆಯ ಸುಮಾರಿಗೆ ಓರ್ವ ಅಪ್ರಾಪ್ತ ಬಾಲಕ ಹೋಟೆಲ್‌ ಬಳಿ ಬಂದು ರಾಧಾಳಿಂದ ಶಸ್ತ್ರಾಸ್ತ್ರಗಳಿದ್ದ ಬ್ಯಾಗನ್ನು ಪಡೆದುಕೊಂಡು ಹೋಗಿದ್ದ. ಶಸ್ತ್ರಾಸ್ತ್ರ ತಲುಪಿದ ಮರುದಿನವೇ, ಅಂದರೆ ಅಕ್ಟೋಬರ್ 18ರ ಸಂಜೆ ಸುಮಾರು 7 ಗಂಟೆಗೆ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ಕಾರಿನಲ್ಲಿದ್ದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು. ಆದರೆ ದಾಳಿ ನಡೆದ ತಕ್ಷಣ ಮುಂಬೈ ಪೊಲೀಸರು ನಗರದಾದ್ಯಂತ ತೀವ್ರ ನಾಕಾಬಂಧಿ ವಿಧಿಸಿದ್ದರಿಂದ ದಾಳಿಕೋರರು ಮುಂಬೈನಲ್ಲೇ ಸಿಲುಕಿಕೊಂಡರು. ಇದರಿಂದ ವಿಚಲಿತನಾದ ಅಮೆರಿಕದಲ್ಲಿದ್ದ ಪಂಡಿತ್, ಕುನಾಲ್‌ಗೆ ಕರೆ ಮಾಡಿ ಶೂಟರ್‌ಗಳು ಮುಂಬೈನಲ್ಲಿ ಸಿಲುಕಿದ್ದಾರೆ, ಅವರನ್ನು ಹೇಗಾದರೂ ಮಾಡಿ ಅಲ್ಲಿಂದ ಸುರಕ್ಷಿತವಾಗಿ ಹೊರತರಬೇಕೆಂದು ಆದೇಶಿಸಿದ್ದ. ಇತ್ತ, ಕೆಲಸ ಮುಗಿಸಿದ ರಾಧಾ ಮತ್ತು ಬಬಿತಾ ಅದೇ ದಿನ 'ದಾದರ್-ಹರಿದ್ವಾರ ಎಕ್ಸ್‌ಪ್ರೆಸ್' ರೈಲು ಹತ್ತಿ ದೆಹಲಿಗೆ ಪರಾರಿಯಾಗಿದ್ದರು. ದಾಳಿಕೋರರು ಮತ್ತು ಸಹಚರರು ಮುಂಬೈನಿಂದ ಗುಜರಾತ್‌ನ ಸೂರತ್‌ಗೆ ತಲುಪಿ, ಅಲ್ಲಿಂದ ಜೈಪುರಕ್ಕೆ ರೈಲಿನ ಮೂಲಕ ಪ್ರಯಾಣಿಸಿದ್ದರು. ಅಲ್ಲಿಂದ ಬಸ್ ಮೂಲಕ ದೆಹಲಿ ತಲುಪಿ, ನಂತರ ಭಾರತ-ನೇಪಾಳ ಗಡಿ ದಾಟಿ ನೇಪಾಳದಲ್ಲಿ ಆಶ್ರಯ ಪಡೆಯುವುದು ಇವರ ಅಂತಿಮ ಯೋಜನೆಯಾಗಿತ್ತು. ಆದರೆ, ತಾಂತ್ರಿಕ ಕಣ್ಗಾವಲು ಮತ್ತು ಖಚಿತ ಮಾಹಿತಿಯ ಮೇರೆಗೆ ಕಾರ್ಯಪ್ರವೃತ್ತರಾದ ದೆಹಲಿ ಸ್ಪೆಷಲ್ ಸೆಲ್ ಪೊಲೀಸರು, ಅಕ್ಟೋಬರ್ 20ರಂದು ದೆಹಲಿ ರೈಲ್ವೆ ನಿಲ್ದಾಣದಲ್ಲಿ ರಾಧಾ ಮತ್ತು ಬಬಿತಾಳನ್ನು ಸುತ್ತುವರಿದು ಬಂಧಿಸಿದರು. ಅದೇ ಸಮಯದಲ್ಲಿ ಹರಿಯಾಣದ ಸೋನಿಪತ್‌ನಲ್ಲಿ ಕುನಾಲ್ ಮತ್ತು ಸುಮಿತ್‌ನನ್ನು ಹೆಡೆಮುರಿ ಕಟ್ಟಲಾಯಿತು.

ನ್ಯಾಯಾಲಯದ ಕಲಾಪ, ಟ್ರಾನ್ಸಿಟ್ ರಿಮಾಂಡ್

ದೆಹಲಿ ಪೊಲೀಸರು ಬಂಧಿತ ನಾಲ್ವರನ್ನು ಹೊಸ ಅಪರಾಧ ಕಾನೂನಾದ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 35(1)(ಬಿ) ಅಡಿಯಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದರು. ಕೃತ್ಯ ನಡೆದಿರುವುದು ಮಹಾರಾಷ್ಟ್ರದ ವ್ಯಾಪ್ತಿಯಲ್ಲಿ ಆಗಿರುವುದರಿಂದ, ಮುಂಬೈ ಅಪರಾಧ ತನಿಖಾ ವಿಭಾಗದ ವಿಶೇಷ ತಂಡವು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಆರೋಪಿಗಳನ್ನು ತಮ್ಮ ವಶಕ್ಕೆ ನೀಡುವಂತೆ ಕೋರಿತು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು, ಆರೋಪಿಗಳನ್ನು ಮುಂಬೈಗೆ ಕರೆದೊಯ್ದು ವಿಚಾರಣೆ ನಡೆಸಲು ಮುಂಬೈ ಪೊಲೀಸರಿಗೆ ಮೂರು ದಿನಗಳ ಟ್ರಾನ್ಸಿಟ್ ರಿಮಾಂಡ್ ಮಂಜೂರು ಮಾಡಿದೆ. ಮುಂಬೈ ಪೊಲೀಸರು ಈ ಜಾಲದ ಮೂಲವನ್ನು ಪತ್ತೆಹಚ್ಚಲು ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಲಿದ್ದಾರೆ. ಇದಕ್ಕೂ ಮುನ್ನ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನದ ಕೋಟಾದಲ್ಲಿ ಮೂವರನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದರು ಎಂಬುದು ಗಮನಾರ್ಹ.

11ನೇ ತರಗತಿ ವಿದ್ಯಾರ್ಥಿಯ ವಶ; ಕಣ್ಣೀರಿಟ್ಟ ಕುಟುಂಬಸ್ಥರು

ಪ್ರಕರಣದ ತನಿಖೆ ಮುಂದುವರಿದಂತೆ, ಹರಿಯಾಣದ ಸೋನಿಪತ್‌ನಲ್ಲಿ 11ನೇ ತರಗತಿ ಓದುತ್ತಿರುವ ಅಪ್ರಾಪ್ತ ಬಾಲಕನೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಹಿಂದೆ ನೇಪಾಳಕ್ಕೆ ಪಲಾಯನ ಮಾಡಲು ಯತ್ನಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದ ಕುಖ್ಯಾತ ಆರೋಪಿ ರೆಹಾನ್ ಅಲಿಯಾಸ್ ಸುಕ್ಕಾ ಎಂಬಾತನ ಬಾಲ್ಯದ ಸ್ನೇಹಿತ ಈ ವಿದ್ಯಾರ್ಥಿ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಶಸ್ತ್ರಾಸ್ತ್ರ ಸರಬರಾಜು ಅಥವಾ ಮಾಹಿತಿ ರವಾನೆಯಲ್ಲಿ ಈ ಬಾಲಕನ ಪಾತ್ರವೇನಾದರೂ ಇದೆಯೇ ಎಂಬ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ. ಆದರೆ, ಈ ಬೆಳವಣಿಗೆಯಿಂದ ಆಘಾತಕ್ಕೊಳಗಾಗಿರುವ ವಿದ್ಯಾರ್ಥಿಯ ಕುಟುಂಬಸ್ಥರು, ತಮ್ಮ ಮಗ ಸಂಪೂರ್ಣ ನಿರಪರಾಧಿ ಎಂದು ಪ್ರತಿಪಾದಿಸಿದ್ದಾರೆ. "ನನ್ನ ಮಗ ಗಂಭೀರ ಅನಾರೋಗ್ಯದಿಂದ ಬಳಲುತ್ತಿದ್ದಾನೆ. ಆತ ಶಾಲೆ ಮತ್ತು ಮನೆಯನ್ನು ಬಿಟ್ಟು ಎಲ್ಲಿಗೂ ಹೋಗುವುದಿಲ್ಲ. ಜೈಲಿನಿಂದ ಬಿಡುಗಡೆಯಾದ ಮೇಲೆ ರೆಹಾನ್‌ನನ್ನು ಆತ ಭೇಟಿಯೇ ಮಾಡಿಲ್ಲ. ಪೊಲೀಸರು ಸುಖಾಸುಮ್ಮನೆ ಅಮಾಯಕ ಬಾಲಕನ ಜೀವನವನ್ನು ಹಾಳುಮಾಡುತ್ತಿದ್ದಾರೆ, ನಮಗೆ ನ್ಯಾಯ ಬೇಕು" ಎಂದು ಆತನ ತಾಯಿ ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದಾರೆ.

Read More
Next Story