ಮಹಿಳೆಯರ ಖಾಸಗಿ ಅಂಗದಲ್ಲಿ ಡ್ರಗ್ಸ್‌ ಸಾಗಣೆ: ಇಬ್ಬರು ಯುವತಿಯರು ಸೇರಿ 7 ಅಂತರರಾಜ್ಯ ಪೆಡ್ಲರ್‌ಗಳ ಬಂಧನ
x

ಮಹಿಳೆಯರ ಖಾಸಗಿ ಅಂಗದಲ್ಲಿ ಡ್ರಗ್ಸ್‌ ಸಾಗಣೆ: ಇಬ್ಬರು ಯುವತಿಯರು ಸೇರಿ 7 ಅಂತರರಾಜ್ಯ ಪೆಡ್ಲರ್‌ಗಳ ಬಂಧನ

ಕೇರಳ ರಾಜ್ಯ ಮಾದಕ ದ್ರವ್ಯ ವಿಶೇಷ ಕಾರ್ಯಪಡೆ ನಡೆಸಿದ ಈ ಭರ್ಜರಿ ಕಾರ್ಯಾಚರಣೆಯಲ್ಲಿ ಬರೋಬ್ಬರಿ 308 ಗ್ರಾಂ ಎಂಡಿಎಂಎ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ.


Click the Play button to hear this message in audio format

ಮಾದಕ ವಸ್ತುಗಳ ಸಾಗಣೆಗೆ ಡ್ರಗ್ಸ್ ಪೆಡ್ಲರ್‌ಗಳು ಅನುಸರಿಸುತ್ತಿರುವ ಹೊಸ ಹಾಗೂ ಆಘಾತಕಾರಿ ವಿಧಾನವೊಂದು ಕೇರಳದಲ್ಲಿ ಬೆಳಕಿಗೆ ಬಂದಿದೆ. ಮಹಿಳೆರಿಬ್ಬರು ತಮ್ಮ ಖಾಸಗಿ ಅಂಗದಲ್ಲಿ ನಿಷೇಧಿತ ಎಂಡಿಎಂಎ (MDMA) ಡ್ರಗ್ಸ್ ಅಡಗಿಸಿಟ್ಟುಕೊಂಡು ಸಾಗಿಸುತ್ತಿದ್ದ ಪ್ರಕರಣವನ್ನು ಭೇದಿಸುವಲ್ಲಿ ಕೇರಳ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಇಬ್ಬರು ಯುವತಿಯರು ಸೇರಿದಂತೆ ಒಟ್ಟು ಏಳು ಮಂದಿ ಅಂತರರಾಜ್ಯ ಡ್ರಗ್ಸ್ ಪೆಡ್ಲರ್‌ಗಳನ್ನು ಬಂಧಿಸಲಾಗಿದೆ.

ಕೇರಳ ರಾಜ್ಯ ಮಾದಕ ದ್ರವ್ಯ ವಿಶೇಷ ಕಾರ್ಯಪಡೆ ನಡೆಸಿದ ಈ ಭರ್ಜರಿ ಕಾರ್ಯಾಚರಣೆಯಲ್ಲಿ ಬರೋಬ್ಬರಿ 308 ಗ್ರಾಂ ಎಂಡಿಎಂಎ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ. ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ನಡೆದ ಅತಿ ದೊಡ್ಡ ಡ್ರಗ್ಸ್ ಜಪ್ತಿ ಪ್ರಕರಣ ಇದಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ

ಪಾಲಕ್ಕಾಡ್‌ನ ರೆಸಾರ್ಟ್‌ ಒಂದರಿಂದ ತ್ರಿಶೂರ್ ಕಡೆಗೆ ಕಾರೊಂದು ಅನುಮಾನಾಸ್ಪದವಾಗಿ ಬರುತ್ತಿದ್ದ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಕಾರ್ಯಾಚರಣೆಗಿಳಿದ ತನಿಖಾ ತಂಡವು, ವಾಣಿಯಂಪಾರ ಎಂಬಲ್ಲಿ ವಾಹನವನ್ನು ತಡೆದು ತಪಾಸಣೆ ನಡೆಸಿದೆ. ಈ ವೇಳೆ ಮಹಿಳೆಯೊಬ್ಬರು ತಮ್ಮ ಖಾಸಗಿ ಅಂಗದಲ್ಲಿ ಡ್ರಗ್ಸ್ ಬಚ್ಚಿಟ್ಟುಕೊಂಡಿರುವುದು ಪತ್ತೆಯಾಗಿದೆ. ಕಾರಿನಲ್ಲಿದ್ದ ಪ್ರಮುಖ ಆರೋಪಿ ಶಿಫಾಸ್ (26), ವಿದ್ಯಾ (28), ಜಿಷ್ಣು (27) ಮತ್ತು ಶ್ರೀಲಕ್ಷ್ಮಿ (20) ಎಂಬುವವರನ್ನು ಪೊಲೀಸರು ತಕ್ಷಣವೇ ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿಗಳು ನೀಡಿದ ಸುಳಿವಿನ ಆಧಾರದ ಮೇಲೆ ಡ್ರಗ್ಸ್ ಜಾಲದ ಇತರ ಸದಸ್ಯರಾದ ಶಬೀರ್ (34), ಅನ್ಶಾದ್ (31) ಹಾಗೂ ಟಿ.ಟಿ. ಸುಮೇಶ್ (25) ಎಂಬುವವರನ್ನೂ ಸಹ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣದ ಪ್ರಮುಖ ರೂವಾರಿ ಎನ್ನಲಾದ ಶಿಫಾಸ್‌ನ ಮನೆ ಮೇಲೆ ದಾಳಿ ನಡೆಸಿದಾಗ, ಅಲ್ಲಿಂದಲೂ ಹೆಚ್ಚುವರಿಯಾಗಿ 18 ಗ್ರಾಂ ಎಂಡಿಎಂಎ ಜಪ್ತಿ ಮಾಡಲಾಗಿದೆ.

ಬಂಧಿತರ ವಿರುದ್ಧ ಎನ್‌ಡಿಪಿಎಸ್ (NDPS) ಕಾಯ್ದೆಯಡಿ ಕಠಿಣ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಈ ಅಂತರರಾಜ್ಯ ಡ್ರಗ್ಸ್ ಜಾಲದ ಹಿಂದೆ ಇನ್ನಷ್ಟು ಜನರ ಕೈವಾಡವಿರುವ ಶಂಕೆ ಇರುವುದರಿಂದ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.

Read More
Next Story