ಆರು ಜನರನ್ನು ಭೀಕರ ಕೊಲೆ ಮಾಡಿದ್ದ ಪೋಕ್ಸೋ ಆರೋಪಿ ಶವವಾಗಿ ಪತ್ತೆ
x

ಆರು ಜನರನ್ನು ಭೀಕರ ಕೊಲೆ ಮಾಡಿದ್ದ ಪೋಕ್ಸೋ ಆರೋಪಿ ಶವವಾಗಿ ಪತ್ತೆ

ತನ್ನ ವಿರುದ್ಧ ದೂರು ನೀಡಿದ್ದ ಅಪ್ರಾಪ್ತ ಬಾಲಕಿ, ಆಕೆಯ ತಾಯಿ, ಅಜ್ಜಿ ಹಾಗೂ ತನ್ನದೇ ಹೆಂಡತಿ ಮತ್ತು ಇಬ್ಬರು ಹಸುಗೂಸುಗಳನ್ನು ಭೀಕರವಾಗಿ ಗಂಟಲು ಸೀಳಿ ಕೊಂದಿದ್ದ ಸರಣಿ ಹಂತಕ ರಾಜ್ ಕುಮಾರ್ ಕೊನೆಗೂ ಶವವಾಗಿ ಪತ್ತೆಯಾಗಿದ್ದಾನೆ.


ತೆಲಂಗಾಣದಲ್ಲಿ ಇಡೀ ರಾಜ್ಯವೇ ಬೆಚ್ಚಿಬೀಳುವಂತೆ ಮಾಡಿದ್ದ ಆರು ಜನರ ಸಾಮೂಹಿಕ ಹತ್ಯೆ ಪ್ರಕರಣದ ಮುಖ್ಯ ಆರೋಪಿ ಶವವಾಗಿ ಪತ್ತೆಯಾಗಿದ್ದಾನೆ. ತನ್ನ ವಿರುದ್ಧ ಪೋಕ್ಸೋ ಕಾಯ್ದೆಯಡಿ ದೂರು ನೀಡಿದ್ದ 17 ವರ್ಷದ ಅಪ್ರಾಪ್ತ ಬಾಲಕಿ, ಆಕೆಯ ತಾಯಿ, ಅಜ್ಜಿ ಸೇರಿದಂತೆ ತನ್ನ ಸ್ವಂತ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಭೀಕರವಾಗಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯ ಎರಡು ದಿನಗಳ ತಲಾಶ್ ಕೊನೆಗೂ ಅಂತ್ಯವಾಗಿದೆ.

ಪ್ರಮುಖ ಆರೋಪಿ ರಾಜ್ ಕುಮಾರ್ ಎಂಬಾತನ ಶವ ಸೋಮವಾರ ರಂಗಾರೆಡ್ಡಿ ಜಿಲ್ಲೆಯಲ್ಲಿ ಪತ್ತೆಯಾಗಿದೆ. ಈತ ಜುಲೈ 10 ರ ರಾತ್ರಿ ಈ ಭೀಕರ ಸಾಮೂಹಿಕ ಹತ್ಯಾಕಾಂಡವನ್ನು ನಡೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ವಿಷ ಸೇವಿಸಿ ಆತ್ಮಹತ್ಯೆ ಶಂಕೆ ಘಟನಾ ಸ್ಥಳದಲ್ಲಿ ರಾಜ್ ಕುಮಾರ್ ಶವದ ಪಕ್ಕದಲ್ಲಿ ವಿಷದ ಬಾಟಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾವಿಗೆ ನಿಖರ ಕಾರಣ ಏನೆಂಬುದನ್ನು ಪತ್ತೆ ಹಚ್ಚಲು ತನಿಖೆ ಮುಂದುವರಿದಿದೆ. ಆತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಯೇ ಅಥವಾ ಬೇರೆನಾದರೂ ಕಾರಣವಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ಮರಣೋತ್ತರ ಪರೀಕ್ಷೆ ಮತ್ತು ವಿಧಿವಿಜ್ಞಾನ ವರದಿಯ ನಿರೀಕ್ಷೆಯಲ್ಲಿದ್ದಾರೆ.

ಆರೋಪಿ ರಾಜ್ ಕುಮಾರ್ ಆರೂ ಜನ ಬಲಿಪಶುಗಳಿಗೆ ಮೊದಲು ಚಾಕುವಿನಿಂದ ಇರಿದು, ನಂತರ ಗಂಟಲು ಸೀಳಿ ಕ್ರೂರವಾಗಿ ಕೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆ ಮಾಡಿದ ದಿನದಿಂದಲೂ ಆತ ತಲೆಮರೆಸಿಕೊಂಡಿದ್ದರಿಂದ, ಆತನ ಪತ್ತೆಗೆ ಸಹಕರಿಸಿದವರಿಗೆ ಪೊಲೀಸರು 2 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದರು. ಆತನನ್ನು ಪತ್ತೆಹಚ್ಚಲು ಬರೋಬ್ಬರಿ 12 ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿತ್ತು. ಸೋಮವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಅಪರಿಚಿತ ವ್ಯಕ್ತಿಯೊಬ್ಬನ ಶವ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಅದು ರಾಜ್ ಕುಮಾರ್ ಶವ ಎಂಬುದನ್ನು ಗುರುತಿಸಿದ್ದಾರೆ.

ದ್ವೇಷದ ಹಿನ್ನೆಲೆಯಲ್ಲಿ ಸಾಮೂಹಿಕ ಹತ್ಯೆ

ಪೊಲೀಸ್ ಮೂಲಗಳ ಪ್ರಕಾರ, 17 ವರ್ಷದ ಅಪ್ರಾಪ್ತ ಬಾಲಕಿ ನೀಡಿದ ದೂರಿನ ಮೇರೆಗೆ ರಾಜ್ ಕುಮಾರ್‌ನನ್ನು ಈ ಹಿಂದೆ ಪೋಕ್ಸೋ (POCSO) ಕಾಯ್ದೆಯಡಿ ಬಂಧಿಸಲಾಗಿತ್ತು. ಆದರೆ, ಇತ್ತೀಚೆಗೆ ಆತ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದ. ತನ್ನ ಮೇಲಿನ ಕ್ರಿಮಿನಲ್ ಕೇಸ್‌ನ ದ್ವೇಷದ ಹಿನ್ನೆಲೆಯಲ್ಲೇ ಈತ ಈ ಕೊಲೆಗಳನ್ನು ಮಾಡಿದ್ದಾನೆ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.

ಜುಲೈ 10ರ ರಾತ್ರಿ ರಾಜ್ ಕುಮಾರ್ ಮೊದಲು ಆ ಅಪ್ರಾಪ್ತ ಬಾಲಕಿಯನ್ನು ಹೊಲಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಿದ್ದ. ನಂತರ ಆಕೆಯ ತಾಯಿ ಚಿಟ್ಯಾಲ ಲಕ್ಷ್ಮಿ (45) ಮತ್ತು ಅಜ್ಜಿ ಚಿಟ್ಯಾಲ ರುಕ್ಕಮ್ಮ (65) ಅವರನ್ನೂ ಹತ್ಯೆ ಮಾಡಿದ್ದ. ಅಷ್ಟಕ್ಕೇ ನಿಲ್ಲದ ಈತನ ಕ್ರೌರ್ಯ, ತದನಂತರ ತನ್ನ ಸ್ವಂತ ಪತ್ನಿ ಪಾರ್ವತಿ ಸರಿತಾ (30) ಹಾಗೂ ಮೂರು ಮತ್ತು ಎರಡು ವರ್ಷದ ತನ್ನ ಇಬ್ಬರು ಮುಗ್ಧ ಗಂಡು ಮಕ್ಕಳನ್ನು ಸಹ ಭೀಕರವಾಗಿ ಕಟಾವು ಮಾಡಿದ್ದ ಎಂದು ಪೊಲೀಸರು ತನಿಖೆಯ ವಿವರಗಳನ್ನು ನೀಡಿದ್ದಾರೆ.

Read More
Next Story