
ಕರ್ನಾಟಕ ಸೇರಿ ಹಲವೆಡೆ ಕೋಟಿ ಕೋಟಿ ಅಕ್ರಮ ಆಸ್ತಿ- ತೆಲಂಗಾಣದಲ್ಲಿ DSP ಅರೆಸ್ಟ್!
ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಪ್ರಕರಣದಲ್ಲಿ ತೆಲಂಗಾಣ ಡಿಎಸ್‌ಪಿ ಭೀಮ್ ರೆಡ್ಡಿ ಎಸಿಬಿ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿದ್ದಾರೆ. ಕರ್ನಾಟಕ ಮತ್ತು ತೆಲಂಗಾಣದಾದ್ಯಂತ ಇರುವ ಕೋಟ್ಯಂತರ ಮೌಲ್ಯದ ಆಸ್ತಿ, 2 ಕೆಜಿ ಚಿನ್ನ ಹಾಗೂ ಅವರ ರಹಸ್ಯ ಡೈರಿ ಪತ್ತೆಯಾದ ವಿವರ ಇಲ್ಲಿದೆ.
ಕರ್ನಾಟಕ ಸೇರಿದಂತೆ ಹಲವೆಡೆ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣದ ಭ್ರಷ್ಟಾಚಾರ ನಿಗ್ರಹ ದಳ (ACB) ಸೋಮವಾರ ಸಂಜೆ ಪೊಲೀಸ್ ಉಪಾಧೀಕ್ಷಕ (DSP) ಸಂಕಿರೆಡ್ಡಿ ಭೀಮ್ ರೆಡ್ಡಿ ಅವರನ್ನು ಬಂಧಿಸಿದೆ. ಇತ್ತೀಚೆಗೆ ಅವರ ನಿವಾಸ ಹಾಗೂ ಅವರಿಗೆ ಸಂಬಂಧಿಸಿದ ಹಲವು ಸ್ಥಳಗಳ ಮೇಲೆ ದಾಳಿ ನಡೆಸಿದ್ದ ಎಸಿಬಿ ಅಧಿಕಾರಿಗಳು, ತನಿಖೆ ಪೂರ್ಣಗೊಂಡ ಬೆನ್ನಲ್ಲೇ ಈ ಕ್ರಮ ಕೈಗೊಂಡಿದ್ದಾರೆ.
ಹೈದರಾಬಾದ್‌ನ ಪೊಲೀಸ್ ಕಂಪ್ಯೂಟರ್ ಸರ್ವಿಸಸ್ ವಿಭಾಗದಲ್ಲಿ ನಿಯೋಜನೆಗೊಂಡಿದ್ದ ಡಿಎಸ್‌ಪಿ ಭೀಮ್ ರೆಡ್ಡಿ ಅವರನ್ನು ಇಬ್ರಾಹಿಂಬಾಗ್‌ನ ವೆಸ್ಸೆಲ್ಲಾ ಮೆಡೋಸ್‌ನಲ್ಲಿರುವ ಅವರ ನಿವಾಸದಲ್ಲಿ ರಾತ್ರಿ ಸುಮಾರು 7.40 ಕ್ಕೆ ಬಂಧಿಸಲಾಯಿತು. ಅವರನ್ನು ವಿಶೇಷ ಎಸಿಬಿ ನ್ಯಾಯಾಲಯದ ಮುಂದೆ ಹಾಜರುಪಡಿಸುವ ಸಾಧ್ಯತೆಯಿದೆ. ಭೀಮ್ ರೆಡ್ಡಿ ತಮ್ಮ ಅಧಿಕಾರ ಅವಧಿಯಲ್ಲಿ ಭ್ರಷ್ಟಾಚಾರ ಮತ್ತು ಕಾನೂನುಬಾಹಿರ ಮಾರ್ಗಗಳ ಮೂಲಕ ತಮ್ಮ ಆದಾಯದ ಮೂಲಗಳಿಗಿಂತ ಹೆಚ್ಚಿನ ಆಸ್ತಿ ಗಳಿಸಿದ್ದಾರೆ ಎಂದು ಎಸಿಬಿ ತಿಳಿಸಿದೆ.
ಜುಲೈ 2 ರಂದು ತೆಲಂಗಾಣ ಮತ್ತು ಕರ್ನಾಟಕದಾದ್ಯಂತ ಈ ಅಧಿಕಾರಿಯ ನಿವಾಸ, ಅವರ ಸಂಬಂಧಿಕರು, ಸ್ನೇಹಿತರು ಮತ್ತು ಬಿನಾಮಿಗಳ ಒಟ್ಟು 16 ಸ್ಥಳಗಳ ಮೇಲೆ ಎಸಿಬಿ ಏಕಕಾಲದಲ್ಲಿ ದಾಳಿ ನಡೆಸಿತ್ತು. ನಾಲ್ಕು ದಿನಗಳ ತೀವ್ರ ತನಿಖೆಯ ನಂತರ ಜುಲೈ 6 ರ ಸೋಮವಾರದಂದು ಅವರನ್ನು ಬಂಧಿಸಲಾಗಿದೆ.
ದಾಳಿಯ ವೇಳೆ ಪತ್ತೆಯಾದ ಆಸ್ತಿಗಳ ವಿವರ:
ಭ್ರಷ್ಟ ಡಿಎಸ್‌ಪಿ ಭೀಮ್ ರೆಡ್ಡಿಗೆ ಸೇರಿದ ತೆಲಂಗಾಣ ಮತ್ತು ಕರ್ನಾಟಕದ ಪ್ರಮುಖ ನಗರಗಳಲ್ಲಿರುವ ಕೋಟ್ಯಂತರ ರೂಪಾಯಿ ಮೌಲ್ಯದ ಸ್ಥಿರ ಮತ್ತು ಚರ ಆಸ್ತಿಗಳನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ:
1. ಹೈದರಾಬಾದ್‌ನ ಇಬ್ರಾಹಿಂಬಾಗ್‌ನ ವೆಸ್ಸೆಲ್ಲಾ ಮೆಡೋಸ್‌ನಲ್ಲಿ ಒಂದು ಐಷಾರಾಮಿ ವಿಲ್ಲಾ.
2. ಟೆಲಿಕಾಂ ನಗರದಲ್ಲಿ ಜಿ+2+ಪೆಂಟ್‌ಹೌಸ್ ಹೊಂದಿರುವ ಒಂದು ವಸತಿ ಮನೆ.
3. ಟೆಲಿಕಾಂ ನಗರದ ಸಾಯಿ ಪ್ರಭಾ ರೆಸಿಡೆನ್ಸಿಯಲ್ಲಿ ಒಂದು ಫ್ಲಾಟ್.
4. ಗಚ್ಛಿಬೌಲಿಯ ಕ್ರಾಂತಿ ಸಿಯೋನ್ ಅಪಾರ್ಟ್‌ಮೆಂಟ್‌ನಲ್ಲಿ ಒಂದು ಫ್ಲಾಟ್.
5. ಮಣಿಕೊಂಡದ ಲಂಕೋಹಿಲ್ಸ್ ರಸ್ತೆಯಲ್ಲಿರುವ 500 ಚದರ ಗಜ ವಿಸ್ತೀರ್ಣದ ಜಿ+5 ವಾಣಿಜ್ಯ ಸಂಕೀರ್ಣದಲ್ಲಿ ಪಾಲು.
6. ಮಣಿಕೊಂಡ ಮರ್ರಿಚೆಟ್ಟು ಜಂಕ್ಷನ್ ಬಳಿ 3000 ಚದರ ಅಡಿ ವಿಸ್ತೀರ್ಣದ ವಾಣಿಜ್ಯ ಜಾಗ.
7. ತೇಲ್ಲಾಪುರಂನ ಅಭಿನಂದನಾ ರೆಸಿಡೆನ್ಸಿಯಲ್ಲಿ ಎರಡು ವಸತಿ ಫ್ಲಾಟ್‌ಗಳು.
8. ಪ್ರಗತಿ ರೆಸಾರ್ಟ್ಸ್‌ನಲ್ಲಿ 500 ಚದರ ಗಜಗಳ ಒಂದು ಮುಕ್ತ ನಿವೇಶನ (Open Plot).
9. ಸಂಗಾರೆಡ್ಡಿಯ ಜಹೀರಾಬಾದ್‌ನಲ್ಲಿ 3.5 ಎಕರೆ ಕೃಷಿ ಭೂಮಿ.
10. ಕರ್ನಾಟಕದಲ್ಲಿ 6 ಎಕರೆ ಕೃಷಿ ಭೂಮಿ.
11. ಕರ್ನಾಟಕದಲ್ಲಿಯೇ ಮತ್ತೊಂದು ಕಡೆಯಲ್ಲಿ 38 ಎಕರೆ ಕೃಷಿ ಭೂಮಿ.
12. ಬೆಂಗಳೂರಿನ ದೇವನಹಳ್ಳಿಯಲ್ಲಿ 1 ಎಕರೆ ಜಮೀನು.
13. ನಾಗೋಲ್‌ನ ಕಾಮಿನೇನಿ ಆಸ್ಪತ್ರೆ ಬಳಿ 200 ಚದರ ಗಜಗಳ ಒಂದು ಮುಕ್ತ ನಿವೇಶನ.
14. ಪಟಾಂಚೆರುವಿನ ಜಿಪಿಆರ್ ಹೌಸಿಂಗ್ ಸೊಸೈಟಿ ಬಳಿ 400 ಚದರ ಗಜಗಳ ಮುಕ್ತ ನಿವೇಶನ.
15. ಪಟಾಂಚೆರುವಿನಲ್ಲಿ 200 ಚದರ ಗಜಗಳ ಮತ್ತೊಂದು ಮುಕ್ತ ನಿವೇಶನ.
16. ವಿಕಾರಾಬಾದ್‌ನ ಮೋಮಿನ್‌ಪೇಟೆಯಲ್ಲಿ 1,000 ಚದರ ಗಜಗಳ ಜಮೀನು.
17. ವಿಕಾರಾಬಾದ್‌ನ ಮೋಮಿನ್‌ಪೇಟೆಯಲ್ಲಿ 2 ಎಕರೆ ಕೃಷಿ ಭೂಮಿ.
18. ಮೆಸರ್ಸ್ ಶ್ರೀ ರಾಘವೇಂದ್ರ ರಾಕ್ ಸ್ಯಾಂಡ್ ಮಿನರಲ್ಸ್ ಕಂಪನಿಯಲ್ಲಿ 75,00,000 ರೂ. ಹೂಡಿಕೆ.
19. ಸಿಸಿ ಕುಂಟಾದ ಮುಚಿಂತಲ ಗ್ರಾಮದಲ್ಲಿ 4.20 ಎಕರೆ ಕೃಷಿ ಭೂಮಿ.
ನಗದು ಮತ್ತು ಚಿನ್ನಾಭರಣಗಳು
ದಾಳಿಯ ವೇಳೆ ಡಿಎಸ್‌ಪಿ ಮನೆಯಲ್ಲಿ 3.60 ಲಕ್ಷ ರೂ. ನಗದು ಹಾಗೂ ಅವರ ಬಿನಾಮಿ ಮನೆಯಲ್ಲಿ ಬರೋಬ್ಬರಿ 40 ಲಕ್ಷ ರೂ. ನಗದು ಪತ್ತೆಯಾಗಿದೆ. ಇದರೊಂದಿಗೆ ಸುಮಾರು 2 ಕೆಜಿ ಚಿನ್ನಾಭರಣ, 20 ಕೆಜಿ ಬೆಳ್ಳಿ ವಸ್ತುಗಳು ಮತ್ತು ವಿವಿಧ ಬ್ಯಾಂಕ್ ಖಾತೆಗಳಲ್ಲಿ ಸುಮಾರು 19 ಲಕ್ಷದ 91 ಸಾವಿರ ರೂಪಾಯಿ ಬ್ಯಾಂಕ್ ಬ್ಯಾಲೆನ್ಸ್ ಇರುವುದು ಬೆಳಕಿಗೆ ಬಂದಿದೆ.
ರಹಸ್ಯ ಬಯಲು ಮಾಡಿದ ಡಿಎಸ್‌ಪಿಯ 'ಸೀಕ್ರೆಟ್ ಡೈರಿ'
ಈ ಇಡೀ ಪ್ರಕರಣದಲ್ಲಿ ಎಸಿಬಿ ಅಧಿಕಾರಿಗಳಿಗೆ ಅತ್ಯಂತ ಪ್ರಮುಖವಾದ ಪುರಾವೆ ಸಿಕ್ಕಿದ್ದು ಭೀಮ್ ರೆಡ್ಡಿ ಅವರ ಕೈಬರಹದಲ್ಲಿದ್ದ ವೈಯಕ್ತಿಕ ಡೈರಿಯಿಂದ. ಮೂಲಗಳ ಪ್ರಕಾರ, ಮೇ ತಿಂಗಳಲ್ಲಿ ಭೀಮ್ ರೆಡ್ಡಿ ತಮ್ಮ ಪತ್ನಿಯೊಂದಿಗೆ ಚಾರ್ ಧಾಮ್ ಯಾತ್ರೆಗೆ ಹೋಗುವ ಮುನ್ನ ಈ ಡೈರಿಯನ್ನು ಬರೆದಿದ್ದರು.
ಅಚ್ಚರಿಯ ವಿಷಯವೆಂದರೆ, ಈ ಡೈರಿಯಲ್ಲಿ ಅವರು ತಮಗೆ ಸೇರಿದ ಎಲ್ಲಾ ಆಸ್ತಿಗಳು, ಹೂಡಿಕೆಗಳು, ಸಾಲಗಳು ಮತ್ತು ಅವರ ಬಿನಾಮಿಗಳ ಹೆಸರುಗಳನ್ನು ವಿವರವಾಗಿ ಪಟ್ಟಿ ಮಾಡಿದ್ದರು. ಅಷ್ಟೇ ಅಲ್ಲದೆ, ಯಾತ್ರೆಗೆ ಹೊರಡುವ ಮುನ್ನ ಈ ಡೈರಿಯ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ವಾಟ್ಸ್ಯಾಪ್ ಮೂಲಕ ತಮ್ಮ ಇಬ್ಬರು ಗಂಡು ಮಕ್ಕಳಿಗೆ ಕಳುಹಿಸಿದ್ದರು ಎನ್ನಲಾಗಿದೆ.

