
TCS Nashik Case | “ಯಾವುದೇ ದೂರು ದಾಖಲಾಗಿಲ್ಲ, ನಿದಾ ಖಾನ್ ಎಚ್‌ಆರ್ ಮ್ಯಾನೇಜರ್ ಅಲ್ಲ"-ಟಿಸಿಎಸ್ ಸ್ಪಷ್ಟನೆ
ನಾಸಿಕ್‌ನ ಟಿಸಿಎಸ್ ಘಟಕದಲ್ಲಿ ಧಾರ್ಮಿಕ ಮತಾಂತರ ಮತ್ತು ಲೈಂಗಿಕ ಕಿರುಕುಳದ ಆರೋಪ ಕೇಳಿಬಂದಿದೆ. ಪ್ರಕರಣದ ತನಿಖೆಗೆ ಕೆಕಿ ಮಿಸ್ತ್ರಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ.
ಐಟಿ ದೈತ್ಯ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ನಾಸಿಕ್ ಘಟಕದಲ್ಲಿ ಕೇಳಿಬಂದಿರುವ ಧಾರ್ಮಿಕ ಮತಾಂತರ ಮತ್ತು ಲೈಂಗಿಕ ಕಿರುಕುಳದ ಗಂಭೀರ ಆರೋಪಗಳಿಗೆ ಸಂಬಂಧಿಸಿದಂತೆ ಕಂಪನಿಯು ಮಹತ್ವದ ಸ್ಪಷ್ಟನೆ ನೀಡಿದೆ. ಈ ಕುರಿತು ತನ್ನ ಆಂತರಿಕ ಚಾನೆಲ್‌ಗಳ ಮೂಲಕ ಯಾವುದೇ ದೂರುಗಳು ಬಂದಿಲ್ಲ ಎಂದು ಕಂಪನಿ ತಿಳಿಸಿದೆ.
ಟಿಸಿಎಸ್ ಸ್ಪಷ್ಟನೆ ಮತ್ತು ತನಿಖಾ ಸಮಿತಿ
ನಾಸಿಕ್ ಘಟಕದ ದಾಖಲೆಗಳನ್ನು ಪರಿಶೀಲಿಸಿದಾಗ, ನೈತಿಕತೆ (Ethics) ಅಥವಾ ಲೈಂಗಿಕ ಕಿರುಕುಳ ತಡೆ (POSH) ಸಮಿತಿಗಳಿಗೆ ಈವರೆಗೆ ಯಾವುದೇ ಅಧಿಕೃತ ದೂರುಗಳು ಬಂದಿಲ್ಲ ಎಂದು ಟಿಸಿಎಸ್ ಹೇಳಿದೆ. ಆದರೂ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ಕಂಪನಿಯು ಸ್ವತಂತ್ರ ನಿರ್ದೇಶಕ ಹಾಗೂ ಹಣಕಾಸು ತಜ್ಞ ಕೆಕಿ ಮಿಸ್ತ್ರಿ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಮೇಲ್ವಿಚಾರಣಾ ಸಮಿತಿಯನ್ನು ರಚಿಸಿದೆ.
ಏನಿದು ಪ್ರಕರಣ?
2022ರಲ್ಲಿ ಟಿಸಿಎಸ್ ಉದ್ಯೋಗಿ ದಾನಿಶ್ ಶೇಖ್ ಎಂಬಾತ ಮದುವೆಯಾಗುವುದಾಗಿ ನಂಬಿಸಿ ತನ್ನೊಂದಿಗೆ ದೈಹಿಕ ಸಂಬಂಧ ಬೆಳೆಸಿ ವಂಚಿಸಿದ್ದಾನೆ ಎಂದು ಮಹಿಳೆಯೊಬ್ಬರು ನೀಡಿದ ದೂರಿನಿಂದ ಈ ಪ್ರಕರಣ ಬೆಳಕಿಗೆ ಬಂದಿದೆ. ದಾನಿಶ್ ಶೇಖ್‌ನ ಸಹೋದರಿ ನಿದಾ ಖಾನ್ ಸಂತ್ರಸ್ತೆಯ ಧರ್ಮದ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿ, ಧರ್ಮ ಬದಲಾಯಿಸುವಂತೆ ಒತ್ತಡ ಹೇರಿದ್ದರು ಎಂದು ಆರೋಪಿಸಲಾಗಿದೆ.
ಪೊಲೀಸ್ ತನಿಖೆ ಆರಂಭವಾದ ಬೆನ್ನಲ್ಲೇ, ಮತ್ತಷ್ಟು ಮಹಿಳೆಯರು ಮುಂದೆ ಬಂದು ತಮ್ಮ ಹಿರಿಯ ಸಹೋದ್ಯೋಗಿಗಳು ಮಾನಸಿಕ ಮತ್ತು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 2022 ರಿಂದ 2026ರ ಮಾರ್ಚ್ ಅವಧಿಯಲ್ಲಿ ಈ ಘಟನೆಗಳು ನಡೆದಿವೆ ಎನ್ನಲಾಗಿದೆ.
ಪೊಲೀಸ್ ಕ್ರಮ ಮತ್ತು ಆರೋಪಿಗಳ ಪತ್ತೆ
ನಾಸಿಕ್ ಪೊಲೀಸರು ಈಗಾಗಲೇ ಎಚ್‌ಆರ್ ಮುಖ್ಯಸ್ಥೆ ಸೇರಿದಂತೆ ಏಳು ಮಂದಿಯನ್ನು ಬಂಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ನಿದಾ ಖಾನ್ ಸದ್ಯ ತಲೆಮರೆಸಿಕೊಂಡಿದ್ದು, ಮುಂಬ್ರಾದಲ್ಲಿ ಪೊಲೀಸರು ಆಕೆಗಾಗಿ ಶೋಧ ನಡೆಸುತ್ತಿದ್ದಾರೆ. ನಿದಾ ಖಾನ್ ಟಿಸಿಎಸ್‌ನಲ್ಲಿ ಎಚ್‌ಆರ್ ಮ್ಯಾನೇಜರ್ ಆಗಿರಲಿಲ್ಲ, ಬದಲಿಗೆ ಕೇವಲ 'ಪ್ರೊಸೆಸ್ ಅಸೋಸಿಯೇಟ್' ಆಗಿದ್ದರು ಎಂದು ಕಂಪನಿ ಸ್ಪಷ್ಟಪಡಿಸಿದೆ.
ಟಾಟಾ ಸನ್ಸ್ ಅಧ್ಯಕ್ಷರ ಪ್ರತಿಕ್ರಿಯೆ
ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್ ಅವರು ಈ ಘಟನೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಲೈಂಗಿಕ ಕಿರುಕುಳದಂತಹ ಘಟನೆಗಳು ಅತ್ಯಂತ ನೋವಿನ ಸಂಗತಿ ಎಂದು ಹೇಳಿರುವ ಅವರು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮತ್ತು ಪೊಲೀಸರಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

