
ಆರೋಪಿ ನಿದಾ ಖಾನ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ನಾಸಿಕ್ ಸೆಷನ್ಸ್ ನ್ಯಾಯಾಲಯ ಸೋಮವಾರ ನಡೆಸಿದೆ.
ನಾಸಿಕ್ ಟಿಸಿಎಸ್ ಪ್ರಕರಣ: ಆರೋಪಿ ನಿದಾ ಖಾನ್ ಜಾಮೀನು ಅರ್ಜಿ ವಿಚಾರಣೆ ಪೂರ್ಣ; ಮುಂದೇನಾಯಿತು?
ತಾನು ಎರಡು ತಿಂಗಳ ಗರ್ಭಿಣಿ ಹಾಗೂ ತನ್ನ ಮೇಲಿರುವ ಆರೋಪಗಳಿಗೆ ಏಳು ವರ್ಷಗಳಿಗಿಂತ ಕಡಿಮೆ ಶಿಕ್ಷೆಯಿದೆ ಎಂಬ ಕಾರಣ ನೀಡಿ ನಿದಾ ಖಾನ್ ಶನಿವಾರ (ಏ. 18) ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು.
ನಾಸಿಕ್‌ನ ಟಿಸಿಎಸ್ ಬಿಪಿಒ ಕಚೇರಿಯಲ್ಲಿ ನಡೆದಿದೆ ಎನ್ನಲಾದ ಲೈಂಗಿಕ ಕಿರುಕುಳ ಹಾಗೂ ಧಾರ್ಮಿಕ ಮತಾಂತರ ಯತ್ನ ಪ್ರಕರಣದ ಪ್ರಮುಖ ಆರೋಪಿ ನಿದಾ ಖಾನ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ನಾಸಿಕ್ ಸೆಷನ್ಸ್ ನ್ಯಾಯಾಲಯ ಸೋಮವಾರ (ಏ. 20) ನಡೆಸಿದೆ. ಎರಡೂ ಕಡೆಯ ವಾದ ಆಲಿಸಿರುವ ನ್ಯಾಯಾಲಯವು ಜಾಮೀನು ಅರ್ಜಿಯ ಮೇಲಿನ ಆದೇಶವನ್ನು ಕಾಯ್ದಿರಿಸಿದೆ.
ತಾನು ಎರಡು ತಿಂಗಳ ಗರ್ಭಿಣಿ ಹಾಗೂ ತನ್ನ ಮೇಲಿರುವ ಆರೋಪಗಳಿಗೆ ಏಳು ವರ್ಷಗಳಿಗಿಂತ ಕಡಿಮೆ ಶಿಕ್ಷೆಯಿದೆ ಎಂಬ ಕಾರಣ ನೀಡಿ ನಿದಾ ಖಾನ್ ಶನಿವಾರ (ಏ. 18) ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ನಿದಾ ಖಾನ್ ಪರ ವಕೀಲ ಬಾಬಾ ಸಯ್ಯದ್ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದು, "ಎಫ್‌ಐಆರ್‌ನಲ್ಲಿ ಬಲವಂತದ ಧಾರ್ಮಿಕ ಮತಾಂತರದ ಉಲ್ಲೇಖವಿಲ್ಲ. ಒಬ್ಬ ಮಹಿಳೆಯಾಗಿ ಮತ್ತೊಬ್ಬ ಮಹಿಳೆಯ ಗೌರವಕ್ಕೆ ಚ್ಯುತಿ ತರುವ ಕೆಲಸವನ್ನು ನನ್ನ ಕಕ್ಷಿದಾರರು ಮಾಡಿಲ್ಲ, ಆಕೆಯನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿದೆ" ಎಂದು ಮಧ್ಯಂತರ ಪರಿಹಾರಕ್ಕೆ ಮನವಿ ಮಾಡಿದ್ದಾರೆ.
ತಲೆಮರೆಸಿಕೊಂಡಿದ್ದಳಾ ನಿದಾ ಖಾನ್?
ಕಳೆದ ಒಂದು ವಾರದಿಂದ ನಿದಾ ಖಾನ್ ತಲೆಮರೆಸಿಕೊಂಡಿದ್ದಾಳೆ ಎಂದು ಸುದ್ದಿಯಾಗಿತ್ತು. ಈ ಬಗ್ಗೆ ಏಪ್ರಿಲ್ 17ರಂದು ಆಕೆಯ ಪತಿ ಮೊಯಿನ್ ನವೀದ್ ಇಕ್ಬಾಲ್ ಖಾನ್‌ರನ್ನು ವಿಚಾರಣೆ ನಡೆಸಿದಾಗ, ಆಕೆ ಏಪ್ರಿಲ್ 14ರಂದೇ ಸಂಬಂಧಿಕರ ಮನೆಗೆ ಹೋಗಿದ್ದಾಳೆ ಎಂಬ ಹೇಳಿಕೆ ನೀಡಿದ್ದರು. ಆದರೆ ಪೊಲೀಸರು ಅಲ್ಲಿಗೆ ಹೋದಾಗ ಮನೆಗೆ ಬೀಗ ಹಾಕಲಾಗಿತ್ತು ಮತ್ತು ಇಬ್ಬರ ಫೋನ್‌ಗಳು ಸ್ವಿಚ್ ಆಫ್ ಆಗಿದ್ದವು. ಆದರೆ ಆಕೆಯ ಕುಟುಂಬ, ಆಕೆ ಪರಾರಿಯಾಗಿಲ್ಲ, 2025ರಲ್ಲಿ ಮದುವೆಯಾದ ಬಳಿಕ ಮುಂಬೈಗೆ ತೆರಳಿದ್ದು, ಗರ್ಭಿಣಿಯಾಗಿರುವ ಕಾರಣ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾಳೆ ಎಂದು ಸ್ಪಷ್ಟಪಡಿಸಿದೆ.
ಎಚ್‌ಆರ್ ಮುಖ್ಯಸ್ಥೆಯಲ್ಲ, ಕೇವಲ ಪ್ರೊಸೆಸ್ ಅಸೋಸಿಯೇಟ್!
ಆರಂಭಿಕ ವರದಿಗಳಲ್ಲಿ ನಿದಾ ಖಾನ್ ಟಿಸಿಎಸ್ ಕಚೇರಿಯ 'ಎಚ್‌ಆರ್ ಮುಖ್ಯಸ್ಥೆ' ಎಂದು ಹೇಳಲಾಗಿತ್ತು. ಆದರೆ, ಆಕೆ ಕೇವಲ 'ಪ್ರೊಸೆಸ್ ಅಸೋಸಿಯೇಟ್' ಆಗಿದ್ದರು ಎಂದು ಟಿಸಿಎಸ್ ಸ್ಪಷ್ಟಪಡಿಸಿದೆ. ಏಪ್ರಿಲ್ 9 ರಂದೇ ಆಕೆಯನ್ನು ಅಮಾನತು ಮಾಡಲಾಗಿದ್ದು, ಮುಂದಿನ ಆದೇಶದವರೆಗೆ ಕಚೇರಿಗೆ ಬರುವಂತಿಲ್ಲ ಹಾಗೂ ಮನೆಯಿಂದಲೂ ಕೆಲಸ ಮಾಡುವಂತಿಲ್ಲ ಎಂದು ನಿರ್ಬಂಧ ವಿಧಿಸಲಾಗಿದೆ.
ಎಸ್‌ಐಟಿಯಿಂದ ತನಿಖೆ, ಟಾಟಾ ಸನ್ಸ್ ಕಳವಳ
ನಾಸಿಕ್ ಟಿಸಿಎಸ್ ಕಚೇರಿಯಲ್ಲಿ 18 ರಿಂದ 25 ವರ್ಷದ ಯುವತಿಯರನ್ನು ಗುರಿಯಾಗಿಸಿಕೊಂಡು ಗ್ಯಾಂಗ್ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ತಂಡವೊಂದು, ಲೈಂಗಿಕ ಕಿರುಕುಳ, ಧಾರ್ಮಿಕ ಮತಾಂತರಕ್ಕೆ ಯತ್ನ ಹಾಗೂ ಹಿಂದೂ ಉದ್ಯೋಗಿಗಳಿಗೆ ಮಾಂಸಾಹಾರ ಸೇವನೆಗೆ ಒತ್ತಾಯಿಸುತ್ತಿದ್ದ ಗಂಭೀರ ಆರೋಪಗಳಡಿ 9 ಎಫ್‌ಐಆರ್‌ಗಳು ದಾಖಲಾಗಿದ್ದು, ಈಗಾಗಲೇ 8 ಜನರನ್ನು ಬಂಧಿಸಲಾಗಿದೆ. ಪ್ರಕರಣದ ತನಿಖೆಗಾಗಿ ಎಸ್‌ಐಟಿ ರಚಿಸಲಾಗಿದೆ.
ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್ ಈ ಆರೋಪಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಟಿಸಿಎಸ್ ಸಿಒಒ ಆರತಿ ಸುಬ್ರಮಣಿಯನ್ ನೇತೃತ್ವದಲ್ಲಿ ತನಿಖೆ ನಡೆಸುವುದಾಗಿ ಘೋಷಿಸಿದ್ದಾರೆ. ಎಫ್‌ಐಆರ್ ದಾಖಲಾಗುವ ಮುನ್ನ ಆಂತರಿಕವಾಗಿ ತಮ್ಮ ಬಳಿ ಯಾವುದೇ ಅಧಿಕೃತ ದೂರುಗಳು ಬಂದಿರಲಿಲ್ಲ ಎಂದು ಟಿಸಿಎಸ್ ಹೇಳಿಕೊಂಡಿದೆ.

