
ತರುಣ್ ತೇಜ್‌ಪಾಲ್‌ಗೆ ಸುಪ್ರೀಂ ಕೋರ್ಟ್ ಆಘಾತ- ಶರಣಾಗತಿಗೆ 2 ವಾರಗಳ ಗಡುವು
ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಮಾಜಿ ತೆಹಲ್ಕಾ ಸಂಪಾದಕ ತರುಣ್ ತೇಜ್‌ಪಾಲ್‌ಗೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ಮೇಲ್ಮನವಿ ವಿಚಾರಣೆಗೆ ಮೊದಲು 2 ವಾರಗಳಲ್ಲಿ ಶರಣಾಗುವಂತೆ ಸೂಚನೆ ನೀಡಿದೆ.
ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಮಾಜಿ ತೆಹಲ್ಕಾ ಪ್ರಧಾನ ಸಂಪಾದಕ ತರುಣ್ ತೇಜ್‌ಪಾಲ್ ಅವರಿಗೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ ನೀಡಿದೆ. ಮೊದಲು ಶರಣಾಗಬೇಕು, ನಂತರ ಮೇಲ್ಮನವಿಯ ವಿಚಾರಣೆ ಎಂದು ಸ್ಪಷ್ಟಪಡಿಸಿರುವ ಸುಪ್ರೀಂ ಕೋರ್ಟ್, ಎರಡು ವಾರಗಳೊಳಗೆ ಶರಣಾಗುವಂತೆ ಮಂಗಳವಾರ ನಿರ್ದೇಶನ ನೀಡಿದೆ.
2013ರಲ್ಲಿ ಸಹೋದ್ಯೋಗಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಗೋವಾ ಪೀಠದ ಬಾಂಬೆ ಹೈಕೋರ್ಟ್ ಆಗಸ್ಟ್ 6ರಂದು ತರುಣ್ ತೇಜ್‌ಪಾಲ್ ಅವರನ್ನು ದೋಷಿ ಎಂದು ತೀರ್ಪು ನೀಡಿ, 10 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಈ ಮೂಲಕ 2021ರಲ್ಲಿ ಗೋವಾ ಸೆಷನ್ಸ್ ಕೋರ್ಟ್ ನೀಡಿದ್ದ ಖುಲಾಸೆ ತೀರ್ಪನ್ನು ಹೈಕೋರ್ಟ್ ರದ್ದುಗೊಳಿಸಿತ್ತು.
63 ವರ್ಷದ ತರುಣ್ ತೇಜ್‌ಪಾಲ್ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದು, ತಾವು ಪ್ರಕರಣದಲ್ಲಿ ಸಂತ್ರಸ್ತರಾಗಿದ್ದೇವೆ ಎಂದು ವಾದಿಸಿದ್ದಾರೆ. ಇದೇ ವೇಳೆ, ತೇಜ್‌ಪಾಲ್‌ಗೆ ವಿಧಿಸಿರುವ ಶಿಕ್ಷೆಯನ್ನು ಹೆಚ್ಚಿಸುವಂತೆ ಕೋರಿ ಗೋವಾ ಸರ್ಕಾರವೂ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಸುಪ್ರೀಂ ಕೋರ್ಟ್‌ನಲ್ಲಿ ಏನಾಯಿತು?
ಮಂಗಳವಾರ ಸುಪ್ರೀಂ ಕೋರ್ಟ್‌ನಲ್ಲಿ ಗೋವಾ ಸರ್ಕಾರ ಮತ್ತು ತರುಣ್ ತೇಜ್‌ಪಾಲ್ ಪರ ವಕೀಲರ ನಡುವೆ ಪ್ರಕರಣಕ್ಕೆ ಸಂಬಂಧಿಸಿದ ವಾದ ಮಂಡನೆಯಾಯಿತು. ಸುಪ್ರೀಂ ಕೋರ್ಟ್ ನಿಯಮಗಳ ಪ್ರಕಾರ, ಶಿಕ್ಷೆ ಮತ್ತು ದೋಷಾರೋಪ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವ ವ್ಯಕ್ತಿಯು ಸಾಮಾನ್ಯವಾಗಿ ಮೊದಲು ಶರಣಾಗಬೇಕು. ಮೇಲ್ಮನವಿಯೊಂದಿಗೆ ಶರಣಾಗತಿಯ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ ಅಥವಾ ಶರಣಾಗತಿಯಿಂದ ವಿನಾಯಿತಿ ನೀಡುವಂತೆ ಪ್ರತ್ಯೇಕ ಅರ್ಜಿ ಸಲ್ಲಿಸಬಹುದು.
ಗೋವಾ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ತೇಜ್‌ಪಾಲ್ ಮೊದಲು ಶರಣಾಗಿರುವ ಪ್ರಮಾಣಪತ್ರ ಸಲ್ಲಿಸಿದರೆ ಮಾತ್ರ ಅವರ ಮೇಲ್ಮನವಿಯನ್ನು ವಿಚಾರಣೆಗೆ ಪರಿಗಣಿಸಬಹುದು ಎಂದು ವಾದಿಸಿದರು. ಇಲ್ಲವಾದರೆ ಶರಣಾಗತಿಯಿಂದ ವಿನಾಯಿತಿ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ತಿಳಿಸಿದರು.
ಇದಕ್ಕೆ ತೇಜ್‌ಪಾಲ್ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ವಿರೋಧ ವ್ಯಕ್ತಪಡಿಸಿದರು. ಬಾಂಬೆ ಹೈಕೋರ್ಟ್ ಈಗಾಗಲೇ ತೇಜ್‌ಪಾಲ್ ಅವರ ಶಿಕ್ಷೆಗೆ ತಡೆ ನೀಡಿದೆ. ಹೀಗಿರುವಾಗ ಮತ್ತೆ ಶರಣಾಗುವಂತೆ ಹೇಳುವುದು ಸೂಕ್ತವಲ್ಲ ಎಂದು ಅವರು ವಾದಿಸಿದರು. ಸುಪ್ರೀಂ ಕೋರ್ಟ್ ತೇಜ್‌ಪಾಲ್‌ಗೆ ಯಾವುದೇ ಪರಿಹಾರ ನೀಡಬಾರದು ಎಂದು ನಿರ್ಧರಿಸಿದರೆ, ತಾವು ಕಸ್ಟಡಿಗೆ ಹೋಗಲು ಸಿದ್ಧ ಎಂದು ಕಪಿಲ್ ಸಿಬಲ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಏನಿದು ಪ್ರಕರಣ?
2013ರ ನವೆಂಬರ್ 7 ಮತ್ತು 8ರಂದು ಗೋವಾದ ಪಣಜಿಯಲ್ಲಿ ನಡೆದ ಅಧಿಕೃತ ಕಾರ್ಯಕ್ರಮದ ವೇಳೆ ಹೋಟೆಲ್ ಲಿಫ್ಟ್‌ನೊಳಗೆ ಮಹಿಳಾ ಪತ್ರಕರ್ತೆಯೊಬ್ಬರ ಮೇಲೆ ತೇಜ್‌ಪಾಲ್ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಆರೋಪದ ಹಿನ್ನೆಲೆಯಲ್ಲಿ 2013ರ ನವೆಂಬರ್ 30ರಂದು ತೇಜ್‌ಪಾಲ್ ಅವರನ್ನು ಬಂಧಿಸಲಾಗಿತ್ತು.
2017ರ ಸೆಪ್ಟೆಂಬರ್ 29ರಂದು ಅತ್ಯಾಚಾರ, ಲೈಂಗಿಕ ಕಿರುಕುಳ ಹಾಗೂ ಅಕ್ರಮವಾಗಿ ಬಂಧನದಲ್ಲಿರಿಸುವುದು ಸೇರಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಅವರ ವಿರುದ್ಧ ಆರೋಪಗಳನ್ನು ಹೊರಿಸಲಾಗಿತ್ತು. ಆದರೆ ತೇಜ್‌ಪಾಲ್ ಆರೋಪಗಳನ್ನು ನಿರಾಕರಿಸಿದ್ದರು.
2021ರ ಮೇನಲ್ಲಿ ಗೋವಾ ಸೆಷನ್ಸ್ ಕೋರ್ಟ್, ಆರೋಪಗಳನ್ನು ಸಂಶಯಾತೀತವಾಗಿ ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಹೇಳಿ ತೇಜ್‌ಪಾಲ್ ಅವರನ್ನು ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಗೋವಾ ಸರ್ಕಾರ ಬಾಂಬೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.
ನಂತರ ಆಗಸ್ಟ್ 6ರಂದು ಬಾಂಬೆ ಹೈಕೋರ್ಟ್‌ನ ಗೋವಾ ಪೀಠ ತೇಜ್‌ಪಾಲ್ ಅವರನ್ನು ದೋಷಿ ಎಂದು ತೀರ್ಪು ನೀಡಿ, 10 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಇದೀಗ ಈ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ಕಾನೂನು ಹೋರಾಟದಲ್ಲಿ, ಮೊದಲು ಶರಣಾಗುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.ಸ

