
ದಳಪತಿ ವಿಜಯ್ ಪಟ್ಟಾಭಿಷೇಕಕ್ಕೆ ಸಿಗದ ಗ್ರೀನ್ ಸಿಗ್ನಲ್; ತಪ್ಪದ ಮ್ಯಾಜಿಕ್ ಸಂಖ್ಯೆ ತಲೆನೋವು
ಬಹುಮತದ ಮ್ಯಾಜಿಕ್ ಸಂಖ್ಯೆ 118 ತಲುಪಲು ವಿಜಯ್ ಮತ್ತೆ ವಿಫಲರಾಗಿದ್ದು, ರಾಜಭವನದಿಂದ ಸದ್ಯಕ್ಕೆ ಪ್ರಮಾಣವಚನ ಸ್ವೀಕರಿಸಲು ಆಹ್ವಾನ ಲಭಿಸಿಲ್ಲ ಎಂದು ಮೂಲಗಳು ತಿಳಿಸಿವೆ.
ತಮಿಳುನಾಡು ರಾಜಕೀಯದಲ್ಲಿ ಹೊಸ ಇತಿಹಾಸ ಬರೆಯಲು ಹೊರಟ ನಟ, ಟಿವಿಕೆ (TVK) ಮುಖ್ಯಸ್ಥ ವಿಜಯ್ ಅವರಿಗೆ ಅಧಿಕಾರದ ಗದ್ದುಗೆ 'ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ' ಎಂಬಂತಾಗಿದೆ.
ಬಹುಮತದ ಮ್ಯಾಜಿಕ್ ಸಂಖ್ಯೆ 118 ತಲುಪಲು ವಿಜಯ್ ಮತ್ತೆ ವಿಫಲರಾಗಿದ್ದು, ರಾಜಭವನದಿಂದ ಸದ್ಯಕ್ಕೆ ಪ್ರಮಾಣವಚನ ಸ್ವೀಕರಿಸಲು ಆಹ್ವಾನ ಲಭಿಸಿಲ್ಲ ಎಂದು ಮೂಲಗಳು ತಿಳಿಸಿವೆ. ಆ ಮೂಲಕ ಶನಿವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂಬ ವದಂತಿಗಳಿಗೆ ಬ್ರೇಕ್ ಬಿದ್ದಿದೆ.
234 ಸದಸ್ಯ ಬಲದ ವಿಧಾನಸಭೆಯಲ್ಲಿ ವಿಜಯ್ ಅವರಿಗೆ ಕಾಂಗ್ರೆಸ್, ಸಿಪಿಐ, ಸಿಪಿಎಂ ಬೆಂಬಲ ನೀಡಿದ್ದು, ಒಟ್ಟು 116 ಶಾಸಕರ ಬೆಂಬಲ ದೊರೆತಿದೆ, ಬಹುಮತಕ್ಕೆ ಇನ್ನೂ 2 ಸ್ಥಾನಗಳ ಕೊರತೆಯಿದೆ ಎಂದು ಹೇಳಲಾಗಿದೆ.
ಆರಂಭದಲ್ಲಿ ವಿಸಿಕೆ (VCK), ಎಎಂಎಂಕೆ(AMMK) ಮತ್ತು ಐಯುಎಂಎಲ್ (IUML) ಪಕ್ಷಗಳೊಂದಿಗೆ ವಿಜಯ್ ನಡೆಸಿದ ಸುದೀರ್ಘ ಸಂಧಾನ ಮಾತುಕತೆಗಳು ಫಲ ನೀಡಿಲ್ಲ. ಐಯುಎಂಎಲ್ ತಾನು ಟಿವಿಕೆ ಮೈತ್ರಿಯ ಭಾಗವಲ್ಲ ಎಂದು ಸ್ಪಷ್ಟಪಡಿಸಿದರೆ, ದಿನಾಕರನ್ ನೇತೃತ್ವದ ಎಎಂಎಂಕೆ ಪಕ್ಷವು ತಾನು ಎಐಎಡಿಎಂಕೆ ಸರ್ಕಾರ ರಚಿಸಲು ಬೆಂಬಲಿಸುವುದಾಗಿ ರಾಜ್ಯಪಾಲರಿಗೆ ಪತ್ರ ಬರೆದಿದೆ.
ರಾಜಕೀಯ ಅನಿಶ್ಚಿತತೆಯ ನಡುವೆ, ಕುದುರೆ ವ್ಯಾಪಾರದ ಭೀತಿ ಜೋರಾಗಿದ್ದು, ಕಾಂಗ್ರೆಸ್ ತನ್ನ ಐವರು ಶಾಸಕರನ್ನು ಹೈದರಾಬಾದ್‌ನ ರೆಸಾರ್ಟ್‌ಗೆ ಸ್ಥಳಾಂತರಿಸಿದೆ.
ರಾಜಭವನದಲ್ಲಿ ನಡೆದಿದ್ದೇನು?
ಶುಕ್ರವಾರ ಸಂಜೆ ರಾಜ್ಯಪಾಲ ಆರ್.ವಿ. ಅರ್ಲೇಕರ್ ಅವರನ್ನು ಭೇಟಿಯಾದ ವಿಜಯ್, ತಮಗೆ 118 ಶಾಸಕರ ಬೆಂಬಲವಿದೆ ಎಂದು ಪ್ರತಿಪಾದಿಸಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದರು. ಆದರೆ, ಶಾಸಕರ ಬೆಂಬಲದ ಲಿಖಿತ ದಾಖಲೆ ಒದಗಿಸುವಲ್ಲಿ ಅವರು ವಿಫಲರಾದ ಕಾರಣ, ಶನಿವಾರ ನಡೆಯಬೇಕಿದ್ದ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ರಾಜ್ಯಪಾಲರು ಗ್ರೀನ್ ಸಿಗ್ನಲ್ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.
ಈ ಎಲ್ಲ ಬೆಳವಣಿಗೆಗಳ ನಡುವೆಯೂ ಟಿವಿಕೆ ಶಾಸಕ ಮೇರಿ ವಿಲ್ಸನ್ ಅವರು ಪ್ರಮಾಣವಚನ ನಿಗದಿಯಂತೆ ನಡೆಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. "ವಿಜಯ್ ಅವರು ಕೇವಲ ಐದು ವರ್ಷಗಳಿಗಲ್ಲ, ಭವಿಷ್ಯಕ್ಕೂ ಮುಖ್ಯಮಂತ್ರಿಯಾಗಲಿದ್ದಾರೆ. ಇಂದು ತಡರಾತ್ರಿಯೊಳಗೆ ನಿಮಗೆ ಸಿಹಿ ಸುದ್ದಿ ಸಿಗಲಿದೆ," ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಒಟ್ಟಿನಲ್ಲಿ, ತಮಿಳುನಾಡು ರಾಜಕೀಯ ಕ್ಷಣಕ್ಕೊಂದು ತಿರುವು ಪಡೆದುಕೊಂಡಿದ್ದು, ಇಂದು ರಾತ್ರಿ ವಿಜಯ್ ಮ್ಯಾಜಿಕ್ ಸಂಖ್ಯೆ ತಲುಪುತ್ತಾರೆಯೇ ಅಥವಾ ಅಧಿಕಾರದಿಂದ ವಂಚಿತರಾಗುತ್ತಾರೆಯೇ ಎಂಬುದು ಕುತೂಹಲ ಮೂಡಿಸಿದೆ.
ಈ ಮಧ್ಯೆ, ಡಿಎಂಕೆ ಹಾಗೂ ಎಐಎಡಿಎಂಕೆ ಸಮ್ಮಿಶ್ರ ಸರ್ಕಾರ ರಚಿಸುವ ಸಾಧ್ಯತೆಗಳ ಬಗ್ಗೆ ಮಾತುಗಳು ಕೇಳಿಬರುತ್ತಿವೆ.

