Tamil Nadu CM Vijays cabinet formation: Home and Police departments handed over to CM
x

ತಮಿಳುನಾಡು ಸಿಎಂ ವಿಜಯ್

ಖಾಸಗಿ ಶಾಲೆಗಳಿಗೆ ಸಿಏಂ ವಿಜಯ್‌ ಮೂಗುದಾರ; ಶುಲ್ಕ ಪ್ರದರ್ಶನ ಕಡ್ಡಾಯ, ನಿಯಮ ಮೀರಿದರೆ ಮಾನ್ಯತೆ ರದ್ದು

ರಾಜ್ಯದ ಎಲ್ಲಾ ಖಾಸಗಿ ಶಾಲೆಗಳು ಸರ್ಕಾರ ನಿಗದಿಪಡಿಸಿರುವ ಬೋಧನಾ ಶುಲ್ಕದ ಸಂಪೂರ್ಣ ವಿವರಗಳನ್ನು ಶಾಲೆಯ ಸೂಚನಾ ಫಲಕಗಳಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಆದೇಶಿಸಲಾಗಿದೆ.


ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ನೇತೃತ್ವದ ಸರ್ಕಾರವು ಖಾಸಗಿ ಶಿಕ್ಷಣ ಸಂಸ್ಥೆಗಳ ಅನಗತ್ಯ ಶುಲ್ಕ ವಸೂಲಿಗೆ ಬ್ರೇಕ್‌ ಹಾಕಿದೆ. ಖಾಸಗಿ ಶಾಲೆಗಳ ದುಬಾರಿ ಶುಲ್ಕ ಹೇರಿಕೆಗೆ ಪೂರ್ಣವಿರಾಮ ಇಡಲು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.

ರಾಜ್ಯದ ಎಲ್ಲಾ ಖಾಸಗಿ ಶಾಲೆಗಳು ಸರ್ಕಾರ ನಿಗದಿಪಡಿಸಿರುವ ಬೋಧನಾ ಶುಲ್ಕದ ಸಂಪೂರ್ಣ ವಿವರಗಳನ್ನು ಶಾಲೆಯ ಸೂಚನಾ ಫಲಕಗಳಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಸೂಚಿಸಿದ್ದಾರೆ.

ದೂರುಗಳ ಬೆನ್ನಲ್ಲೇ ಕಠಿಣ ಕ್ರಮ

ತಮಿಳುನಾಡಿನಾದ್ಯಂತ ಹಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರದ ನಿಯಮಾವಳಿ ಗಾಳಿಗೆ ತೂರಿ ಪೋಷಕರಿಂದ ನಿಗದಿತ ಪ್ರಮಾಣಕ್ಕಿಂತ ದುಪ್ಪಟ್ಟು ಶುಲ್ಕ ವಸೂಲಿ ಮಾಡುತ್ತಿವೆ ಎಂಬ ಗಂಭೀರ ದೂರುಗಳು ಕೇಳಿಬಂದಿದ್ದವು. ಪೋಷಕರ ಈ ಅಳಲಿಗೆ ತಕ್ಷಣವೇ ಸ್ಪಂದಿಸಿದ ಶಾಲಾ ಶಿಕ್ಷಣ ಇಲಾಖೆ, ಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ ಈ ಕ್ರಮ ಕೈಗೊಂಡಿದೆ.

ಜೂನ್ 4 ರಿಂದ ಶಾಲೆಗಳು ಆರಂಭ

ಬೇಸಿಗೆ ರಜೆಯ ನಂತರ ಜೂನ್ 4 ರಿಂದ ತಮಿಳುನಾಡಿನ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳು ಪುನರಾರಂಭವಾಗಲಿವೆ. ಶಾಲೆ ಆರಂಭದ ಮೊದಲ ದಿನದಿಂದಲೇ ಈ ನಿಯಮ ಜಾರಿಗೆ ಬರಲಿದೆ. ಒಂದು ವೇಳೆ ಯಾವುದೇ ಖಾಸಗಿ ಶಾಲೆಯು ಸರ್ಕಾರ ನಿಗದಿಪಡಿಸಿದ ಮೊತ್ತಕ್ಕಿಂತ ಒಂದು ರೂಪಾಯಿ ಹೆಚ್ಚಿನ ಶುಲ್ಕ ವಿಧಿಸಿದರೂ ಅಂತಹ ಶಾಲೆಗಳ ಮಾನ್ಯತೆಯನ್ನು ತಕ್ಷಣದಿಂದಲೇ ರದ್ದುಗೊಳಿಸಲಾಗುವುದು ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಭಾನುವಾರ ಎಚ್ಚರಿಕೆ ನೀಡಿದ್ದಾರೆ.

ಹಿಡನ್ ಚಾರ್ಜಸ್‌ಗೆ ಬಿತ್ತು ಬೀಗ

ತಮಿಳುನಾಡಿನಲ್ಲಿ ಸದ್ಯ 13 ಸಾವಿರಕ್ಕೂ ಹೆಚ್ಚು ಮಾನ್ಯತೆ ಪಡೆದ ಖಾಸಗಿ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಅಷ್ಟೂ ಶಾಲೆಗಳಿಗೆ ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ನೋಟಿಸ್ ರವಾನಿಸಿದೆ. ದಾಖಲಾತಿ ಹೆಸರಿನಲ್ಲಿ ಪೋಷಕರಿಂದ ಯಾವುದೇ ರೀತಿಯ ಅನಗತ್ಯ ಡೊನೇಷನ್ ಸಂಗ್ರಹಿಸುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ. ಪ್ರತಿಯೊಂದು ಪೈಸೆಯ ವಹಿವಾಟೂ ಕೂಡ ಪಾರದರ್ಶಕವಾಗಿರಬೇಕು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಶುಲ್ಕ ನಿರ್ಧಾರ ಹೇಗೆ?

ಈ ಮಹತ್ವದ ಆದೇಶವನ್ನು 'ತಮಿಳುನಾಡು ಶಾಲೆಗಳ ಶುಲ್ಕ ಸಂಗ್ರಹ ನಿಯಂತ್ರಣ ತಿದ್ದುಪಡಿ ಕಾಯ್ದೆ'ಯ ಅಡಿ ಹೊರಡಿಸಲಾಗಿದೆ. ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಪ್ರಮುಖ ಶಿಕ್ಷಣ ತಜ್ಞರನ್ನು ಒಳಗೊಂಡ ವಿಶೇಷ ಸಮಿತಿ ಇರಲಿದೆ. ಈ ಸಮಿತಿಯೇ ಶಾಲೆಗಳ ಮೂಲಸೌಕರ್ಯ ಆಧರಿಸಿ 'ಪ್ರಮಾಣಿತ ಶುಲ್ಕ'ವನ್ನು ವೈಜ್ಞಾನಿಕವಾಗಿ ನಿರ್ಧರಿಸುತ್ತದೆ.

ದೂರು ನೀಡಲು ಮುಕ್ತ ಅವಕಾಶ

ಖಾಸಗಿ ಶಾಲೆಗಳ ದೌರ್ಜನ್ಯದ ವಿರುದ್ಧ ಪೋಷಕರು ಧ್ವನಿ ಎತ್ತಲು ಸರ್ಕಾರ ಮುಕ್ತ ಅವಕಾಶ ಕಲ್ಪಿಸಿದೆ. ಯಾವುದೇ ಶಾಲೆಗಳು ಅತಿಯಾದ ಶುಲ್ಕ ಕೇಳಿದರೆ ಅಥವಾ ನಿಗದಿತ ಶುಲ್ಕದ ಬೋರ್ಡ್ ಹಾಕದಿದ್ದರೆ, ಪೋಷಕರು ಯಾವುದೇ ಹಿಂಜರಿಕೆಯಿಲ್ಲದೆ ಸಂಬಂಧಪಟ್ಟ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ನೇರವಾಗಿ ದೂರು ನೀಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸಿಎಂ ಜೋಸೆಫ್ ವಿಜಯ್ ಅವರ ಈ ಐತಿಹಾಸಿಕ ನಿರ್ಧಾರಕ್ಕೆ ತಮಿಳುನಾಡಿನ ಮಧ್ಯಮ ವರ್ಗದ ಹಾಗೂ ಬಡ ಪೋಷಕರಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದ್ದು, ಶಿಕ್ಷಣ ಮಾಫಿಯಾದಲ್ಲಿ ನಡುಕ ಶುರುವಾಗಿದೆ.

Read More
Next Story