120 ಶಾಸಕರೊಂದಿಗೆ ಸರ್ಕಾರ ರಚನೆಗೆ ವಿಜಯ್‌ ಹಕ್ಕು ಮಂಡನೆ
x
ನಟ ವಿಜಯ್‌

120 ಶಾಸಕರೊಂದಿಗೆ ಸರ್ಕಾರ ರಚನೆಗೆ ವಿಜಯ್‌ ಹಕ್ಕು ಮಂಡನೆ

ವಿಜಯ್ ಅವರಿಗೆ ಬಹುಮತ ಸಾಬೀತುಪಡಿಸಲು ಅಗತ್ಯವಿದ್ದ ಸಂಖ್ಯಾಬಲದ ಕೊರತೆಯನ್ನು ವಿಸಿಕೆ ಪಕ್ಷ ನೀಗಿಸಿದೆ. ಮಹತ್ವದ ಬೆಳವಣಿಗೆಯಲ್ಲಿ ಶನಿವಾರ ವಿಸಿಕೆ ಪಕ್ಷವು ಬೇಷರತ್‌ ಬೆಂಬಲ ನೀಡಿದ್ದು, 120 ಶಾಸಕರ ಬೆಂಬಲ ಪತ್ರದೊಂದಿಗೆ ವಿಜಯ್‌ ಅವರು ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡನೆ ಮಾಡಿದ್ದಾರೆ.


ತಮಿಳುನಾಡು ರಾಜಕೀಯದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ಹಗ್ಗಜಗ್ಗಾಟ ಕೊನೆಗೂ ತಾರ್ಕಿಕ ಅಂತ್ಯ ಕಂಡಿದೆ. ನಟ, ರಾಜಕಾರಣಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ನೇತೃತ್ವದ ಸರ್ಕಾರ ರಚನೆಗೆ ಈಗ ವಿದುತಲೈ ಚಿರುತೈಗಲ್ ಕಚ್ಚಿ' (VCK) ಬೇಷರತ್ ಬೆಂಬಲ ಘೋಷಿಸಿದ್ದು, ಇದರೊಂದಿಗೆ ರಾಜ್ಯದಲ್ಲಿ ಮೊದಲ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬರುವ ಸಾಧ್ಯತೆ ದಟ್ಟವಾಗಿದೆ.

ವಿಸಿಕೆ ಬೆಂಬಲ; ವಿಜಯ್‌ಗೆ ಆನೆಬಲ

ವಿಜಯ್ ಅವರಿಗೆ ಬಹುಮತ ಸಾಬೀತುಪಡಿಸಲು ಅಗತ್ಯವಿದ್ದ ಸಂಖ್ಯಾಬಲದ ಕೊರತೆಯನ್ನು ವಿಸಿಕೆ ಪಕ್ಷ ನೀಗಿಸಿದೆ. ಮಹತ್ವದ ಬೆಳವಣಿಗೆಯಲ್ಲಿ ಶನಿವಾರ ವಿಸಿಕೆ ಹಾಗೂ ಮುಸ್ಲಿಂ ಲೀಗ್‌ ಬೇಷರತ್‌ ಬೆಂಬಲ ನೀಡಿದ್ದು, 120 ಶಾಸಕರ ಬೆಂಬಲ ಪತ್ರದೊಂದಿಗೆ ವಿಜಯ್‌ ಅವರು ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡನೆ ಮಾಡಿದ್ದಾರೆ. ಬಹುಮತದ ಶಾಸಕರ ಪಟ್ಟಿಯೊಂದಿಗೆ ವಿಜಯ್ ಲೋಕಭವನಕ್ಕೆ ಬರುವ ಮಾಹಿತಿ ಹಿನ್ನೆಲೆಯಲ್ಲಿ ರಾಜ್ಯಪಾಲ ಆರ್.ವಿ. ಅರ್ಲೇಕರ್ ಅವರು ಕೇರಳಕ್ಕೆ ನಿಗದಿಯಾಗಿದ್ದ ತಮ್ಮ ಪ್ರಯಾಣವನ್ನೂ ವಿಳಂಬ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಎಐಎಡಿಎಂಕೆಯಲ್ಲಿ ಬಂಡಾಯ?

ಒಂದೆಡೆ ವಿಜಯ್ ಸರ್ಕಾರ ರಚನೆಯ ಸಿದ್ಧತೆಯಲ್ಲಿದ್ದರೆ, ಇತ್ತ ಪ್ರಬಲ ವಿರೋಧ ಪಕ್ಷವಾದ ಎಐಎಡಿಎಂಕೆಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಹಿರಿಯ ನಾಯಕ ಸಿ.ವಿ. ಷಣ್ಮುಗಂ ಅವರು ಪಕ್ಷ ವಿಭಜನೆಯ ಯೋಜನೆಯಲ್ಲಿದ್ದಾರೆ ಎಂದು ವರದಿಯಾಗಿದೆ. ಸುಮಾರು 30ಕ್ಕೂ ಹೆಚ್ಚು ಶಾಸಕರು ಷಣ್ಮುಗಂ ಬೆಂಬಲಕ್ಕಿದ್ದು, ಅವರಲ್ಲಿ ಕೆಲವರು ವಿಜಯ್ ನೇತೃತ್ವದ ಟಿವಿಕೆ ಬೆಂಬಲಿಸಲು ಒಲವು ತೋರಿದ್ದಾರೆ ಎನ್ನಲಾಗಿದೆ.

ಚೆನ್ನೈನಲ್ಲಿರುವ ಷಣ್ಮುಗಂ ಅವರ ಕಚೇರಿಯಲ್ಲಿ ಇಂದು ಪ್ರಮುಖ ಸಭೆ ನಡೆದಿದ್ದು, ಪುದುಚೇರಿಯ ರೆಸಾರ್ಟ್ನಿಂದ ಮರಳಿದ ಹಿರಿಯ ನಾಯಕರಾದ ಎಸ್.ಪಿ. ವೇಲುಮಣಿ, ಎಂ.ಆರ್. ವಿಜಯಭಾಸ್ಕರ್ ಮತ್ತು ಸಿ. ವಿಜಯಭಾಸ್ಕರ್ ಸೇರಿದಂತೆ ಹಲವರು ಭಾಗವಹಿಸಿರುವುದು ಕುತೂಹಲ ಕೆರಳಿಸಿದೆ.

ನಾಲ್ಕನೇ ಬಾರಿ ರಾಜ್ಯಪಾಲರ ಭೇಟಿ

ಕಳೆದ ನಾಲ್ಕು ದಿನಗಳಲ್ಲಿ ವಿಜಯ್‌ ಅವರು ನಾಲ್ಕನೇ ಬಾರಿಗೆ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ. ಬುಧವಾರ ಮತ್ತು ಗುರುವಾರ ರಾಜ್ಯಪಾಲರನ್ನು ಭೇಟಿಯಾಗಿದ್ದರೂ, ಬಹುಮತಕ್ಕೆ ಅಗತ್ಯವಿರುವ 118 ಶಾಸಕರ ಬೆಂಬಲ ಸಾಬೀತುಪಡಿಸಲು ವಿಜಯ್ ವಿಫಲರಾಗಿದ್ದರು. ಹಾಗಾಗಿ ಸರ್ಕಾರ ರಚನೆಗೆ ಆಹ್ವಾನ ನೀಡಲು ರಾಜ್ಯಪಾಲರು ನಿರಾಕರಿಸಿದ್ದರು. ಆದರೆ, ಈಗ ವಿಸಿಕೆ ಬೆಂಬಲದಿಂದಾಗಿ ಇಡೀ ಚಿತ್ರಣವೇ ಬದಲಾಗಿದೆ. ನಾಳೆ ಪ್ರಮಾಣ ವಚನ ಸ್ವೀಕಾರ ನಿಗದಿಯಾಗಿದೆ ಎಂದು ಹೇಳಲಾಗಿದೆ.

ಒಟ್ಟಿನಲ್ಲಿ ತಮಿಳುನಾಡಿನ ರಾಜಕೀಯ ಹಗ್ಗಜಗ್ಗಾಟ ಈಗ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದ್ದು, ನಟ ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಕ್ಷಣಗಣನೆ ಆರಂಭವಾಗಿದೆ.

Read More
Next Story