ತಮಿಳುನಾಡಲ್ಲಿ ದಾಖಲೆ ಮತದಾನದಿಂದ ಡಿಎಂಕೆಗೆ ನಡುಕ? ಇತಿಹಾಸ ಮರುಕಳಿಸಿದರೆ ಆಡಳಿತ ಬದಲಾವಣೆ ಪಕ್ಕಾ!
x
ತಮಿಳುನಾಡಿನಲ್ಲಿ ಮತ ಚಲಾವಣೆಗೆ ಕಾದಿದ್ದ ಮಹಿಳೆಯರು (ಸಂಗ್ರಹ ಚಿತ್ರ)

ತಮಿಳುನಾಡಲ್ಲಿ ದಾಖಲೆ ಮತದಾನದಿಂದ ಡಿಎಂಕೆಗೆ ನಡುಕ? ಇತಿಹಾಸ ಮರುಕಳಿಸಿದರೆ ಆಡಳಿತ ಬದಲಾವಣೆ ಪಕ್ಕಾ!

2021ರಲ್ಲಿ ಕೋವಿಡ್ ಸಾಂಕ್ರಾಮಿಕದ ನಡುವೆಯೂ ಶೇ.73.63ರಷ್ಟು ಮತದಾನವಾಗಿತ್ತು. ಆಗ ಎಐಎಡಿಎಂಕೆ ವಿರುದ್ಧದ ಅಲೆಯನ್ನು ಸಮರ್ಥವಾಗಿ ಬಳಸಿಕೊಂಡ ಡಿಎಂಕೆ ದಶಕದ ಬಳಿಕ ಮತ್ತೆ ಗದ್ದುಗೆ ಏರಿತ್ತು.


Click the Play button to hear this message in audio format

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಮತದಾರರು ಹಿಂದೆಂದೂ ಕಾಣದ ಅಭೂತಪೂರ್ವ ಉತ್ಸಾಹ ತೋರಿದ್ದು, ರಾಜ್ಯದ ಚುನಾವಣಾ ಇತಿಹಾಸದಲ್ಲೇ ಅತ್ಯಧಿಕ ಎನ್ನಲಾದ ಶೇ. 84.69ರಷ್ಟು ದಾಖಲೆಯ ಮತದಾನವಾಗಿದೆ. ವಿಶೇಷವಾಗಿ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಹಕ್ಕು ಚಲಾಯಿಸಿದ್ದು, ಶೇ.85.76ರಷ್ಟು ಮಹಿಳೆಯರು ಮತಗಟ್ಟೆಗೆ ಬಂದಿದ್ದಾರೆ. ತಮಿಳುನಾಡಿನ ರಾಜಕೀಯ ಇತಿಹಾಸವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಭಾರಿ ಪ್ರಮಾಣದಲ್ಲಿ ಮತದಾನವಾದಾಗಲೆಲ್ಲಾ ಆಡಳಿತ ವಿರೋಧಿ ಅಲೆ ಎದ್ದು ಹಾಲಿ ಸರ್ಕಾರ ಪತನಗೊಂಡಿದೆ. ಹೀಗಾಗಿ, ಪ್ರಸ್ತುತ ಆಡಳಿತಾರೂಢ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ (DMK) ಪಾಳಯದಲ್ಲಿ ಈ ಬಾರಿಯ ದಾಖಲೆಯ ಮತದಾನ ಆತಂಕ ಹಾಗೂ ನಡುಕ ಹುಟ್ಟಿಸಿದೆ.

ಇತಿಹಾಸದ ಪುಟಗಳನ್ನು ತಿರುವಿ ನೋಡಿದಾಗ...

2006ರಿಂದೀಚೆಗೆ ತಮಿಳುನಾಡು ನಿರಂತರವಾಗಿ ಶೇ.70ಕ್ಕೂ ಹೆಚ್ಚು ಮತದಾನವನ್ನು ದಾಖಲಿಸುತ್ತಾ ಬಂದಿದೆ. 2011ರಲ್ಲಿ ಶೇ.78.29ರಷ್ಟು ಬೃಹತ್ ಮತದಾನವಾದಾಗ ವಿದ್ಯುತ್ ಕಡಿತ, ಬೆಲೆ ಏರಿಕೆ ಹಾಗೂ 2ಜಿ ಹಗರಣದ ಬಗ್ಗೆ ಜನರ ಆಕ್ರೋಶ ಭುಗಿಲೆದ್ದಿತ್ತು. ಇದರ ಪರಿಣಾಮವಾಗಿ ಡಿಎಂಕೆ ಅಧಿಕಾರ ಕಳೆದುಕೊಂಡು ಜಯಲಲಿತಾ ನೇತೃತ್ವದ ಎಐಎಡಿಎಂಕೆ (AIADMK) ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತ್ತು.

ಬಳಿಕ 2016ರಲ್ಲಿ ಶೇ.74.81ರಷ್ಟು ಮತದಾನವಾಗಿ ಜಯಲಲಿತಾ ಮತ್ತೆ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಇನ್ನು 2021ರಲ್ಲಿ ಕೋವಿಡ್ ಸಾಂಕ್ರಾಮಿಕದ ನಡುವೆಯೂ ಶೇ.73.63ರಷ್ಟು ಮತದಾನವಾಗಿತ್ತು. ಆಗ ಎಐಎಡಿಎಂಕೆ ವಿರುದ್ಧದ ಅಲೆಯನ್ನು ಸಮರ್ಥವಾಗಿ ಬಳಸಿಕೊಂಡ ಡಿಎಂಕೆ ದಶಕದ ಬಳಿಕ ಮತ್ತೆ ಗದ್ದುಗೆ ಏರಿತ್ತು. ಅಂದರೆ, ದೊಡ್ಡ ಮಟ್ಟದ ಮತದಾನ ಯಾವಾಗಲೂ ತಮಿಳುನಾಡಿನಲ್ಲಿ ಸ್ಪಷ್ಟ ಹಾಗೂ ನಿರ್ಣಾಯಕ ಜನಾದೇಶವನ್ನು ನೀಡುತ್ತಾ ಬಂದಿದೆ. ಹೀಗಾಗಿ ಈ ಬಾರಿಯ ಶೇ. 84.69ರಷ್ಟು ಬೃಹತ್ ಮತದಾನ ಆಡಳಿತ ವಿರೋಧಿ ಅಲೆಯ ಮುನ್ಸೂಚನೆಯೇ ಎಂಬ ಚರ್ಚೆ ಶುರುವಾಗಿದೆ.

ಮಹಿಳಾ ಮತದಾರರೇ ಗೇಮ್ ಚೇಂಜರ್ಸ್!

ಇತ್ತೀಚಿನ ಚುನಾವಣೆಗಳಲ್ಲಿ ತಮಿಳುನಾಡಿನಲ್ಲಿ ಮಹಿಳಾ ಮತದಾರರ ಪಾಲ್ಗೊಳ್ಳುವಿಕೆ ಗಣನೀಯವಾಗಿ ಹೆಚ್ಚಾಗುತ್ತಿದ್ದು, ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಬರುತ್ತಿದ್ದಾರೆ. ರಾಜ್ಯದಲ್ಲಿ 5.67 ಕೋಟಿಗೂ ಅಧಿಕ ಮತದಾರರಿದ್ದು, ಈ ಬಾರಿಯಂತೂ ಮಹಿಳಾ ಮತದಾನದ ಪ್ರಮಾಣ ಶೇ.85.76ರಷ್ಟಿದ್ದು, ಇವರೇ ಸೋಲು-ಗೆಲುವಿನ ರೂವಾರಿಗಳಾಗಲಿದ್ದಾರೆ. ಎಲ್ಲಾ ಪ್ರಮುಖ ಪಕ್ಷಗಳು ಮಹಿಳೆಯರನ್ನೇ ಗುರಿಯಾಗಿಸಿಕೊಂಡು ತಮ್ಮ ಪ್ರಣಾಳಿಕೆಯಲ್ಲಿ ನೇರ ನಗದು ವರ್ಗಾವಣೆ ಮತ್ತು ಕಲ್ಯಾಣ ಯೋಜನೆಗಳ ಭರವಸೆಗಳನ್ನು ನೀಡಿವೆ. ನಿಶ್ಯಬ್ದ ಅಲೆಯ ಹಿಂದಿರುವ ಪ್ರಮುಖ ಶಕ್ತಿಯಾಗಿರುವ ಮಹಿಳೆಯರ ಒಲವು ಯಾರ ಕಡೆಗಿದೆ ಎಂಬುದು ಕುತೂಹಲ ಮೂಡಿಸಿದೆ.

ಮೂರನೇ ಶಕ್ತಿಯಾಗಿ ನಟ ವಿಜಯ್ ಪ್ರಭಾವವೆಷ್ಟು?

ದಾಖಲೆಯ ಮತದಾನವಾದರೂ ತಮಿಳುನಾಡು ರಾಜಕಾರಣ ಬಹುಪಾಲು ಡಿಎಂಕೆ (ಕಾಂಗ್ರೆಸ್ ಮೈತ್ರಿ) ಮತ್ತು ಎಐಎಡಿಎಂಕೆ (ಬಿಜೆಪಿ-ಎನ್‌ಡಿಎ) ಮೈತ್ರಿಕೂಟಗಳ ನಡುವಿನ ಸ್ಪರ್ಧೆಯಾಗಿಯೇ ಉಳಿದಿದೆ. ಎಷ್ಟೇ ದೊಡ್ಡ ಮಟ್ಟದ ಮತದಾನವಾದರೂ ಸಣ್ಣ ಪಕ್ಷಗಳು ಅದನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುವಲ್ಲಿ ವಿಫಲವಾಗಿವೆ.

ಆದರೆ, ಈ ಬಾರಿ ಕಾಲಿವುಡ್ ನಟ ದಳಪತಿ ವಿಜಯ್ ಅವರ 'ತಮಿಳಗ ವೆಟ್ರಿ ಕಳಗಂ' (TVK) ಪ್ರಬಲ ಮೂರನೇ ಶಕ್ತಿಯಾಗಿ ಕಣಕ್ಕಿಳಿದಿದೆ. ಡಿಎಂಕೆ ಮತ್ತು ಬಿಜೆಪಿ ಎರಡನ್ನೂ ತೀವ್ರವಾಗಿ ವಿರೋಧಿಸುತ್ತಿರುವ ವಿಜಯ್, ಯುವ ಸಮುದಾಯ ಹಾಗೂ ಮೊದಲ ಬಾರಿಯ ಮತದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಹಿಂದಿನ ಇತಿಹಾಸವನ್ನು ಅಳಿಸಿಹಾಕಿ ನಟ ವಿಜಯ್ ಹೊಸ ಮೈಲಿಗಲ್ಲು ಸ್ಥಾಪಿಸುತ್ತಾರೆಯೇ ಅಥವಾ ಎಂದಿನಂತೆ ದ್ರಾವಿಡ ಪಕ್ಷಗಳಾದ ಡಿಎಂಕೆ ಹಾಗೂ ಎಐಎಡಿಎಂಕೆ ನಡುವೆಯೇ ಅಧಿಕಾರ ಹಂಚಿಕೆಯಾಗಲಿದೆಯೇ ಎಂಬ ಪ್ರಶ್ನೆಗೆ ಮೇ 4ರಂದು ಉತ್ತರ ಸಿಗಲಿದೆ.

Read More
Next Story