ತಮಿಳುನಾಡು ಸಿಎಂ ರೇಸ್: ವಿಜಯ್ ಹಾದಿ ಸುಗಮ, ಟಿ.ವಿ.ಕೆಗೆ ವಿಸಿಕೆ ಬೇಷರತ್ ಬೆಂಬಲ
x

'ವಿದುತಲೈ ಚಿರುತೈಗಳ್ ಕಚ್ಚಿ' (ವಿಸಿಕೆ - VCK) ಪಕ್ಷವು ಬೇಷರತ್ ಬೆಂಬಲ ಘೋಷಿಸಿದೆ. ಈ ಮೂಲಕ ಮ್ಯಾಜಿಕ್ ನಂಬರ್ (118) ಕೊರತೆಯಿಂದಾಗಿ ವಿಳಂಬವಾಗಿದ್ದ ವಿಜಯ್ ಅವರ ಮುಖ್ಯಮಂತ್ರಿ ಪಟ್ಟವೇರುವ ಕನಸು ನನಸಾಗುವ ಹಾದಿ ಬಹುತೇಕ ಸುಗಮವಾಗಿದೆ.

ತಮಿಳುನಾಡು ಸಿಎಂ ರೇಸ್: ವಿಜಯ್ ಹಾದಿ ಸುಗಮ, ಟಿ.ವಿ.ಕೆಗೆ 'ವಿಸಿಕೆ' ಬೇಷರತ್ ಬೆಂಬಲ

ಆರಂಭದಲ್ಲಿ ವಿಸಿಕೆ ನಾಯಕ ತೋಳ್ ತಿರುಮಾವಳವನ್ ಅವರು ಉಪಮುಖ್ಯಮಂತ್ರಿ ಹುದ್ದೆ ಹಾಗೂ ಕ್ಯಾಬಿನೆಟ್ ಸ್ಥಾನಗಳಿಗಾಗಿ ಪಟ್ಟು ಹಿಡಿದಿದ್ದಾರೆ ಎಂಬ ಮಾತುಗಳು ಬಲವಾಗಿ ಕೇಳಿಬಂದಿದ್ದವು.


Click the Play button to hear this message in audio format

ತಮಿಳುನಾಡಿನಲ್ಲಿ ಸರ್ಕಾರ ರಚನೆಯ ಕಗ್ಗಂಟಿಗೆ ಕೊನೆಗೂ ತೆರೆಬಿದ್ದಿದ್ದು, ನಟ 'ದಳಪತಿ' ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿ.ವಿ.ಕೆ) ಪಕ್ಷಕ್ಕೆ 'ವಿದುತಲೈ ಚಿರುತೈಗಳ್ ಕಚ್ಚಿ' (ವಿಸಿಕೆ - VCK) ಪಕ್ಷವು ಬೇಷರತ್ ಬೆಂಬಲ ಘೋಷಿಸಿದೆ. ಈ ಮೂಲಕ ಮ್ಯಾಜಿಕ್ ನಂಬರ್ (118) ಕೊರತೆಯಿಂದಾಗಿ ವಿಳಂಬವಾಗಿದ್ದ ವಿಜಯ್ ಅವರ ಮುಖ್ಯಮಂತ್ರಿ ಪಟ್ಟವೇರುವ ಕನಸು ನನಸಾಗುವ ಹಾದಿ ಬಹುತೇಕ ಸುಗಮವಾಗಿದೆ.

ಇತ್ತೀಚೆಗೆ ಮುಕ್ತಾಯಗೊಂಡ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಟಿ.ವಿ.ಕೆ, ಸರ್ಕಾರ ರಚಿಸಲು ಅಗತ್ಯವಿದ್ದ 118 ಶಾಸಕರ ಬಲವನ್ನು ಹೊಂದಿರಲಿಲ್ಲ (ವಿಜಯ್ ಎರಡು ಕ್ಷೇತ್ರಗಳಲ್ಲಿ ಗೆದ್ದಿರುವುದರಿಂದ ಪಕ್ಷದ ನೈಜ ಸಂಖ್ಯಾಬಲ 107ಕ್ಕೆ ಕುಸಿದಿತ್ತು). ಇದೀಗ, 2 ಸ್ಥಾನಗಳನ್ನು ಗೆದ್ದಿರುವ ವಿಸಿಕೆ ಪಕ್ಷವು ತನ್ನ ಬೆಂಬಲವನ್ನು ಖಚಿತಪಡಿಸಿದೆ.

ಈಗಾಗಲೇ ಕಾಂಗ್ರೆಸ್ (5 ಶಾಸಕರು), ಸಿಪಿಐ (2 ಶಾಸಕರು) ಮತ್ತು ಸಿಪಿಐ(ಎಂ) (2 ಶಾಸಕರು) ಪಕ್ಷಗಳು ಟಿ.ವಿ.ಕೆಗೆ ತಮ್ಮ ಬೆಂಬಲವನ್ನು ಘೋಷಿಸಿವೆ. ಇದೀಗ ವಿಸಿಕೆ (2 ಶಾಸಕರು) ಸೇರ್ಪಡೆಯೊಂದಿಗೆ ಟಿ.ವಿ.ಕೆ ಮೈತ್ರಿಕೂಟದ ಒಟ್ಟು ಸಂಖ್ಯಾಬಲ 118ಕ್ಕೆ ತಲುಪಲಿದ್ದು, ಬಹುಮತ ಸಾಬೀತುಪಡಿಸಲು ಅಗತ್ಯವಿರುವ ಮ್ಯಾಜಿಕ್ ನಂಬರ್ ಅನ್ನು ಯಶಸ್ವಿಯಾಗಿ ಮುಟ್ಟಿದೆ.

ಉಪಮುಖ್ಯಮಂತ್ರಿ ಪಟ್ಟದ ಬೇಡಿಕೆ ಕೈಬಿಟ್ಟ ವಿಸಿಕೆ:

ಆರಂಭದಲ್ಲಿ ವಿಸಿಕೆ ನಾಯಕ ತೋಳ್ ತಿರುಮಾವಳವನ್ ಅವರು ಉಪಮುಖ್ಯಮಂತ್ರಿ ಹುದ್ದೆ ಹಾಗೂ ಕ್ಯಾಬಿನೆಟ್ ಸ್ಥಾನಗಳಿಗಾಗಿ ಪಟ್ಟು ಹಿಡಿದಿದ್ದಾರೆ ಎಂಬ ಮಾತುಗಳು ಬಲವಾಗಿ ಕೇಳಿಬಂದಿದ್ದವು. ಆದರೆ ಶುಕ್ರವಾರ ತಡರಾತ್ರಿ ನಡೆದ ಪಕ್ಷದ ಉನ್ನತ ಮಟ್ಟದ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ (ಗವರ್ನರ್ ಆಳ್ವಿಕೆ) ಜಾರಿಯಾಗುವುದನ್ನು ತಡೆಯುವ ಉದ್ದೇಶದಿಂದ ಟಿ.ವಿ.ಕೆಗೆ ಯಾವುದೇ ಷರತ್ತುಗಳಿಲ್ಲದೆ ಬೆಂಬಲ ನೀಡಲು ತೀರ್ಮಾನಿಸಲಾಗಿದೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

ರಾಜ್ಯಪಾಲರಿಗೆ ಬೆಂಬಲ ಪತ್ರ ಸಲ್ಲಿಕೆ ಬಾಕಿ:

ವಿಸಿಕೆ ಪಕ್ಷದ ಶಾಸಕಾಂಗ ಪಕ್ಷದ ನಾಯಕರು ಶೀಘ್ರದಲ್ಲೇ ಚೆನ್ನೈಗೆ ಆಗಮಿಸಿ, ಟಿ.ವಿ.ಕೆ ಕೇಳಿರುವ ನಮೂನೆಯಲ್ಲಿಯೇ ಬೆಂಬಲ ಪತ್ರಕ್ಕೆ ಸಹಿ ಹಾಕಲಿದ್ದಾರೆ. ಈ ಪತ್ರವನ್ನು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರಿಗೆ ಸಲ್ಲಿಸುವ ಮೂಲಕ ವಿಜಯ್ ಅವರು ಸರ್ಕಾರ ರಚನೆಗೆ ಅಧಿಕೃತವಾಗಿ ಹಕ್ಕು ಮಂಡಿಸಲಿದ್ದಾರೆ. ದಶಕಗಳಿಂದ ತಮಿಳುನಾಡು ರಾಜಕಾರಣದಲ್ಲಿ ಪ್ರಾಬಲ್ಯ ಮೆರೆದಿದ್ದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳ ಪಾರಮ್ಯವನ್ನು ಬದಿಗೊತ್ತಿ, ಮೂರನೇ ಬದಲಿ ಶಕ್ತಿಯಾಗಿ ಟಿ.ವಿ.ಕೆ ಅಧಿಕಾರ ಹಿಡಿಯುತ್ತಿರುವುದು ಐತಿಹಾಸಿಕ ಕ್ಷಣವಾಗಿದೆ.

Read More
Next Story