ರೀಲ್ಸ್​ ಕಾಟ,  ಈ  52 ದೇವಸ್ಥಾನಗಳಲ್ಲಿ ಸ್ಮಾರ್ಟ್‌ಫೋನ್‌ ನಿಷೇಧ: ಕ್ಯಾಮೆರಾ ಇಲ್ಲದ ಮೊಬೈಲ್‌ಗೆ ಅನುಮತಿ
x

ರಾಜ್ಯದ 52 ಪ್ರಮುಖ ದೇವಸ್ಥಾನಗಳ ಆವರಣದಲ್ಲಿ ಸ್ಮಾರ್ಟ್‌ಫೋನ್ ಕೊಂಡೊಯ್ಯುವುದು ಮತ್ತು ಬಳಸುವುದನ್ನು ನಿಷೇಧಿಸಲಾಗಿದೆ.

ರೀಲ್ಸ್​ ಕಾಟ, ಈ 52 ದೇವಸ್ಥಾನಗಳಲ್ಲಿ ಸ್ಮಾರ್ಟ್‌ಫೋನ್‌ ನಿಷೇಧ: ಕ್ಯಾಮೆರಾ ಇಲ್ಲದ ಮೊಬೈಲ್‌ಗೆ ಅನುಮತಿ

ದೇವಸ್ಥಾನಗಳ ಪಾವಿತ್ರ್ಯ ಕಾಪಾಡಲು ತಮಿಳುನಾಡಿನ 52 ಪ್ರಮುಖ ದೇವಾಲಯಗಳಲ್ಲಿ ಸ್ಮಾರ್ಟ್‌ಫೋನ್ ನಿಷೇಧಿಸಲಾಗಿದೆ. ಭಕ್ತರು ಮೊಬೈಲ್ ಜಮಾ ಮಾಡಿ 5 ರೂ. ಶುಲ್ಕ ಪಾವತಿಸಬೇಕು.


Click the Play button to hear this message in audio format

ದೇವಸ್ಥಾನಗಳ ಪಾವಿತ್ರ್ಯ, ಶಾಂತಿ ಮತ್ತು ಧಾರ್ಮಿಕ ವಾತಾವರಣವನ್ನು ಕಾಪಾಡುವ ಉದ್ದೇಶದಿಂದ ತಮಿಳುನಾಡು ಸರ್ಕಾರ ಮಹತ್ವದ ನಿಯಮ ಜಾರಿಗೆ ತಂದಿದ್ದು, ರಾಜ್ಯದ 52 ಪ್ರಮುಖ ದೇವಸ್ಥಾನಗಳ ಆವರಣದಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಕೊಂಡೊಯ್ಯುವುದು ಮತ್ತು ಬಳಸುವುದನ್ನು ನಿಷೇಧಿಸಲಾಗಿದೆ. ಮಂಗಳವಾರದಿಂದಲೇ ಹೊಸ ನಿಯಮ ಜಾರಿಗೆ ಬಂದಿದ್ದು, ಸ್ಮಾರ್ಟ್‌ಫೋನ್ ಹೊಂದಿರುವ ಭಕ್ತರು ದೇವಸ್ಥಾನದ ಪ್ರವೇಶದ್ವಾರದಲ್ಲಿರುವ ನಿಗದಿತ ಕೇಂದ್ರಗಳಲ್ಲಿ ಮೊಬೈಲ್‌ಗಳನ್ನು ಜಮಾ ಮಾಡಬೇಕಾಗುತ್ತದೆ.

ಕ್ಯಾಮೆರಾ ಇಲ್ಲದ ಸಾಮಾನ್ಯ ಮೊಬೈಲ್‌ಗಳನ್ನು ದೇವಸ್ಥಾನದೊಳಗೆ ಕೊಂಡೊಯ್ಯಲು ಅವಕಾಶ ನೀಡಲಾಗಿದೆ. ಇದೇ ಈ ಹೊಸ ನಿಯಮದ ಪ್ರಮುಖ ವಿನಾಯಿತಿಯಾಗಿದೆ.

ಸ್ಮಾರ್ಟ್‌ಫೋನ್ ಇಟ್ಟರೆ 5 ರೂಪಾಯಿ ಶುಲ್ಕ

ಹೊಸ ವ್ಯವಸ್ಥೆಯ ಪ್ರಕಾರ, ದೇವಸ್ಥಾನಕ್ಕೆ ಬರುವ ಭಕ್ತರು ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಪ್ರವೇಶದ್ವಾರದಲ್ಲಿರುವ ನಿಗದಿತ ಜಮಾ ಕೇಂದ್ರಗಳಲ್ಲಿ ಒಪ್ಪಿಸಬೇಕು. ಪ್ರತಿ ಮೊಬೈಲ್‌ಗೆ 5 ರೂಪಾಯಿ ಶುಲ್ಕ ಪಾವತಿಸಬೇಕು.

ಮೊಬೈಲ್ ಒಪ್ಪಿಸಿದ ಬಳಿಕ ಭಕ್ತರಿಗೆ ಸ್ವೀಕೃತಿ ಚೀಟಿ ಅಥವಾ ಪ್ಲಾಸ್ಟಿಕ್ ಟೋಕನ್ ನೀಡಲಾಗುತ್ತದೆ. ಮೊಬೈಲ್ ವಾಪಸ್ ಪಡೆಯುವವರೆಗೆ ಈ ಚೀಟಿಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು. ಮೊಬೈಲ್ ಹಿಂಪಡೆಯುವ ಸಂದರ್ಭದಲ್ಲಿ ಚೀಟಿಯಲ್ಲಿರುವ ವಿವರಗಳನ್ನು ಪರಿಶೀಲಿಸಿ ಸಾಧನವನ್ನು ಹಸ್ತಾಂತರಿಸಲಾಗುತ್ತದೆ.

ಸರ್ಕಾರ ಸ್ಪಷ್ಟಪಡಿಸಿರುವಂತೆ, ಈ 5 ರೂಪಾಯಿ ಶುಲ್ಕವನ್ನು ಆದಾಯ ಗಳಿಸುವ ಉದ್ದೇಶದಿಂದ ವಿಧಿಸಲಾಗುತ್ತಿಲ್ಲ. ಮೊಬೈಲ್‌ಗಳನ್ನು ಸುರಕ್ಷಿತವಾಗಿ ಸಂಗ್ರಹಿಸಲು ಅಗತ್ಯವಿರುವ ಸಿಬ್ಬಂದಿ, ಸುರಕ್ಷತಾ ಲಾಕರ್‌ಗಳು ಹಾಗೂ ಇತರ ಮೂಲಸೌಕರ್ಯಗಳ ನಿರ್ವಹಣಾ ವೆಚ್ಚಕ್ಕಾಗಿ ಈ ಮೊತ್ತವನ್ನು ಬಳಸಲಾಗುತ್ತದೆ.

ಕ್ಯಾಮೆರಾ ಇಲ್ಲದ ಮೊಬೈಲ್‌ಗೆ ವಿನಾಯಿತಿ

ಸ್ಮಾರ್ಟ್‌ಫೋನ್‌ಗಳ ಮೇಲಿನ ನಿಷೇಧದಿಂದ ಎಲ್ಲ ರೀತಿಯ ಮೊಬೈಲ್‌ಗಳಿಗೂ ಸಂಪೂರ್ಣ ನಿರ್ಬಂಧ ಹೇರಲಾಗಿಲ್ಲ. ಕ್ಯಾಮೆರಾ ಹೊಂದಿರದ ಮೊಬೈಲ್‌ಗಳನ್ನು ದೇವಸ್ಥಾನದೊಳಗೆ ಬಳಸಲು ಅವಕಾಶವಿದೆ ಎಂದು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಸಚಿವ ರಮೇಶ್ ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ ತುರ್ತು ಸಂಪರ್ಕ ಸೇರಿದಂತೆ ಮೂಲಭೂತ ಅಗತ್ಯಗಳಿಗಾಗಿ ಮೊಬೈಲ್‌ಗಳನ್ನು ಹೊಂದಿರುವ ಭಕ್ತರಿಗೆ ಸ್ವಲ್ಪಮಟ್ಟಿನ ಅನುಕೂಲ ಕಲ್ಪಿಸಲಾಗಿದೆ.

ಫೋಟೊ, ಸೆಲ್ಫಿ, ರೀಲ್ಸ್‌ಗೆ ಕಡಿವಾಣ

ದೇವಸ್ಥಾನಗಳಲ್ಲಿ ಮೊಬೈಲ್‌ ಬಳಕೆಗೆ ನಿರ್ಬಂಧ ಹೇರಲು ಪ್ರಮುಖ ಕಾರಣ ಭಕ್ತರು ದೇವರ ದರ್ಶನದ ವೇಳೆ ಫೋಟೊ, ವಿಡಿಯೊ, ಸೆಲ್ಫಿ ಹಾಗೂ ಸಾಮಾಜಿಕ ಜಾಲತಾಣಗಳಿಗಾಗಿ ಕಿರು ವಿಡಿಯೊಗಳನ್ನು ಚಿತ್ರೀಕರಿಸುತ್ತಿರುವುದು. ವಿಶೇಷವಾಗಿ ಯುವಜನರು ದೇವಸ್ಥಾನದ ಆವರಣದಲ್ಲಿಯೇ ರೀಲ್ಸ್ ಚಿತ್ರೀಕರಿಸುವುದು, ಫೋಟೊ ತೆಗೆದುಕೊಳ್ಳುವುದು ಹಾಗೂ ವಿಡಿಯೊ ದಾಖಲಿಸುವುದರಿಂದ ದೇವಸ್ಥಾನದ ಶಾಂತ ಮತ್ತು ಆಧ್ಯಾತ್ಮಿಕ ವಾತಾವರಣಕ್ಕೆ ಧಕ್ಕೆಯಾಗುತ್ತಿದೆ ಎಂಬ ದೂರುಗಳು ಬಂದಿದ್ದವು.

ದೇವರ ಮೂರ್ತಿಗಳು, ಪೂಜಾ ವಿಧಿವಿಧಾನಗಳು ಮತ್ತು ಧಾರ್ಮಿಕ ಕಾರ್ಯಕ್ರಮಗಳ ಫೋಟೊ ಹಾಗೂ ವಿಡಿಯೊ ಚಿತ್ರೀಕರಣಕ್ಕೂ ನಿರ್ಬಂಧ ಹೇರಲಾಗಿದೆ. ಗಣ್ಯರು, ರಾಜಕೀಯ ನಾಯಕರು ಅಥವಾ ಚಿತ್ರರಂಗದ ಪ್ರಮುಖರು ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿಯೂ ಅವರ ಫೋಟೊ ಅಥವಾ ವಿಡಿಯೊ ಚಿತ್ರೀಕರಣಕ್ಕೆ ಅನುಮತಿ ನೀಡಬಾರದು ಎಂದು ದೇವಸ್ಥಾನಗಳಿಗೆ ಸೂಚಿಸಲಾಗಿದೆ.

ಮದ್ರಾಸ್ ಹೈಕೋರ್ಟ್ ಆದೇಶದ ಹಿನ್ನೆಲೆ

ಈ ನಿರ್ಧಾರಕ್ಕೆ ಮದ್ರಾಸ್ ಹೈಕೋರ್ಟ್‌ನ ಹಿಂದಿನ ಆದೇಶವೂ ಪ್ರಮುಖ ಕಾರಣವಾಗಿದೆ. 2022ರ ಡಿಸೆಂಬರ್ 2ರಂದು ಮದ್ರಾಸ್ ಹೈಕೋರ್ಟ್‌ನ ಮದುರೈ ಪೀಠವು ತಿರುಚೆಂದೂರಿನ ಅರುಳ್ಮಿಗು ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದೊಳಗೆ ಸ್ಮಾರ್ಟ್‌ಫೋನ್ ಬಳಕೆಗೆ ನಿರ್ಬಂಧ ವಿಧಿಸುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿತ್ತು.

ಇದರ ಆಧಾರದ ಮೇಲೆ ದೇವಸ್ಥಾನಗಳಲ್ಲಿ ಮೊಬೈಲ್ ಬಳಕೆಯನ್ನು ನಿಯಂತ್ರಿಸುವಂತೆ ಹಿಂದೆಯೂ ಸೂಚನೆಗಳನ್ನು ನೀಡಲಾಗಿತ್ತು. ಆದರೆ, ಕೆಲವು ಭಕ್ತರು ಇನ್ನೂ ಮೊಬೈಲ್‌ ಬಳಸಿ ಫೋಟೊ, ವಿಡಿಯೊ, ಸೆಲ್ಫಿ ಹಾಗೂ ರೀಲ್ಸ್ ಮಾಡುತ್ತಿರುವುದು ಮುಂದುವರಿದ ಹಿನ್ನೆಲೆಯಲ್ಲಿ ಇದೀಗ 52 ಪ್ರಮುಖ ದೇವಸ್ಥಾನಗಳಲ್ಲಿ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ.

ಕಾಂಚೀಪುರಂ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ಜಾರಿ

ಪ್ರಸಿದ್ಧ ಕಾಂಚೀಪುರಂ ದೇವರಾಜಸ್ವಾಮಿ–ಅತ್ತಿ ವರದರಾಜ ದೇವಸ್ಥಾನದಲ್ಲೂ ಹೊಸ ವ್ಯವಸ್ಥೆ ಮಂಗಳವಾರ ಬೆಳಗ್ಗೆ 6 ಗಂಟೆಯಿಂದಲೇ ಜಾರಿಗೆ ಬಂದಿದೆ. ಮೊಬೈಲ್‌ಗಳನ್ನು ಸಂಗ್ರಹಿಸಲು ಇಬ್ಬರು ಕಂಪ್ಯೂಟರ್ ನಿರ್ವಾಹಕರು ಹಾಗೂ ಇಬ್ಬರು ಸಹಾಯಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಮೊಬೈಲ್ ಜಮಾ ಮಾಡುವ ಸಂದರ್ಭದಲ್ಲಿ ಭಕ್ತರ ಛಾಯಾಚಿತ್ರ, ಮೊಬೈಲ್‌ನ ಮಾದರಿ ಹಾಗೂ ಮೊಬೈಲ್ ಸಂಖ್ಯೆಯಂತಹ ವಿವರಗಳನ್ನು ದಾಖಲಿಸಲಾಗುತ್ತಿದೆ. ನಂತರ ಸ್ವೀಕೃತಿ ಚೀಟಿಯನ್ನು ನೀಡಲಾಗುತ್ತದೆ. ವಾಪಸ್ ಪಡೆಯುವಾಗ ಈ ವಿವರಗಳನ್ನು ಪರಿಶೀಲಿಸಿ ಮೊಬೈಲ್ ಹಸ್ತಾಂತರಿಸಲಾಗುತ್ತದೆ.

ಭಕ್ತರಿಗೆ ನಿಯಮದ ಬಗ್ಗೆ ಮಾಹಿತಿ ನೀಡಲು ದೇವಸ್ಥಾನದ ಆವರಣ, ವಾಹನ ನಿಲುಗಡೆ ಪ್ರದೇಶ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ವಿವಿಧ ಭಾಷೆಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಧ್ವನಿವರ್ಧಕಗಳ ಮೂಲಕವೂ ಮೊಬೈಲ್ ಬಳಕೆಯ ಮೇಲಿನ ನಿರ್ಬಂಧದ ಬಗ್ಗೆ ಪ್ರಕಟಣೆ ನೀಡುವಂತೆ ದೇವಸ್ಥಾನಗಳಿಗೆ ಸೂಚಿಸಲಾಗಿದೆ.

ನಿಯಮಕ್ಕೆ ಭಕ್ತರಿಂದ ಮಿಶ್ರ ಪ್ರತಿಕ್ರಿಯೆ

ಸರ್ಕಾರದ ಹೊಸ ನಿರ್ಧಾರಕ್ಕೆ ಭಕ್ತರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ದೇವಸ್ಥಾನದ ಪಾವಿತ್ರ್ಯ ಮತ್ತು ಶಾಂತ ವಾತಾವರಣವನ್ನು ಕಾಪಾಡಲು ಇದು ಅಗತ್ಯ ಕ್ರಮ ಎಂದು ಕೆಲವರು ಸ್ವಾಗತಿಸಿದ್ದಾರೆ.ದರೆ, ಮೊಬೈಲ್‌ಗಳನ್ನು ದೇವಸ್ಥಾನದ ಸಿಬ್ಬಂದಿಯ ಬಳಿ ಜಮಾ ಮಾಡಿಸುವುದರಿಂದ ಅವುಗಳ ಸುರಕ್ಷತೆಯ ಹೊಣೆಗಾರಿಕೆ ಯಾರದ್ದು ಎಂಬ ಪ್ರಶ್ನೆಯನ್ನೂ ಕೆಲವರು ಎತ್ತಿದ್ದಾರೆ. ಅದರಲ್ಲೂ ಜನಸಂದಣಿ ಹೆಚ್ಚಿರುವ ದೇವಸ್ಥಾನಗಳಲ್ಲಿ ಹೆಚ್ಚಿನ ಸಂಖ್ಯೆಯ ಮೊಬೈಲ್‌ಗಳನ್ನು ಸಂಗ್ರಹಿಸುವುದು ಮತ್ತು ನಂತರ ಸರಿಯಾದ ವ್ಯಕ್ತಿಗೆ ಹಿಂತಿರುಗಿಸುವುದು ಸವಾಲಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ.

ಸಿಬ್ಬಂದಿಗೂ ಹೆಚ್ಚಿದ ಜವಾಬ್ದಾರಿ

ಹೊಸ ನಿಯಮದಿಂದ ದೇವಸ್ಥಾನದ ಸಿಬ್ಬಂದಿಯ ಮೇಲೂ ಹೆಚ್ಚುವರಿ ಹೊಣೆಗಾರಿಕೆ ಬಿದ್ದಿದೆ. ಚಪ್ಪಲಿ ಸಂಗ್ರಹಿಸುವ ವ್ಯವಸ್ಥೆಗೆ ಹೋಲಿಸಿದರೆ ಮೊಬೈಲ್‌ಗಳ ನಿರ್ವಹಣೆ ಹೆಚ್ಚು ಸೂಕ್ಷ್ಮವಾದದ್ದು. ಮೊಬೈಲ್‌ಗಳು ದುಬಾರಿ ವೈಯಕ್ತಿಕ ಸಾಧನಗಳಾಗಿರುವುದರಿಂದ ಅವು ಕಳೆದುಹೋದರೆ ಅಥವಾ ಬದಲಾಗಿ ಹೋದರೆ ದೊಡ್ಡ ಸಮಸ್ಯೆ ಎದುರಾಗಬಹುದು ಎಂದು ಸಿಬ್ಬಂದಿ ಆತಂಕ ವ್ಯಕ್ತಪಡಿಸಿದ್ದಾರೆ.

ಅದೇ ರೀತಿ, ಪ್ರತಿದಿನ ದೇವಸ್ಥಾನಕ್ಕೆ ಭೇಟಿ ನೀಡುವ ಸ್ಥಳೀಯ ಭಕ್ತರು ಪ್ರತಿ ಬಾರಿ 5 ರೂಪಾಯಿ ಪಾವತಿಸಿ ಮೊಬೈಲ್ ಜಮಾ ಮಾಡುವುದು ತೊಂದರೆಯಾಗಬಹುದು ಎಂಬ ಅಭಿಪ್ರಾಯವೂ ಕೇಳಿಬಂದಿದೆ. ಮೊಬೈಲ್‌ಗಳನ್ನು ಸಂಪೂರ್ಣವಾಗಿ ಜಮಾ ಮಾಡಿಸುವ ಬದಲು ಅವುಗಳನ್ನು ನಿಷ್ಕ್ರಿಯಗೊಳಿಸಿ ಬ್ಯಾಗ್‌ನಲ್ಲಿಟ್ಟುಕೊಳ್ಳಲು ಅವಕಾಶ ನೀಡಬಹುದು ಎಂಬ ಸಲಹೆಯೂ ಬಂದಿದೆ.

Read More
Next Story