ಬಂಗಾಳದಲ್ಲಿ ಬಿಜೆಪಿ ಯುಗ ಆರಂಭ: ನೂತನ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಪ್ರಮಾಣ
x

ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸುವೇಂದು ಅಧಿಕಾರಿ

ಬಂಗಾಳದಲ್ಲಿ ಬಿಜೆಪಿ ಯುಗ ಆರಂಭ: ನೂತನ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಪ್ರಮಾಣ

ಸುವೇಂದು ಅವರೊಂದಿಗೆ ಬಿಜೆಪಿಯ ಹಿರಿಯ ನಾಯಕರಾದ ದಿಲೀಪ್ ಘೋಷ್, ಶಾಸಕರಾದ ಅಗ್ನಿಮಿತ್ರಾ ಪೌಲ್, ಅಶೋಕ್ ಕಿರ್ತಾನಿಯಾ, ನಿತೀಶ್ ಪ್ರಾಮಾಣಿಕ್‌ ಹಾಗೂ ಕುದಿರಾಮ್ ತುಡು ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.


Click the Play button to hear this message in audio format

ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಇಂದು ಹೊಸ ಅಧ್ಯಾಯವೊಂದು ಆರಂಭವಾಗಿದೆ. ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರು ಇಂದು ಅಧಿಕಾರ ಸ್ವೀಕರಿಸಿದರು. ಈ ಮೂಲಕ ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಂತಾಗಿದೆ.

ನಗರದ ಐತಿಹಾಸಿಕ ಬ್ರಿಗೇಡ್ ಪರೇಡ್ ಮೈದಾನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ರಾಜ್ಯಪಾಲ ಆರ್.ಎನ್. ರವಿ ಅವರು, ಸುವೇಂದು ಅಧಿಕಾರಿಗೆ ಪದವಿ ಮತ್ತು ಗೌಪ್ಯತೆಯ ಪ್ರಮಾಣ ಬೋಧಿಸಿದರು. ಸುವೇಂದು ಅವರೊಂದಿಗೆ ಬಿಜೆಪಿಯ ಹಿರಿಯ ನಾಯಕರಾದ ದಿಲೀಪ್ ಘೋಷ್, ಶಾಸಕರಾದ ಅಗ್ನಿಮಿತ್ರಾ ಪೌಲ್, ಅಶೋಕ್ ಕಿರ್ತಾನಿಯಾ, ನಿತೀಶ್ ಪ್ರಾಮಾಣಿಕ್‌ ಹಾಗೂ ಕುದಿರಾಮ್ ತುಡು ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಿಶೇಷವಾಗಿ ಆಗಮಿಸಿದ್ದರು. ಅಲ್ಲದೆ, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಎನ್‌ಡಿಎ ಮೈತ್ರಿಕೂಟದ ಪ್ರಮುಖ ನಾಯಕರು ಸಮಾರಂಭದಲ್ಲಿ ಭಾಗವಹಿಸಿ ನೂತನ ಸರ್ಕಾರಕ್ಕೆ ಶುಭ ಹಾರೈಸಿದರು.

ಪಶ್ಚಿಮ ಬಂಗಾಳದ ನೂತನ ಸಿಎಂ ಸುವೇಂದು ಅಧಿಕಾರಿಯನ್ನು ಅಭಿನಂದಿಸಿದ ಪ್ರಧಾನಿ ನರೇಂದ್ರ ಮೋದಿ

ಚುನಾವಣಾ ಫಲಿತಾಂಶದ ಹಿನ್ನೋಟ

294 ಸದಸ್ಯ ಬಲದ ಪಶ್ಚಿಮ ಬಂಗಾಳ ವಿಧಾನಸಭೆಗೆ ನಡೆದ ಚುನಾವಣೆಯ ಫಲಿತಾಂಶ ಮೇ 4ರಂದು ಪ್ರಕಟವಾಗಿತ್ತು. ಅಭೂತಪೂರ್ವ ಪ್ರದರ್ಶನ ನೀಡಿದ ಬಿಜೆಪಿ 207 ಸ್ಥಾನಗಳನ್ನು ಗೆಲ್ಲುವ ಮೂಲಕ ಭಾರಿ ಬಹುಮತದೊಂದಿಗೆ ಗದ್ದುಗೆ ಏರಿದೆ. ಉಳಿದಂತೆ ಟಿಎಂಸಿ 80 ಸ್ಥಾನಗಳು, ಕಾಂಗ್ರೆಸ್ 2 ಸ್ಥಾನಗಳು, ಆಮ್ ಜನತಾ ಉನ್ನಾಯನ್ ಪಕ್ಷ 2 ಸ್ಥಾನಗಳು, ಸಿಪಿಐ(ಎಂ) ಹಾಗೂ ಆಲ್ ಇಂಡಿಯಾ ಸೆಕ್ಯುಲರ್ ಫ್ರಂಟ್ ತಲಾ 1 ಸ್ಥಾನ ಪಡೆದಿವೆ.

ಕೊನೆಗೊಂಡ ಮಮತಾ ಬ್ಯಾನರ್ಜಿ ಆಡಳಿತ

ಕಳೆದ 15 ವರ್ಷಗಳಿಂದ ರಾಜ್ಯದಲ್ಲಿ ಸತತವಾಗಿ ಆಡಳಿತ ನಡೆಸುತ್ತಿದ್ದ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಈ ಬಾರಿ ಹೀನಾಯ ಸೋಲು ಅನುಭವಿಸಿದೆ. ಈ ಸೋಲಿನೊಂದಿಗೆ ಬಂಗಾಳದಲ್ಲಿ ದಶಕದ ನಂತರ ದೊಡ್ಡ ರಾಜಕೀಯ ಬದಲಾವಣೆಯಾದಂತಾಗಿದೆ. 'ಬಂಗಾಳದ ಪುತ್ರ' ಎಂದೇ ಖ್ಯಾತರಾಗಿರುವ ಸುವೇಂದು ಅಧಿಕಾರಿ ಅವರು ಇದೀಗ ರಾಜ್ಯವನ್ನು ಅಭಿವೃದ್ಧಿಯತ್ತ ಮುನ್ನಡೆಸುವ ಹೊಣೆ ಹೊತ್ತಿದ್ದಾರೆ.

Read More
Next Story