A new era in West Bengal: Suvendu Adhikari, who defeated Mamata, becomes CM!
x

ಪಶ್ಚಿಮ ಬಂಗಾಳದ ಸಿಎಂ ಹುದ್ದೆಗೆ ಆಯ್ಕಯಾದ ಬಿಜೆಪಿಯ ಸುವೇಂದು ಅಧಿಕಾರಿ 

ಪಶ್ಚಿಮ ಬಂಗಾಳದಲ್ಲಿ ಹೊಸ ಶಕೆ: ಮಮತಾಗೆ ಸೋಲುಣಿಸಿದ ಸುವೇಂದು ಅಧಿಕಾರಿಗೆ ಒಲಿದ ಸಿಎಂ ಪಟ್ಟ!

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ಕೋಲ್ಕತ್ತಾದಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಸುವೇಂದು ಅಧಿಕಾರಿ ಅವರನ್ನು ಅಧಿಕೃತವಾಗಿ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ.


Click the Play button to hear this message in audio format

ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಹೊಸದೊಂದು ಅಧ್ಯಾಯ ಶುರುವಾಗಿದೆ. ಸತತ 15 ವರ್ಷಗಳ ಕಾಲ ರಾಜ್ಯವನ್ನಾಳಿದ್ದ ತೃಣಮೂಲ ಕಾಂಗ್ರೆಸ್ ಮತ್ತು ಮಮತಾ ಬ್ಯಾನರ್ಜಿ ಅವರ ಆಡಳಿತಕ್ಕೆ ಬ್ರೇಕ್ ಹಾಕಿರುವ ಭಾರತೀಯ ಜನತಾ ಪಾರ್ಟಿ, ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಟಿಎಂಸಿಯ ಭದ್ರಕೋಟೆಯಾಗಿದ್ದ ಭವಾನಿಪುರ ಕ್ಷೇತ್ರದಲ್ಲೇ ಮಮತಾ ಬ್ಯಾನರ್ಜಿ ಅವರನ್ನು ಮಣಿಸಿದ ಪ್ರಭಾವಿ ನಾಯಕ ಸುವೇಂದು ಅಧಿಕಾರಿ ಅವರನ್ನು ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿ ಘೋಷಿಸಿದೆ.

ಒಟ್ಟು 207 ಸ್ಥಾನಗಳಲ್ಲಿ ಭರ್ಜರಿ ಜಯಭೇರಿ ಬಾರಿಸುವ ಮೂಲಕ ಬಿಜೆಪಿ ಸ್ಪಷ್ಟ ಬಹುಮತ ಸಾಧಿಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ಕೋಲ್ಕತ್ತಾದಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಸುವೇಂದು ಅಧಿಕಾರಿ ಅವರನ್ನು ಅಧಿಕೃತವಾಗಿ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ.

ಸಿಎಂ ರೇಸ್‌ನಲ್ಲಿದ್ದ ಘಟಾನುಘಟಿಗಳು

ಮುಖ್ಯಮಂತ್ರಿ ಸ್ಥಾನಕ್ಕೆ ಸುವೇಂದು ಅಧಿಕಾರಿ ಅವರೊಂದಿಗೆ ಪ್ರಬಲ ಪೈಪೋಟಿ ಇತ್ತು. ಪ್ರಮುಖವಾಗಿ ಬಿಜೆಪಿ ನಾಯಕಿಯರಾದ ಅಗ್ನಿಮಿತ್ರ ಪಾಲ್ ಮತ್ತು ರೂಪಾ ಗಂಗೂಲಿ, ಬಂಗಾಳ ಬಿಜೆಪಿ ಘಟಕದ ಅಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಹಾಗೂ ದಿಲೀಪ್ ಘೋಷ್ ಅವರ ಹೆಸರುಗಳು ಮುಂಚೂಣಿಯಲ್ಲಿದ್ದವು. ಆದರೆ, ಮಮತಾ ಬ್ಯಾನರ್ಜಿ ಅವರನ್ನು ನೇರವಾಗಿ ಎದುರಿಸಿ ಮಣಿಸಿದ ಸುವೇಂದು ಅಧಿಕಾರಿ ಅವರ ಪರವಾಗಿ ಅಂತಿಮ ನಿರ್ಧಾರ ಹೊರಬಿದ್ದಿದೆ.

ಟ್ಯಾಗೋರ್ ಜನ್ಮದಿನದಂದೇ ಪ್ರಮಾಣ ವಚನ

ರಾಜ್ಯದಲ್ಲಿ ಹೊಸ ಆರಂಭದ ಸಂಕೇತವಾಗಿ, ಪಶ್ಚಿಮ ಬಂಗಾಳದ ಹೆಮ್ಮೆಯ ಸಾಹಿತಿ ಹಾಗೂ ನೊಬೆಲ್ ಪುರಸ್ಕೃತ ರವೀಂದ್ರನಾಥ ಟ್ಯಾಗೋರ್ ಅವರ ಜನ್ಮದಿನವಾದ ಮೇ 9 ರಂದು (ಶನಿವಾರ) ನೂತನ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಬಂಗಾಳಿಗರ ಪಾಲಿಗೆ ಟ್ಯಾಗೋರ್ ಅವರಿಗೆ ವಿಶೇಷ ಸ್ಥಾನವಿರುವುದರಿಂದ, ಇದೇ ದಿನವನ್ನು ಬಿಜೆಪಿ ಆಯ್ದುಕೊಂಡಿದೆ. ಸುವೇಂದು ಅಧಿಕಾರಿ ಅವರೊಂದಿಗೆ ಸಂಪುಟದ ಎಷ್ಟು ಮಂದಿ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ.

ಸರ್ಕಾರ ವಿಸರ್ಜಿಸಿದ ರಾಜ್ಯಪಾಲರು

ಚುನಾವಣೆಯಲ್ಲಿ ಸೋತಿದ್ದರೂ ರಾಜೀನಾಮೆ ನೀಡಲು ಹಿಂದೇಟು ಹಾಕಿದ್ದ ಮಮತಾ ಬ್ಯಾನರ್ಜಿ ಅವರಿಗೆ ತೀವ್ರ ಮುಖಭಂಗವಾಗಿದೆ. ರಾಜ್ಯಪಾಲರಾದ ಆರ್.ಎನ್. ರವಿ ಅವರು ಮೇ 7 ರಂದು ಪಶ್ಚಿಮ ಬಂಗಾಳದ ಸರ್ಕಾರವನ್ನು ಅಧಿಕೃತವಾಗಿ ವಿಸರ್ಜಿಸಿದ್ದಾರೆ. ಶೀಘ್ರದಲ್ಲೇ ಬಿಜೆಪಿ ನಾಯಕರು ರಾಜಭವನಕ್ಕೆ ತೆರಳಿ ಸರ್ಕಾರ ರಚನೆಯ ಹಕ್ಕು ಮಂಡಿಸಲಿದ್ದಾರೆ.

ಯಾರಿವರು ಸುವೇಂದು ಅಧಿಕಾರಿ?

ಒಂದು ಕಾಲದಲ್ಲಿ ಮಮತಾ ಬ್ಯಾನರ್ಜಿ ಅವರ ಅತ್ಯಾಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಸುವೇಂದು ಅಧಿಕಾರಿ, ಈಗ ಅದೇ ಟಿಎಂಸಿಯ 15 ವರ್ಷಗಳ ಭದ್ರಕೋಟೆಯನ್ನು ಕೆಡವಿದ್ದಾರೆ. 1970ರಲ್ಲಿ ರಾಜಕೀಯ ಹಿನ್ನೆಲೆಯ ಕುಟುಂಬದಲ್ಲಿ ಜನಿಸಿದ ಇವರು, ರವೀಂದ್ರ ಭಾರತಿ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರ ತಂದೆ ಶಿಶಿರ್ ಅಧಿಕಾರಿ ಅವರು ಕಾಂಗ್ರೆಸ್‌ನ ಪ್ರಭಾವಿ ನಾಯಕರಾಗಿದ್ದರು. 2020ರ ಡಿಸೆಂಬರ್‌ನಲ್ಲಿ ಟಿಎಂಸಿ ತೊರೆದು ಬಿಜೆಪಿ ಸೇರಿದ ಸುವೇಂದು ಅಧಿಕಾರಿ, ಕೇವಲ ಕೆಲವೇ ವರ್ಷಗಳಲ್ಲಿ ರಾಜ್ಯ ಬಿಜೆಪಿಯ ಪ್ರಬಲ ಹಾಗೂ ಪ್ರಭಾವಿ ನಾಯಕರಾಗಿ ರೂಪುಗೊಂಡಿದ್ದರು.

Read More
Next Story