ರೆಸ್ಟೋರೆಂಟ್ ಆಹಾರ ಸೇವಿಸಿ 5 ವರ್ಷದ ಬಾಲಕಿ ಸಾವು; ನಾಲ್ವರು ಆಸ್ಪತ್ರೆಗೆ ದಾಖಲು
x

ಸೂರತ್‌ನಲ್ಲಿ ರೆಸ್ಟೋರೆಂಟ್‌ನಿಂದ ತರಿಸಿದ್ದ ಆಹಾರ ಸೇವಿಸಿದ ಬಳಿಕ ಐದು ವರ್ಷದ ಬಾಲಕಿ ಮೃತಪಟ್ಟಿದ್ದಾರೆ. 

ರೆಸ್ಟೋರೆಂಟ್ ಆಹಾರ ಸೇವಿಸಿ 5 ವರ್ಷದ ಬಾಲಕಿ ಸಾವು; ನಾಲ್ವರು ಆಸ್ಪತ್ರೆಗೆ ದಾಖಲು

ಬಾಲಕಿಯ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಾಲಕಿಯ ತಂದೆ ಮಂಗಳವಾರ ಬೆಳಗ್ಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದು, ತಾಯಿ ಹಾಗೂ ಇಬ್ಬರು ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


Click the Play button to hear this message in audio format

ಸೂರತ್‌ನಲ್ಲಿ ರೆಸ್ಟೋರೆಂಟ್‌ನಿಂದ ತರಿಸಿದ್ದ ಆಹಾರ ಸೇವಿಸಿದ ಬಳಿಕ ಐದು ವರ್ಷದ ಬಾಲಕಿ ಮೃತಪಟ್ಟಿದ್ದು, ಆಕೆಯ ಕುಟುಂಬದ ನಾಲ್ವರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ. ಫುಡ್‌ ಪಾಯಿಸನಿಂಗ್‌ ಶಂಕೆ ವ್ಯಕ್ತವಾಗಿದ್ದು, ಪ್ರಕರಣದ ಬೆನ್ನಲ್ಲೇ ಸೂರತ್ ಮುನ್ಸಿಪಲ್ ಕಾರ್ಪೊರೇಷನ್‌ ಅಧಿಕಾರಿಗಳು ಸಂಬಂಧಿತ ರೆಸ್ಟೋರೆಂಟ್‌ಗೆ ಬೀಗ ಹಾಕಿದ್ದಾರೆ.

ಆಗಸ್ಟ್ 15ರ ಸಂಜೆ ಕುಟುಂಬವು ಸೂರತ್‌ನ ವರಾಚಾ ಪ್ರದೇಶದಲ್ಲಿರುವ ಶೀತಲ್ ರೆಸ್ಟೋರೆಂಟ್‌ನಿಂದ ‘ಸಾಂಬಾರ್’ ತರಿಸಿಕೊಂಡು ಸೇವಿಸಿತ್ತು. ಮರುದಿನ ಬೆಳಗ್ಗೆ ಕುಟುಂಬದ ಐವರು ವಾಂತಿಯಿಂದ ಬಳಲಲು ಆರಂಭಿಸಿದ್ದರು ಎಂದು ಸೂರತ್ ಮುನ್ಸಿಪಲ್ ಕಾರ್ಪೊರೇಷನ್‌ನ ವೈದ್ಯಕೀಯ ಆರೋಗ್ಯಾಧಿಕಾರಿ ಪಿ.ಎಚ್. ಉಮ್ರಿಗರ್ ತಿಳಿಸಿದ್ದಾರೆ.

ಆಗಸ್ಟ್ 16ರಂದು ಕುಟುಂಬವು ವೈದ್ಯರನ್ನು ಸಂಪರ್ಕಿಸಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗುವಂತೆ ವೈದ್ಯರು ಸಲಹೆ ನೀಡಿದರೂ, ಕುಟುಂಬ ಆರಂಭದಲ್ಲಿ ಆಸ್ಪತ್ರೆಗೆ ದಾಖಲಾಗಲು ನಿರಾಕರಿಸಿತ್ತು. ಆದರೆ ಆಗಸ್ಟ್ 17ರಂದು ಐದು ವರ್ಷದ ಬಾಲಕಿ ಪ್ರಜ್ಞಾಹೀನಳಾಗಿದ್ದು, ಆಕೆಯನ್ನು ಸ್ಥಳೀಯ ಸದ್ವಿಚಾರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪರೀಕ್ಷಿಸಿದ ವೈದ್ಯರು ಬಾಲಕಿ ಮೃತಪಟ್ಟಿರುವುದಾಗಿ ಘೋಷಿಸಿದರು.

ಬಾಲಕಿಯ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಾಲಕಿಯ ತಂದೆ ಮಂಗಳವಾರ ಬೆಳಗ್ಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದು, ತಾಯಿ ಹಾಗೂ ಇಬ್ಬರು ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯಕೀಯ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

ರೆಸ್ಟೋರೆಂಟ್‌ಗೆ ಬೀಗ

ಘಟನೆಯ ಬಳಿಕ ಸೂರತ್ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು ಶೀತಲ್ ರೆಸ್ಟೋರೆಂಟ್‌ನಲ್ಲಿ ತಪಾಸಣೆ ನಡೆಸಿದ್ದು, ಅಡುಗೆಮನೆಯಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದ ಹಲವು ಲೋಪಗಳು ಕಂಡುಬಂದಿವೆ. ರೆಸ್ಟೋರೆಂಟ್‌ನಿಂದ ಸಿದ್ಧ ಆಹಾರ ಹಾಗೂ ಕಚ್ಚಾ ವಸ್ತುಗಳ ಮಾದರಿಗಳನ್ನು ಸಂಗ್ರಹಿಸಲಾಗಿದೆ. ರೆಸ್ಟೋರೆಂಟ್‌ಗೆ ಬೀಗ ಹಾಕಲಾಗಿದ್ದು, ನಿಯಮಗಳನ್ನು ಪಾಲಿಸಿ ಸುಧಾರಣೆ ಕೈಗೊಳ್ಳುವಂತೆ ನೋಟಿಸ್ ನೀಡಲಾಗಿದೆ.

ಘಟನೆಯನ್ನು ಗುಜರಾತ್ ಆರೋಗ್ಯ ಸಚಿವ ಪ್ರಫುಲ್ ಪನ್ಶೇರಿಯಾ ಗಂಭೀರವಾಗಿ ಪರಿಗಣಿಸಿದ್ದು, ಅಗತ್ಯ ವೈದ್ಯಕೀಯ ಹಾಗೂ ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅನಿಲ್ ಪಟೇಲ್ ಮತ್ತು ಸೂರತ್ ಮುನ್ಸಿಪಲ್ ಕಾರ್ಪೊರೇಷನ್‌ನ ಡಾ. ಉಮ್ರಿಗರ್ ಅವರೊಂದಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾಹಿತಿ ಪಡೆದ ಸಚಿವರು, ಆಸ್ಪತ್ರೆಗೆ ದಾಖಲಾಗಿರುವ ನಾಲ್ವರ ಆರೋಗ್ಯದ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದಿದ್ದಾರೆ.

ಮೃತ ಬಾಲಕಿಯ ಕುಟುಂಬದವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಸಚಿವರು ಸಂತಾಪ ಸೂಚಿಸಿ, ಕುಟುಂಬಕ್ಕೆ ಸಾಂತ್ವನ ತಿಳಿಸಿದ್ದಾರೆ. ಘಟನೆಯ ಬೆನ್ನಲ್ಲೇ ಸೂರತ್‌ನ ಎಲ್ಲಾ ವಲಯಗಳಲ್ಲಿ ವಿಶೇಷ ತಪಾಸಣಾ ಕಾರ್ಯಾಚರಣೆ ಆರಂಭಿಸಲಾಗಿದೆ. ನಗರದ ರೆಸ್ಟೋರೆಂಟ್‌ಗಳಲ್ಲಿ ಸ್ವಚ್ಛತೆ, ನೈರ್ಮಲ್ಯ ಮತ್ತು ಆಹಾರ ಸುರಕ್ಷತಾ ನಿಯಮಗಳ ಪಾಲನೆ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

Read More
Next Story