
ಶಬರಿಮಲೆ ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್
"ದೇವಸ್ಥಾನಕ್ಕೆ ಹೋದರಷ್ಟೇ ಹಿಂದೂಗಳಲ್ಲ"; ಸುಪ್ರೀಂ ಕೋರ್ಟ್ ಹೇಳಿಕೆ
ದೇವಸ್ಥಾನಕ್ಕೆ ಹೋಗುವುದು ಹಿಂದೂ ಧರ್ಮದ ಅರ್ಹತೆಯಲ್ಲ, ಅದು ಒಂದು ಜೀವನ ಪದ್ಧತಿ ಎಂದು ಶಬರಿಮಲೆ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಮಾರ್ಮಿಕವಾಗಿ ಹೇಳಿದೆ. ತೀರ್ಪು ಕಾಯ್ದಿರಿಸಿದ ಪೀಠ.
``ಒಬ್ಬ ವ್ಯಕ್ತಿ ದೇವಸ್ಥಾನಕ್ಕೆ ಹೋಗುತ್ತಾನೋ ಅಥವಾ ಇಲ್ಲವೋ ಎಂಬುದು ಹಿಂದೂ ಧರ್ಮದಲ್ಲಿ ಅರ್ಹತೆ ಅಥವಾ ಅನರ್ಹತೆಯ ಮಾನದಂಡವಲ್ಲ. ಹಳ್ಳಿಯ ಸಣ್ಣ ಗುಡಿಸಲಿನಲ್ಲಿ ಮೌನವಾಗಿ ದೀಪ ಹಚ್ಚಿ ಪ್ರಾರ್ಥಿಸುವ ವ್ಯಕ್ತಿಯೂ ದೇವಸ್ಥಾನಕ್ಕೆ ಹೋಗುವ ವ್ಯಕ್ತಿಯಷ್ಟೇ ಹಿಂದೂ ಆಗಿರುತ್ತಾನೆ'' ಎಂದು ಸುಪ್ರೀಂ ಕೋರ್ಟ್ ಗುರುವಾರ ಅತ್ಯಂತ ಮಾರ್ಮಿಕವಾಗಿ ಅಭಿಪ್ರಾಯಪಟ್ಟಿದೆ.
ಇಡೀ ದೇಶದ ಗಮನ ಸೆಳೆದಿದ್ದ ಶಬರಿಮಲೆ ದೇವಸ್ಥಾನದ ಧಾರ್ಮಿಕ ಆಚರಣೆಗಳು ಮತ್ತು ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದ ಸಾಂವಿಧಾನಿಕ ಪ್ರಶ್ನೆಗಳ ಕುರಿತಾದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಗುರುವಾರ ಪೂರ್ಣಗೊಳಿಸಿದೆ. ಸತತ 16 ದಿನಗಳ ಕಾಲ ನಡೆದ ಸುದೀರ್ಘ ವಾದ-ಪ್ರತಿವಾದಗಳನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಒಂಬತ್ತು ನ್ಯಾಯಾಧೀಶರ ಬೃಹತ್ ಸಂವಿಧಾನ ಪೀಠವು ತನ್ನ ಅಂತಿಮ ತೀರ್ಪನ್ನು ಕಾಯ್ದಿರಿಸಿದೆ.
ವಿಚಾರಣೆಯ ಅಂತಿಮ ದಿನದಂದು ನ್ಯಾಯಾಲಯವು ಧಾರ್ಮಿಕ ಸ್ವಾತಂತ್ರ್ಯ ಮತ್ತು ವೈಯಕ್ತಿಕ ಹಕ್ಕುಗಳ ನಡುವಿನ ಸಮತೋಲನದ ಬಗ್ಗೆ ಮಹತ್ವದ ಚರ್ಚೆ ನಡೆಸಿತು. ʻʻಹಿಂದೂ ಧರ್ಮವು ಕೇವಲ ಒಂದು ಧರ್ಮವಲ್ಲ, ಅದೊಂದು ಜೀವನ ಪದ್ಧತಿ ಎಂದು ಮೂರು ದಶಕಗಳ ಹಿಂದೆ ನೀಡಿದ್ದ ತೀರ್ಪನ್ನು ಮರುಪರಿಶೀಲಿಸಲು ನ್ಯಾಯಾಲಯ ನಿರಾಕರಿಸಿದೆ. ನಂಬಿಕೆ ಮತ್ತು ಮೂಲಭೂತ ಹಕ್ಕುಗಳ ನಡುವಿನ ಸೂಕ್ಷ್ಮ ವಿಷಯದ ಬಗ್ಗೆ ಚರ್ಚೆ ನಡೆಸಿದ ಸಿಜೆಐ ಸೂರ್ಯ ಕಾಂತ್ ನೇತೃತ್ವದ ಪೀಠವು, ಧಾರ್ಮಿಕ ಆಚರಣೆಗಳನ್ನು ವ್ಯಾಖ್ಯಾನಿಸಲು ನ್ಯಾಯಾಲಯವು ಸರ್ವೋಚ್ಚ ಆಧ್ಯಾತ್ಮಿಕ ನಾಯಕನಲ್ಲʼʼ ಎಂದು ಸ್ಪಷ್ಟಪಡಿಸಿದೆ.
ವಿಚಾರಣೆ ವೇಳೆ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು ಮಾತನಾಡಿ, ಹಿಂದೂ ಧರ್ಮಕ್ಕೆ ಸಂಬಂಧಿಸಿದಂತೆ ಇದು ಒಂದು ಜೀವನ ಪದ್ಧತಿ ಎಂಬ ವಿಚಾರವನ್ನು ನ್ಯಾಯಾಲಯವು ಬಹಳ ಹಿಂದೆಯೇ ಇತ್ಯರ್ಥಪಡಿಸಿದೆ. ಅದನ್ನು ಮತ್ತೊಮ್ಮೆ ಪುನರುಚ್ಚರಿಸುವ ಅಥವಾ ಮರುಪರಿಶೀಲಿಸುವ ಅಗತ್ಯವಿಲ್ಲ ಎಂದು ತಿಳಿಸಿದರು. ಒಬ್ಬ ವ್ಯಕ್ತಿ ದೇವಸ್ಥಾನಕ್ಕೆ ಹೋಗುತ್ತಾನೋ ಅಥವಾ ಇಲ್ಲವೋ ಎಂಬುದು ಹಿಂದೂ ಧರ್ಮದಲ್ಲಿ ಅರ್ಹತೆ ಅಥವಾ ಅನರ್ಹತೆಯ ಮಾನದಂಡವಲ್ಲ. ಹಳ್ಳಿಯ ಸಣ್ಣ ಗುಡಿಸಲಿನಲ್ಲಿ ಮೌನವಾಗಿ ದೀಪ ಹಚ್ಚಿ ಪ್ರಾರ್ಥಿಸುವ ವ್ಯಕ್ತಿಯೂ ದೇವಸ್ಥಾನಕ್ಕೆ ಹೋಗುವ ವ್ಯಕ್ತಿಯಷ್ಟೇ ಹಿಂದೂ ಆಗಿರುತ್ತಾನೆ ಎಂದು ಪೀಠವು ಅಭಿಪ್ರಾಯಪಟ್ಟಿದೆ.
ಹಿಂದೂ ಧರ್ಮವು ಅತ್ಯಂತ ಮೃದುವಾಗಿದ್ದು, ಯಾವುದೇ ಒತ್ತಡವಿಲ್ಲದೆ ವಿವಿಧ ರೀತಿಯ ಆರಾಧನಾ ಪದ್ಧತಿಗಳಿಗೆ ಅವಕಾಶ ನೀಡುತ್ತದೆ ಎಂದು ಮುಖ್ಯ ನ್ಯಾಯಮೂರ್ತಿಗಳು ತಿಳಿಸಿದರು.
ಈ ವೇಳೆ ಹಿರಿಯ ವಕೀಲ ಜಿ. ಮೋಹನ್ ಗೋಪಾಲ್ ಅವರು ವಾದ ಮಂಡಿಸಿ, ಧಾರ್ಮಿಕ ಪಂಗಡಗಳ ಒಳಗೆ ಇರುವ ಭಿನ್ನಾಭಿಪ್ರಾಯಗಳಿಗೆ ನ್ಯಾಯಾಲಯವು ಅವಕಾಶ ನೀಡಬೇಕು ಮತ್ತು ಸುಧಾರಣೆಗಳಿಗೆ ಪೂರಕವಾಗಿರಬೇಕು ಎಂದು ವಾದಿಸಿದರು. ಆದರೆ ಇದನ್ನು ಒಪ್ಪದ ನ್ಯಾಯಪೀಠವು, ಧಾರ್ಮಿಕ ಸುಧಾರಣೆಗಳನ್ನು ಮಾಡುವುದು ಶಾಸಕಾಂಗದ ಕೆಲಸವೇ ಹೊರತು ನ್ಯಾಯಾಲಯದ್ದಲ್ಲ ಎಂದು ಹೇಳಿದೆ. 1990ರ ದಶಕದಲ್ಲಿ ನ್ಯಾಯಮೂರ್ತಿ ಜೆ.ಎಸ್. ವರ್ಮಾ ಅವರ ನೇತೃತ್ವದ ಪೀಠವು ಹಿಂದೂ ಧರ್ಮ ಮತ್ತು ಹಿಂದುತ್ವ ಎಂಬ ಪದಗಳು ಭಾರತೀಯ ಜನರ ಸಂಸ್ಕೃತಿ ಮತ್ತು ಜೀವನ ವಿಧಾನವನ್ನು ಪ್ರತಿಬಿಂಬಿಸುತ್ತವೆ ಎಂದು ತೀರ್ಪು ನೀಡಿತ್ತು. ಈಗಿನ ಸಾಂವಿಧಾನಿಕ ಪೀಠವು ಅದೇ ನಿಲುವಿಗೆ ಬದ್ಧವಾಗಿರುವುದಾಗಿ ತಿಳಿಸಿದೆ.
ಹಿರಿಯ ವಕೀಲರು ಪ್ರತಿಪಾದಿಸಿದ ವಾದಗಳನ್ನು ಆಲಿಸಿದ ಪೀಠವು, ಧರ್ಮದ ಹೆಸರಿನಲ್ಲಿ ನಡೆಯುವ ಆಚರಣೆಗಳು ಸಂವಿಧಾನದ ನೈತಿಕತೆಗೆ ಅನುಗುಣವಾಗಿರಬೇಕು ಎಂದು ಅಭಿಪ್ರಾಯಪಟ್ಟಿತು. ಎಲ್ಲಾ ಕಡೆಯ ವಾದಗಳು ಮುಕ್ತಾಯಗೊಂಡ ಹಿನ್ನೆಲೆಯಲ್ಲಿ, ಮುಂದಿನ ದಿನಗಳಲ್ಲಿ ಹೊರಬೀಳಲಿರುವ ಈ ಐತಿಹಾಸಿಕ ತೀರ್ಪು ಭಾರತದ ಧಾರ್ಮಿಕ ಮತ್ತು ಸಾಂವಿಧಾನಿಕ ಇತಿಹಾಸದಲ್ಲಿ ಹೊಸ ಮನ್ವಂತರಕ್ಕೆ ನಾಂದಿ ಹಾಡಲಿದೆ ಎಂದು ನಿರೀಕ್ಷಿಸಲಾಗಿದೆ.

