Acid Attack Victims | ಆಸಿಡ್ ದಾಳಿ ಸಂತ್ರಸ್ತರಿಗೆ ಸುಪ್ರೀಂ ಆಶಾಕಿರಣ: ಇನ್ಮುಂದೆ ವಿಕಲಚೇತನ ಸ್ಥಾನ
x

ಸುಪ್ರೀಂ ಕೋರ್ಟ್‌

Acid Attack Victims | ಆಸಿಡ್ ದಾಳಿ ಸಂತ್ರಸ್ತರಿಗೆ ಸುಪ್ರೀಂ ಆಶಾಕಿರಣ: ಇನ್ಮುಂದೆ 'ವಿಕಲಚೇತನ' ಸ್ಥಾನ

ಸಂವಿಧಾನದ 142ನೇ ವಿಧಿಯನ್ನು ಬಳಸಿಕೊಂಡು ಆದೇಶ ನೀಡಿರುವ ನ್ಯಾಯಾಲಯವು, ಆಸಿಡ್ ದಾಳಿಯಿಂದ ಬಾಹ್ಯ ವಿರೂಪತೆಯಿಲ್ಲದಿದ್ದರೂ, ಆಂತರಿಕ ಗಾಯ ಅನುಭವಿಸಿದವರನ್ನು ಕಾಯ್ದೆಯ ವ್ಯಾಪ್ತಿಗೆ ತರಬೇಕು ಎಂದು ತಿಳಿಸಿದೆ.


Click the Play button to hear this message in audio format

ಆಸಿಡ್ ದಾಳಿಗೆ ಒಳಗಾದ ಸಂತ್ರಸ್ತರ ಬದುಕಿಗೆ ಭರವಸೆ ನೀಡುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಸೋಮವಾರ ಐತಿಹಾಸಿಕ ತೀರ್ಪೊಂದನ್ನು ಪ್ರಕಟಿಸಿದೆ. 2016ರ 'ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಕಾಯ್ದೆ' (RPWD Act) ಅಡಿಯಲ್ಲಿ ಆಸಿಡ್ ದಾಳಿಯಿಂದ ಬದುಕುಳಿದವರನ್ನು ಅಧಿಕೃತವಾಗಿ 'ವಿಕಲಚೇತನರು' ಎಂದು ಪರಿಗಣಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠವು ಈ ಮಹತ್ವದ ಆದೇಶ ಹೊರಡಿಸಿದೆ. ಪ್ರಸ್ತುತ ಕಾಯ್ದೆಯ ಪ್ರಕಾರ, ಕೇವಲ "ಬಾಹ್ಯವಾಗಿ ವಿರೂಪಗೊಂಡವರನ್ನು" ಮಾತ್ರ ಆಸಿಡ್ ದಾಳಿಯ ಸಂತ್ರಸ್ತರೆಂದು ಪರಿಗಣಿಸಲಾಗುತ್ತಿತ್ತು. ಆದರೆ, ಆಸಿಡ್ ಅನ್ನು ಬಲವಂತವಾಗಿ ಕುಡಿಸಿದಾಗ ಅಥವಾ ಸೇವಿಸಿದಾಗ ಉಂಟಾಗುವ ಭೀಕರ ಆಂತರಿಕ ಗಾಯಗಳನ್ನು ಈ ವ್ಯಾಖ್ಯಾನವು ಹೊರಗಿಟ್ಟಿತ್ತು.

ಸಂವಿಧಾನದ 142ನೇ ವಿಧಿಯನ್ನು ಬಳಸಿಕೊಂಡು ಆದೇಶ ನೀಡಿರುವ ನ್ಯಾಯಾಲಯವು, ಆಸಿಡ್ ದಾಳಿಯಿಂದ ಬಾಹ್ಯ ವಿರೂಪತೆಯಿಲ್ಲದಿದ್ದರೂ, ಆಂತರಿಕ ಗಾಯ ಅನುಭವಿಸಿದವರನ್ನು ಕಾಯ್ದೆಯ ವ್ಯಾಪ್ತಿಗೆ ತರಬೇಕು. ಕೇಂದ್ರ ಸರ್ಕಾರವು ತಕ್ಷಣವೇ ಕಾಯ್ದೆಯ ವೇಳಾಪಟ್ಟಿಯನ್ನು ತಿದ್ದುಪಡಿ ಮಾಡಿ ಈ ಹೊಸ ವ್ಯಾಖ್ಯಾನವನ್ನು ಸೇರಿಸಬೇಕು. ಈ ಬದಲಾವಣೆಯು ಕಾಯ್ದೆ ಜಾರಿಗೆ ಬಂದ ದಿನದಿಂದಲೇ ಅನ್ವಯವಾಗುತ್ತದೆ ಎಂದು ಪರಿಗಣಿಸಲಾಗುವುದು ಎಂದು ಸುಪ್ರೀಂ ಕೋರ್ಟ್‌ ತಿಳಿಸಿದೆ.

ದಾಳಿಕೋರರ ವಿರುದ್ಧ ಕಠಿಣ ನಿಲುವು

ವಿಚಾರಣೆಯ ಸಂದರ್ಭದಲ್ಲಿ ಸಿಜೆಐ ಸೂರ್ಯ ಕಾಂತ್ ಅವರು ಅಪರಾಧಿಗಳ ವಿರುದ್ಧ ಕಠಿಣ ಕ್ರಮದ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, "ದಾಳಿಕೋರರ ಆಸ್ತಿಯನ್ನು ಏಕೆ ಮುಟ್ಟುಗೋಲು ಹಾಕಿಕೊಳ್ಳಬಾರದು? ಅವರ ಅವಿಭಕ್ತ ಕುಟುಂಬದ ಪಾಲನ್ನೂ ಏಕೆ ಕಸಿದುಕೊಳ್ಳಬಾರದು? ಸಂತ್ರಸ್ತರು ಸ್ವಾಭಿಮಾನದಿಂದ ಬದುಕಲು ಹೆಣಗಾಡುತ್ತಿರುವಾಗ, ಆರೋಪಿಗಳು ಏಕೆ ಶಿಕ್ಷೆ ಅನುಭವಿಸಬಾರದು?" ಎಂದು ಪ್ರಶ್ನಿಸಿದ್ದಾರೆ.

ಅಕ್ರಮ ಆಸಿಡ್ ಮಾರಾಟಗಾರರಿಗೂ ಸಂಕಷ್ಟ

ಕೇವಲ ದಾಳಿಕೋರರಷ್ಟೇ ಅಲ್ಲದೆ, ಆಸಿಡ್ ಅನ್ನು ಅಕ್ರಮವಾಗಿ ಮಾರಾಟ ಮಾಡುವ ಅಂಗಡಿಯವರನ್ನೂ ಈ ಅಪರಾಧ ತನಿಖೆಯ ವ್ಯಾಪ್ತಿಗೆ ತರಬೇಕು ಎಂದು ನ್ಯಾಯಾಲಯ ಹೇಳಿದೆ. ಆಸಿಡ್ ಸುಲಭವಾಗಿ ಲಭ್ಯವಾಗುವಂತೆ ಮಾಡುವವರೂ ಸಹ ಪರಿಣಾಮಗಳನ್ನು ಎದುರಿಸಬೇಕು ಎಂದು ಪೀಠವು ಅಭಿಪ್ರಾಯಪಟ್ಟಿದೆ.

ನಿಯಮಗಳಲ್ಲಿ ಬದಲಾವಣೆಗೆ ಕೇಂದ್ರ ಒಪ್ಪಿಗೆ

ಹಿರಿಯ ವಕೀಲ ಮುಕುಲ್ ರೋಹ್ಟಗಿ ಅವರು ಸಂತ್ರಸ್ತರಿಗೆ ಆಗುತ್ತಿರುವ ಅನ್ಯಾಯವನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ನಿಯಮಗಳಲ್ಲಿ ಅಗತ್ಯ ಬದಲಾವಣೆ ತರುವುದಾಗಿ ಒಪ್ಪಿಕೊಂಡಿದ್ದಾರೆ. ಸುಪ್ರೀಂ ಕೋರ್ಟ್ ಈ ವಿಷಯವನ್ನು ಎರಡು ವಾರಗಳ ನಂತರ ಮತ್ತೆ ಕೈಗೆತ್ತಿಕೊಳ್ಳಲಿದೆ.

Read More
Next Story