ಶೃಂಗೇರಿ ಮತ ಮರು ಎಣಿಕೆ| ಸುಪ್ರೀಂಕೋರ್ಟ್‌ಗೆ ರಾಜೇಗೌಡ ಮೇಲ್ಮನವಿ, ಮೇ 11ರಂದು ವಿಚಾರಣೆಗೆ ಒಪ್ಪಿಗೆ
x
ಟಿ.ಡಿ.ರಾಜೇಗೌಡ

ಶೃಂಗೇರಿ ಮತ ಮರು ಎಣಿಕೆ| ಸುಪ್ರೀಂಕೋರ್ಟ್‌ಗೆ ರಾಜೇಗೌಡ ಮೇಲ್ಮನವಿ, ಮೇ 11ರಂದು ವಿಚಾರಣೆಗೆ ಒಪ್ಪಿಗೆ

2023ರಲ್ಲಿ ಸಿಂಧುವಾಗಿದ್ದ ಮತಗಳು ಈಗ ಅಸಿಂಧುವಾಗಿದ್ದು ಹೇಗೆ?, ಅಂಚೆ ಮತಗಳ ಮೇಲೆ ಬೇರೆ ಶಾಯಿಯ ಗುರುತುಗಳನ್ನು ಮಾಡುವ ಮೂಲಕ ಅವುಗಳನ್ನು ಉದ್ದೇಶಪೂರ್ವಕವಾಗಿ ತಿರಸ್ಕರಿಸಲಾಗಿದೆ ಎಂದು ರಾಜೇಗೌಡ ಅವರು ಮೇಲ್ಮನವಿಯಲ್ಲಿ ದೂರಿದ್ದಾರೆ.


Click the Play button to hear this message in audio format

ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ಮಾಜಿ ಶಾಸಕ ಟಿ.ಡಿ.ರಾಜೇಗೌಡ ಸಲ್ಲಿಸಿರುವ ಮೇಲ್ಮನವಿ ಅರ್ಜಿಯನ್ನು ತುರ್ತು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಶುಕ್ರವಾರ ಒಪ್ಪಿಗೆ ಸೂಚಿಸಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠದ ಮುಂದೆ ರಾಜೇಗೌಡ ಪರ ಹಿರಿಯ ವಕೀಲ ದೇವದತ್ ಕಾಮತ್ ವಾದ ಮಂಡಿಸಿದರು. ಮರು ಎಣಿಕೆ ಪ್ರಕ್ರಿಯೆಯಲ್ಲಿ ಲೋಪಗಳಾಗಿವೆ. ಇದರಿಂದಾಗಿ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರನ್ನು ವಿಜೇತರೆಂದು ಘೋಷಿಸಿರುವುದು ಕಾನೂನುಬಾಹಿರ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಅರ್ಜಿಯನ್ನು ಮೇ 11ರಂದು ತುರ್ತಾಗಿ ಪಟ್ಟಿ ಮಾಡುವಂತೆ ವಿನಂತಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, "ಸಾಮಾನ್ಯವಾಗಿ ಇಂತಹ ಪ್ರಕರಣಗಳಲ್ಲಿ ನಾವು ತಡೆಯಾಜ್ಞೆ ನೀಡುತ್ತೇವೆ. ಆದರೆ, ನಿಮ್ಮ ಮನವಿಯನ್ನು ಕೂಲಂಕಷವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ," ಎಂದು ತಿಳಿಸಿ ತ್ವರಿತ ವಿಚಾರಣೆಗೆ ಸಮ್ಮತಿಸಿತು.

ಜಿದ್ದಾಜಿದ್ದಿಗೆ ಕಾರಣವಾದ ಮರು ಮತ ಎಣಿಕೆ

2023ರ ಚುನಾವಣೆಯಲ್ಲಿ ಟಿ.ಡಿ. ರಾಜೇಗೌಡ ಅವರು ಜೀವರಾಜ್ ವಿರುದ್ಧ 201 ಮತಗಳ ಅಂತರದಿಂದ ಜಯ ಗಳಿಸಿದ್ದರು. ಆದರೆ, ಈ ಫಲಿತಾಂಶವನ್ನು ಪ್ರಶ್ನಿಸಿ ಜೀವರಾಜ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಏ.6ರಂದು ತೀರ್ಪು ನೀಡಿದ್ದ ಹೈಕೋರ್ಟ್ ತಿರಸ್ಕೃತಗೊಂಡಿದ್ದ 279 ಅಂಚೆ ಮತಗಳನ್ನು ಮರುಪರಿಶೀಲಿಸಿ, ಒಟ್ಟು 1,811 ಅಂಚೆ ಮತಗಳನ್ನು ಮರುಎಣಿಕೆ ಮಾಡುವಂತೆ ಸೂಚಿಸಿತ್ತು.

ಕಳೆದ ಶನಿವಾರ (ಮೇ 2) ನಡೆದ ಅಂಚೆ ಮತಗಳ ಮರುಎಣಿಕೆಯು ಸ್ಫೋಟಕ ತಿರುವು ಪಡೆದಿತ್ತು. ಈ ಹಿಂದೆ ಸಿಂಧುವಾಗಿದ್ದ ರಾಜೇಗೌಡರ ಮತಗಳಲ್ಲಿ 255 ಮತಗಳು ಅಸಿಂಧು ಎಂದು ಚುನಾವಣಾಧಿಕಾರಿ ಘೋಷಿಸಿದ್ದರು. ಆ ಮೂಲಕ ಬಿಜೆಪಿ ಅಭ್ಯರ್ಥಿ ಡಿ.ಎನ್‌. ಜೀವರಾಜ್‌ ಅವರನ್ನು 52 ಮತಗಳಿಂದ ಗೆಲುವು ಸಾಧಿಸಿರುವುದಾಗಿ ಪ್ರಕಟಿಸಿದ್ದರು.

ರಾಜೇಗೌಡರ ಆಕ್ಷೇಪವೇನು?

ಚುನಾವಣಾ ಅಧಿಕಾರಿಗಳ ಮರುಎಣಿಕೆ ಪ್ರಕ್ರಿಯೆಯಲ್ಲಿ ದೊಡ್ಡ ಮಟ್ಟದ ಪಿತೂರಿ ನಡೆದಿದೆ ಎಂಬುದು ರಾಜೇಗೌಡರ ವಾದ. 2023ರಲ್ಲಿ ಸಿಂಧುವಾಗಿದ್ದ ಮತಗಳು ಈಗ ಅಸಿಂಧುವಾಗಿದ್ದು ಹೇಗೆ?, ಅಂಚೆ ಮತಗಳ ಮೇಲೆ ಬೇರೆ ಶಾಯಿಯ ಗುರುತುಗಳನ್ನು ಮಾಡುವ ಮೂಲಕ ಅವುಗಳನ್ನು ಉದ್ದೇಶಪೂರ್ವಕವಾಗಿ ತಿರಸ್ಕರಿಸಲಾಗಿದೆ ಎಂದು ಮೇಲ್ಮನವಿಯಲ್ಲಿ ದೂರಿದ್ದಾರೆ.

1951ರ ಜನಪ್ರತಿನಿಧಿ ಕಾಯ್ದೆಯ ಉಲ್ಲಂಘನೆ ಎಂದು ಆರೋಪಿಸಿರುವ ರಾಜೇಗೌಡರು, ಹೈಕೋರ್ಟ್ ಆದೇಶಕ್ಕೆ ತಡೆ ನೀಡಬೇಕು. ತಮಗೆ ನ್ಯಾಯ ಒದಗಿಸಬೇಕು ಎಂದು ಸುಪ್ರೀಂಕೋರ್ಟ್ನಲ್ಲಿ ಮೊರೆಯಿಟ್ಟಿದ್ದಾರೆ. ರಾಜೇಗೌಡ ಅವರು ಸಲ್ಲಿಸಿರುವ ಮೇಲ್ಮನವಿಯು ಮೇ 11ರಂದು ನಡೆಯಲಿದ್ದು, ಯಾವ ತೀರ್ಪು ಪ್ರಕಟಿಸಲಿದೆ ಎಂಬುದು ಕುತೂಹಲ ಕೆರಳಿಸಿದೆ.

Read More
Next Story