Minor Rape Victim | 15 ವರ್ಷದ ಬಾಲಕಿಯ ಗರ್ಭಪಾತಕ್ಕೆ ಅನುಮತಿ- ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
x
ಸುಪ್ರೀಂ ಕೋರ್ಟ್‌(ಸಂಗ್ರಹ ಚಿತ್ರ)

Minor Rape Victim | 15 ವರ್ಷದ ಬಾಲಕಿಯ ಗರ್ಭಪಾತಕ್ಕೆ ಅನುಮತಿ- ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಅತ್ಯಾಚಾರ ಸಂತ್ರಸ್ತ 15 ವರ್ಷದ ಮಗುವಿನ 31 ವಾರಗಳ ಗರ್ಭಪಾತ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ವ್ಯಕ್ತಿಯ ಆಯ್ಕೆಗೆ ಗೌರವ ನೀಡಿ ಎಂದು ಸಿಜೆಐ ಸೂರ್ಯ ಕಾಂತ್ ಹೇಳಿದ್ದಾರೆ.


ಅತ್ಯಾಚಾರಕ್ಕೊಳಗಾದ 15 ವರ್ಷದ ಬಾಲಕಿಯ 31 ವಾರಗಳ ಗರ್ಭಪಾತಕ್ಕೆ ಅನುಮತಿ ನೀಡಿದ್ದ ಆದೇಶದ ವಿರುದ್ಧ ಕೇಂದ್ರ ಸರ್ಕಾರ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ಕಟುವಾಗಿ ಟೀಕಿಸಿದೆ. "ವ್ಯಕ್ತಿಗಳ ಆಯ್ಕೆಯನ್ನು ಗೌರವಿಸುವುದನ್ನು ಕಲಿಯಿರಿ, ಪ್ರಜೆಗಳೊಂದಿಗೆ ಹೋರಾಟಕ್ಕೆ ಇಳಿಯಬೇಡಿ," ಎಂದು ನ್ಯಾಯಾಲಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

ಗೌರವ ಕೊಡೋದನ್ನ ಕಲಿಯಿರಿ

ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಅಡಿಷನಲ್ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಅವರ ವಿರುದ್ಧ ಕಿಡಿಕಾರುತ್ತಾ, "ಆ ಮಗು ಅತ್ಯಾಚಾರದ ನಂತರ ಅನುಭವಿಸಿದ ಯಾತನೆಗೆ ಯಾವುದೂ ಪರಿಹಾರವಾಗಲಾರದು. ಪ್ರಜೆಗಳಿಗೆ ಮೊದಲು ಗೌರವ ನೀಡಿ. ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಲು ನಿಮಗೆ ಹಕ್ಕಿಲ್ಲ (Locus), ಸಂತ್ರಸ್ತೆ ಅಥವಾ ಆಕೆಯ ಕುಟುಂಬ ಮಾತ್ರ ಅದನ್ನು ಪ್ರಶ್ನಿಸಬಹುದು," ಎಂದು ಗುಡುಗಿದರು.

ಕಾನೂನು ಬದಲಾಗಬೇಕು

ಅತ್ಯಾಚಾರದ ಪ್ರಕರಣಗಳಲ್ಲಿ ಗರ್ಭಪಾತಕ್ಕೆ ಸಮಯದ ಮಿತಿ ಇರಬಾರದು ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ, "ಕಾಲಕ್ಕೆ ತಕ್ಕಂತೆ ಕಾನೂನುಗಳು ಬದಲಾಗಬೇಕು. ಅತ್ಯಾಚಾರದಂತಹ ಪ್ರಕರಣಗಳಲ್ಲಿ ಗರ್ಭಪಾತಕ್ಕೆ ಗಡುವು ನಿಗದಿಪಡಿಸುವುದು ಸರಿಯಲ್ಲ," ಎಂದು ಹೇಳಿತು.

"ಇದು ಮಗು ಮತ್ತು ಭ್ರೂಣದ ನಡುವಿನ ಹೋರಾಟವಾಗಿದ್ದರೆ, ಆ ಜೀವಂತ ಮಗುವಿಗೆ ಘನತೆಯಿಂದ ಬದುಕುವ ಹಕ್ಕನ್ನು ನೀಡಬೇಕು. 15 ವರ್ಷದ ಮಗು ಕನಸು ಕಾಣುವ ವಯಸ್ಸಿನಲ್ಲಿ ತಾಯಿಯಾಗಬೇಕು ಎಂದು ಬಯಸುವುದು ಎಷ್ಟು ಸರಿ? ಆಕೆ ಈಗಾಗಲೇ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಇಂತಹ ಸ್ಥಿತಿಯಲ್ಲಿ ಆಕೆಯನ್ನು ಬಲವಂತಪಡಿಸುವುದು ಬದುಕುವ ಹಕ್ಕಿನ ಉಲ್ಲಂಘನೆ," ಎಂದು ನ್ಯಾಯಮೂರ್ತಿಗಳು ತಿಳಿಸಿದರು.

ಸರ್ಕಾರದ ವಾದವೇನಿತ್ತು?

ಸರ್ಕಾರದ ಪರವಾಗಿ ವಾದ ಮಂಡಿಸಿದ ಐಶ್ವರ್ಯ ಭಾಟಿ ಅವರು, "ಏಮ್ಸ್ (AIIMS) ವರದಿ ಪ್ರಕಾರ ಈ ಹಂತದಲ್ಲಿ ಗರ್ಭಪಾತ ಮಾಡಿದರೆ ಹುಟ್ಟುವ ಮಗು ಗಂಭೀರ ಅಂಗವೈಕಲ್ಯ ಹೊಂದಿರಬಹುದು ಮತ್ತು ಬಾಲಕಿಯ ಆರೋಗ್ಯಕ್ಕೂ ಅಪಾಯವಿದೆ. ಆದ್ದರಿಂದ ಇನ್ನ ನಾಲ್ಕು ವಾರ ಕಳೆದು ಹೆರಿಗೆ ಮಾಡಿಸಿ ಮಗುವನ್ನು ದತ್ತಕ್ಕೆ ನೀಡುವುದು ಉತ್ತಮ," ಎಂದು ವಾದಿಸಿದ್ದರು.

ನ್ಯಾಯಾಲಯದ ಅಂತಿಮ ನಿಲುವು

ನ್ಯಾಯಮೂರ್ತಿ ಜಾಯ್‌ಮಾಲ್ಯ ಬಗ್ಚಿ ಅವರು ಸರ್ಕಾರದ ವಾದವನ್ನು ತಳ್ಳಿಹಾಕುತ್ತಾ, "ಪೋಷಕರಿಗೆ ಆರೋಗ್ಯದ ಅಪಾಯಗಳ ಬಗ್ಗೆ ಮಾಹಿತಿ ನೀಡಿ. ಆದರೆ ಅಂತಿಮ ನಿರ್ಧಾರವನ್ನು ಅವರ ಆಯ್ಕೆಗೆ ಬಿಡಿ. ತಜ್ಞ ಸೈಕಿಯಾಟ್ರಿಸ್ಟ್ ಮತ್ತು ಕೌನ್ಸಿಲರ್ ಮೂಲಕ ಅವರಿಗೆ ಸಹಾಯ ಮಾಡಿ. ಆಯ್ಕೆ ಮಾಡುವ ಸಾಮರ್ಥ್ಯವಿರುವ ಜನರ ಪರವಾಗಿ ನೀವೇ ಆಯ್ಕೆ ಮಾಡಲು ಹೋಗಬೇಡಿ," ಎಂದು ಕಿವಿಮಾತು ಹೇಳಿದರು.

ಕಳೆದ ವಾರವಷ್ಟೇ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಮತ್ತು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರಿದ್ದ ಪೀಠವು ಬಾಲಕಿಯ ಸಂತಾನೋತ್ಪತ್ತಿ ಸ್ವಾಯತ್ತತೆಯನ್ನು ಎತ್ತಿಹಿಡಿದು ಗರ್ಭಪಾತಕ್ಕೆ ಹಸಿರು ನಿಶಾನೆ ತೋರಿಸಿತ್ತು.

Read More
Next Story