
ಸುಪ್ರೀಂ ಕೋರ್ಟ್
ಸುಗ್ರೀವಾಜ್ಞೆ ಜಾರಿ ಮೂಲಕ ಸುಪ್ರೀಂ ನ್ಯಾಯಮೂರ್ತಿಗಳ ಸಂಖ್ಯೆ ಏರಿಕೆ; ಕೇಸ್ ವಿಲೇವಾರಿಗೆ ಸಿಗಲಿದೆಯೇ ವೇಗ ?
ಜುಲೈನಲ್ಲಿ ನಡೆಯಲಿರುವ ಮಳೆಗಾಲದ ಅಧಿವೇಶನದಲ್ಲಿ ಸರ್ಕಾರ ಈ ಸುಗ್ರೀವಾಜ್ಞೆಯ ಬದಲಾಗಿ ಔಪಚಾರಿಕ ಮಸೂದೆಯನ್ನು ಮಂಡಿಸಿ, ಉಭಯ ಸದನಗಳ ಅಂಗೀಕಾರ ಪಡೆಯಬೇಕಿದೆ.
ಸುಪ್ರೀಂ ಕೋರ್ಟ್‌ನಲ್ಲಿ ಹೆಚ್ಚುತ್ತಿರುವ ಪ್ರಕರಣಗಳ ಬಾಕಿಯನ್ನು ಶೀಘ್ರವಾಗಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಭಾರಿ ಹೆಜ್ಜೆ ಇಟ್ಟಿದೆ. ಮುಖ್ಯ ನ್ಯಾಯಮೂರ್ತಿಗಳನ್ನು ಹೊರತುಪಡಿಸಿ ಸುಪ್ರೀಂ ನ್ಯಾಯಮೂರ್ತಿಗಳ ಸಂಖ್ಯೆಯನ್ನು 33ರಿಂದ 37ಕ್ಕೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಹೆಚ್ಚಿಸಲು ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ.
'ಸುಪ್ರೀಂ ಕೋರ್ಟ್ (ನ್ಯಾಯಮೂರ್ತಿಗಳ ಸಂಖ್ಯೆ) ತಿದ್ದುಪಡಿ ಸುಗ್ರೀವಾಜ್ಞೆ-2026'ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ (ಮೇ 16) ಸಹಿ ಹಾಕಿದ್ದು, ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯವು ಇದರ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿದೆ. ಇದರೊಂದಿಗೆ ಮುಖ್ಯ ನ್ಯಾಯಮೂರ್ತಿಗಳು ಸೇರಿದಂತೆ ಸುಪ್ರೀಂ ಕೋರ್ಟ್‌ನ ಒಟ್ಟು ನ್ಯಾಯಮೂರ್ತಿಗಳ ಸಂಖ್ಯೆ 38ಕ್ಕೆ ಏರಿಕೆಯಾಗಲಿದೆ.
ಸಚಿವ ಸಂಪುಟದ ಒಪ್ಪಿಗೆಯ ಬೆನ್ನಲ್ಲೇ ಸುಗ್ರೀವಾಜ್ಞೆ
ಇತ್ತೀಚೆಗಷ್ಟೇ (ಮೇ 5 ರಂದು) ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ನ್ಯಾಯಮೂರ್ತಿಗಳ ಸಂಖ್ಯೆಯನ್ನು ನಾಲ್ಕು ಹೆಚ್ಚಿಸುವ ತಿದ್ದುಪಡಿ ಮಸೂದೆಗೆ ಅನುಮೋದನೆ ನೀಡಿತ್ತು. ಪ್ರಸ್ತುತ ಸಂಸತ್ತಿನ ಅಧಿವೇಶನ ನಡೆಯದ ಕಾರಣ, ಸಂವಿಧಾನದ ವಿಧಿ 123ರ ಅಡಿಯಲ್ಲಿ ರಾಷ್ಟ್ರಪತಿಗಳು ಈ ತುರ್ತು ಸುಗ್ರೀವಾಜ್ಞೆಯನ್ನು ಹೊರಡಿಸಿದ್ದಾರೆ. ಜುಲೈನಲ್ಲಿ ನಡೆಯಲಿರುವ ಮಳೆಗಾಲದ ಅಧಿವೇಶನದಲ್ಲಿ ಸರ್ಕಾರ ಈ ಸುಗ್ರೀವಾಜ್ಞೆಯ ಬದಲಾಗಿ ಔಪಚಾರಿಕ ಮಸೂದೆಯನ್ನು ಮಂಡಿಸಿ, ಉಭಯ ಸದನಗಳ ಅಂಗೀಕಾರ ಪಡೆಯಬೇಕಿದೆ.
ಹೆಚ್ಚಳದ ಹಿಂದಿನ ಅಸಲಿ ಕಾರಣಗಳೇನು?
ಇತ್ತೀಚಿನ ಅಧಿಕೃತ ಮಾಹಿತಿಯ ಪ್ರಕಾರ, ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಪ್ರಕರಣಗಳ ಸಂಖ್ಯೆ 90 ಸಾವಿರಕ್ಕೂ ಹೆಚ್ಚಿವೆ. ಕೋವಿಡ್ ನಂತರದ ದಿನಗಳಲ್ಲಿ ಆನ್‌ಲೈನ್ ಅರ್ಜಿ ಹೆಚ್ಚಾದ ಕಾರಣ ಕೋರ್ಟ್‌ಗೆ ದಾಖಲಾಗುವ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಏರಿಕೆಯಾಗಿದೆ. ನ್ಯಾಯಮೂರ್ತಿಗಳ ಸಂಖ್ಯೆ ಹೆಚ್ಚಳದಿಂದಾಗಿ ಸಂವಿಧಾನ ಪೀಠಗಳು, ವಾಣಿಜ್ಯ ವಿವಾದಗಳ ಪೀಠಗಳು ಮತ್ತು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಗೆ ಪ್ರತ್ಯೇಕ ಮತ್ತು ವಿಶೇಷ ಪೀಠಗಳನ್ನು ರಚಿಸಲು ಮುಖ್ಯ ನ್ಯಾಯಮೂರ್ತಿಗಳಿಗೆ ಹೆಚ್ಚಿನ ಸ್ವಾತಂತ್ರ್ಯ ಸಿಗುತ್ತದೆ.
ಕೊಲಿಜಿಯಂಗೆ ಅಧಿಕಾರ
ಸುಗ್ರೀವಾಜ್ಞೆಯ ಮೂಲಕ 4 ಹೊಸ ಹುದ್ದೆಗಳನ್ನು ಸೃಷ್ಟಿಸಲಾಗಿದ್ದರೂ, ಈ ಸ್ಥಾನಗಳಿಗೆ ನ್ಯಾಯಾಧೀಶರನ್ನು ನೇಮಕ ಮಾಡುವ ಜವಾಬ್ದಾರಿ ಎಂದಿನಂತೆ ಸುಪ್ರೀಂ ಕೋರ್ಟ್‌ನ 'ಕೊಲಿಜಿಯಂ' ವ್ಯವಸ್ಥೆಯ ಮೇಲೆಯೇ ಇರಲಿದ್ದು, ಯಾವುದೇ ಬದಲಾವಣೆಯಾಗಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ನ್ಯಾಯಮೂರ್ತಿ ಸಂಖ್ಯೆ ಹೆಚ್ಚಳದ ಇತಿಹಾಸ
ಭಾರತೀಯ ಸಂವಿಧಾನದ 124(1)ನೇ ವಿಧಿಯ ಪ್ರಕಾರ ಆರಂಭದಲ್ಲಿ ಸುಪ್ರೀಂ ಕೋರ್ಟ್ ಒಬ್ಬರು ಸಿಜೆಐ ಮತ್ತು ಕೇವಲ 7 ಇತರ ನ್ಯಾಯಮೂರ್ತಿಗಳನ್ನು ಒಳಗೊಂಡಿತ್ತು. ಆದರೆ ಬದಲಾಗುತ್ತಿರುವ ಕಾಲಘಟ್ಟಕ್ಕೆ ತಕ್ಕಂತೆ 'ಸುಪ್ರೀಂ ಕೋರ್ಟ್ (ನ್ಯಾಯಮೂರ್ತಿಗಳ ಸಂಖ್ಯೆ) ಕಾಯ್ದೆ-1956' ಕ್ಕೆ ತಿದ್ದುಪಡಿ ತರುತ್ತಾ ಈ ಸಂಖ್ಯಾ ಬಲವನ್ನು ಕಾಲಕಾಲಕ್ಕೆ ಹೆಚ್ಚಿಸಲಾಗಿದೆ. ಸುಗ್ರೀವಾಜ್ಞೆ ಜಾರಿಯಾದ ಆರು ತಿಂಗಳೊಳಗೆ ಅಥವಾ ಸಂಸತ್ತು ಸಮಾವೇಶಗೊಂಡ ಆರು ವಾರಗಳ ಒಳಗಾಗಿ ಇದಕ್ಕೆ ಸಂಸತ್ತಿನ ಉಭಯ ಸದನಗಳಲ್ಲಿ (ಲೋಕಸಭೆ ಮತ್ತು ರಾಜ್ಯಸಭೆ) ಒಪ್ಪಿಗೆ ಸಿಗುವುದು ಕಡ್ಡಾಯವಾಗಿದೆ. ಇಲ್ಲದಿದ್ದರೆ ಈ ಸುಗ್ರೀವಾಜ್ಞೆ ರದ್ದಾಗುತ್ತದೆ. ಆದರೆ ನ್ಯಾಯಾಂಗದ ಸುಧಾರಣೆಯ ದೃಷ್ಟಿಯಿಂದ ಈ ಮಸೂದೆಗೆ ವಿರೋಧ ಪಕ್ಷಗಳಿಂದಲೂ ಸುಲಭ ಒಪ್ಪಿಗೆ ಸಿಗುವ ಸಾಧ್ಯತೆಯಿದೆ.

