
ನೇಣು ಬಿಗಿಯುವ ಶಿಕ್ಷೆಯನ್ನೇ ಮುಂದುವರಿಸಿ… ಮರಣದಂಡನೆಗೆ ಪರ್ಯಾಯ ವಿಧಾನ ಬೇಡ: ಸುಪ್ರೀಂ ಕೋರ್ಟ್
ವಕೀಲ ರಿಷಿ ಮಲ್ಹೋತ್ರಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ನೇಣು ಬಿಗಿಯುವ ಬದಲು ಮಾರಕ ಚುಚ್ಚುಮದ್ದು, ಗುಂಡಿಕ್ಕುವುದು, ವಿದ್ಯುತ್ ಶಾಕ್ ಅಥವಾ ಗ್ಯಾಸ್ ಚೇಂಬರ್‌ನಂತಹ ಪರ್ಯಾಯ ವಿಧಾನಗಳನ್ನು ಪರಿಗಣಿಸುವಂತೆ ಮನವಿ ಮಾಡಲಾಗಿತ್ತು.
ಮರಣದಂಡನೆ ಶಿಕ್ಷೆಯನ್ನು ನೇಣು ಬಿಗಿಯುವ ಬದಲು ಕಡಿಮೆ ನೋವು ಉಂಟುಮಾಡುವ ಇತರ ವಿಧಾನಗಳ ಮೂಲಕ ಜಾರಿಗೊಳಿಸಬೇಕು ಎಂಬ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಹೀಗಾಗಿ ಸದ್ಯಕ್ಕೆ ಭಾರತದಲ್ಲಿ ನೇಣು ಬಿಗಿಯುವ ಮೂಲಕವೇ ಮರಣದಂಡನೆ ಶಿಕ್ಷೆ ಜಾರಿಗೊಳಿಸಲಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಪೀಠವು ಈ ಸಂಬಂಧ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾಗೊಳಿಸಿತು. ಮರಣದಂಡನೆಗೆ ಗುರಿಯಾಗುವ ವ್ಯಕ್ತಿಗೆ ಕಡಿಮೆ ನೋವು ಉಂಟುಮಾಡುವ ಹಾಗೂ ಅವರ ಘನತೆಯನ್ನು ಕಾಪಾಡುವ ಪರ್ಯಾಯ ವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.
ಅರ್ಜಿಯಲ್ಲಿ ಏನಿತ್ತು?
ವಕೀಲ ರಿಷಿ ಮಲ್ಹೋತ್ರಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ನೇಣು ಬಿಗಿಯುವ ಬದಲು ಮಾರಕ ಚುಚ್ಚುಮದ್ದು, ಗುಂಡಿಕ್ಕುವುದು, ವಿದ್ಯುತ್ ಶಾಕ್ ಅಥವಾ ಗ್ಯಾಸ್ ಚೇಂಬರ್‌ನಂತಹ ಪರ್ಯಾಯ ವಿಧಾನಗಳನ್ನು ಪರಿಗಣಿಸುವಂತೆ ಮನವಿ ಮಾಡಲಾಗಿತ್ತು.
ನೇಣು ಬಿಗಿಯುವ ವಿಧಾನ ಅತ್ಯಂತ ನೋವಿನಿಂದ ಕೂಡಿದ್ದು, ಅಮಾನವೀಯ ಹಾಗೂ ಕ್ರೂರವಾಗಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು. ಅಪರಾಧ ಪ್ರಕ್ರಿಯಾ ಸಂಹಿತೆ (CrPC)ಯ ಸೆಕ್ಷನ್ 354(5)ರ ಅಡಿಯಲ್ಲಿ ನೇಣು ಬಿಗಿಯುವ ಮೂಲಕ ಮರಣದಂಡನೆ ಜಾರಿಗೊಳಿಸುವುದು ಅಸಂವಿಧಾನಿಕ ಎಂದು ಘೋಷಿಸಬೇಕು ಮತ್ತು ಗೌರವಯುತ ಮರಣದ ಹಕ್ಕನ್ನು ಸಂವಿಧಾನದ ವಿಧಿ 21ರ ಅಡಿಯಲ್ಲಿ ಮೂಲಭೂತ ಹಕ್ಕು ಎಂದು ಗುರುತಿಸಬೇಕು ಎಂದು ಅರ್ಜಿದಾರರು ಕೋರಿದ್ದರು.
ನೇಣು ಬಿಗಿದ ಬಳಿಕ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಘೋಷಿಸಲು ಸುಮಾರು 40 ನಿಮಿಷಗಳವರೆಗೆ ಸಮಯ ಬೇಕಾಗಬಹುದು. ಆದರೆ ಗುಂಡಿಕ್ಕುವುದು ಅಥವಾ ಮಾರಕ ಚುಚ್ಚುಮದ್ದಿನ ಮೂಲಕ ಕೆಲವೇ ನಿಮಿಷಗಳಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.
ಮರಣದಂಡನೆ ವಿಧಿಸಿದ ಸಂದರ್ಭದಲ್ಲಿ ಸಾಧ್ಯವಾದಷ್ಟು ಕಡಿಮೆ ನೋವು ಉಂಟಾಗುವ ರೀತಿಯಲ್ಲಿ ಶಿಕ್ಷೆಯನ್ನು ಜಾರಿಗೊಳಿಸಬೇಕು ಎಂಬ ವಿಶ್ವಸಂಸ್ಥೆಯ ನಿರ್ಣಯವನ್ನೂ ಅರ್ಜಿದಾರರು ಉಲ್ಲೇಖಿಸಿದ್ದರು.
ಭವಿಷ್ಯದಲ್ಲಿ ಪರ್ಯಾಯ ವಿಧಾನ ಪರಿಶೀಲಿಸಬಹುದು
ಈ ತೀರ್ಪು ಈ ವಿಚಾರದ ಅಂತಿಮ ನಿರ್ಧಾರವಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಪರ್ಯಾಯ ಮರಣದಂಡನೆ ವಿಧಾನಗಳ ಕುರಿತು ಬಲವಾದ ವೈಜ್ಞಾನಿಕ, ವೈದ್ಯಕೀಯ ಅಥವಾ ಪ್ರಾಯೋಗಿಕ ಸಾಕ್ಷ್ಯಗಳು ಲಭ್ಯವಾದರೆ, ಭವಿಷ್ಯದಲ್ಲಿ ಈ ವಿಚಾರವನ್ನು ಮತ್ತೆ ಸಾಂವಿಧಾನಿಕವಾಗಿ ಪರಿಶೀಲಿಸಬಹುದು ಎಂದು ನ್ಯಾಯಾಲಯ ಹೇಳಿದೆ.
ಅಲ್ಲದೆ, ಕೇಂದ್ರ ಸರ್ಕಾರ ಬಯಸಿದರೆ ಮರಣದಂಡನೆ ಜಾರಿಗೊಳಿಸುವ ಪರ್ಯಾಯ ವಿಧಾನಗಳ ಕುರಿತು ಸಮಗ್ರ ಪರಿಶೀಲನೆ ನಡೆಸಲು ತಜ್ಞರ ಸಮಿತಿಯನ್ನು ರಚಿಸಬಹುದು ಎಂದು ನ್ಯಾಯಾಲಯ ತಿಳಿಸಿದೆ.
ಪರ್ಯಾಯ ವಿಧಾನಗಳ ಕುರಿತು ಕೇಂದ್ರದ ನಿಲುವೇನು?
ಕೇಂದ್ರ ಸರ್ಕಾರದ ಪರವಾಗಿ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರು ವಿಚಾರಣೆಯ ಸಂದರ್ಭದಲ್ಲಿ, ಈ ವಿಷಯವನ್ನು ಪರಿಶೀಲಿಸಲು ಸರ್ಕಾರ ಈಗಾಗಲೇ ಸಮಿತಿಯನ್ನು ರಚಿಸಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. 2025ರ ಅಕ್ಟೋಬರ್ 15ರಂದು ನಡೆದ ವಿಚಾರಣೆಯ ವೇಳೆ, ನೇಣು ಬಿಗಿಯುವ ಪದ್ಧತಿಯನ್ನು ಬದಲಾಯಿಸಲು ಕೇಂದ್ರ ಸರ್ಕಾರ ಸಿದ್ಧವಿಲ್ಲದಿರುವ ಬಗ್ಗೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು.
ಮರಣದಂಡನೆಗೆ ಗುರಿಯಾದ ವ್ಯಕ್ತಿಗೆ ನೇಣು ಅಥವಾ ಮಾರಕ ಚುಚ್ಚುಮದ್ದು—ಈ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡುವ ಕುರಿತೂ ವಿಚಾರಣೆ ವೇಳೆ ಚರ್ಚೆ ನಡೆದಿತ್ತು. ಆದರೆ ಇಂತಹ ಆಯ್ಕೆಯನ್ನು ನೀಡುವುದು ಪ್ರಾಯೋಗಿಕವಾಗಿ ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ತನ್ನ ಅಫಿಡವಿಟ್‌ನಲ್ಲಿ ತಿಳಿಸಿತ್ತು.
ಇದಕ್ಕೆ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿ, ಕಾಲ ಬದಲಾದರೂ ಕೇಂದ್ರ ಸರ್ಕಾರ ಬದಲಾವಣೆಗೆ ಸಿದ್ಧವಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿತ್ತು. ಮರಣದಂಡನೆ ಜಾರಿಗೊಳಿಸುವ ಪ್ರಸ್ತುತ ವಿಧಾನ ಬಹಳ ಹಳೆಯದಾಗಿದ್ದು, ಕಾಲಕ್ಕೆ ತಕ್ಕಂತೆ ಪರಿಸ್ಥಿತಿಗಳು ಬದಲಾಗಿವೆ ಎಂದು ಪೀಠ ಮೌಖಿಕವಾಗಿ ಹೇಳಿತ್ತು.
ಸುಪ್ರೀಂ ಕೋರ್ಟ್ ಜನವರಿ 22ರಂದು ಈ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿ ತೀರ್ಪನ್ನು ಕಾಯ್ದಿರಿಸಿತ್ತು. ಇದೀಗ ಅರ್ಜಿಯನ್ನು ವಜಾಗೊಳಿಸುವ ಮೂಲಕ ಭಾರತದಲ್ಲಿ ಸದ್ಯಕ್ಕೆ ಮರಣದಂಡನೆ ಜಾರಿಗೊಳಿಸುವ ವಿಧಾನವಾಗಿ ನೇಣು ಬಿಗಿಯುವ ಪದ್ಧತಿಯೇ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದೆ.

