
ಮೇಘಾಲಯ ಹನಿಮೂನ್ ಕೊಲೆ ಪ್ರಕರಣ: ಸೋನಂ ರಘುವಂಶಿಗೆ ಸುಪ್ರೀಂ ಕೋರ್ಟ್ ಶಾಕ್, ಜಾಮೀನು ರದ್ದು
ಏಪ್ರಿಲ್‌ನಲ್ಲಿ ಶಿಲ್ಲಾಂಗ್ ವಿಚಾರಣಾ ನ್ಯಾಯಾಲಯವು ಸೋನಂಗೆ ಜಾಮೀನು ನೀಡಿತ್ತು. ಬಂಧನದ ವೇಳೆ ಕಾನೂನುಬದ್ಧವಾಗಿ ನೀಡಬೇಕಾದ ಬಂಧನದ ಕಾರಣಗಳನ್ನು ಸರಿಯಾಗಿ ಲಿಖಿತ ರೂಪದಲ್ಲಿ ನೀಡಿಲ್ಲ ಎಂಬ ತಾಂತ್ರಿಕ ಕಾರಣವನ್ನು ನ್ಯಾಯಾಲಯ ಪರಿಗಣಿಸಿತ್ತು.
ಮೇಘಾಲಯದಲ್ಲಿ ಹನಿಮೂನ್ ವೇಳೆ ಪತಿ ರಾಜಾ ರಘುವಂಶಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸೋನಂ ರಘುವಂಶಿಗೆ ಸುಪ್ರೀಂ ಕೋರ್ಟ್ ಗುರುವಾರ ದೊಡ್ಡ ಆಘಾತ ನೀಡಿದೆ. ಈ ಹಿಂದೆ ನೀಡಲಾಗಿದ್ದ ಜಾಮೀನನ್ನು ರದ್ದುಪಡಿಸಿರುವ ನ್ಯಾಯಾಲಯ, ಮೂರು ವಾರಗಳೊಳಗೆ ವಿಚಾರಣಾ ನ್ಯಾಯಾಲಯದ ಮುಂದೆ ಶರಣಾಗುವಂತೆ ಆದೇಶಿಸಿದೆ.
ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಪಿ.ಬಿ. ವರಾಳೆ ಅವರಿದ್ದ ಪೀಠ, ಜಾಮೀನು ರದ್ದುಗೊಳಿಸುವಂತೆ ಮೇಘಾಲಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯಗೊಳಿಸಿತು. ವಿಚಾರಣೆ ಈಗಾಗಲೇ ಆರಂಭವಾಗಿರುವ ಹಂತದಲ್ಲಿ ಸೋನಂ ಜಾಮೀನಿನ ಮೇಲೆ ಹೊರಗಿರುವುದು ನ್ಯಾಯಾಂಗ ಪ್ರಕ್ರಿಯೆಗೆ ಅಡ್ಡಿಯಾಗುವ ಸಾಧ್ಯತೆ ಇದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.
ಆದರೆ, ಪ್ರಕರಣದ ವಿಚಾರಣೆ ವೇಗವಾಗಿ ನಡೆಯದಿದ್ದರೆ, ಆರು ತಿಂಗಳ ಬಳಿಕ ಹೊಸದಾಗಿ ಜಾಮೀನಿಗೆ ಅರ್ಜಿ ಸಲ್ಲಿಸಲು ಸೋನಂಗೆ ಅವಕಾಶವಿದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ
ಮಧ್ಯಪ್ರದೇಶದ ಇಂದೋರ್ ಮೂಲದ 25 ವರ್ಷದ ಸೋನಂ ರಘುವಂಶಿ, ಪತಿ ರಾಜಾ ರಘುವಂಶಿಯೊಂದಿಗೆ ಕಳೆದ ವರ್ಷದ ಮೇ ತಿಂಗಳಲ್ಲಿ ಹನಿಮೂನ್‌ಗಾಗಿ ಮೇಘಾಲಯಕ್ಕೆ ತೆರಳಿದ್ದರು. ಪ್ರವಾಸದ ವೇಳೆ ಇಬ್ಬರೂ ನಾಪತ್ತೆಯಾಗಿದ್ದು, ಒಂದು ವಾರದ ಬಳಿಕ ರಾಜಾ ಅವರ ಮೃತದೇಹ ಆಳವಾದ ಕಂದಕದಲ್ಲಿ ಪತ್ತೆಯಾಗಿತ್ತು.
ಪೊಲೀಸರ ತನಿಖೆಯಲ್ಲಿ, ಸೋನಂ ತನ್ನ ಪ್ರಿಯಕರ ರಾಜ್ ಕುಶ್ವಾಹಾ ಜೊತೆ ಸೇರಿ ಹಣದ ಲಾಭಕ್ಕಾಗಿ ಬಾಡಿಗೆ ಹಂತಕರ ಮೂಲಕ ಪತಿ ರಾಜಾ ರಘುವಂಶಿಯ ಹತ್ಯೆಗೆ ಸಂಚು ರೂಪಿಸಿದ್ದಾಳೆ ಎಂಬ ಆರೋಪ ಹೊರಬಂದಿತ್ತು. ಈ ಪ್ರಕರಣದಲ್ಲಿ ಸೋನಂ ಅವರನ್ನು 2025ರ ಜೂನ್‌ನಲ್ಲಿ ಬಂಧಿಸಲಾಗಿತ್ತು.
ತಾಂತ್ರಿಕ ಕಾರಣಕ್ಕೆ ಸಿಕ್ಕಿದ್ದ ಜಾಮೀನು
ಈ ವರ್ಷದ ಏಪ್ರಿಲ್‌ನಲ್ಲಿ ಶಿಲ್ಲಾಂಗ್ ವಿಚಾರಣಾ ನ್ಯಾಯಾಲಯವು ಸೋನಂಗೆ ಜಾಮೀನು ನೀಡಿತ್ತು. ಬಂಧನದ ವೇಳೆ ಕಾನೂನುಬದ್ಧವಾಗಿ ನೀಡಬೇಕಾದ ಬಂಧನದ ಕಾರಣಗಳನ್ನು ಸರಿಯಾಗಿ ಲಿಖಿತ ರೂಪದಲ್ಲಿ ನೀಡಿಲ್ಲ ಎಂಬ ತಾಂತ್ರಿಕ ಕಾರಣವನ್ನು ನ್ಯಾಯಾಲಯ ಪರಿಗಣಿಸಿತ್ತು.
ನಂತರ ಮೇಘಾಲಯ ಹೈಕೋರ್ಟ್ ಕೂಡ ಈ ಆದೇಶವನ್ನು ಎತ್ತಿಹಿಡಿದಿತ್ತು. ಬಂಧನ ಮೆಮೊದಲ್ಲಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಭಾರತೀಯ ನ್ಯಾಯ ಸಂಹಿತೆಯ (BNS) ತಪ್ಪಾದ ಸೆಕ್ಷನ್ ಉಲ್ಲೇಖಿಸಿರುವುದನ್ನು ನ್ಯಾಯಾಲಯ ಗಂಭೀರ ಲೋಪ ಎಂದು ಹೇಳಿತ್ತು.
ಸುಪ್ರೀಂ ಕೋರ್ಟ್ ಹೇಳಿದ್ದೇನು?
ಆದರೆ ಸುಪ್ರೀಂ ಕೋರ್ಟ್ ಈ ವಾದವನ್ನು ಒಪ್ಪಲಿಲ್ಲ. ಬಂಧನ ಮೆಮೊದಲ್ಲಿದ್ದ ತಪ್ಪು ಕೇವಲ ತಾಂತ್ರಿಕ ಅಥವಾ ಟೈಪಿಂಗ್ ದೋಷವಾಗಿದ್ದು, ಅದರಿಂದ ಬಂಧನವನ್ನೇ ಅಮಾನ್ಯ ಎಂದು ಹೇಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತು.
ಬಂಧನದ ಕಾರಣಗಳನ್ನು ನೀಡದೇ ಇರುವುದು ಮತ್ತು ಸಮರ್ಪಕ ಕಾರಣಗಳನ್ನು ನೀಡಿರುವ ಬಗ್ಗೆ ಉಂಟಾಗುವ ವಿವಾದ ಎರಡೂ ವಿಭಿನ್ನ ವಿಚಾರಗಳು. ಈ ಪ್ರಕರಣದಲ್ಲಿ ಜಾಮೀನು ನೀಡುವಂತಹ ಪರಿಸ್ಥಿತಿ ಇಲ್ಲ ಎಂದು ನ್ಯಾಯಪೀಠ ಹೇಳಿದೆ.
ಸರ್ಕಾರದ ವಾದ
ಮೇಘಾಲಯ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಬಂಧನ ಮೆಮೊದಲ್ಲಿದ್ದ ತಪ್ಪು ಕೇವಲ ಕ್ಲೆರಿಕಲ್ ಅಥವಾ ಟೈಪಿಂಗ್ ದೋಷವಾಗಿದ್ದು, ಅದನ್ನು ಆಧಾರವನ್ನಾಗಿ ಮಾಡಿಕೊಂಡು ಬಂಧನವನ್ನು ಅಮಾನ್ಯಗೊಳಿಸಲು ಸಾಧ್ಯವಿಲ್ಲ ಎಂದು ವಾದಿಸಿದರು. ಇದೇ ವೇಳೆ, ಸೋನಂ ಜಾಮೀನಿನ ಮೇಲೆ ಹೊರಗಿದ್ದರೆ ಪರಾರಿಯಾಗುವ ಸಾಧ್ಯತೆಯೂ ಇದೆ ಎಂದು ಸರ್ಕಾರ ನ್ಯಾಯಾಲಯದ ಗಮನಕ್ಕೆ ತಂದಿತು.
ಸೋನಂ ವಾದವೇನು?
ತಮ್ಮ ವಿರುದ್ಧದ ಆರೋಪಗಳನ್ನು ತಳ್ಳಿ ಹಾಕಿರುವ ಸೋನಂ ರಘುವಂಶಿ, ತಾನು ನಿರಪರಾಧಿಯಾಗಿದ್ದು, ಪ್ರಕರಣ ಸಂಪೂರ್ಣವಾಗಿ ಸಾಂದರ್ಭಿಕ ಸಾಕ್ಷ್ಯಗಳ ಮೇಲೆ ನಿಂತಿದೆ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದರು. ಕೇವಲ ಆರೋಪಗಳ ಆಧಾರದ ಮೇಲೆ ತಮ್ಮನ್ನು ಅಪರಾಧಿ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಅವರು ವಾದಿಸಿದ್ದರು. ಆದರೆ ಈ ವಾದವನ್ನು ಅಂಗೀಕರಿಸದ ಸುಪ್ರೀಂ ಕೋರ್ಟ್, ಜಾಮೀನು ರದ್ದುಪಡಿಸಿ ಮೂರು ವಾರಗಳೊಳಗೆ ಶರಣಾಗುವಂತೆ ಸೂಚನೆ ನೀಡಿದೆ.

