
ಬಾಲಕಿಗೆ ಆಕೆಯ ಇಚ್ಛೆಗೆ ವಿರುದ್ಧವಾಗಿ ಮಗುವಿಗೆ ಜನ್ಮ ನೀಡಲೇಬೇಕು ಎಂದು ಒತ್ತಾಯಿಸುವ ಅಧಿಕಾರ ಯಾವುದೇ ನ್ಯಾಯಾಲಯಕ್ಕೂ ಇಲ್ಲ' ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.
15 ವರ್ಷದ ಬಾಲಕಿಯ 7 ತಿಂಗಳ ಗರ್ಭಪಾತಕ್ಕೆ ಸುಪ್ರೀಂ ಕೋರ್ಟ್ ಅನುಮತಿ
ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರಿದ್ದ ದ್ವಿಸದಸ್ಯ ಪೀಠವು ಬಾಲಕಿಯ ತಾಯಿ ಸಲ್ಲಿಸಿದ್ದ ಈ ಅರ್ಜಿಯ ವಿಚಾರಣೆ ನಡೆಸಿತು.
ಮಹಿಳೆಗೆ, ಅದರಲ್ಲೂ ವಿಶೇಷವಾಗಿ ಅಪ್ರಾಪ್ತ ಬಾಲಕಿಗೆ ಆಕೆಯ ಇಚ್ಛೆಗೆ ವಿರುದ್ಧವಾಗಿ ಮಗುವಿಗೆ ಜನ್ಮ ನೀಡಲೇಬೇಕು ಎಂದು ಒತ್ತಾಯಿಸುವ ಅಧಿಕಾರ ಯಾವುದೇ ನ್ಯಾಯಾಲಯಕ್ಕೂ ಇಲ್ಲ' ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ. ಈ ಮೂಲಕ 15 ವರ್ಷದ ಬಾಲಕಿಯೊಬ್ಬಳಿಗೆ ತನ್ನ 7 ತಿಂಗಳ (28 ವಾರಕ್ಕೂ ಅಧಿಕ) ಗರ್ಭವನ್ನು ನವದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ (AIIMS) ವೈದ್ಯಕೀಯವಾಗಿ ತೆಗೆಸಿಕೊಳ್ಳಲು ನ್ಯಾಯಾಲಯ ಅನುಮತಿ ನೀಡಿದೆ.
ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರಿದ್ದ ದ್ವಿಸದಸ್ಯ ಪೀಠವು ಬಾಲಕಿಯ ತಾಯಿ ಸಲ್ಲಿಸಿದ್ದ ಈ ಅರ್ಜಿಯ ವಿಚಾರಣೆ ನಡೆಸಿತು. ಪರಸ್ಪರ ಸಮ್ಮತಿಯಿಂದಲೇ ಈ ಗರ್ಭಧಾರಣೆ ನಡೆದಿತ್ತು ಹಾಗೂ ಗರ್ಭ ಧರಿಸುವಾಗ ಇಬ್ಬರೂ 18 ವರ್ಷದೊಳಗಿನ ಅಪ್ರಾಪ್ತರಾಗಿದ್ದರು. ಆದರೆ, ಗರ್ಭಿಣಿಯಾದ ಬಳಿಕ ಮಾನಸಿಕವಾಗಿ ಕುಗ್ಗಿಹೋಗಿದ್ದ ಬಾಲಕಿಯು, ಈ ಅನಪೇಕ್ಷಿತ ಗರ್ಭವನ್ನು ಮುಂದುವರಿಸಲು ನಿರಾಕರಿಸಿದ್ದಳು ಮಾತ್ರವಲ್ಲದೆ, ಎರಡು ಬಾರಿ ಆತ್ಮಹತ್ಯೆಗೂ ಯತ್ನಿಸಿದ್ದಳು.
ಸುಪ್ರೀಂ ಕೋರ್ಟ್ ಹೇಳಿದ್ದೇನು?
ವಿಚಾರಣೆ ವೇಳೆ ನ್ಯಾಯಪೀಠವು, "ಬಾಲಕಿಗೆ ಮಗುವಿಗೆ ಜನ್ಮ ನೀಡಲು ಇಷ್ಟವಿಲ್ಲ ಮತ್ತು ಈಗಾಗಲೇ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಇಂತಹ ಸೂಕ್ಷ್ಮ ಸನ್ನಿವೇಶದಲ್ಲಿ ನಾವು ಗರ್ಭಿಣಿಯ ಹಿತದೃಷ್ಟಿಯ ಕುರಿತು ಹೆಚ್ಚು ಯೋಚಿಸಬೇಕೇ ವಿನಃ, ಜನಿಸಲಿರುವ ಮಗುವಿನ ಕುರಿತಲ್ಲ" ಎಂದು ಅಭಿಪ್ರಾಯಪಟ್ಟಿತು.
ಒಂದು ವೇಳೆ ಗರ್ಭಪಾತಕ್ಕೆ ಅನುಮತಿ ನಿರಾಕರಿಸಿದರೆ ಆ ಬಾಲಕಿ ತನ್ನ ಮುಂದಿನ ಜೀವನದಲ್ಲಿ ತೀವ್ರವಾದ ಮಾನಸಿಕ, ಭಾವನಾತ್ಮಕ ಮತ್ತು ದೈಹಿಕ ಆಘಾತಗಳನ್ನು ಎದುರಿಸಬೇಕಾಗುತ್ತದೆ. ಮಗುವಿಗೆ ಜನ್ಮ ನೀಡುವಂತೆ ಒತ್ತಾಯಿಸುವುದು ಮಹಿಳೆಯರ ಸಾಂವಿಧಾನಿಕ ಹಕ್ಕು (ಸಂವಿಧಾನದ 21ನೇ ವಿಧಿ ಅಡಿ ಬರುವ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಗೌಪ್ಯತೆ) ಹಾಗೂ ಸಂತಾನೋತ್ಪತ್ತಿ ಆಯ್ಕೆಯ ಉಲ್ಲಂಘನೆಯಾಗುತ್ತದೆ ಎಂದು ನ್ಯಾಯಾಲಯ ಪ್ರತಿಪಾದಿಸಿದೆ.
"ಮಗುವಿಗೆ ಜನ್ಮ ನೀಡಿದ ಬಳಿಕ ಅದನ್ನು ದತ್ತು ನೀಡಬಹುದು" ಎಂಬ ವಾದವನ್ನು ತಿರಸ್ಕರಿಸಿದ ನ್ಯಾಯಪೀಠ, ಜನಿಸಲಿರುವ ಮಗುವಿನ ಭವಿಷ್ಯಕ್ಕಿಂತ ಗರ್ಭಿಣಿಯ ಆಯ್ಕೆ ಮತ್ತು ಒಪ್ಪಿಗೆಗೇ ಹೆಚ್ಚಿನ ಆದ್ಯತೆ ನೀಡಬೇಕು. ಜೊತೆಗೆ ಇಂತಹ ಪ್ರಕರಣಗಳಲ್ಲಿ ಕಾನೂನಾತ್ಮಕ ತೊಡಕುಗಳ ನೆಪದಲ್ಲಿ ಅನುಮತಿ ನಿರಾಕರಿಸಿದರೆ, ಅದು ಅಸುರಕ್ಷಿತ ಅಥವಾ ಅಕ್ರಮ ಗರ್ಭಪಾತದಂತಹ ಅಪಾಯಕಾರಿ ನಿರ್ಧಾರಗಳತ್ತ ತಳ್ಳಿದಂತಾಗುತ್ತದೆ ಎಂದು ಎಚ್ಚರಿಸಿದೆ.

