ಸಕ್ಕರೆ ಬೆಲೆ ಏರಿಕೆಗೆ ಕೇಂದ್ರ ಬ್ರೇಕ್: ಆಮದು ನಿಯಮ ಬಿಗಿ, 2 ತಿಂಗಳಲ್ಲಿ ಮಾರಾಟ ಕಡ್ಡಾಯ
x

ಸಕ್ಕರೆ ಬೆಲೆ ಏರಿಕೆಗೆ ಕೇಂದ್ರ ಬ್ರೇಕ್: ಆಮದು ನಿಯಮ ಬಿಗಿ, 2 ತಿಂಗಳಲ್ಲಿ ಮಾರಾಟ ಕಡ್ಡಾಯ

ಈ ಹಿಂದೆ ಆಮದು ಮಾಡಿಕೊಳ್ಳುವ ಕಚ್ಚಾ ಸಕ್ಕರೆಯನ್ನು ಸಂಸ್ಕರಿಸಿ, ಅಕ್ಟೋಬರ್ 31ರೊಳಗೆ ದೇಶೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಆದರೆ, ಹೊಸ ನಿಯಮದ ಪ್ರಕಾರ ಆಮದು ಮಾಡಿದ ದಿನದಿಂದ ಎರಡು ತಿಂಗಳೊಳಗೆ ಸಕ್ಕರೆಯನ್ನು ಸಂಸ್ಕರಿಸಿ ಮಾರಾಟ ಮಾಡಬೇಕು ಎಂದು ಸ್ಪಷ್ಟಪಡಿಸಲಾಗಿದೆ.


Click the Play button to hear this message in audio format

ದೇಶದಲ್ಲಿ ಸಕ್ಕರೆ ಬೆಲೆ ಏರಿಕೆ ಕಂಡುಬರುತ್ತಿರುವ ಬೆನ್ನಲ್ಲೇ, ಕಚ್ಚಾ ಸಕ್ಕರೆಯ ಆಮದು ನಿಯಮಗಳನ್ನು ಕೇಂದ್ರ ಸರ್ಕಾರ ಮತ್ತಷ್ಟು ಬಿಗಿಗೊಳಿಸಿದೆ. ಸಂಗ್ರಹಣೆ ಮತ್ತು ಕಾಳಸಂತೆ ತಡೆಯುವ ಉದ್ದೇಶದಿಂದ ಆಮದು ಮಾಡಿಕೊಳ್ಳುವ ಕಚ್ಚಾ ಸಕ್ಕರೆಯನ್ನು ಎರಡು ತಿಂಗಳೊಳಗೆ ಸಂಸ್ಕರಿಸಿ ದೇಶೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದು ಕಡ್ಡಾಯ ಎಂದು ಸರ್ಕಾರ ಸೂಚಿಸಿದೆ.

ಈ ಕುರಿತು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಸೋಮವಾರ ಅಧಿಸೂಚನೆ ಹೊರಡಿಸಿದೆ. ಆಮದು ಮಾಡಿಕೊಳ್ಳುವ ಸಕ್ಕರೆಯನ್ನು ಕಚ್ಚಾ ಅಥವಾ ಸಂಸ್ಕರಿತ ರೂಪದಲ್ಲಿ ದಾಸ್ತಾನು ಮಾಡಿ ಬೆಲೆ ಏರಿಕೆಗೆ ಕಾರಣವಾಗುವುದನ್ನು ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಈ ಹಿಂದೆ ಆಮದು ಮಾಡಿಕೊಳ್ಳುವ ಕಚ್ಚಾ ಸಕ್ಕರೆಯನ್ನು ಸೂಕ್ತ ಅವಧಿಯಲ್ಲಿ ಸಂಸ್ಕರಿಸಿ, ಅಕ್ಟೋಬರ್ 31ರೊಳಗೆ ದೇಶೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಆದರೆ, ಹೊಸ ನಿಯಮದ ಪ್ರಕಾರ ಆಮದು ಮಾಡಿದ ದಿನದಿಂದ ಎರಡು ತಿಂಗಳೊಳಗೆ ಸಕ್ಕರೆಯನ್ನು ಸಂಸ್ಕರಿಸಿ ಮಾರಾಟ ಮಾಡಬೇಕು ಎಂದು ಸ್ಪಷ್ಟಪಡಿಸಲಾಗಿದೆ.

ಕಡಿಮೆ ಉತ್ಪಾದನೆ, ಕೀಟಗಳ ದಾಳಿಯಿಂದ ಬೆಳೆ ಹಾನಿ, ಅತಿಯಾದ ಮಳೆಯಿಂದಾದ ನಷ್ಟ, ಹಬ್ಬದ ಅವಧಿಯ ಹೆಚ್ಚಿದ ಬೇಡಿಕೆ ಹಾಗೂ ಊಹಾತ್ಮಕ ಖರೀದಿಯಿಂದಾಗಿ ಸಕ್ಕರೆ ಬೆಲೆ ಏರಿಕೆಯಾಗಿದೆ ಎಂದು ಸರ್ಕಾರ ತಿಳಿಸಿದೆ.

ಇದಕ್ಕೂ ಮುನ್ನ, ಸರ್ಕಾರ ಅಕ್ಟೋಬರ್ 31ರವರೆಗೆ 10 ಲಕ್ಷ ಟನ್ ಸಕ್ಕರೆ ಆಮದುಗೆ ಅನುಮತಿ ನೀಡಿತ್ತು. ಜೊತೆಗೆ ವ್ಯಾಪಾರಿಗಳು ಹಾಗೂ ತಂಪು ಪಾನೀಯ, ಐಸ್‌ಕ್ರೀಂ ತಯಾರಕರಂತಹ ದೊಡ್ಡ ಪ್ರಮಾಣದ ಬಳಕೆದಾರರಿಗೆ ಸಕ್ಕರೆ ದಾಸ್ತಾನು ಮಿತಿಯನ್ನೂ ವಿಧಿಸಿತ್ತು. ಕಾಳಸಂತೆ ಮತ್ತು ಅಕ್ರಮ ದಾಸ್ತಾನು ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯಗಳಿಗೆ ಸೂಚಿಸಲಾಗಿದೆ.

ಸರ್ಕಾರದ ಅಂಕಿಅಂಶಗಳ ಪ್ರಕಾರ, ಸೋಮವಾರ ದೇಶದಲ್ಲಿ ಸಕ್ಕರೆಯ ಸರಾಸರಿ ಚಿಲ್ಲರೆ ಬೆಲೆ ಪ್ರತಿ ಕೆಜಿಗೆ 63.05 ರೂಪಾಯಿ ಆಗಿದ್ದು, ಒಂದು ತಿಂಗಳ ಹಿಂದೆ ಇದ್ದ 48.73 ರೂಪಾಯಿಗೆ ಹೋಲಿಸಿದರೆ ಶೇ.29ರಷ್ಟು ಏರಿಕೆಯಾಗಿದೆ. ಗರಿಷ್ಠ ಚಿಲ್ಲರೆ ಬೆಲೆ ಪ್ರತಿ ಕೆಜಿಗೆ 75 ರೂಪಾಯಿ ತಲುಪಿದ್ದು, ಮಾದರಿ ಬೆಲೆ 65 ರೂಪಾಯಿ ದಾಖಲಾಗಿದೆ.

ಆಹಾರ ಕಾರ್ಯದರ್ಶಿ ಸಂಜೀವ್ ಚೋಪ್ರಾ ಮಾತನಾಡಿ, ಕೇವಲ 7ರಿಂದ 10 ದಿನಗಳಲ್ಲಿ ಸಕ್ಕರೆಯ ಎಕ್ಸ್‌ಮಿಲ್ ಬೆಲೆ ಪ್ರತಿ ಕೆಜಿಗೆ 47-48 ರೂಪಾಯಿಯಿಂದ 62 ರೂಪಾಯಿಗೆ ಏರಿಕೆಯಾಗಿದೆ. ಈ ಪ್ರಮಾಣದ ಬೆಲೆ ಏರಿಕೆ “ಅಸಮರ್ಥನೀಯ” ಎಂದು ಅವರು ಹೇಳಿದ್ದಾರೆ.

ದೇಶದಲ್ಲಿ ಸಕ್ಕರೆ ಕೊರತೆಯಿಲ್ಲ: ಉದ್ಯಮ ವಲಯ ಸ್ಪಷ್ಟನೆ

ಭಾರತೀಯ ಸಕ್ಕರೆ ಮತ್ತು ಜೈವಿಕ ಇಂಧನ ತಯಾರಕರ ಸಂಘ (ISMA) ದೇಶದಲ್ಲಿ ಸಕ್ಕರೆಯ ಕೊರತೆಯಿಲ್ಲ ಎಂದು ಸ್ಪಷ್ಟಪಡಿಸಿದೆ. ಸರ್ಕಾರದ ಇತ್ತೀಚಿನ ಕ್ರಮಗಳಿಂದ ಚಿಲ್ಲರೆ ಸಕ್ಕರೆ ಬೆಲೆ ಮುಂದಿನ ದಿನಗಳಲ್ಲಿ ಇಳಿಕೆಯಾಗುವ ನಿರೀಕ್ಷೆಯಿದೆ ಎಂದು ಸಂಘ ಹೇಳಿದೆ.

2025-26ರ ಸಕ್ಕರೆ ಮಾರಾಟ ವರ್ಷದಲ್ಲಿ ಎಥೆನಾಲ್ ಉತ್ಪಾದನೆಗೆ ಸಕ್ಕರೆ ಬಳಸಿದ ಬಳಿಕವೂ ದೇಶದ ನಿವ್ವಳ ಸಕ್ಕರೆ ಉತ್ಪಾದನೆ ಸುಮಾರು 279 ಲಕ್ಷ ಟನ್ ಎಂದು ಅಂದಾಜಿಸಲಾಗಿದೆ. ಆರಂಭಿಕ ಸಕ್ಕರೆ ದಾಸ್ತಾನು 50 ಲಕ್ಷ ಟನ್ ಇದ್ದರೆ, ದೇಶೀಯ ಬೇಡಿಕೆ 280ರಿಂದ 285 ಲಕ್ಷ ಟನ್ ನಡುವೆ ಇರಲಿದೆ ಎಂದು ತಿಳಿಸಲಾಗಿದೆ.

ಆದರೆ, 2025-26ರ ಒಟ್ಟು ಸಕ್ಕರೆ ಉತ್ಪಾದನೆ ಅಂದಾಜನ್ನು ಸರ್ಕಾರ 343 ಲಕ್ಷ ಟನ್‌ನಿಂದ 306 ಲಕ್ಷ ಟನ್‌ಗೆ ಇಳಿಸಿದೆ. ಕಬ್ಬಿನ ಬೆಳೆಗೆ ಕೀಟಗಳ ದಾಳಿ ಹಾಗೂ ಅತಿಯಾದ ಮಳೆಯಿಂದ ಉಂಟಾದ ಜಲಾವೃತ ಪರಿಸ್ಥಿತಿಯೇ ಉತ್ಪಾದನೆ ಕುಸಿತಕ್ಕೆ ಪ್ರಮುಖ ಕಾರಣ ಎಂದು ಆಹಾರ ಕಾರ್ಯದರ್ಶಿ ತಿಳಿಸಿದ್ದಾರೆ.

ಎಥೆನಾಲ್ ನೀತಿಯಿಂದ ಬೆಲೆ ಏರಿಕೆ? ಕೇಂದ್ರ ಸರ್ಕಾರದ ತಿರುಗೇಟು

ಎಥೆನಾಲ್ ಮಿಶ್ರಣ ನೀತಿಯಿಂದಾಗಿ ಸಕ್ಕರೆ ಪೂರೈಕೆ ಕಡಿಮೆಯಾಗಿದ್ದು, ಇದರಿಂದ ಬೆಲೆ ಏರಿಕೆಯಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಆದರೆ, ಈ ಆರೋಪವನ್ನು ಕೇಂದ್ರ ಸರ್ಕಾರ ತಳ್ಳಿಹಾಕಿದೆ. ಎಥೆನಾಲ್ ಉತ್ಪಾದನೆಗಾಗಿ ಸಕ್ಕರೆಯ ಬಳಕೆಯೊಂದೇ ಇತ್ತೀಚಿನ ಬೆಲೆ ಏರಿಕೆಗೆ ಕಾರಣ ಎಂಬ ವಾದ “ಸಂಪೂರ್ಣವಾಗಿ ಆಧಾರರಹಿತ” ಎಂದು ಆಹಾರ ಕಾರ್ಯದರ್ಶಿ ಸಂಜೀವ್ ಚೋಪ್ರಾ ಹೇಳಿದ್ದಾರೆ. ಎಥೆನಾಲ್ ಕ್ಷೇತ್ರಕ್ಕೆ ವೈವಿಧ್ಯೀಕರಣ ಮಾಡಿರುವುದರಿಂದ ಸಕ್ಕರೆ ಉದ್ಯಮದ ಆರ್ಥಿಕ ಸ್ಥಿತಿ ಸುಧಾರಿಸಿದ್ದು, ರೈತರಿಗೆ ಸಕಾಲದಲ್ಲಿ ಪಾವತಿ ಮಾಡಲು ಸಹಕಾರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

Read More
Next Story