ʻ22 ಸಾವಿರ ಕೋಟಿ ರೂ. ನನ್ನ ವೈಯಕ್ತಿಕ ಸಾಲವಲ್ಲ, ಶ್ಯೂರಿಟಿ ಕೊಟ್ಟಿರೋದಷ್ಟೇʼ- ಸುಭಾಷ್ ಚಂದ್ರ ಸ್ಪಷ್ಟನೆ
x

ʻ22 ಸಾವಿರ ಕೋಟಿ ರೂ. ನನ್ನ ವೈಯಕ್ತಿಕ ಸಾಲವಲ್ಲ, ಶ್ಯೂರಿಟಿ ಕೊಟ್ಟಿರೋದಷ್ಟೇʼ- ಸುಭಾಷ್ ಚಂದ್ರ ಸ್ಪಷ್ಟನೆ

ರಿಲಯನ್ಸ್‌ ಇಂಡಸ್ಟ್ರೀಸ್‌ ಅಧ್ಯಕ್ಷ ಮುಖೇಶ್‌ ಅಂಬಾನಿ ಅವರ ಒಡೆತನದ ಮಾಧ್ಯಮವು ತಮ್ಮ ತಮ್ಮ ವಿರುದ್ಧತಪ್ಪು ಮಾಹಿತಿ ಪ್ರಸಾರ ಮಾಡುತ್ತಿದೆ ಎಂದು ಉದ್ಯಮಿ ಸುಭಾಷ್‌ ಚಂದ್ರ ಆರೋಪಿಸಿದ್ದು, ಇಂತಹ ವರದಿಗಳ ಪ್ರಸಾರ ನಿಲ್ಲಿಸುವಂತೆ ಮನವಿ ಮಾಡಿದ್ದಾರೆ.


ಝೀ ಗ್ರೂಪ್‌ ಸಂಸ್ಥಾಪಕ ಹಾಗೂ ಉದ್ಯಮಿ ಸುಭಾಷ್‌ ಚಂದ್ರ ಅವರ ವೈಯಕ್ತಿಕ ದಿವಾಳಿತನ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (NCLT) ಅನುಮೋದಿಸಿರುವ ಮರುಪಾವತಿ ಯೋಜನೆ ವಿವಾದಕ್ಕೆ ಕಾರಣವಾಗಿದೆ. 22 ಸಾವಿರ ಕೋಟಿ ರೂ.ಗೂ ಅಧಿಕ ಮೊತ್ತದ ಕ್ಲೇಮ್‌ಗಳಿಗೆ ಪ್ರತಿಯಾಗಿ ಸುಮಾರು 6.5 ಕೋಟಿ ರೂ. ಪಾವತಿಸುವ ಪ್ರಸ್ತಾಪಕ್ಕೆ NCLT ಅನುಮೋದನೆ ನೀಡಿರುವ ಹಿನ್ನೆಲೆಯಲ್ಲಿ ಈ ವಿಚಾರ ಚರ್ಚೆಯಲ್ಲಿದೆ.

ಈ ಬೆಳವಣಿಗೆಯ ಬೆನ್ನಲ್ಲೇ, ತಮ್ಮ ಹಾಗೂ ಎಸ್ಸೆಲ್‌ ಗ್ರೂಪ್‌ ವಿರುದ್ಧ NCLT ಪ್ರಕ್ರಿಯೆಗೆ ಸಂಬಂಧಿಸಿದಂತೆ ತಪ್ಪು ಮತ್ತು ದಾರಿತಪ್ಪಿಸುವ ವರದಿಗಳನ್ನು ಪ್ರಸಾರ ಮಾಡಲಾಗುತ್ತಿದೆ ಎಂದು ಸುಭಾಷ್‌ ಚಂದ್ರ ಆರೋಪಿಸಿದ್ದಾರೆ. ರಿಲಯನ್ಸ್‌ ಇಂಡಸ್ಟ್ರೀಸ್‌ ಅಧ್ಯಕ್ಷ ಮುಖೇಶ್‌ ಅಂಬಾನಿ ಅವರ ಒಡೆತನದ ‘ನೆಟ್‌ವರ್ಕ್‌18’ ಸಮೂಹವು ತಮ್ಮ ವೈಯಕ್ತಿಕ ಗ್ಯಾರಂಟಿ ಪ್ರಕರಣದ ಕುರಿತು ತಪ್ಪು ಮಾಹಿತಿ ಪ್ರಸಾರ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದು, ಇಂತಹ ವರದಿಗಳನ್ನು ನಿಲ್ಲಿಸುವಂತೆ ಮನವಿ ಮಾಡಿದ್ದಾರೆ.

45 ಸಾವಿರ ಕೋಟಿ ರೂ. ಸಾಲದಲ್ಲಿ 43 ಸಾವಿರ ಕೋಟಿ ರೂ. ಮರುಪಾವತಿ

‘ಜೀ ನ್ಯೂಸ್‌’ನಲ್ಲಿ ಪ್ರಸಾರವಾದ ವಿಡಿಯೊ ಸಂದೇಶದಲ್ಲಿ ಮಾತನಾಡಿದ ಸುಭಾಷ್‌ ಚಂದ್ರ, ಎಸ್ಸೆಲ್‌ ಗ್ರೂಪ್‌ ಹೊಂದಿದ್ದ ಸಾಲದ ಕುರಿತು ತಮ್ಮ ನಿಲುವನ್ನು ವಿವರಿಸಿದ್ದಾರೆ. 2019ರಲ್ಲಿ ತಮ್ಮ ಗ್ರೂಪ್‌ ಸುಮಾರು 45 ಸಾವಿರ ಕೋಟಿ ರೂ. ಸಾಲ ಹೊಂದಿತ್ತು. ಈ ಪೈಕಿ 43 ಸಾವಿರ ಕೋಟಿ ರೂ. ಈಗಾಗಲೇ ಮರುಪಾವತಿ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಸಾಲ ತೀರಿಸುವ ಉದ್ದೇಶದಿಂದ ಜೀ ಎಂಟರ್‌ಟೈನ್‌ಮೆಂಟ್‌ ಎಂಟರ್‌ಪ್ರೈಸಸ್‌ ಲಿಮಿಟೆಡ್‌ (ZEEL) ಸೇರಿದಂತೆ ಪ್ರಮುಖ ಕಂಪನಿಗಳ ಷೇರುಗಳು ಹಾಗೂ ಕುಟುಂಬಕ್ಕೆ ಸೇರಿದ ವೈಯಕ್ತಿಕ ಆಸ್ತಿಗಳನ್ನು ಮಾರಾಟ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. “ದೊಡ್ಡ ಕಾರ್ಪೊರೇಟ್‌ ಸಂಸ್ಥೆಗಳಂತೆ ಕಳೆದುಕೊಳ್ಳಲು ನನ್ನ ಬಳಿ ಈಗ ಯಾವುದೇ ಆಸ್ತಿ ಅಥವಾ ಖ್ಯಾತಿ ಉಳಿದಿಲ್ಲ. ಹೀಗಾಗಿ ನನ್ನ ವಿರುದ್ಧ ದುರುದ್ದೇಶಪೂರಿತ ವರದಿಗಳನ್ನು ಪ್ರಸಾರ ಮಾಡುವುದು ಸರಿಯಲ್ಲ,” ಎಂದು ಅವರು ಹೇಳಿದ್ದಾರೆ.

‘22 ಸಾವಿರ ಕೋಟಿ ರೂ. ನನ್ನ ವೈಯಕ್ತಿಕ ಸಾಲವಲ್ಲ’

ಮಾಧ್ಯಮಗಳಲ್ಲಿ ವರದಿಯಾಗುತ್ತಿರುವ 22 ಸಾವಿರ ಕೋಟಿ ರೂ. ಮೊತ್ತದ ಸಾಲದ ಕುರಿತು ಸ್ಪಷ್ಟನೆ ನೀಡಿದ ಸುಭಾಷ್‌ ಚಂದ್ರ, ಇದು ತಮ್ಮ ವೈಯಕ್ತಿಕವಾಗಿ ಪಡೆದ ಸಾಲವಲ್ಲ ಎಂದು ಹೇಳಿದ್ದಾರೆ. ಎಸ್ಸೆಲ್‌ ಗ್ರೂಪ್‌ಗೆ ಸೇರಿದ ಕಂಪನಿಗಳು ಪಡೆದ ಸಾಲಗಳಿಗೆ ತಾವು ನೀಡಿದ್ದ ವೈಯಕ್ತಿಕ ಗ್ಯಾರಂಟಿಗಳಿಗೆ ಸಂಬಂಧಿಸಿದಂತೆ NCLTನಲ್ಲಿ ಪ್ರಕ್ರಿಯೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.

‘ಮುಖೇಶ್‌ ಅಂಬಾನಿಗೆ ಕರೆ ಮಾಡಿದ್ದೇನೆ, ಪತ್ರ ಬರೆದಿದ್ದೇನೆ’

ತಮ್ಮ ಪ್ರಕರಣದ ಕುರಿತು ಪ್ರಕಟವಾದ ವರದಿಗಳ ಬಗ್ಗೆ ಚರ್ಚಿಸಲು ಮುಖೇಶ್‌ ಅಂಬಾನಿ ಅವರನ್ನು ನೇರವಾಗಿ ಸಂಪರ್ಕಿಸಲು ಪ್ರಯತ್ನಿಸಿದ್ದಾಗಿ ಸುಭಾಷ್‌ ಚಂದ್ರ ಹೇಳಿದ್ದಾರೆ. ತಮ್ಮ ಪ್ರತಿನಿಧಿಗಳು ಸಂಬಂಧಪಟ್ಟ ಮಾಧ್ಯಮ ಸಂಸ್ಥೆಯ ಸಂಪಾದಕರನ್ನು ಸಂಪರ್ಕಿಸಿದಾಗ, “ಮೇಲಿನಿಂದ ಬಂದ ಸೂಚನೆಗಳ ಮೇರೆಗೆ ವರದಿ ಪ್ರಸಾರವಾಗುತ್ತಿದೆ” ಎಂದು ತಿಳಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಮುಖೇಶ್‌ ಅಂಬಾನಿ ಅವರಿಗೆ ಕರೆ ಮಾಡಲು ಪ್ರಯತ್ನಿಸಿದೆ. ಆದರೆ ಸಂಪರ್ಕ ಸಾಧ್ಯವಾಗಲಿಲ್ಲ. ಬಳಿಕ ಅವರಿಗೆ ಪತ್ರವನ್ನೂ ಬರೆದಿದ್ದೇನೆ ಎಂದು ಅವರು ಹೇಳಿದ್ದಾರೆ. “ಈ ವಿಚಾರದಲ್ಲಿ ಸಾರ್ವಜನಿಕರ ಮುಂದೆ ಸತ್ಯವನ್ನು ಇಡಲು ನಿರ್ಧರಿಸಿದ್ದೇನೆ,” ಎಂದು ಸುಭಾಷ್‌ ಚಂದ್ರ ತಿಳಿಸಿದ್ದಾರೆ.

‘ಸರ್ಕಾರದಿಂದ ಯಾವುದೇ ವಿಶೇಷ ನೆರವು ಪಡೆದಿಲ್ಲ’

2013-14ರ ಅವಧಿಯಲ್ಲಿ ‘ಜೀ ನ್ಯೂಸ್‌’ ಮೂಲಕ ನರೇಂದ್ರ ಮೋದಿ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದರೂ, ಎಸ್ಸೆಲ್‌ ಗ್ರೂಪ್‌ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿ ಸರ್ಕಾರದಿಂದ ಯಾವುದೇ ವಿಶೇಷ ನೆರವು ಅಥವಾ ಹಸ್ತಕ್ಷೇಪವನ್ನು ತಾವು ಕೋರಿರಲಿಲ್ಲ ಎಂದು ಅವರು ಹೇಳಿದ್ದಾರೆ. ನಿಯಮಾನುಸಾರವೇ ಎಲ್ಲಾ ಸಾಲಗಳನ್ನು ಮರುಪಾವತಿ ಮಾಡಲಾಗಿದೆ ಎಂದು ಸುಭಾಷ್‌ ಚಂದ್ರ ತಿಳಿಸಿದ್ದಾರೆ.

ಧೀರೂಭಾಯಿ ಅಂಬಾನಿ ಸ್ಮರಣೆ

ತಮ್ಮ ಹೇಳಿಕೆಯ ಕೊನೆಯಲ್ಲಿ ಉದ್ಯಮಿ ಧೀರೂಭಾಯಿ ಅಂಬಾನಿ ಅವರ ಬಗ್ಗೆ ಗೌರವ ವ್ಯಕ್ತಪಡಿಸಿದ ಸುಭಾಷ್‌ ಚಂದ್ರ, ಅವರಿಂದ ತಾವು ಸಾಕಷ್ಟು ಕಲಿತಿದ್ದಾಗಿ ಹೇಳಿದ್ದಾರೆ. “ನನಗೆ ಧೀರೂಭಾಯಿ ಅಂಬಾನಿ ಅವರ ಬಗ್ಗೆ ಅಪಾರ ಗೌರವವಿದೆ. ಉದ್ಯಮಿಯಾಗಿ ಅವರಿಂದ ಸಾಕಷ್ಟು ಕಲಿತಿದ್ದೇನೆ. ಮುಖೇಶ್‌ ಜಿ, ದೇವರು ನಿಮಗೂ ನಿಮ್ಮ ಕುಟುಂಬಕ್ಕೂ ಒಳ್ಳೆಯದನ್ನು ಮಾಡಲಿ. ನೀವು ವಿಶ್ವದ ನಂಬರ್‌ ಒನ್‌ ಉದ್ಯಮಿಯಾಗಲಿ ಎಂಬುದು ಒಬ್ಬ ಭಾರತೀಯನಾಗಿ ನನ್ನ ಹಾರೈಕೆ,” ಎಂದು ಅವರು ಹೇಳಿದ್ದಾರೆ.

ಅದೇ ವೇಳೆ, ತಮ್ಮ ವಿರುದ್ಧ ನಡೆಯುತ್ತಿದೆ ಎಂದು ಆರೋಪಿಸಿರುವ ದುರುದ್ದೇಶಪೂರಿತ ಪ್ರಚಾರವನ್ನು ನಿಲ್ಲಿಸುವಂತೆ ಮುಖೇಶ್‌ ಅಂಬಾನಿ ಅವರಿಗೆ ಮನವಿ ಮಾಡಿದ್ದಾರೆ.

ಆರೋಪಗಳನ್ನು ನಿರಾಕರಿಸಿದ ರಿಲಯನ್ಸ್ ಇಂಡಸ್ಟ್ರೀಸ್

ಸುಭಾಷ್‌ ಚಂದ್ರ ಅವರು ರಿಲಯನ್ಸ್ ಗ್ರೂಪ್ ನ ಭಾಗವಾಗಿರುವ ಮಾಧ್ಯಮ ಸಂಸ್ಥೆಗಳ ವಿರುದ್ಧ ಮಾಡಿರುವ ಆರೋಪಗಳು ಆಧಾರರಹಿತ ಎಂದು ರಿಲಯನ್ಸ್ ಗ್ರೂಪ್ ವಕ್ತಾರರು ಹೇಳಿದ್ದಾರೆ. ರಿಲಯನ್ಸ್ ಗ್ರೂಪ್‌ನ ಭಾಗವಾಗಿರುವ ಮಾಧ್ಯಮ ಸಂಸ್ಥೆಗಳ ವಿರುದ್ಧದ ಆರೋಪಗಳು ಮತ್ತು ದುರುದ್ದೇಶಪೂರಿತ. ನಮ್ಮ ಮಾಧ್ಯಮ ಬ್ರ್ಯಾಂಡ್‌ಗಳನ್ನು ಯಾರ ವಿರುದ್ಧವೂ ವಾಗ್ದಾಳಿ ನಡೆಸಲು ಎಂದಿಗೂ ಬಳಸಲಾಗಿಲ್ಲ ಮತ್ತು ಮುಂದೆಯೂ ಬಳಸುವುದಿಲ್ಲ. ವ್ಯಾಪಾರಸ್ಥ ಮತ್ತು ಉದ್ಯಮಿಯಾಗಿ ಸುಭಾಷ್ ಚಂದ್ರ ಅವರ ಮೇಲೆ ನಮಗೆ ಅಪಾರ ಗೌರವವಿದೆ. ಅವರಿಗೆ ಶುಭವಾಗಲಿ ಎಂದು ಹಾರೈಸುತ್ತೇವೆ ಎಂದು ರಿಲಯನ್ಸ್ ವಕ್ತಾರರು ಹೇಳಿದ್ದಾರೆ.

Read More
Next Story