
ಪರೀಕ್ಷಾವಂಚಿತ ವಿದ್ಯಾರ್ಥಿಗಳು ಕೇಂದ್ರದ ಬಳಿ ಆಕ್ರೋಶ ಹೊರಹಾಕಿದರು.
SSC GD | ಸರ್ವರ್ ದೋಷದಿಂದ ಪರೀಕ್ಷೆ ದಿಢೀರ್ ರದ್ದು; ಅಭ್ಯರ್ಥಿಗಳಿಂದ ರಸ್ತೆ ತಡೆ!
ಕಾನ್ಪುರದ 'ಶ್ರೀಮತಿ ರಾಮಕಲಿ ಇಕ್ಬಾಲ್ ಬಹದ್ದೂರ್ ಆನ್‌ಲೈನ್ ಸೆಂಟರ್'ನಲ್ಲಿ ಕೇವಲ 399 ಸೀಟುಗಳ ಸಾಮರ್ಥ್ಯ ಇತ್ತು. ಆದರೆ, ಸರ್ವರ್, ತಾಂತ್ರಿಕ ದೋಷದಿಂದಾಗಿ ಅದೇ ಶಿಫ್ಟ್‌ಗೆ 819ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಪ್ರವೇಶ ಪತ್ರ ನೀಡಲಾಗಿತ್ತು.
ಉತ್ತರ ಪ್ರದೇಶದ ಕಾನ್ಪುರ, ಪ್ರಯಾಗ್‌ರಾಜ್ ಮತ್ತು ಲಕ್ನೋದ ಹಲವು ಕೇಂದ್ರಗಳಲ್ಲಿ ಜರುಗಬೇಕಿದ್ದ ಸಿಬ್ಬಂದಿ ನೇಮಕಾತಿ ಆಯೋಗದ (ಎಸ್‌ಎಸ್‌ಸಿ) ಜಿಡಿ ಕಾನ್‌ಸ್ಟೆಬಲ್ ಪರೀಕ್ಷೆಯನ್ನು ದಿಢೀರ್ ರದ್ದುಗೊಳಿಸಲಾಗಿದೆ. ಸರ್ವರ್ ಸಮಸ್ಯೆ ಹಾಗೂ ಆಡಳಿತಾತ್ಮಕ ಎಡವಟ್ಟುಗಳಿಂದಾಗಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿದ್ದು, ನೂರಾರು ಕಿಲೋಮೀಟರ್ ದೂರದಿಂದ ಬಂದಿದ್ದ ಅಭ್ಯರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾನ್ಪುರದ 'ಶ್ರೀಮತಿ ರಾಮಕಲಿ ಇಕ್ಬಾಲ್ ಬಹದ್ದೂರ್ ಆನ್‌ಲೈನ್ ಸೆಂಟರ್'ನಲ್ಲಿ ಕೇವಲ 399 ಸೀಟುಗಳ ಸಾಮರ್ಥ್ಯ ಇತ್ತು. ಆದರೆ, ಸರ್ವರ್ ಹಾಗೂ ತಾಂತ್ರಿಕ ದೋಷದಿಂದಾಗಿ ಅದೇ ಶಿಫ್ಟ್‌ಗೆ ಸುಮಾರು 819ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಪ್ರವೇಶ ಪತ್ರ ನೀಡಲಾಗಿತ್ತು. ತಾಂತ್ರಿಕ ಗೊಂದಲ ಮತ್ತು ಸರ್ವರ್ ಕೈಕೊಟ್ಟಿರುವುದು, ಸಾಮರ್ಥ್ಯಕ್ಕಿಂತ ದುಪ್ಪಟ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆಗಮಿಸಿದ್ದರಿಂದ ಆನ್‌ಲೈನ್ ವ್ಯವಸ್ಥೆಯ ಸರ್ವರ್ ಸಂಪೂರ್ಣವಾಗಿ ಸ್ಥಗಿತಗೊಂಡಿತು.
ಪರೀಕ್ಷಾ ಕೇಂದ್ರದ ಬಳಿ ದಾಂಧಲೆ ನಡೆಸಿದ ವಿದ್ಯಾರ್ಥಿಗಳು
ಅನಿಯಂತ್ರಿತ ಜನದಟ್ಟಣೆ
ಪರೀಕ್ಷಾ ಕೇಂದ್ರದ ಒಳಗೆ ಮತ್ತು ಹೊರಗೆ ನೂರಾರು ಅಭ್ಯರ್ಥಿಗಳು ಏಕಕಾಲದಲ್ಲಿ ಜಮಾಯಿಸಿದ್ದರಿಂದ ಪರಿಸ್ಥಿತಿ ಕೈಮೀರಿತು. ಮುನ್ನೆಚ್ಚರಿಕಾ ಕ್ರಮವಾಗಿ ಅಧಿಕಾರಿಗಳು ಪರೀಕ್ಷೆಯನ್ನು ರದ್ದುಗೊಳಿಸಲು ತೀರ್ಮಾನಿಸಿದ್ದು, ಬಾಧಿತವಾದ ಪ್ರಮುಖ ಪರೀಕ್ಷಾ ಕೇಂದ್ರಗಳ ಪಟ್ಟಿಯನ್ನು ಸಿಬ್ಬಂದಿ ನೇಮಕಾತಿ ಆಯೋಗಕ್ಕೆ (ಸೆಂಟ್ರಲ್ ರೀಜನ್) ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಆಕ್ರೋಶ, ರಸ್ತೆ ತಡೆ
ಪ್ರಸ್ತುತ ಉತ್ತರ ಪ್ರದೇಶದಲ್ಲಿ 45 ಡಿಗ್ರಿ ಸೆಲ್ಸಿಯಸ್‌ನಷ್ಟು ತೀವ್ರತರವಾದ ಬಿಸಿಲಿದ್ದು, ಇಂತಹ ಕಠಿಣ ಪರಿಸ್ಥಿತಿಯಲ್ಲೂ ನೂರಾರು ಕಿಲೋಮೀಟರ್ ದೂರದಿಂದ ಪರೀಕ್ಷೆ ಬರೆಯಲು ಅಭ್ಯರ್ಥಿಗಳು ಆಗಮಿಸಿದ್ದರು. ಆದರೆ ಪರೀಕ್ಷಾ ಕೇಂದ್ರಕ್ಕೆ ಬಂದಾಗ ಸೂಕ್ತ ಆಸನ ವ್ಯವಸ್ಥೆಯೂ ಇಲ್ಲದೆ, ಪರೀಕ್ಷೆಯೂ ರದ್ದಾದ ವಿಷಯ ತಿಳಿದು ಅಭ್ಯರ್ಥಿಗಳು ಕಂಗಾಲಾದರು. ಆಡಳಿತ ಮಂಡಳಿಯ ಬೇಜವಾಬ್ದಾರಿತನವನ್ನು ಖಂಡಿಸಿ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಗಳ ಹೊರಗೆ ತೀವ್ರ ಪ್ರತಿಭಟನೆ ನಡೆಸಿದರು. ಕಾನ್ಪುರದಲ್ಲಿ ಆಕ್ರೋಶಗೊಂಡ ಕೆಲವು ಅಭ್ಯರ್ಥಿಗಳು ಕಾನ್ಪುರ-ಪ್ರಯಾಗ್‌ರಾಜ್ ರಾಷ್ಟ್ರೀಯ ಹೆದ್ದಾರಿಯನ್ನು ತಡೆಯಲು ಯತ್ನಿಸಿದರು. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಈಸ್ಟ್ ಡಿಸಿಪಿ ಸತ್ಯಜೀತ್ ಗುಪ್ತಾ ಹಾಗೂ ಪೊಲೀಸ್ ಸಿಬ್ಬಂದಿ ಅಭ್ಯರ್ಥಿಗಳನ್ನು ಸಮಾಧಾನಪಡಿಸಿ, ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಎಸ್‌ಎಸ್‌ಸಿ ಅಧಿಕೃತ ಸ್ಪಷ್ಟನೆ
ಪರೀಕ್ಷೆ ರದ್ದತಿಯಿಂದ ಬಾಧಿತರಾದ ಎಲ್ಲಾ ಅಭ್ಯರ್ಥಿಗಳಿಗೆ ಮರು ಪರೀಕ್ಷೆ ನಡೆಸಲಾಗುವುದು ಎಂದು ಸಿಬ್ಬಂದಿ ನೇಮಕಾತಿ ಆಯೋಗ ಸ್ಪಷ್ಟಪಡಿಸಿದೆ. ಮರು ಪರೀಕ್ಷೆಯ ದಿನಾಂಕ ಹಾಗೂ ಹೊಸ ಪ್ರವೇಶ ಪತ್ರಗಳ ಮಾಹಿತಿಯನ್ನು ಶೀಘ್ರದಲ್ಲೇ ಎಸ್‌ಎಸ್‌ಸಿಯ ಅಧಿಕೃತ ವೆಬ್‌ಸೈಟ್‌ನಲ್ಲಿ (ssc.gov.in) ಪ್ರಕಟಿಸಲಾಗುವುದು. ಅಭ್ಯರ್ಥಿಗಳ ಇಮೇಲ್ ಹಾಗೂ ಮೊಬೈಲ್ ಸಂಖ್ಯೆಗೂ ಸಂದೇಶ ಕಳುಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

