
ಕೇಂದ್ರ ಕಾರಾಗೃಹದಿಂದ ಇಬ್ಬರು POCSO ಆರೋಪಿಗಳು ಪರಾರಿ; ಭದ್ರತಾ ಲೋಪದ ಬಗ್ಗೆ ತನಿಖೆ
ಕಾಶ್ಮೀರ ವಲಯ ಪೊಲೀಸರು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಬಿಡುಗಡೆ ಮಾಡಿರುವ ಲುಕ್‌ಔಟ್ ನೋಟಿಸ್ ಪ್ರಕಾರ, ಪರಾರಿಯಾಗಿರುವ ಆರೋಪಿಗಳನ್ನು ಮುಕ್ತಾರ್ ಅಹ್ಮದ್ ಗುಜ್ಜರ್ ಹಾಗೂ ಫರ್ಮಾನ್ ಖಾನ್ ಎಂದು ಗುರುತಿಸಲಾಗಿದೆ.
ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿರುವ ಹೈ-ಸೆಕ್ಯೂರಿಟಿ ಕೇಂದ್ರ ಕಾರಾಗೃಹದಿಂದ POCSO ಕಾಯ್ದೆಯಡಿ ಆರೋಪ ಎದುರಿಸುತ್ತಿದ್ದ ಇಬ್ಬರು ವಿಚಾರಣಾಧೀನ ಕೈದಿಗಳು ಪರಾರಿಯಾಗಿದ್ದಾರೆ. ಘಟನೆಯಿಂದ ಜೈಲು ಭದ್ರತೆ ಕುರಿತು ಹಲವು ಗಂಭೀರ ಪ್ರಶ್ನೆಗಳು ಎದ್ದಿವೆ. ಇಬ್ಬರೂ ಆರೋಪಿಗಳು ಪ್ರತ್ಯೇಕ POCSO ಪ್ರಕರಣಗಳಲ್ಲಿ ಶ್ರೀನಗರ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿದ್ದರು. ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ ಜೈಲು ಆವರಣದಿಂದ ಪರಾರಿಯಾಗಿರುವುದನ್ನು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ.
ಕೈದಿಗಳು ಪರಾರಿಯಾಗಿರುವುದು ಬೆಳಕಿಗೆ ಬರುತ್ತಿದ್ದಂತೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಲುಕ್‌ಔಟ್ ನೋಟಿಸ್‌ಗಳನ್ನು ಹೊರಡಿಸಿದ್ದು, ಆರೋಪಿಗಳ ಪತ್ತೆಗೆ ವ್ಯಾಪಕ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಕಾಶ್ಮೀರ ವಲಯ ಪೊಲೀಸರು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಬಿಡುಗಡೆ ಮಾಡಿರುವ ಲುಕ್‌ಔಟ್ ನೋಟಿಸ್ ಪ್ರಕಾರ, ಪರಾರಿಯಾಗಿರುವ ಆರೋಪಿಗಳನ್ನು ಮುಕ್ತಾರ್ ಅಹ್ಮದ್ ಗುಜ್ಜರ್ ಹಾಗೂ ಫರ್ಮಾನ್ ಖಾನ್ ಎಂದು ಗುರುತಿಸಲಾಗಿದೆ.
ಮುಕ್ತಾರ್ ಅಹ್ಮದ್ ಗುಜ್ಜರ್, ಮೊಹಮ್ಮದ್ ರಫೀಕ್ ಗುಜ್ಜರ್ ಅವರ ಪುತ್ರನಾಗಿದ್ದು, ಅನಂತ್‌ನಾಗ್ ಜಿಲ್ಲೆಯ ಚಿಟ್ಟರ್‌ಗುಲ್‌ನ ಸಂಗ್ಲಾನ್ ನಿವಾಸಿಯಾಗಿದ್ದಾನೆ. ಈತನ ವಿರುದ್ಧ ಸೌರಾ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS)ಯ ವಿವಿಧ ಸೆಕ್ಷನ್‌ಗಳ ಜೊತೆಗೆ POCSO ಕಾಯ್ದೆಯ ಸೆಕ್ಷನ್ 3 ಮತ್ತು 4ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊಬ್ಬ ಆರೋಪಿ ಫರ್ಮಾನ್ ಖಾನ್, ಅಬ್ದುಲ್ ಗನಿ ಖಾನ್ ಅವರ ಪುತ್ರನಾಗಿದ್ದು, ಈತನ ರಫಿಯಾಬಾದ್‌ನ ಸದನಪೋರಾ ನಿವಾಸಿ. ಲಾರ್ ಪೊಲೀಸ್ ಠಾಣೆಯಲ್ಲಿ BNSನ ವಿವಿಧ ಸೆಕ್ಷನ್‌ಗಳ ಜೊತೆಗೆ POCSO ಕಾಯ್ದೆಯ ಸೆಕ್ಷನ್ 3 ಮತ್ತು 4ರ ಅಡಿಯಲ್ಲಿ, ಅಂದರೆ ನುಗ್ಗುವ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಆರೋಪಗಳು ದಾಖಲಾಗಿವೆ.
ಪರಾರಿಯಾಗಿರುವ ಆರೋಪಿಗಳ ಬಗ್ಗೆ ಯಾವುದೇ ಮಾಹಿತಿ ಲಭ್ಯವಿದ್ದರೆ ಪೊಲೀಸರಿಗೆ ತಿಳಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ. ಆರೋಪಿಗಳ ಬಂಧನಕ್ಕೆ ಕಾರಣವಾಗುವ ಮಾಹಿತಿಯನ್ನು ನೀಡುವವರಿಗೆ ಸೂಕ್ತ ಬಹುಮಾನ ನೀಡುವುದಾಗಿಯೂ ಪೊಲೀಸರು ತಿಳಿಸಿದ್ದಾರೆ.
ಮಾಹಿತಿ ಇರುವವರು ಸಮೀಪದ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಅಥವಾ ತುರ್ತು ಸಹಾಯವಾಣಿ 112ಕ್ಕೆ ಕರೆ ಮಾಡುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಇದೇ ವೇಳೆ, ಆರೋಪಿಗಳ ಪತ್ತೆಗೆ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಕಣಿವೆಯ ಅತ್ಯಂತ ಬಿಗಿ ಭದ್ರತೆಯ ಜೈಲುಗಳಲ್ಲಿ ಒಂದಾಗಿರುವ ಶ್ರೀನಗರ ಕೇಂದ್ರ ಕಾರಾಗೃಹದಿಂದ ಇಬ್ಬರು ಕೈದಿಗಳು ಹೇಗೆ ಪರಾರಿಯಾಗಲು ಸಾಧ್ಯವಾಯಿತು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಆಂತರಿಕ ತನಿಖೆಯನ್ನೂ ಆರಂಭಿಸಿದ್ದಾರೆ.

