
ಭೂಕುಸಿತ ಸಂಭವಿಸಿದ ಸ್ಥಳದಲ್ಲಿ ರಕ್ಷಣಾ ಸಿಬ್ಬಂದಿ ತೆರವು ಕಾರ್ಯಾಚರಣೆ ನಡೆಸಿದರು.
ವಯನಾಡ್ ಭೂಕುಸಿತದಲ್ಲಿ ಬಲಿಯಾದ ಮೂವರು ವಲಸೆ ಕಾರ್ಮಿಕರು- ಇಂದು ಘಟನಾ ಸ್ಥಳಕ್ಕೆ ಸಿಎಂ ವಿ.ಡಿ. ಸತೀಶನ್ ಭೇಟಿ
ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ದಿಢೀರನೆ ಭಾರಿ ಪ್ರಮಾಣದಲ್ಲಿ ಭೂಕುಸಿತ ಸಂಭವಿಸಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ರಕ್ಷಣಾ ಸಿಬ್ಬಂದಿ, ಮಣ್ಣಿನ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಮೂವರ ಶವಗಳನ್ನು ಹೊರತೆಗೆದಿದ್ದಾರೆ.
ಕೇರಳದ ಪ್ರವಾಸಿ ತಾಣ ವಯನಾಡ್‌ನ ಸುರಂಗ ರಸ್ತೆ ನಿರ್ಮಾಣ ಪ್ರದೇಶದಲ್ಲಿ ಮಂಗಳವಾರ(ಜು.7) ಸಂಭವಿಸಿದ ಭೀಕರ ಭೂಕುಸಿತದಲ್ಲಿ ಮೃತಪಟ್ಟ ಮೂವರು ಕಾರ್ಮಿಕರು ವಲಸೆ ಬಂದವರು ಎನ್ನಲಾಗಿದೆ. ಮೃತರನ್ನು ಮಧ್ಯಪ್ರದೇಶದ ಆಪರೇಟರ್ ಚಂದ್ರಬನ್, ಬಿಹಾರದ ಸಿವಿಲ್ ಫೋರ್‌ಮ್ಯಾನ್ ಬಿಕಾಶ್ ಕುಮಾರ್ ಮತ್ತು ಜಾರ್ಖಂಡ್‌ನ ಕಾರ್ಮಿಕ ಅನ್ಮೋಲ್ ಎಂದು ಗುರುತಿಸಲಾಗಿದೆ.
ಅವಶೇಷಗಳಡಿ ಸಿಲುಕಿದ್ದ ಶವಗಳ ಪತ್ತೆ
ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ದಿಢೀರನೆ ಭಾರಿ ಪ್ರಮಾಣದಲ್ಲಿ ಭೂಕುಸಿತ ಸಂಭವಿಸಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ರಕ್ಷಣಾ ಸಿಬ್ಬಂದಿ, ಮಣ್ಣಿನ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಮೂವರ ಶವಗಳನ್ನು ಹೊರತೆಗೆದಿದ್ದಾರೆ. ವೈತಿರಿ ತಾಲೂಕು ಆಸ್ಪತ್ರೆಯಲ್ಲಿ ಮೃತದೇಹಗಳ ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದೆ. ಈ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಬಥೇರಿ ತಾಲೂಕು ಆಸ್ಪತ್ರೆಯಿಂದ ವಿಶೇಷ ಸರ್ಜನ್ ಅವರನ್ನು ನಿಯೋಜಿಸಲಾಗಿತ್ತು ಎಂದು ರಾಜ್ಯ ಆರೋಗ್ಯ ಸಚಿವ ಕೆ. ಮುರಳೀಧರನ್ ಮಾಹಿತಿ ನೀಡಿದ್ದಾರೆ.
9 ಜನರಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ
ದುರಂತದಲ್ಲಿ ಒಂಬತ್ತು ಕಾರ್ಮಿಕರು ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಮೆಪ್ಪಾಡಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಇಬ್ಬರು ಚಿಕಿತ್ಸೆ ಪಡೆದ ಬಿಡುಗಡೆಯಾಗಿದ್ದು, ಉಳಿದ ಏಳು ಜನರಿಗೆ ಚಿಕಿತ್ಸೆ ಮುಂದುವರಿದಿದೆ. ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ (ಐಸಿಯು) ಇರಿಸಲಾಗಿದೆ. ಒಬ್ಬರ ತಲೆ ಹಾಗೂ ಎರಡೂ ಕಾಲುಗಳು ಮುರಿದಿದ್ದು, ಮತ್ತೊಬ್ಬರ ಎರಡೂ ಕಾಲುಗಳು ಮುರಿತಕ್ಕೊಳಗಾಗಿವೆ. ಗಾಯಾಳುಗಳ ಪೈಕಿ ಎರ್ನಾಕುಲಂ ಮೂಲದ ಸೈಟ್ ಎಂಜಿನಿಯರ್ ಒಬ್ಬರ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ನಿಯಂತ್ರಣ ಕೊಠಡಿ ಸ್ಥಾಪನೆ
ಘಟನಾ ಸ್ಥಳದಲ್ಲಿ ಆರೋಗ್ಯ ಇಲಾಖೆ ಹಾಗೂ 108 ಆಂಬ್ಯುಲೆನ್ಸ್ ಸೇವೆಗಳನ್ನು ವ್ಯಾಪಕವಾಗಿ ನಿಯೋಜಿಸಲಾಗಿದೆ. ವೈದ್ಯಕೀಯ ಸೇವೆಗಳನ್ನು ಸಮರ್ಪಕವಾಗಿ ಸಂಘಟಿಸಲು ಮೆಪ್ಪಾಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿಶೇಷ ನಿಯಂತ್ರಣ ಕೊಠಡಿಯನ್ನು ತೆರೆಯಲಾಗಿದೆ. ಭೂಕುಸಿತದ ಸ್ಥಳದ ಸುತ್ತಮುತ್ತ ವಾಸಿಸುತ್ತಿದ್ದ 42 ಕುಟುಂಬಗಳ ಒಟ್ಟು 142 ಜನರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಮೆಪ್ಪಾಡಿ ಪಾಲಿಟೆಕ್ನಿಕ್‌ನಲ್ಲಿ ಸ್ಥಾಪಿಸಲಾದ ತುರ್ತು ಪರಿಹಾರ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ.
ಶಿಬಿರದಲ್ಲಿ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರ ತಂಡ 24 ಗಂಟೆಯೂ ಲಭ್ಯವಿರಲಿದ್ದು, ವಯನಾಡ್ ವೈದ್ಯಕೀಯ ಅಧಿಕಾರಿಗಳು ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಬುಧವಾರ(ಜು.8) ಮಧ್ಯಾಹ್ನ ಸಿಎಂ ವಿ. ಡಿ. ಸತೀಶನ್ ಅವರು ದುರಂತದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದು ಮುಖ್ಯಮಂತ್ರಿ ಕಾರ್ಯಾಲಯದ ಮೂಲಗಳು ತಿಳಿಸಿವೆ.

