
ಘಟನಾ ಸ್ಥಳದಲ್ಲಿ ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ಸಿಬ್ಬಂದಿ ರಕ್ಷಣಾ ಕಾರ್ಯ ನಡೆಸಿದರು.
ವಯನಾಡ್ ಭೂಕುಸಿತ ದುರಂತ: ಮತ್ತಷ್ಟು ಮೃತದೇಹಗಳು ಪತ್ತೆ, ಮೃತರ ಸಂಖ್ಯೆ 6ಕ್ಕೆ ಏರಿಕೆ
ಮೃತರನ್ನು ಉತ್ತರ ಪ್ರದೇಶ ಮೂಲದ ಸರ್ವೇಯರ್ ಅಜರುದ್ದೀನ್ ಅನ್ಸಾರಿ, ಹಿಮಾಚಲ ಪ್ರದೇಶದ ಎಂಜಿನಿಯರ್ ರಾಹುಲ್ ಶರ್ಮಾ ಹಾಗೂ ಬಿಹಾರ ಮೂಲದ ಅಗೆಯುವ ಯಂತ್ರದ ಆಪರೇಟರ್ ಮೊಹಮ್ಮದ್ ಇಮ್ರಾನ್ ಎಂದು ಜಿಲ್ಲಾಧಿಕಾರಿಗಳು ಧೃಢಪಡಿಸಿದ್ದಾರೆ.
ಕೇರಳಂನ ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಭೂಕುಸಿತದ ದುರಂತ ಸ್ಥಳದಿಂದ ಇಂದು ಮತ್ತಷ್ಟು ಮೃತದೇಹಗಳು ಪತ್ತೆಯಾಗಿದ್ದು, ಇದರೊಂದಿಗೆ ದುರಂತದಲ್ಲಿ ಬಲಿಯಾದವರ ಒಟ್ಟು ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಕಳೆದ ಜು. 7 ರಂದು ವಯನಾಡ್ ಮತ್ತು ಕೋಝಿಕೋಡ್ ಜಿಲ್ಲೆಗಳನ್ನು ಸಂಪರ್ಕಿಸುವ ಅನಕ್ಕೊಂಪೊಯಿಲ್-ಮೆಪ್ಪಾಡಿ ಸುರಂಗ ಯೋಜನೆಯ ನಿರ್ಮಾಣ ಪ್ರದೇಶದಲ್ಲಿ ಈ ಭೀಕರ ಭೂಕುಸಿತ ಸಂಭವಿಸಿತ್ತು. ಗುರುವಾರ(ಜು.9) ರಕ್ಷಣಾ ಕಾರ್ಯಾಚರಣೆ ವೇಳೆ ದುರಂತದ ಸ್ಥಳದಿಂದ ಇನ್ನೂ ಮೂರು ಶವಗಳನ್ನು ಅಧಿಕಾರಿಗಳು ಹೊರತೆಗೆದಿದ್ದಾರೆ.
ವಲಸೆ ಕಾರ್ಮಿಕರ ದುರ್ಮರಣ
ಇಂದು ಪತ್ತೆಯಾದ ಮೂರು ಶವಗಳನ್ನು ಹೊರರಾಜ್ಯದ ವಲಸೆ ಕಾರ್ಮಿಕರೆಂದು ಗುರುತಿಸಲಾಗಿದೆ. ಮೃತರನ್ನು ಉತ್ತರ ಪ್ರದೇಶ ಮೂಲದ ಸರ್ವೇಯರ್ ಅಜರುದ್ದೀನ್ ಅನ್ಸಾರಿ, ಹಿಮಾಚಲ ಪ್ರದೇಶದ ಎಂಜಿನಿಯರ್ ರಾಹುಲ್ ಶರ್ಮಾ ಹಾಗೂ ಬಿಹಾರ ಮೂಲದ ಅಗೆಯುವ ಯಂತ್ರದ ಆಪರೇಟರ್ ಮೊಹಮ್ಮದ್ ಇಮ್ರಾನ್ ಎಂದು ಜಿಲ್ಲಾಧಿಕಾರಿಗಳು ಧೃಢಪಡಿಸಿದ್ದಾರೆ.
ನದಿ ಪಾತ್ರದಲ್ಲಿ ತೀವ್ರಗೊಂಡ ರಕ್ಷಣೆ
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೇರಳಂ ಸಚಿವರಾದ ಎ.ಪಿ. ಅನಿಲ್ ಕುಮಾರ್ ಮತ್ತು ಟಿ. ಸಿದ್ದಿಕ್ ಅವರು, "ಇಂದು ಬೆಳಿಗ್ಗೆ ಶೋಧನಾ ವಲಯ-1ರಿಂದ ಒಂದು ಶವ ಹಾಗೂ ನದಿಯ ಒಳಗಿನಿಂದ ಮತ್ತೊಂದು ಶವವನ್ನು ಹೊರತೆಗೆಯಲಾಗಿದೆ. ಪ್ರಸ್ತುತ ವಲಯ 1 ಮತ್ತು 2 ರಲ್ಲಿ ಕಾರ್ಯಾಚರಣೆ ಚುರುಕುಗೊಳಿಸಲಾಗಿದ್ದು, ನದಿ ಪಾತ್ರದ ಸುತ್ತಮುತ್ತ ಹೆಚ್ಚಿನ ಗಮನ ಹರಿಸಲಾಗುತ್ತಿದೆ," ಎಂದು ತಿಳಿಸಿದ್ದಾರೆ. ಮೃತದೇಹಗಳ ಮರಣೋತ್ತರ ಪರೀಕ್ಷೆಯನ್ನು ವೈತಿರಿ ತಾಲ್ಲೂಕು ಆಸ್ಪತ್ರೆಯಲ್ಲಿ ನಡೆಸಲಾಗುವುದು ಹಾಗೂ ಬಳಿಕ ಕೋಝಿಕೋಡ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಶವಗಳನ್ನು ರಕ್ಷಿಸಿಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ವಿವರಿಸಿದ್ದಾರೆ.
ಮೂವರ ಸ್ಥಿತಿ ಗಂಭೀರ
ಘಟನಾ ಸ್ಥಳದಲ್ಲಿ ಸದ್ಯಕ್ಕೆ ಇನ್ನೂ ಇಬ್ಬರು ನಾಪತ್ತೆಯಾಗಿದ್ದು, ಅವರಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ. ಬುಧವಾರ(ಜು.8) ಮಾತನಾಡಿದ್ದ ಕೇರಳಂ ಮುಖ್ಯಮಂತ್ರಿ ವಿ. ಡಿ. ಸತೀಶನ್, "ಕಾಣೆಯಾದವರಿಗಾಗಿ ನಡೆಸಲಾಗುತ್ತಿರುವ ಶೋಧ ಕಾರ್ಯಾಚರಣೆಗೆ ಮೊದಲ ಆದ್ಯತೆ ನೀಡಲಾಗುವುದು," ಎಂದು ಸ್ಪಷ್ಟಪಡಿಸಿದ್ದರು. ದುರಂತದಲ್ಲಿ ಗಾಯಗೊಂಡಿದ್ದ 10 ಜನರಲ್ಲಿ ಮೂವರು ಈಗಾಗಲೇ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಉಳಿದ ನಾಲ್ವರ ಸ್ಥಿತಿ ಸ್ಥಿರವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಐಸಿಯುನಲ್ಲಿ ದಾಖಲಾಗಿರುವ ಮೂವರ ಪೈಕಿ ಇಬ್ಬರ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ. ಪ್ರಸ್ತುತ ಸ್ಥಳದಲ್ಲಿ ಎನ್‌ಡಿಆರ್‌ಎಫ್ ಹಾಗೂ ರಕ್ಷಣಾ ಪಡೆಗಳು ಮೊಕ್ಕಾಂ ಹೂಡಿದ್ದು, ಕಾರ್ಯಾಚರಣೆ ಮುಂದುವರಿದಿದೆ.

