Fire tragedy at Visakhapatnam steel plant: 8 dead, Rs 25 lakh compensation announced
x

ಆಸ್ಪತ್ರೆಯಲ್ಲಿನ ಗಾಯಾಳುಗಳ ಆರೋಗ್ಯ ವಿಚಾರಿಸಿದ ಕೇಂದ್ರ ಸಚಿವ ಹೆಚ್‌.ಡಿ. ಕುಮಾರಸ್ವಾಮಿ. 

ವಿಶಾಖಪಟ್ಟಣಂ ಉಕ್ಕಿನ ಘಟಕದಲ್ಲಿ ಅಗ್ನಿ ದುರಂತ: 8 ಸಾವು, 25 ಲಕ್ಷ ರೂ. ಪರಿಹಾರ ಘೋಷಣೆ

ಕರಗಿದ ದ್ರವರೂಪದ ಲೋಹವನ್ನು ಸಾಗಿಸುತ್ತಿದ್ದ ಬೃಹತ್ ಕೊಳಗದ ಸ್ಲೈಡ್ ಗೇಟ್ ತೆರೆಯುವ ಮುನ್ನವೇ, ಸುಮಾರು 1,500 ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನವಿದ್ದ ದ್ರವರೂಪದ ಉಕ್ಕು ತಾಂತ್ರಿಕ ದೋಷದಿಂದಾಗಿ ಸೋರಿಕೆಯಾಗಿರುವುದೇ ಪ್ರಮುಖ ಕಾರಣವಾಗಿದೆ.


Click the Play button to hear this message in audio format

ವಿಶಾಖಪಟ್ಟಣಂ ಉಕ್ಕಿನ ಸ್ಥಾವರದಲ್ಲಿ ಕಾರ್ಖಾನೆಯ ಉಕ್ಕು ಕರಗಿಸುವ ಘಟಕದ (ಸ್ಟೀಲ್ ಮೆಲ್ಟ್ ಶಾಪ್ - SMS 2) ಕ್ಯಾಸ್ಟರ್‌-2 ವಿಭಾಗದಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 8 ಕಾರ್ಮಿಕರು ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣೆವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ದುರಂತಕ್ಕೆ ಕಾರಣವೇನು?

ಕರಗಿದ ದ್ರವರೂಪದ ಲೋಹವನ್ನು ಸಾಗಿಸುತ್ತಿದ್ದ ಬೃಹತ್ ಕೊಳಗದ ಸ್ಲೈಡ್ ಗೇಟ್ ತೆರೆಯುವ ಮುನ್ನವೇ, ಸುಮಾರು 1,500 ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನವಿದ್ದ ದ್ರವರೂಪದ ಉಕ್ಕು ತಾಂತ್ರಿಕ ದೋಷದಿಂದಾಗಿ ಸೋರಿಕೆಯಾಗಿದೆ. ಇದರಿಂದಾಗಿ ಭಾರೀ ಪ್ರಮಾಣದ ಸ್ಫೋಟ ಸಂಭವಿಸಿ, ಇಡೀ ಘಟಕದಲ್ಲಿ ಬೆಂಕಿಯ ಜ್ವಾಲೆ ಆವರಿಸಿದ್ದೇ ಈ ಭೀಕರ ದುರಂತಕ್ಕೆ ಕಾರಣ ಎಂದು ಅಧಿಕಾರಿಗಳು ಸಚಿವರಿಗೆ ಪ್ರಾಥಮಿಕ ವಿವರಣೆ ನೀಡಿದ್ದಾರೆ.


ಪರಿಹಾರ ಘೋಷಣೆ

ಘಟನೆಯ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಹೆಚ್‌.ಡಿ. ಕುಮಾರಸ್ವಾಮಿ, ಮೃತರ ಕುಟುಂಬಸ್ಥರು ಹಾಗೂ ಗಾಯಾಳುಗಳಿಗೆ ತಕ್ಷಣವೇ ಆಸರೆಯಾಗುವ ನಿಟ್ಟಿನಲ್ಲಿ ಮೃತಪಟ್ಟ ಕಾರ್ಮಿಕರ (ಖಾಯಂ ಹಾಗೂ ಗುತ್ತಿಗೆ ನೌಕರರು ಸೇರಿದಂತೆ) ಕುಟುಂಬಗಳಿಗೆ ತಲಾ 25 ಲಕ್ಷ ರೂ. ನಗದು ಪರಿಹಾರ ಘೋಷಿಸಲಾಗಿದೆ. ಮೃತಪಟ್ಟ ಕಾರ್ಮಿಕರ ಕುಟುಂಬದ ಒಬ್ಬ ಅರ್ಹ ಸದಸ್ಯರಿಗೆ ಕಾರ್ಖಾನೆಯಲ್ಲಿಯೇ ಖಾಯಂ ಉದ್ಯೋಗ ನೀಡಲು ಆದೇಶಿಸಲಾಗಿದೆ.

ವಸತಿ ಸೌಕರ್ಯ ಮುಂದುವರಿಕೆ

ಮೃತ ಕಾರ್ಮಿಕರ ನಿವೃತ್ತಿ ಅವಧಿ ಮುಗಿಯುವವರೆಗೆ ಅವರ ಕುಟುಂಬದವರು ಸ್ಟೀಲ್ ಪ್ಲಾಂಟ್ ಟೌನ್‌ಶಿಪ್‌ನ ವಸತಿ ಗೃಹಗಳಲ್ಲೇ ವಾಸಿಸಲು ವಿಶೇಷ ಪ್ರಕರಣ ಎಂದು ಪರಿಗಣಿಸಿ ಅನುಮತಿ ನೀಡಲಾಗಿದೆ. ದುರಂತದಲ್ಲಿ ಮೃತಪಟ್ಟ ಹಾಗೂ ಗಾಯಗೊಂಡ ನೌಕರರ ಮಕ್ಕಳ ಸಂಪೂರ್ಣ ವಿದ್ಯಾಭ್ಯಾಸದ ವೆಚ್ಚವನ್ನು ಕಾರ್ಖಾನೆಯ ಆಡಳಿತ ಮಂಡಳಿಯೇ ಭರಿಸಲಿದೆ.

ಗಾಯಾಳುಗಳಿಗೆ 10 ಲಕ್ಷ ರೂ. ಪರಿಹಾರ

ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿರುವ ನೌಕರರಿಗೆ ತಲಾ 10 ಲಕ್ಷ ರೂ. ಪರಿಹಾರದ ಜತೆಗೆ, ಅವರ ಸಂಪೂರ್ಣ ವೈದ್ಯಕೀಯ ವೆಚ್ಚವನ್ನು ಉಕ್ಕು ಸಂಸ್ಥೆಯೇ ನೋಡಿಕೊಳ್ಳಲಿದೆ. ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೂ ಸಂತಾಪ ಸೂಚಿಸಿದ್ದು, ಪ್ರಧಾನಮಂತ್ರಿಯವರ ರಾಷ್ಟ್ರೀಯ ಪರಿಹಾರ ನಿಧಿಯಿಂದ (PMNRF) ಮೃತರ ಕುಟುಂಬಕ್ಕೆ ಹೆಚ್ಚುವರಿ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ 50 ಸಾವಿರರೂ. ಘೋಷಿಸಲಾಗಿದೆ.

ತನಿಖೆಗೆ ಆದೇಶ

"ಈ ಭೀಕರ ಅಪಘಾತದ ಹಿಂದಿರುವ ನಿಖರ ಕಾರಣ ಏನೆಂಬುದನ್ನು ಪತ್ತೆಹಚ್ಚಲು ಮತ್ತು ಭದ್ರತಾ ಲೋಪಗಳ ತನಿಖೆ ನಡೆಸಲು ಬೊಕಾರೊ ಉಕ್ಕು ಕಾರ್ಖಾನೆಯ ನಿರ್ದೇಶಕರ ನೇತೃತ್ವದಲ್ಲಿ ಮೂರು ಸದಸ್ಯರ 'ಸ್ವತಂತ್ರ ಉನ್ನತ ಮಟ್ಟದ ಪರಿಣಿತರ ತನಿಖಾ ಸಮಿತಿ'ಯನ್ನು ರಚಿಸಲಾಗಿದೆ. ಕಾರ್ಖಾನೆಯ ಸುರಕ್ಷತಾ ನಿಯಮಗಳನ್ನು ಮತ್ತಷ್ಟು ಬಲಪಡಿಸಲಾಗುವುದು" ಎಂದು ತಿಳಿಸಿದರು.

Read More
Next Story