Preparations to form a coalition government in Tamil Nadu: Vijays party in talks with Congress, Left parties?
x

ಟಿವಿಕೆ ಮುಖ್ಯಸ್ಥ ವಿಜಯ್‌ ಹಾಗೂ ವಿಡುತಲೈ ಚಿರುತೈಗಳ್ ಕಚ್ಚಿ ಮುಖ್ಯಸ್ಥ ತಿರುಮವಲವನ್‌

ತಮಿಳುನಾಡಿನಲ್ಲಿ ಮೈತ್ರಿ ಸರ್ಕಾರ ರಚನೆಗೆ ಸಿದ್ಧತೆ: ಕಾಂಗ್ರೆಸ್, ಎಡಪಕ್ಷಗಳೊಂದಿಗೆ ವಿಜಯ್ ಪಕ್ಷದ ಮಾತುಕತೆ?

ವಿಜಯ್ ಅವರು ವಿರೋಧ ಪಕ್ಷಗಳ ಒಕ್ಕೂಟದ ಜೊತೆ ಕೈಜೋಡಿಸಲು ಯೋಜಿಸಿದ್ದು, ವಿಡುತಲೈ ಚಿರುತೈಗಳ್ ಕಚ್ಚಿ (VCK), ಸಿಪಿಐ(ಎಂ), ಸಿಪಿಐ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ಹಾಗೂ ಕಾಂಗ್ರೆಸ್ ನಾಯಕರೊಂದಿಗೆ ಮಾತುಕತೆ ನಡೆಸುವ ಸಾಧ್ಯತೆಯಿದೆ.


Click the Play button to hear this message in audio format

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಭಾರಿ ಸಂಚಲನ ಮೂಡಿಸಿರುವ ನಟ ವಿಜಯ್ ನೇತೃತ್ವದ 'ತಮಿಳು ವೆಟ್ರಿ ಕಳಗಂ' (TVK) ಪಕ್ಷವು ಮೈತ್ರಿ ಸರ್ಕಾರ ರಚನೆಗೆ ಕಸರತ್ತು ಆರಂಭಿಸಿದೆ. ತಮ್ಮ ಚೊಚ್ಚಲ ಚುನಾವಣೆಯಲ್ಲಿಯೇ 108 ಸ್ಥಾನಗಳನ್ನು ಗೆದ್ದು ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಟಿವಿಎಂ, ಬಹುಮತಕ್ಕೆ (118 ಸ್ಥಾನ) ಅಗತ್ಯವಿರುವ ಸಂಖ್ಯೆಯನ್ನು ಕಲೆಹಾಕಲು ಕಾಂಗ್ರೆಸ್, ಎಡಪಕ್ಷಗಳು ಮತ್ತು ಇತರ ಸಣ್ಣ ಪಕ್ಷಗಳೊಂದಿಗೆ ಮಾತುಕತೆ ನಡೆಸಲು ಮುಂದಾಗಿದೆ ಎಂದು 'ಇಂಡಿಯಾ ಟುಡೆ ಟಿವಿ' ವರದಿ ಮಾಡಿದೆ.

ವಿಜಯ್ ಅವರು ವಿರೋಧ ಪಕ್ಷಗಳ ಒಕ್ಕೂಟದ ಜೊತೆ ಕೈಜೋಡಿಸಲು ಯೋಜಿಸಿದ್ದು, ವಿಡುತಲೈ ಚಿರುತೈಗಳ್ ಕಚ್ಚಿ (VCK), ಸಿಪಿಐ(ಎಂ), ಸಿಪಿಐ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ಹಾಗೂ ಕಾಂಗ್ರೆಸ್ ನಾಯಕರೊಂದಿಗೆ ಮಾತುಕತೆ ನಡೆಸುವ ಸಾಧ್ಯತೆಯಿದೆ. ಈ ಪಕ್ಷಗಳಿಗೆ ಶೀಘ್ರದಲ್ಲೇ ಅಧಿಕೃತ ಆಹ್ವಾನ ಕಳುಹಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಗಮನಾರ್ಹ ಅಂಶವೆಂದರೆ, ಪ್ರಸ್ತುತ ಈ ಪಕ್ಷಗಳು ಡಿಎಂಕೆ ನೇತೃತ್ವದ ಜಾತ್ಯತೀತ ಪ್ರಗತಿಪರ ಮೈತ್ರಿಕೂಟದ (SPA) ಭಾಗವಾಗಿವೆ. ತಮಿಳುನಾಡಿನ ಒಟ್ಟು 234 ವಿಧಾನಸಭಾ ಕ್ಷೇತ್ರಗಳ ಪೈಕಿ ಈ ಚುನಾವಣೆಯಲ್ಲಿ ಕಾಂಗ್ರೆಸ್ 5 ಸ್ಥಾನ ಗೆದ್ದಿದ್ದರೆ, IUML, CPI, CPI(M) ಮತ್ತು VCK ತಲಾ 2 ಸ್ಥಾನಗಳನ್ನು ಪಡೆದಿವೆ. ಒಂದು ವೇಳೆ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಟಿವಿಎಂ ಜೊತೆ ಕೈಜೋಡಿಸಲು ಒಪ್ಪಿದರೆ, ವಿಜಯ್ ನೇತೃತ್ವದ ಪಕ್ಷವು ಸುಲಭವಾಗಿ ಬಹುಮತದ ಗಡಿ ದಾಟಲಿದ್ದು, ಸರ್ಕಾರ ರಚನೆಗೆ ಹಾದಿ ಸುಗಮವಾಗಲಿದೆ.

ಈಗಾಗಲೇ ನೂತನ ಶಾಸಕರ ಸಭೆ ನಡೆಸಿರುವ ವಿಜಯ್ ಅವರನ್ನು 'ಟಿವಿಎಂ ಶಾಸಕಾಂಗ ಪಕ್ಷದ ನಾಯಕ'ನನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

ಮೈತ್ರಿ ಬಗ್ಗೆ ಕಾಂಗ್ರೆಸ್ ನಿಲುವು ಏನು?

ಟಿವಿಎಂ-ಕಾಂಗ್ರೆಸ್ ಮೈತ್ರಿ ಸರ್ಕಾರದ ವದಂತಿಗಳ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಸಂಸದ ಶಶಿಕಾಂತ್ ಸೆಂಥಿಲ್, "ತಮಿಳುನಾಡಿನ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಪಕ್ಷವು ಸಾಮೂಹಿಕ ಮತ್ತು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ" ಎಂದು ತಿಳಿಸಿದ್ದಾರೆ. "ತಮಿಳುನಾಡಿನ ಜನತೆ ಸ್ಪಷ್ಟ ಜನಾದೇಶ ನೀಡಿದ್ದು, ಅದನ್ನು ನಾವು ಹೃದಯಪೂರ್ವಕವಾಗಿ ಒಪ್ಪಿಕೊಳ್ಳಬೇಕು. ಕಾಂಗ್ರೆಸ್ ತನ್ನ ಜಾತ್ಯತೀತ ಮೌಲ್ಯಗಳ ಬದ್ಧತೆಗೆ ಅನುಗುಣವಾಗಿ ಮುಂದಿನ ನಿರ್ಧಾರ ಕೈಗೊಳ್ಳಲಿದೆ. ಯಾವುದೇ ಮಾತುಕತೆಗಳ ಬಗ್ಗೆ ಕಾಂಗ್ರೆಸ್ ವರಿಷ್ಠರು ಮತ್ತು ಸಂಸದೀಯ ಸಮಿತಿ ತೀರ್ಮಾನಿಸಲಿದೆ," ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ನಡುವೆ ವಿಜಯ್ ಅವರ ತಂದೆ ಎಸ್.ಎ. ಚಂದ್ರಶೇಖರ್ ಅವರು ಕಾಂಗ್ರೆಸ್ ನಾಯಕರಿಗೆ ಬಹಿರಂಗ ಆಹ್ವಾನ ನೀಡಿದ್ದು, "ಕಾಂಗ್ರೆಸ್ ತನ್ನ ಕಳೆದುಕೊಂಡಿರುವ ಅಧಿಕಾರವನ್ನು ಮರಳಿ ಪಡೆಯಲು ಟಿವಿಎಂಗೆ ಬೆಂಬಲ ನೀಡಬೇಕು. ಆ ಮೂಲಕ ತಮ್ಮ ಪಕ್ಷದ ಇತಿಹಾಸವನ್ನು ಉಳಿಸಿಕೊಳ್ಳುವ ಅವಕಾಶವನ್ನು ಅವರು ಬಳಸಿಕೊಳ್ಳಬೇಕು," ಎಂದು ಆಗ್ರಹಿಸಿದ್ದಾರೆ.

ದ್ರಾವಿಡ ಪಕ್ಷಗಳಿಗೆ ಬಿಗ್ ಶಾಕ್!

ಟಿವಿಎಂ ಪಕ್ಷವು ತಮಿಳುನಾಡು ಚುನಾವಣೆಯಲ್ಲಿ ಅಕ್ಷರಶಃ ಇತಿಹಾಸ ಸೃಷ್ಟಿಸಿದ್ದು, ಆಡಳಿತಾರೂಢ ಡಿಎಂಕೆ ಹಾಗೂ ಪ್ರಮುಖ ವಿರೋಧ ಪಕ್ಷವಾದ ಎಐಎಡಿಎಂಕೆ (AIADMK) ಗೆ ತೀವ್ರ ಆಘಾತ ನೀಡಿದೆ. ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಕೇವಲ 59 ಸ್ಥಾನಗಳನ್ನು ಪಡೆದು ವಿರೋಧ ಪಕ್ಷದ ಸ್ಥಾನಕ್ಕೆ ತಳ್ಳಲ್ಪಟ್ಟರೆ, ಎಐಎಡಿಎಂಕೆ 47 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡು ಮೂರನೇ ಸ್ಥಾನಕ್ಕೆ ಕುಸಿದಿದೆ.

ಕಳೆದ ಫೆಬ್ರವರಿಯಲ್ಲಿ ಪಕ್ಷ ಸ್ಥಾಪಿಸಿದ್ದ ವಿಜಯ್, ಚುನಾವಣೆಯಲ್ಲಿ ಡಿಎಂಕೆ, ಎಐಎಡಿಎಂಕೆ ಅಥವಾ ಬಿಜೆಪಿ ಜೊತೆ ಯಾವುದೇ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಘೋಷಿಸಿ ಏಕಾಂಗಿಯಾಗಿ ಕಣಕ್ಕಿಳಿದಿದ್ದರು. ಇದೀಗ ಮೊದಲ ಚುನಾವಣೆಯಲ್ಲೇ ಸುಮಾರು ಶೇ. 35ರಷ್ಟು ಮತಗಳನ್ನು ಗಳಿಸಿರುವ ಅವರು, ಪೆರಂಬೂರ್ ಮತ್ತು ತಿರುಚಿರಾಪಳ್ಳಿ ಪೂರ್ವ ಕ್ಷೇತ್ರಗಳೆರಡರಲ್ಲೂ ಜಯಭೇರಿ ಬಾರಿಸಿದ್ದಾರೆ. ಒಂದು ವೇಳೆ ಟಿವಿಎಂ ಸರ್ಕಾರ ರಚಿಸುವಲ್ಲಿ ಯಶಸ್ವಿಯಾದರೆ, ಪಕ್ಷ ಸ್ಥಾಪನೆಯಾದ ಕೇವಲ ಎರಡು ವರ್ಷಗಳಲ್ಲಿ ಅಧಿಕಾರಕ್ಕೇರಿದ ಅತಿ ದೊಡ್ಡ ರಾಜಕೀಯ ಮೈಲಿಗಲ್ಲು ಇದಾಗಲಿದೆ.

Read More
Next Story