ನಿರ್ಮಾಣ ಹಂತದ ಚರ್ಚ್ ಛಾವಣಿ ಕುಸಿದು 3 ಮಂದಿ ಸಾವು
x

ತಮಿಳುನಾಡಿನ ವೆಲ್ಲೂರಿನಲ್ಲಿ ನಿರ್ಮಾಣ ಹಂತದ ಚರ್ಚ್ ಮೇಲ್ಛಾವಣಿ ಕುಸಿದು ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ. 

ನಿರ್ಮಾಣ ಹಂತದ ಚರ್ಚ್ ಛಾವಣಿ ಕುಸಿದು 3 ಮಂದಿ ಸಾವು

ಗಾಯಗೊಂಡ 11 ಕಾರ್ಮಿಕರನ್ನು ವೆಲ್ಲೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆ, ಕ್ರಿಶ್ಚಿಯನ್ ಮೆಡಿಕಲ್ ಕಾಲೇಜು ಆಸ್ಪತ್ರೆ ಹಾಗೂ ನೆರೆಯ ಆಂಧ್ರಪ್ರದೇಶದ ಚಿತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಎಂಟು ಕಾರ್ಮಿಕರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎನ್ನಲಾಗಿದೆ.


Click the Play button to hear this message in audio format

ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಕಟ್ಪಾಡಿ ಸಮೀಪ ನಿರ್ಮಾಣ ಹಂತದಲ್ಲಿದ್ದ ಚರ್ಚ್‌ನ ಮೇಲ್ಛಾವಣಿ ಕುಸಿದು ಮೂವರು ಕಾರ್ಮಿಕರು ಮೃತಪಟ್ಟಿದ್ದು, 11 ಮಂದಿ ಗಾಯಗೊಂಡಿದ್ದಾರೆ. ಗುರುವಾರ ಸಂಜೆ ಈ ಘಟನೆ ನಡೆದಿದೆ.

ಕಟ್ಪಾಡಿ ಬಳಿಯ ಮಂಡಿ ಕೃಷ್ಣಾಪುರಂನಲ್ಲಿ ಚರ್ಚ್ ಆಫ್ ಸೌತ್ ಇಂಡಿಯಾ ಕಟ್ಟಡ ನಿರ್ಮಾಣ ನಡೆಯುತ್ತಿತ್ತು. ಮೇಲ್ಛಾವಣಿಗೆ ಕಾಂಕ್ರೀಟ್ ಸುರಿಯುತ್ತಿದ್ದ ವೇಳೆ ಸುಮಾರು 20 ಅಡಿ ಎತ್ತರದ ಸ್ಟೀಲ್ ಸ್ಕ್ಯಾಫೋಲ್ಡಿಂಗ್ ಮತ್ತು ಆಧಾರ ರಚನೆ ಏಕಾಏಕಿ ಕುಸಿದಿದೆ. ಪರಿಣಾಮ ಕಾರ್ಮಿಕರು ಭಾರಿ ಪ್ರಮಾಣದ ಕಾಂಕ್ರೀಟ್ ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ.

ಮೂರು ಮಂದಿ ಸಾವು, 11 ಜನರಿಗೆ ಗಾಯ

ಅವಶೇಷಗಳಡಿ ಸಿಲುಕಿದ್ದ ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಜಿಲ್ಲಾಡಳಿತದ ತಂಡಗಳು ಪಾಲ್ಗೊಂಡವು. ಗಾಯಗೊಂಡ 11 ಕಾರ್ಮಿಕರನ್ನು ವೆಲ್ಲೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆ, ಕ್ರಿಶ್ಚಿಯನ್ ಮೆಡಿಕಲ್ ಕಾಲೇಜು ಆಸ್ಪತ್ರೆ ಹಾಗೂ ನೆರೆಯ ಆಂಧ್ರಪ್ರದೇಶದ ಚಿತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ವೆಲ್ಲೂರು ಜಿಲ್ಲಾಧಿಕಾರಿ ಪಿ.ಎಸ್. ಲೀಲಾ ಅಲೆಕ್ಸ್ ಸ್ಥಳದಲ್ಲೇ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದರು. ಕನಿಷ್ಠ ಎಂಟು ಕಾರ್ಮಿಕರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅವರು ತಿಳಿಸಿದ್ದಾರೆ. ಮೇಲ್ಛಾವಣಿ ಕುಸಿತಕ್ಕೆ ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಸಮಿತಿ ರಚಿಸಲಾಗುವುದು. ನಿರ್ಮಾಣಕ್ಕೆ ಅಗತ್ಯವಿರುವ ಅನುಮತಿಗಳು ಮತ್ತು ಕಟ್ಟಡ ಪರವಾನಗಿಗಳನ್ನು ಗುತ್ತಿಗೆದಾರರು ಪಡೆದಿದ್ದಾರೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುವುದು.

Read More
Next Story