
ಕೇರಳ ಸಿಎಂ ಸಸ್ಪೆನ್ಸ್ ಅಂತ್ಯ: ವಿ.ಡಿ. ಸತೀಶನ್ ಮುಂದಿನ ಮುಖ್ಯಮಂತ್ರಿ; ಕೆ.ಸಿ. ವೇಣುಗೋಪಾಲ್‌ಗೆ ತಪ್ಪಿದ ಪಟ್ಟ!
ಕೇರಳದ ಮುಂದಿನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದೆ. ಕೆ.ಸಿ. ವೇಣುಗೋಪಾಲ್ ಹಾಗೂ ರಮೇಶ್ ಚೆನ್ನಿತ್ತಲ ಅವರನ್ನು ಹಿಂದಿಕ್ಕಿ ಸತೀಶನ್ ಸಿಎಂ ಗಾದಿ ಏರಲಿದ್ದಾರೆ.
ಕೇರಳ ವಿಧಾನಸಭಾ ಚುನಾವಣೆಯಲ್ಲಿ ಯುಡಿಎಫ್ (UDF) ಮೈತ್ರಿಕೂಟ ಭರ್ಜರಿ ಜಯ ದಾಖಲಿಸಿದ 10 ದಿನಗಳ ನಂತರ, ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಗಾದಿಗೆ ವಿ.ಡಿ. ಸತೀಶನ್ (VD Satheesan) ಅವರನ್ನು ಅಧಿಕೃತವಾಗಿ ಆಯ್ಕೆ ಮಾಡಿದೆ. ಈ ಮೂಲಕ ಸಿಎಂ ರೇಸ್‌ನಲ್ಲಿದ್ದ ಹಿರಿಯ ನಾಯಕರಾದ ಕೆ.ಸಿ. ವೇಣುಗೋಪಾಲ್ ಮತ್ತು ರಮೇಶ್ ಚೆನ್ನಿತ್ತಲ ಅವರಿಗೆ ನಿರಾಸೆಯಾಗಿದೆ.
61 ವರ್ಷದ ವಿ.ಡಿ. ಸತೀಶನ್ ಅವರು ಈ ಹಿಂದೆ ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದರು. ಕಾಂಗ್ರೆಸ್ ಹೈಕಮಾಂಡ್ ಹಾಗೂ ಯುಡಿಎಫ್ ಮೈತ್ರಿಕೂಟದ ಪ್ರಮುಖ ಮಿತ್ರಪಕ್ಷವಾದ ಐಯುಎಂಎಲ್ (IUML) ಕೂಡ ಸತೀಶನ್ ಅವರ ಹೆಸರನ್ನೇ ಬಲವಾಗಿ ಬೆಂಬಲಿಸಿತ್ತು. ಮೂಲಗಳ ಪ್ರಕಾರ, ಸತೀಶನ್ ಅವರು ಈ ಬಾರಿ ಯಾವುದೇ ಕಾರಣಕ್ಕೂ ಎರಡನೇ ಸ್ಥಾನ ಅಥವಾ ಉಪಮುಖ್ಯಮಂತ್ರಿ ಹುದ್ದೆಗೆ ಒಪ್ಪಲು ಸಿದ್ಧರಿರಲಿಲ್ಲ ಎನ್ನಲಾಗಿದೆ.
ರಾಹುಲ್ ಗಾಂಧಿ ಅವರ ಆಪ್ತ ಹಾಗೂ ಸಿಎಂ ರೇಸ್‌ನಲ್ಲಿದ್ದ ಪ್ರಮುಖ ನಾಯಕ ಕೆ.ಸಿ. ವೇಣುಗೋಪಾಲ್ ಅವರು ಹೈಕಮಾಂಡ್ ನಿರ್ಧಾರವನ್ನು ಸ್ವಾಗತಿಸಿದ್ದಾರೆ. "ನಾನು ಈ ನಿರ್ಧಾರದಿಂದ ಸಂಪೂರ್ಣ ತೃಪ್ತನಾಗಿದ್ದೇನೆ. ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧನಾಗಿರುತ್ತೇನೆ" ಎಂದು ಆಲಪ್ಪುಳ ಸಂಸದ ವೇಣುಗೋಪಾಲ್ ತಿಳಿಸಿದ್ದಾರೆ.
ಕರ್ನಾಟಕದ ಹಗ್ಗಜಗ್ಗಾಟ ನೆನಪಿಸಿದ ಕೇರಳ ಸಸ್ಪೆನ್ಸ್!
ಕೇರಳ ಸಿಎಂ ಆಯ್ಕೆಯಲ್ಲಿ ಉಂಟಾಗಿದ್ದ ವಿಳಂಬವು ಕರ್ನಾಟಕದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ನಡೆದಿದ್ದ ಮುಖ್ಯಮಂತ್ರಿ ಹುದ್ದೆಯ ಹಗ್ಗಜಗ್ಗಾಟವನ್ನು ನೆನಪಿಸುವಂತಿತ್ತು. ಆದರೆ, ಕಾಂಗ್ರೆಸ್ ಹೈಕಮಾಂಡ್ ಕೇರಳದಲ್ಲಿ ಯಾವುದೇ ರೀತಿಯ ಭಿನ್ನಮತಕ್ಕೆ ಅವಕಾಶ ನೀಡದಂತೆ ಶೀಘ್ರವಾಗಿ ಒಮ್ಮತದ ನಿರ್ಧಾರಕ್ಕೆ ಬಂದಿದೆ.
ಈ ಬಾರಿಯ ಚುನಾವಣೆಯಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ (LDF) ಮೈತ್ರಿಕೂಟದ ಹ್ಯಾಟ್ರಿಕ್ ಗೆಲುವಿನ ಕನಸನ್ನು ಭಂಗಗೊಳಿಸಿರುವ ಕಾಂಗ್ರೆಸ್ ನೇತೃತ್ವದ ಯುಡಿಎಫ್, ಈಗ ವಿ.ಡಿ. ಸತೀಶನ್ ನಾಯಕತ್ವದಲ್ಲಿ ಹೊಸ ಸರ್ಕಾರ ರಚನೆಗೆ ಸಜ್ಜಾಗಿದೆ.

