ಲೈಂಗಿಕ ಕಿರುಕುಳ ಆರೋಪ: ತರಬೇತಿ ಐಪಿಎಸ್ ಅಧಿಕಾರಿ ಆತ್ಮಹತ್ಯೆಗೆ ಯತ್ನ
x

ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ತರಬೇತಿ ನಿರತ ಐಪಿಎಸ್ ಅಧಿಕಾರಿ ಉದಯ ಕೃಷ್ಣ ರೆಡ್ಡಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಲೈಂಗಿಕ ಕಿರುಕುಳ ಆರೋಪ: ತರಬೇತಿ ಐಪಿಎಸ್ ಅಧಿಕಾರಿ ಆತ್ಮಹತ್ಯೆಗೆ ಯತ್ನ

ಮಹಿಳಾ ಅಧಿಕಾರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದ ಟ್ರೈನಿ ಐಪಿಎಸ್ ಅಧಿಕಾರಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


Click the Play button to hear this message in audio format

ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ (ಎನ್‌ಪಿಎ) ಸಹೋದ್ಯೋಗಿ ತರಬೇತಿ ನಿರತ ಮಹಿಳಾ ಅಧಿಕಾರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ತರಬೇತಿ ನಿರತ ಐಪಿಎಸ್ ಅಧಿಕಾರಿ ಉದಯ ಕೃಷ್ಣ ರೆಡ್ಡಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣವೇ ಅವರನ್ನು ಎಸ್‌ಆರ್ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

ಸೋಮವಾರ ಬೆಳಿಗ್ಗೆ 9.30ರ ಸುಮಾರಿಗೆ ನಗರದಲ್ಲಿರುವ ತಮ್ಮ ಸಂಬಂಧಿಕರ ಫ್ಲ್ಯಾಟ್‌ನಲ್ಲಿ ಪ್ರಜ್ಞಾಹೀನರಾಗಿ ಬಿದ್ದಿದ್ದ ಅಧಿಕಾರಿಯನ್ನು ಅವರ ಸಹೋದರ ಮತ್ತು ಸ್ನೇಹಿತರು ತಕ್ಷಣವೇ ಜಯಂತಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ತಲುಪಿಸಿದ್ದಾರೆ. ಘಟನಾ ಸ್ಥಳದಲ್ಲಿ ಮದ್ಯದ ಬಾಟಲಿ ಹಾಗೂ ಸ್ಯಾನಿಟೈಸರ್ ಪತ್ತೆಯಾಗಿದ್ದರಿಂದ, ಅವರು ಯಾವುದಾದರೂ ಅಪಾಯಕಾರಿ ವಸ್ತುವನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರಬಹುದು ಎಂದು ಆರಂಭದಲ್ಲಿ ಶಂಕಿಸಲಾಗಿತ್ತು.

ಆದರೆ, ಚಿಕಿತ್ಸೆ ನೀಡಿದ ವೈದ್ಯರು ನಡೆಸಿದ ಜಠರ ತಪಾಸಣೆಯಲ್ಲಿ (Gastric Lavage) ಯಾವುದೇ ವಿಷಕಾರಿ ಅಥವಾ ಮಾತ್ರೆಗಳ ಅಂಶಗಳು ಪತ್ತೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅತಿಯಾದ ಮದ್ಯಸೇವನೆ ಹಾಗೂ ತೀವ್ರ ಮಾನಸಿಕ ಒತ್ತಡದಿಂದ ಅವರು ಪ್ರಜ್ಞೆ ತಪ್ಪಿದ್ದರು ಎಂದು ತಿಳಿದುಬಂದಿದ್ದು, ಪ್ರಸ್ತುತ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಹೆಚ್ಚಿನ ತಪಾಸಣೆಗಾಗಿ ಅವರ ರಕ್ತ ಮತ್ತು ಮೂತ್ರದ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಗಂಭೀರ ಆರೋಪ ಹೊರಿಸಿದ್ದ ಮಹಿಳಾ ಅಧಿಕಾರಿ

ಕರ್ನಾಟಕ ಮೂಲದ 30 ವರ್ಷದ ವಿವಾಹಿತ ಮಹಿಳಾ ತರಬೇತಿ ಐಪಿಎಸ್ ಅಧಿಕಾರಿಯೊಬ್ಬರು ಉದಯ ಕೃಷ್ಣ ರೆಡ್ಡಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಅವರು ತಮಗೆ ಅಶ್ಲೀಲ ಸಂದೇಶ ಕಳುಹಿಸುವುದು, ಕೊಠಡಿಗೆ ಎಳೆದೊಯ್ದು ಕೂದಲು ಹಿಡಿದು ಹಲ್ಲೆ ನಡೆಸುವುದು, ಕುತ್ತಿಗೆ ಹಿಸುಕಿ ಕೊಲೆ ಬೆದರಿಕೆ ಹಾಕುವುದು ಹಾಗೂ ಚಾಕು ತೋರಿಸಿ ಹೆದರಿಸುತ್ತಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ಖಾಸಗಿ ವಿಡಿಯೋವನ್ನು ರಹಸ್ಯವಾಗಿ ಚಿತ್ರೀಕರಿಸಿ, ಅದನ್ನು ತಮ್ಮ ಪತಿಗೆ ಕಳುಹಿಸಿ ಬ್ಲಾಕ್‌ಮೇಲ್ ಮಾಡುತ್ತಿದ್ದರೆಂದು ಆರೋಪಿಸಿದ್ದಾರೆ.

ಮಹಿಳಾ ಅಧಿಕಾರಿಯ ದೂರಿನನ್ವಯ ಅತ್ತಾಪೂರ್ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ಮಾಹಿತಿ ತಂತ್ರಜ್ಞಾನ (IT) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಉದಯ್ ಕೃಷ್ಣ ರೆಡ್ಡಿ ಅಕಾಡೆಮಿಯಿಂದ ಹೊರನಡೆದಿದ್ದು, ರಾಷ್ಟ್ರೀಯ ಪೊಲೀಸ್ ಅಕಾಡೆಮಿಯು ಇವರ ವಿರುದ್ಧ ಆಂತರಿಕ ತನಿಖೆಯನ್ನು ಪ್ರಾರಂಭಿಸಿದೆ. ಈ ನಡುವೆ ತಮ್ಮ ಮೇಲಿನ ಆರೋಪಗಳು ಆಧಾರರಹಿತ ಹಾಗೂ ಸುಳ್ಳು ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದ ಉದಯ್ ಕೃಷ್ಣ, ತಮಗೆ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಇದೆ ಎಂದು ಹೇಳಿಕೆ ನೀಡಿದ್ದರು. ಈ ಹಿಂದೆ ಆಂಧ್ರಪ್ರದೇಶ ಪೊಲೀಸ್ ಇಲಾಖೆಯಲ್ಲಿ ಕಾನ್ಸ್‌ಸ್ಟೇಬಲ್ ಆಗಿ ಸೇವೆ ಸಲ್ಲಿಸಿದ್ದ ಇವರಿಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಲಿದ್ದಾರೆ.

Read More
Next Story