
ಪ್ರಾಂಶುಪಾಲರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: 27 ಬಾರಿ ಇರಿದು ಕೊಂದ 10ನೇ ತರಗತಿ ವಿದ್ಯಾರ್ಥಿಗಳು
ಕೆಲವು ದಿನಗಳ ಹಿಂದೆ ಈ ವಿದ್ಯಾರ್ಥಿಗಳ ಹಾಸ್ಟೆಲ್ ಬ್ಯಾಗ್‌ನಲ್ಲಿ ನಗದು ಹಣ ಹಾಗೂ ಮೊಬೈಲ್ ಫೋನ್ ಸಿಕ್ಕಿದ್ದರಿಂದ ಪ್ರಾಂಶುಪಾಲರಾದ ರೂಪಾ ರೆಡ್ಡಿ ಅವರು ಅವರಿಗೆ ತೀವ್ರವಾಗಿ ಬೈದಿದ್ದರು. ಅಲ್ಲದೆ, ಅವರ ಪೋಷಕರಿಗೆ ದೂರು ನೀಡಿ, ಅವರನ್ನು ಹಾಸ್ಟೆಲ್‌ನಿಂದ ಡಿಬಾರ್ ಮಾಡಿದ್ದರು.
ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ನಡೆದಿದ್ದ 48 ವರ್ಷದ ಶಾಲಾ ಪ್ರಿನ್ಸಿಪಾಲ್ ಅವರ ಭೀಕರ ಕೊಲೆ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಹಣದ ಆಸೆ ಮತ್ತು ಐಷಾರಾಮಿ ಜೀವನದ ವ್ಯಾಮೋಹಕ್ಕಾಗಿ ತಾವು ಓದುತ್ತಿದ್ದ ಶಾಲೆಯ ಪ್ರಾಂಶುಪಾಲರನ್ನೇ ಭೀಕರವಾಗಿ ಹತ್ಯೆ ಮಾಡಿದ್ದ ಇಬ್ಬರು 10ನೇ ತರಗತಿ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ವಿದ್ಯಾರ್ಥಿಗಳು ಕೊಂಡಮಲ್ಲೇಪಲ್ಲಿಯ 'ನಾಗಾರ್ಜುನ ಪಬ್ಲಿಕ್ ಸ್ಕೂಲ್' ನ ಪ್ರಾಂಶುಪಾಲರು ಮತ್ತು ಡೈರೆಕ್ಟರ್ ಆಗಿದ್ದ ಕಲ್ಲು ರೂಪಾ ರೆಡ್ಡಿ ಎಂಬುವವರನ್ನು ಅತ್ಯಂತ ಬರ್ಬರವಾಗಿ 27 ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು.
ಪ್ರಕರಣದ ಹಿನ್ನೆಲೆ ಮತ್ತು ತನಿಖೆ
ಆಗಸ್ಟ್ 12ರ ಬೆಳಿಗ್ಗೆ ರೂಪಾ ರೆಡ್ಡಿ ಅವರು ತಮ್ಮ ಮನೆಯಲ್ಲಿ ರಕ್ತದ ಮಡುವಿನಲ್ಲಿ ಹೆಣವಾಗಿ ಬಿದ್ದಿರುವುದು ಪತ್ತೆಯಾಗಿತ್ತು. ಹೈದರಾಬಾದ್‌ನಲ್ಲಿದ್ದ ಅವರ ಪತಿ, ರೂಪಾ ಅವರಿಗೆ ಎಷ್ಟು ಬಾರಿ ಕರೆ ಮಾಡಿದರೂ ಫೋನ್ ಸ್ವೀಕರಿಸದಿದ್ದಾಗ ನೆರೆಹೊರೆಯವರಿಗೆ ವಿಷಯ ತಿಳಿಸಿದ್ದರು. ನೆರೆಹೊರೆಯವರು ಮನೆಗೆ ತೆರಳಿ ನೋಡಿದಾಗ ಹತ್ಯೆಯಾಗಿರುವುದು ಬೆಳಕಿಗೆ ಬಂದಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು 5 ವಿಶೇಷ ತಂಡಗಳನ್ನು ರಚಿಸಿ, 80ಕ್ಕೂ ಹೆಚ್ಚು ಜನರನ್ನು ವಿಚಾರಣೆಗೆ ಒಳಪಡಿಸಿದರು. ಸಿಸಿಟಿವಿ ದೃಶ್ಯಾವಳಿಗಳು, ಫಿಂಗರ್ ಪ್ರಿಂಟ್ಸ್, ಮತ್ತು ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ತನಿಖೆ ಚುರುಕುಗೊಳಿಸಿದರು.
ಕೊಲೆಗಾರರನ್ನು ಹಿಡಿದುಕೊಟ್ಟ 'ಬಾಬು' ಎಂಬ ಒಂದು ಪದ
ತನಿಖಾಧಿಕಾರಿಗಳಿಗೆ ಈ ಪ್ರಕರಣದಲ್ಲಿ ಪ್ರಮುಖ ಸುಳಿವು ಸಿಕ್ಕಿದ್ದು ರೂಪಾ ರೆಡ್ಡಿ ಅವರ ಕೊನೆಯ ಫೋನ್ ಕರೆಯಿಂದ. ರೂಪಾ ಅವರು ಕೊಲೆಯಾಗುವ ಕೆಲವೇ ಕ್ಷಣಗಳ ಮೊದಲು ತಮ್ಮ ಅತ್ತೆಯೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದರು. ಫೋನ್ ಸ್ವಿಚ್ ಆಫ್ ಆಗುವ ಮುನ್ನ ಅವರು 'ಬಾಬು' ಎಂಬ ಪದವನ್ನು ಬಳಸಿದ್ದರು.
"ರೂಪಾ ರೆಡ್ಡಿ ಅವರು ಬಳಸಿದ ಕೊನೆಯ ಪದ 'ಬಾಬು' ಎಂಬುದಾಗಿತ್ತು. ಅವರು ಯಾರನ್ನು ಉದ್ದೇಶಿಸಿ ಈ ರೀತಿ ಕರೆದಿರಬಹುದು ಎಂದು ನಾವು ತನಿಖೆ ನಡೆಸಿದಾಗ, ಶಾಲೆಯ ವಿದ್ಯಾರ್ಥಿಗಳ ಮೇಲೆ ಅನುಮಾನ ವ್ಯಕ್ತವಾಯಿತು," ಎಂದು ಹಿರಿಯ ಪೊಲೀಸ್ ಅಧಿಕಾರಿ ಶರತ್ ಚಂದ್ರ ಪವಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈ ಸುಳಿವು ಆಧರಿಸಿ ಶಾಲೆಗೆ ಗೈರಾಗಿದ್ದ ಐವರು 10ನೇ ತರಗತಿ ವಿದ್ಯಾರ್ಥಿಗಳನ್ನು ವಿಚಾರಣೆ ನಡೆಸಿದಾಗ, ಅದರಲ್ಲಿ ಇಬ್ಬರು ಕಳೆದ ಕೆಲವು ದಿನಗಳಿಂದ ಅತಿಯಾಗಿ ಹಣ ಖರ್ಚು ಮಾಡುತ್ತಾ ಪಾರ್ಟಿ ಮಾಡುತ್ತಿದ್ದುದು ಕಂಡುಬಂದಿದೆ. ಆ ಇಬ್ಬರೂ ವಿದ್ಯಾರ್ಥಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಅವರು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಕೊಲೆಗೆ ಕಾರಣವೇನು?
ಕೆಲವು ದಿನಗಳ ಹಿಂದೆ ಈ ವಿದ್ಯಾರ್ಥಿಗಳ ಹಾಸ್ಟೆಲ್ ಬ್ಯಾಗ್‌ನಲ್ಲಿ ನಗದು ಹಣ ಹಾಗೂ ಮೊಬೈಲ್ ಫೋನ್ ಸಿಕ್ಕಿದ್ದರಿಂದ ಪ್ರಾಂಶುಪಾಲರಾದ ರೂಪಾ ರೆಡ್ಡಿ ಅವರು ಅವರಿಗೆ ತೀವ್ರವಾಗಿ ಬೈದಿದ್ದರು. ಅಲ್ಲದೆ, ಅವರ ಪೋಷಕರಿಗೆ ದೂರು ನೀಡಿ, ಅವರನ್ನು ಹಾಸ್ಟೆಲ್‌ನಿಂದ ಡಿಬಾರ್ ಮಾಡಿ ಮನೆಯಿಂದಲೇ ಶಾಲೆಗೆ ಬರುವಂತೆ ಮಾಡಿದ್ದರು. ಇದರಿಂದ ಪ್ರಾಂಶುಪಾಲರ ಮೇಲೆ ವಿದ್ಯಾರ್ಥಿಗಳಿಗೆ ತೀವ್ರ ದ್ವೇಷ ಹುಟ್ಟಿಕೊಂಡಿತ್ತು.
ಪ್ಲಾನ್ ಮಾಡಿ ಸ್ಕೆಚ್ ಹಾಕಿದ್ದ ವಿದ್ಯಾರ್ಥಿಗಳು
ಐಷಾರಾಮಿ ಜೀವನಕ್ಕಾಗಿ ಹಣ ಕದಿಯಲು ಪ್ಲಾನ್ ಮಾಡಿದ ವಿದ್ಯಾರ್ಥಿಗಳು 5 ದಿನಗಳ ಕಾಲ ಪ್ರಿನ್ಸಿಪಾಲ್ ಮನೆಯ ಸುತ್ತ ತಿರುಗಾಡುತ್ತಾ ಅವರ ಮೇಲೆ ಕಣ್ಣಿಟ್ಟಿದ್ದರು. ಅಲ್ಲದೆ ಯೂಟ್ಯೂಬ್‌ನಲ್ಲಿ "ಬೇಗ ಹಣಗಳಿಸುವುದು ಹೇಗೆ?" ಎಂದು ಸರ್ಚ್ ಕೂಡ ಮಾಡಿದ್ದರು. ಗುರುತು ಸಿಗದಂತೆ ಕೈಗೆ ಗ್ಲೌಸ್, ಮುಖಕ್ಕೆ ಮಂಕಿ ಕ್ಯಾಪ್ ಮತ್ತು ಕೊಲೆಗೆ ಚಾಕುವನ್ನು ಖರೀದಿಸಿದ್ದರು. ಘಟನೆ ನಡೆದ ದಿನ ಒಬ್ಬ ವಿದ್ಯಾರ್ಥಿ ಮಂಕಿ ಕ್ಯಾಪ್ ಧರಿಸಿ ಮನೆ ಹೊಕ್ಕಿ, ಬೆಡ್‌ರೂಮ್‌ನಲ್ಲಿದ್ದ 2.50 ಲಕ್ಷ ರೂ. ಹಣವನ್ನು ಕದಿಯಲು ಯತ್ನಿಸಿದ್ದಾನೆ.
ಈ ವೇಳೆ ಮಂಕಿ ಕ್ಯಾಪ್ ಜಾರಿಬಿದ್ದಿದ್ದರಿಂದ ರೂಪಾ ರೆಡ್ಡಿ ಆತನನ್ನು ಗುರುತಿಸಿದ್ದಾರೆ. ತಾನು ಸಿಕ್ಕಿಬೀಳುತ್ತೇನೆ ಎಂಬ ಭಯದಿಂದ ಆತ ಚಾಕುವಿನಿಂದ 27 ಬಾರಿ ಇರಿದು ಅವರನ್ನು ಹತ್ಯೆ ಮಾಡಿದ್ದಾನೆ.
ಕೊಲೆಯ ನಂತರ ಹಣದೊಂದಿಗೆ ಪರಾರಿಯಾದ ಆರೋಪಿಗಳು, ರಕ್ತದ ಕಲೆಯಾಗಿದ್ದ ಬಟ್ಟೆ ಮತ್ತು ಮಂಕಿ ಕ್ಯಾಪ್ ಅನ್ನು ಹೂತುಹಾಕಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದರು. ನಂತರ ಆ ಹಣದಲ್ಲಿ ಗೋವಾ ಪ್ರವಾಸಕ್ಕೂ ಹೋಗಿ ಬಂದಿದ್ದರು. ಬಂಧಿತರಿಂದ ಪೊಲೀಸರು ರಕ್ತದ ಕಲೆಯಿದ್ದ ನೋಟುಗಳು ಸೇರಿದಂತೆ 1.54 ಲಕ್ಷ ರೂ. ನಗದು, ಒಂದು ಹೊಸ ಐಫೋನ್ ಹಾಗೂ ರೂಪಾ ರೆಡ್ಡಿ ಅವರ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದಾರೆ.

