ಎಂ.ಕೆ. ಸ್ಟಾಲಿನ್‌ಗೆ ಹಿನ್ನಡೆ- ಚುನಾವಣಾ ಸೋಲು ಪ್ರಶ್ನಿಸಿದ್ದ ಅರ್ಜಿ ವಜಾ
x

ಎಂ.ಕೆ. ಸ್ಟಾಲಿನ್‌ಗೆ ಹಿನ್ನಡೆ- ಚುನಾವಣಾ ಸೋಲು ಪ್ರಶ್ನಿಸಿದ್ದ ಅರ್ಜಿ ವಜಾ

2026ರ ವಿಧಾನಸಭಾ ಚುನಾವಣೆಯಲ್ಲಿ ಕೊಳತ್ತೂರು ಕ್ಷೇತ್ರದಲ್ಲಿ ಸ್ಟಾಲಿನ್ ಅವರು 8,795 ಮತಗಳ ಅಂತರದಿಂದ ಸೋಲು ಕಂಡಿದ್ದರು. ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಅಭ್ಯರ್ಥಿ ವಿ.ಎಸ್. ಬಾಬು ಇಲ್ಲಿ ಗೆಲುವು ಸಾಧಿಸಿದ್ದರು. ಇದನ್ನು ಪ್ರಶ್ನಿಸಿ ಸ್ಟಾಲಿನ್ ಕೋರ್ಟ್‌ ಮೆಟ್ಟಿಲೇರಿದ್ದರು.


ತಮಿಳುನಾಡು ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಅವರಿಗೆ ಭಾರಿ ಹಿನ್ನಡೆಯಾಗಿದೆ. 2026ರ ವಿಧಾನಸಭಾ ಚುನಾವಣೆಯಲ್ಲಿ ಕೊಳತ್ತೂರು ಕ್ಷೇತ್ರದಿಂದ ಟಿವಿಕೆ ಅಭ್ಯರ್ಥಿ ವಿ.ಎಸ್.ಬಾಬು ಗೆಲುವನ್ನು ಪ್ರಶ್ನಿಸಿ ಸ್ಟಾಲಿನ್ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ.

ಮುಖ್ಯ ನ್ಯಾಯಮೂರ್ತಿ ಎಸ್.ಎ. ಧರ್ಮಾಧಿಕಾರಿ ಹಾಗೂ ನ್ಯಾಯಮೂರ್ತಿ ಜಿ. ಅರುಳ್ ಮುರುಗನ್ ಅವರಿದ್ದ ಪೀಠ, ಸ್ಟಾಲಿನ್ ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಯೋಗ್ಯವಾಗಿಲ್ಲ ಎಂದು ಹೇಳಿದೆ. ಪ್ರಕರಣದ ಕುರಿತು ನ್ಯಾಯಾಲಯದ ವಿವರವಾದ ಆದೇಶ ಇನ್ನಷ್ಟೇ ಹೊರಬರಬೇಕಿದೆ.

2026ರ ವಿಧಾನಸಭಾ ಚುನಾವಣೆಯಲ್ಲಿ ಕೊಳತ್ತೂರು ಕ್ಷೇತ್ರದಲ್ಲಿ ಸ್ಟಾಲಿನ್ ಅವರು 8,795 ಮತಗಳ ಅಂತರದಿಂದ ಸೋಲು ಕಂಡಿದ್ದರು. ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಅಭ್ಯರ್ಥಿ ವಿ.ಎಸ್. ಬಾಬು ಇಲ್ಲಿ ಗೆಲುವು ಸಾಧಿಸಿದ್ದರು. ಮೇ 4ರಂದು ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ವಿಜಯ್ ಅವರ TVK ರಾಜ್ಯದಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.

ಚುನಾವಣಾ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿದ್ದ ಸ್ಟಾಲಿನ್, ತಮ್ಮ ಅರ್ಜಿಯಲ್ಲಿ ಮತದಾನ ಪ್ರಕ್ರಿಯೆಯ ಬಗ್ಗೆ ಹಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದರು. ಸುಪ್ರೀಂ ಕೋರ್ಟ್ ನಿಗದಿಪಡಿಸಿರುವ ವ್ಯವಸ್ಥೆಯಂತೆ ಕೊಳತ್ತೂರು ಕ್ಷೇತ್ರದಲ್ಲಿನ ಶೇ.5ರಷ್ಟು ಇವಿಎಂಗಳನ್ನು ಪರಿಶೀಲಿಸಬೇಕು ಎಂದು ಅವರು ಮನವಿ ಮಾಡಿದ್ದರು.

ಕೊಳತ್ತೂರು ಕ್ಷೇತ್ರದಲ್ಲಿ ಒಟ್ಟು 286 ಇವಿಎಂ ಸೆಟ್‌ಗಳಿದ್ದು, ಅದರ ಶೇ.5ರಂತೆ 14 ಇವಿಎಂ ಸೆಟ್‌ಗಳನ್ನು ಪರಿಶೀಲನೆಗೆ ಒಳಪಡಿಸಬೇಕು ಎಂದು ಸ್ಟಾಲಿನ್ ಕೋರಿದ್ದರು. ಮೇ 4ರಂದು ಫಲಿತಾಂಶ ಪ್ರಕಟವಾದ ಮೂರು ದಿನಗಳ ಬಳಿಕ, ಅಂದರೆ ಮೇ 7ರಂದು ಸ್ಟಾಲಿನ್ ಇವಿಎಂ ಪರಿಶೀಲನೆಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ತಮ್ಮ ರಿಟ್ ಅರ್ಜಿಯಲ್ಲಿ ಅವರು ಉಲ್ಲೇಖಿಸಿರುವಂತೆ ಪರಿಶೀಲನಾ ಪ್ರಕ್ರಿಯೆ ಜುಲೈ 29ರಂದು ಮಾತ್ರ ಆರಂಭವಾಗಿತ್ತು.

ಇವಿಎಂ ಪರಿಶೀಲನೆಗೆ ಸಂಬಂಧಿಸಿದ ಪ್ರಕ್ರಿಯೆಯಲ್ಲಿ ಉಂಟಾದ ವಿಳಂಬವೂ ಸೇರಿದಂತೆ ಚುನಾವಣಾ ಪ್ರಕ್ರಿಯೆಯಲ್ಲಿನ ಅಕ್ರಮಗಳ ಕುರಿತು ಸ್ಟಾಲಿನ್ ನ್ಯಾಯಾಲಯದ ಗಮನ ಸೆಳೆದಿದ್ದರು. ಆದರೆ, ಇದೀಗ ಮದ್ರಾಸ್ ಹೈಕೋರ್ಟ್ ಅವರ ಅರ್ಜಿಯನ್ನೇ ವಜಾಗೊಳಿಸಿರುವುದು ಡಿಎಂಕೆ ಮುಖ್ಯಸ್ಥರಿಗೆ ಮತ್ತೊಂದು ರಾಜಕೀಯ ಹಾಗೂ ಕಾನೂನು ಹಿನ್ನಡೆಯಾಗಿದೆ.

Read More
Next Story