Tamil Nadu Elections 2026 | ಬಿಜೆಪಿ ಪ್ರಣಾಳಿಕೆ ಬಿಡುಗಡೆ- ಮಹಿಳೆಯರಿಗೆ ಮಾಸಿಕ 2 ಸಾವಿರ ರೂ, ಮೂರು ಸಿಲಿಂಡರ್‌ ಉಚಿತ
x

ತಮಿಳುನಾಡು ಚುನಾವಣೆ ಪ್ರಯುಕ್ತ ಬಿಜೆಪಿ ನಾಯಕರು ಪ್ರಣಾಳಿಕೆ ಬಿಡುಗಡೆ ಮಾಡಿದರು. 

Tamil Nadu Elections 2026 | ಬಿಜೆಪಿ ಪ್ರಣಾಳಿಕೆ ಬಿಡುಗಡೆ- ಮಹಿಳೆಯರಿಗೆ ಮಾಸಿಕ 2 ಸಾವಿರ ರೂ, ಮೂರು ಸಿಲಿಂಡರ್‌ ಉಚಿತ

ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ಅಪರಾಧಗಳನ್ನು ನಿಭಾಯಿಸಲು ಶೂನ್ಯ ಎಫ್‌ಐಆರ್ ವರದಿ, ಲೈಂಗಿಕ ಅಪರಾಧಗಳು ಸೇರಿದಂತೆ ಘೋರ ಅಪರಾಧಗಳಿಗೆ ವಿಶೇಷ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸುವ ಭರವಸೆಯನ್ನು ಬಿಜೆಪಿ ನೀಡಿದೆ.


Click the Play button to hear this message in audio format

ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳನ್ನು ಈ ಹಿಂದೆ ಟೀಕಿಸಿದ್ದ ಬಿಜೆಪಿ, ಇದೀಗ ತಮಿಳುನಾಡು ವಿಧಾನಸಭಾ ಚುನಾವಣೆಗೆ ಬಿಡುಗಡೆ ಮಾಡಿರುವ ತನ್ನ ಪ್ರಣಾಳಿಕೆಯಲ್ಲಿ ಉಚಿತ ಯೋಜನೆಗಳ ಭರವಸೆಯನ್ನು ನೀಡಿದೆ. ಮಂಗಳವಾರ ಪ್ರಣಾಳಿಕೆ ಪ್ರಕಟಿಸಿರುವ ಪಕ್ಷವು, ನೇರ ನಗದು ವರ್ಗಾವಣೆ ಸೇರಿದಂತೆ ಹಲವಾರು ಕಲ್ಯಾಣ ಕಾರ್ಯಕ್ರಮಗಳನ್ನು ಘೋಷಿಸುವ ಮೂಲಕ ಮತದಾರರನ್ನು ಸೆಳೆಯಲು ಮುಂದಾಗಿದೆ.

ಪ್ರತೀ ಕುಟುಂಬಕ್ಕೆ 10 ಸಾವಿರ ರೂ. ಘೋಷಣೆ

ಬಿಜೆಪಿ ತನ್ನ ತಮಿಳುನಾಡು ಚುನಾವಣಾ ಪ್ರಣಾಳಿಕೆಯಲ್ಲಿ ಮಹಿಳೆಯರು ಮತ್ತು ರೈತರನ್ನು ಗುರಿಯಾಗಿಸಿಕೊಂಡು ಹಲವು ಜನಪ್ರಿಯ ಯೋಜನೆಗಳನ್ನು ಘೋಷಿಸಿದೆ. ಮಹಿಳೆಯರಿಗೆ ಮಾಸಿಕ 2,000 ರೂ. ಭತ್ಯೆ ಮತ್ತು ಪ್ರತಿ ಮನೆಗೆ 10,000 ರೂ.ಗಳ ಒಂದು ಬಾರಿಯ ಆರ್ಥಿಕ ಸಹಾಯದ ಭರವಸೆ ನೀಡಲಾಗಿದ್ದು, ಹೆಚ್ಚುತ್ತಿರುವ ಜೀವನ ವೆಚ್ಚವನ್ನು ಸರಿದೂಗಿಸಲು ಪೊಂಗಲ್, ದೀಪಾವಳಿ ಮತ್ತು ತಮಿಳು ಹೊಸ ವರ್ಷದಂದು ವರ್ಷಕ್ಕೆ ಒಟ್ಟು ಮೂರು ಎಲ್‌ಪಿಜಿ ಸಿಲಿಂಡರ್‌ಗಳನ್ನು ಉಚಿತವಾಗಿ ನೀಡಲು ನಿರ್ಧರಿಸಲಾಗಿದೆ. ಇನ್ನು ರೈತರಿಗಾಗಿ 'ಉಜವೇ ಥಾಯ್' ಯೋಜನೆಯನ್ನು ಜಾರಿಗೆ ತರಲು ಉದ್ದೇಶಿಸಲಾಗಿದ್ದು, ಕೇಂದ್ರದ ಪಿಎಂ-ಕಿಸಾನ್ ಯೋಜನೆಯಡಿ ನೀಡಲಾಗುವ ಹಣಕ್ಕೆ ಹೆಚ್ಚುವರಿಯಾಗಿ 3,000 ರೂ.ಗಳನ್ನು ಸೇರಿಸಿ, ರೈತರ ವಾರ್ಷಿಕ ಆರ್ಥಿಕ ನೆರವನ್ನು ಒಟ್ಟು 9,000 ರೂ.ಗಳಿಗೆ ಏರಿಸುವುದಾಗಿ ಬಿಜೆಪಿ ನಾಯಕರು ಪ್ರಣಾಳಿಕೆಯಲ್ಲಿ ತಿಳಿಸಿದ್ದಾರೆ.

ಮಹಿಳಾ ಸುರಕ್ಷತೆಗೆ ಒತ್ತು

ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ಅಪರಾಧಗಳನ್ನು ನಿಭಾಯಿಸಲು ಶೂನ್ಯ ಎಫ್‌ಐಆರ್ ವರದಿ, ಲೈಂಗಿಕ ಅಪರಾಧಗಳು ಸೇರಿದಂತೆ ಘೋರ ಅಪರಾಧಗಳಿಗೆ ವಿಶೇಷ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸುವ ಭರವಸೆ ನೀಡಿದೆ. ಮಾದಕವಸ್ತು ಕಳ್ಳಸಾಗಣೆ ಮತ್ತು ಮಾದಕ ದ್ರವ್ಯ ದುರುಪಯೋಗವನ್ನು ಎದುರಿಸಲು ವಿಶೇಷ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆಯ ಬೆಂಬಲದೊಂದಿಗೆ ತಮಿಳುನಾಡು ಮಾದಕ ದ್ರವ್ಯ ನಿರ್ಮೂಲನಾ ಇಲಾಖೆಯನ್ನು ಸ್ಥಾಪಿಸುವ ಪ್ರಸ್ತಾಪವನ್ನು ಪಕ್ಷವು ಮುಂದಿಟ್ಟಿದೆ.

ತಿರುಪುರಕುಂದ್ರಂ ಬೆಟ್ಟದ ತುದಿಯಲ್ಲಿ ಕಾರ್ತಿಗೈ ದೀಪವನ್ನು ಬೆಳಗಿಸುವ ಸಂಪ್ರದಾಯದ ಪುನರಾರಂಭ ಮತ್ತು ರಕ್ಷಣೆಯನ್ನು ಖಚಿತಪಡಿಸಿಕೊಳ್ಳುವುದಾಗಿ ಬಿಜೆಪಿ ಹೇಳಿದೆ. ಭವಿಷ್ಯದ ಪೀಳಿಗೆಗೆ ಈ ಪದ್ಧತಿಯನ್ನು ಸಂರಕ್ಷಿಸಲು ಬದ್ಧವಾಗಿದೆ ಎಂದು ತಿಳಿಸಿದ್ದು, ಧಾರ್ಮಿಕ ಕಾರ್ಯಗಳ ಭರವಸೆ ಮೂಲಕ ಮತ ಸೆಳೆಯಲು ಮುಂದಾಗಿದೆ.

ಡಿಎಂಕೆ ವಿರುದ್ಧ ವಾಗ್ದಾಳಿ

ಪ್ರಣಾಳಿಕೆ ಬಿಡುಗಡೆ ನಂತರ ಕೇಂದ್ರ ಸಚಿವ ಜೆ.ಪಿ. ನಡ್ಡಾ ಮಾತನಾಡಿ, " ಡಿಎಂಕೆ ಸರ್ಕಾರ ತಮಿಳುನಾಡಿನ ಜನರಿಗೆ ದ್ರೋಹ ಬಗೆದಿದೆ. ಜನರ ಸಂಪ್ರದಾಯ, ನಾಡಿಮಿಡಿತದ ಬಗ್ಗೆ ತಿಳಿದುಕೊಳ್ಳುವ ಬದಲು ಅವರ ವಿರುದ್ದವಾಗಿಯೇ ಅಧಿಕಾರ ನಡೆಸಿದೆ. ಜನರು ಈ ಅಪವಿತ್ರ ಮೈತ್ರಿಯನ್ನು ಈ ಚುನಾವಣೆಯಲ್ಲಿ ತಿರಸ್ಕರಿಸುತ್ತಾರೆ" ಎಂದು ಹೇಳಿದರು.

ಕಳೆದ ಐದು ವರ್ಷಗಳಲ್ಲಿ 8 ಸಾವಿರಕ್ಕೂ ಹೆಚ್ಚು ಕೊಲೆಗಳಾಗಿವೆ. ಪ್ರಸ್ತುತ ಡಿಎಂಕೆ ಸರ್ಕಾರದ ಆಡಳಿತದಲ್ಲಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ನಡೆಸಿರುವ ಅಪರಾಧಗಳು ಶೇ. 56 ರಷ್ಟು ಹೆಚ್ಚಾಗಿದೆ. ಭ್ರಷ್ಟಾಚಾರ ಮಿತಿ ಮೀರಿದೆ. 2021 ರ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳಲ್ಲಿ ಕೇವಲ ಶೇ.70 ರಷ್ಟು ಮಾತ್ರ ಈಡೇರಿಸಲಾಗಿದೆ ಎಂದರು.

Read More
Next Story