
ಸಾಂದರ್ಭಿಕ ಚಿತ್ರ
ಯೂಟ್ಯೂಬ್ ನೋಡಿ ಮನೆಯಲ್ಲೇ ಹೆರಿಗೆ ಮಾಡಲು ಹೋಗಿ ಎಂಜಿನಿಯರ್ ಸಾವು; ಪತಿಯ ವಿರುದ್ಧ ಕೇಸ್
ಕುನ್ನತ್ತೂರಿನ ಬ್ಲಾಕ್ ವೈದ್ಯಕೀಯ ಅಧಿಕಾರಿ ನೀಡಿದ ದೂರಿನ ಆಧಾರದ ಮೇಲೆ ಉತ್ತುಕುಳಿ ಪೊಲೀಸರು ಶಶಿಕಲಾ ಪತಿ ಕೋಲಂತೈಸಾಮಿ ವಿರುದ್ಧ ರಾಷ್ಟ್ರೀಯ ವೈದ್ಯಕೀಯ ಆಯೋಗ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಸಾಪರಾಧ ನರಹತ್ಯೆ ಪ್ರಕರಣ ದಾಖಲಿಸಿದ್ದಾರೆ.
ಇಂಟರ್ನೆಟ್ ಮತ್ತು ಯೂಟ್ಯೂಬ್ ವಿಡಿಯೋಗಳನ್ನು ನೋಡಿ ಆಸ್ಪತ್ರೆಯ ಬದಲಿಗೆ ಮನೆಯಲ್ಲಿಯೇ ನೈಸರ್ಗಿಕ ಹೆರಿಗೆ ಮಾಡಿಸಲು ಹೋಗಿ, ತೀವ್ರ ರಕ್ತಸ್ರಾವದಿಂದ 32 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಮಹಿಳೆಯೊಬ್ಬರು ಮೃತಪಟ್ಟಿರುವ ಆಘಾತಕಾರಿ ಘಟನೆ ತಮಿಳುನಾಡಿನ ತಿರುಪ್ಪೂರು ಜಿಲ್ಲೆಯಲ್ಲಿ ನಡೆದಿದೆ.
ತಿರುಪ್ಪೂರು ಜಿಲ್ಲೆಯ ಉತ್ತುಕುಲಿ ತಾಲ್ಲೂಕಿನ ಪುಂಜೈ ತಲವೈಪಾಳಯಂ ಗ್ರಾಮದ ನಿವಾಸಿ ಶಶಿಕಲಾ (32) ಮೃತಪಟ್ಟ ದುರ್ದೈವಿ. ಸದ್ಯ ನವಜಾತ ಶಿಶು ಆರೋಗ್ಯವಾಗಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಮೃತರ ಪತಿ ಕೋಲಂತೈಸಾಮಿ ವಿರುದ್ಧ ಪೊಲೀಸರು ಕೊಲೆಯಲ್ಲದ ನರಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನೆಯ ಹಿನ್ನೆಲೆ
ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ಶಶಿಕಲಾಗೆ ಜೂ. 24 ರಂದು ಮುಂಜಾನೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಆದರೆ, ಆಕೆಯ ಪತಿ ಮತ್ತು ಅತ್ತೆ ಆಸ್ಪತ್ರೆಗೆ ಕರೆದೊಯ್ಯುವ ಬದಲಿಗೆ, ಯೂಟ್ಯೂಬ್ ವಿಡಿಯೋಗಳು ಮತ್ತು ಇಂಟರ್ನೆಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಸಹಾಯದಿಂದ ಮನೆಯಲ್ಲಿಯೇ ಹೆರಿಗೆ ಮಾಡಿಸಲು ನಿರ್ಧರಿಸಿದ್ದಾರೆ. ವಿಡಿಯೋ ನೋಡುತ್ತಲೇ ಮನೆಯವರು ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದು, ಮಗು ಕೂಡ ಜನಿಸಿದೆ.
ಆರಂಭದಲ್ಲಿ ಶಶಿಕಲಾ ಆರೋಗ್ಯವಾಗಿಯೇ ಇದ್ದರು. ಆದರೆ, ಹೆರಿಗೆಯ ನಂತರ ಗರ್ಭಾಶಯದಿಂದ ಜರಾಯು ಬೇರ್ಪಡದ ಕಾರಣ ಆಕೆಗೆ ತೀವ್ರ ರಕ್ತಸ್ರಾವ ಆರಂಭವಾಗಿದೆ. ಪರಿಸ್ಥಿತಿ ಕೈಮೀರುತ್ತಿರುವುದನ್ನು ಕಂಡು ಗಾಬರಿಗೊಂಡ ಕುಟುಂಬಸ್ಥರು ತಕ್ಷಣ ಆಕೆಯನ್ನು ಪೆರುಂಡುರೈನ ಸರ್ಕಾರಿ ಈರೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಜೂ. 25 ರಂದು ಕೊಯಮತ್ತೂರಿನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಜೂ. 28 ರಂದು ಶಶಿಕಲಾ ಕೊನೆಯುಸಿರೆಳೆದಿದ್ದರು.
ನಿರ್ಧಾರದ ಹಿಂದೆ ಇತ್ತೇ ಹಳೇ ಆಘಾತ?
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಶಶಿಕಲಾ ಮತ್ತು ಅವರ ಪತಿ ಉದ್ದೇಶಪೂರ್ವಕವಾಗಿಯೇ ಮನೆಯಲ್ಲಿ ನೈಸರ್ಗಿಕ ಹೆರಿಗೆಯನ್ನು ಆಯ್ಕೆ ಮಾಡಿಕೊಂಡಿದ್ದರು. 2020 ರಲ್ಲಿ ಶಶಿಕಲಾಗೆ ಮೊದಲ ಗರ್ಭಾವಸ್ಥೆಯಲ್ಲಿ ಸಿಸೇರಿಯನ್ ಹೆರಿಗೆಯಾಗಿತ್ತು. ಈ ಶಸ್ತ್ರಚಿಕಿತ್ಸೆಯು ಅವರ ಮೇಲೆ ತೀವ್ರ ಮಾನಸಿಕ ಪರಿಣಾಮ ಬೀರಿದ್ದರಿಂದ, ಅವರು ಅಲೋಪತಿ ಚಿಕಿತ್ಸೆ ಮತ್ತು ಆಸ್ಪತ್ರೆಗಳ ಬಗ್ಗೆ ಒಲವು ಕಳೆದುಕೊಂಡಿದ್ದರು. ಮತ್ತೊಮ್ಮೆ ಶಸ್ತ್ರಚಿಕಿತ್ಸೆಯ ಅಪಾಯಕ್ಕೆ ಸಿಲುಕಲು ಇಷ್ಟಪಡದ ಕಾರಣ, ಈ ಬಾರಿ ಹೇಗಾದರೂ ಮಾಡಿ ನೈಸರ್ಗಿಕ ಹೆರಿಗೆ ಮಾಡಿಕೊಳ್ಳಬೇಕೆಂದು ನಿರ್ಧರಿಸಿದ್ದರು ಎನ್ನಲಾಗಿದೆ. "ಕುಟುಂಬದವರು ನೈಸರ್ಗಿಕ ಹೆರಿಗೆಯನ್ನೇ ಬಯಸಿದ್ದರು. ಈ ಕಾರಣಕ್ಕಾಗಿಯೇ ಅವರು ಗರ್ಭಾವಸ್ಥೆಯ ಅವಧಿಯಲ್ಲಿ ನಿಯಮಿತ ತಪಾಸಣೆಗಾಗಿ ಸರ್ಕಾರಿ ಆರೋಗ್ಯ ರಕ್ಷಣಾ ತಂಡಗಳೊಂದಿಗೆ ಸಂಪರ್ಕದಲ್ಲಿರಲಿಲ್ಲ. ಈ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪತಿಯ ವಿರುದ್ಧ ಕೊಲೆ ಪ್ರಕರಣ ದಾಖಲು
ಕುನ್ನತ್ತೂರಿನ ಬ್ಲಾಕ್ ವೈದ್ಯಕೀಯ ಅಧಿಕಾರಿ ನೀಡಿದ ದೂರಿನ ಆಧಾರದ ಮೇಲೆ ಉತ್ತುಕುಳಿ ಪೊಲೀಸರು ಶಶಿಕಲಾ ಪತಿ ಕೋಲಂತೈಸಾಮಿ ವಿರುದ್ಧ ರಾಷ್ಟ್ರೀಯ ವೈದ್ಯಕೀಯ ಆಯೋಗ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಸಾಪರಾಧ ನರಹತ್ಯೆ ಪ್ರಕರಣ ದಾಖಲಿಸಿದ್ದಾರೆ. ಆನ್‌ಲೈನ್ ಜ್ಞಾನದ ಜೊತೆಗೆ ಈ ಪ್ರಕ್ರಿಯೆಯಲ್ಲಿ ಬೇರೆ ಯಾವುದೇ ಅನಧಿಕೃತ ವ್ಯಕ್ತಿಗಳು ಭಾಗಿಯಾಗಿದ್ದಾರೆಯೇ ಎಂಬ ಕೋನದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮತ್ತೊಂದೆಡೆ, ರಾಜ್ಯ ಆರೋಗ್ಯ ಇಲಾಖೆಯೂ ಪ್ರತ್ಯೇಕ ತನಿಖೆ ಆರಂಭಿಸಿದೆ.
ತಮಿಳುನಾಡಿನಲ್ಲಿ ಚರ್ಚೆ ಗ್ರಾಸವಾದ ಘಟನೆ
ಶೇ. 99.9 ರಷ್ಟು ಸಾಂಸ್ಥಿಕ ಹೆರಿಗೆ ದರವನ್ನು ಹೊಂದಿರುವ ಹಾಗೂ ದೇಶದಲ್ಲೇ ಅತ್ಯಂತ ಕಡಿಮೆ ಹೆರಿಗೆ ಮರಣ ಪ್ರಮಾಣ (ಪ್ರತಿ 1 ಲಕ್ಷ ಜೀವಂತ ಜನನಗಳಿಗೆ 39 ಸಾವು) ಹೊಂದಿರುವ ತಮಿಳುನಾಡಿನಂತಹ ಮುಂಚೂಣಿಯ ರಾಜ್ಯದಲ್ಲಿ ಇಂತಹ ಘಟನೆ ನಡೆದಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ. ಅಂತರ್ಜಾಲದ ಅರೆಬರೆ ಜ್ಞಾನ ಮತ್ತು ಯೂಟ್ಯೂಬ್ ವೀಡಿಯೋಗಳನ್ನು ನಂಬಿ ಪ್ರಾಣ ಪಣಕ್ಕಿಡಬೇಡಿ ಎಂದು ವೈದ್ಯಕೀಯ ವಲಯ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

