Tamil Nadu politics: AIADMK inclined to support Vijays TVK
x

ಟಿವಿಕೆ ಮುಖ್ಯಸ್ಥ ನಟ ವಿಜಯ್‌ ಹಾಗೂ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ

ತಮಿಳುನಾಡು ರಾಜಕೀಯ: ವಿಜಯ್ ಅವರ ಟಿವಿಕೆಗೆ ಬೆಂಬಲ ನೀಡಲು ಎಐಎಡಿಎಂಕೆ ಒಲವು

ಚುನಾವಣೆಯಲ್ಲಿ 47 ಸ್ಥಾನಗಳನ್ನು ಪಡೆದು ಮೂರನೇ ಸ್ಥಾನಕ್ಕೆ ಕುಸಿದಿರುವ ಎಐಎಡಿಎಂಕೆ, ಬದಲಾಗುತ್ತಿರುವ ರಾಜಕೀಯ ಸನ್ನಿವೇಶದಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸಿಕೊಳ್ಳಲು ಈ ನಡೆಯನ್ನು ಅನುಸರಿಸುತ್ತಿದೆ ಎನ್ನಲಾಗಿದೆ.


Click the Play button to hear this message in audio format

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ದಳಪತಿ ವಿಜಯ್ ನೇತೃತ್ವದ ತಮಿಳಗಂ ವೆಟ್ರಿ ಕಳಗಂ (ಟಿವಿಕೆ) ಸರ್ಕಾರ ರಚನೆಗೆ ಕಸರತ್ತು ತೀವ್ರಗೊಳಿಸಿದೆ. ಬಹುಮತಕ್ಕೆ ಕೇವಲ 10 ಸ್ಥಾನಗಳ ಕೊರತೆ ಎದುರಿಸುತ್ತಿರುವ ಟಿವಿಕೆಗೆ ಬೆಂಬಲ ನೀಡಲು ಎಐಎಡಿಎಂಕೆ ನಾಯಕತ್ವ ಒಲವು ತೋರಿದೆ. ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ (ಇಪಿಎಸ್) ಅವರ ನಿವಾಸಕ್ಕೆ ಟಿವಿಕೆ ನಾಯಕರು ಅಧಿಕೃತ ಪತ್ರ ರವಾನಿಸಿ ಬೆಂಬಲ ಕೋರಿದ್ದಾರೆ.

ಸಿ.ವಿ. ಷಣ್ಮುಗಂ ಮತ್ತು ಎಸ್.ಪಿ. ವೇಲುಮಣಿ ಸೇರಿದಂತೆ ಎಐಎಡಿಎಂಕೆಯ ಹಿರಿಯ ನಾಯಕರು ಟಿವಿಕೆಗೆ ಬೆಂಬಲ ನೀಡುವ ಪರವಾಗಿದ್ದಾರೆ. ಆದರೆ, ಮೈತ್ರಿ ಸರ್ಕಾರದಲ್ಲಿ ನೇರವಾಗಿ ಭಾಗಿಯಾಗುವ ಬದಲು ಹೊರಗಿನಿಂದ ಬೆಂಬಲ ನೀಡುವ ಬಗ್ಗೆ ಪಕ್ಷದಲ್ಲಿ ಗಂಭೀರ ಚಿಂತನೆ ನಡೆದಿದೆ. ಚುನಾವಣೆಯಲ್ಲಿ 47 ಸ್ಥಾನಗಳನ್ನು ಪಡೆದು ಮೂರನೇ ಸ್ಥಾನಕ್ಕೆ ಕುಸಿದಿರುವ ಎಐಎಡಿಎಂಕೆ, ಬದಲಾಗುತ್ತಿರುವ ರಾಜಕೀಯ ಸನ್ನಿವೇಶದಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸಿಕೊಳ್ಳಲು ಈ ನಡೆಯನ್ನು ಅನುಸರಿಸುತ್ತಿದೆ ಎನ್ನಲಾಗಿದೆ.

ಮತ್ತೊಂದೆಡೆ, 5 ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್ ಪಕ್ಷ ಕೂಡ ವಿಜಯ್ ನೇತೃತ್ವದ ಟಿವಿಕೆಗೆ ಷರತ್ತುಬದ್ಧ ಬೆಂಬಲ ಘೋಷಿಸಿದೆ. ಸಂವಿಧಾನ ವಿರೋಧಿ ಕೋಮುವಾದಿ ಶಕ್ತಿಗಳನ್ನು ಮೈತ್ರಿಯಿಂದ ದೂರವಿಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. ಎಐಎಡಿಎಂಕೆ ಮತ್ತು ಟಿವಿಕೆ ನಡುವಿನ ಮೈತ್ರಿ ಮಾತುಕತೆಗಳ ಬೆನ್ನಲ್ಲೇ ಕಾಂಗ್ರೆಸ್ ನೀಡಿರುವ ಈ ಹೇಳಿಕೆಯು, ಎನ್‌ಡಿಎ ಜೊತೆ ಗುರುತಿಸಿಕೊಂಡಿದ್ದ ಪಕ್ಷಗಳಿಗೆ ನೀಡಿದ ಪರೋಕ್ಷ ಎಚ್ಚರಿಕೆ ಎಂದು ವಿಶ್ಲೇಷಿಸಲಾಗಿದೆ.

2026ರ ತಮಿಳುನಾಡು ಚುನಾವಣೆಯ ಸಂಕ್ಷಿಪ್ತ ಫಲಿತಾಂಶ

- ಒಟ್ಟು ಸ್ಥಾನಗಳು: 234 (ಬಹುಮತಕ್ಕೆ 118 ಸ್ಥಾನಗಳ ಅಗತ್ಯವಿದೆ).

- ಟಿವಿಕೆ (ವಿಜಯ್): 108 ಸ್ಥಾನಗಳು.

- ಡಿಎಂಕೆ: 59 ಸ್ಥಾನಗಳು.

- ಎಐಎಡಿಎಂಕೆ: 47 ಸ್ಥಾನಗಳು.

- ಕಾಂಗ್ರೆಸ್: 5 ಸ್ಥಾನಗಳು.

- ಪಿಎಂಕೆ: 4 ಸ್ಥಾನಗಳು.

- ಇತರೆ (ಸಿಪಿಐ, ವಿಸಿಕೆ, ಬಿಜೆಪಿ ಇತ್ಯಾದಿ): 11 ಸ್ಥಾನಗಳು.

Read More
Next Story