TVK Vijay | ಕೊನೆಗೂ ವಿಜಯ್‌ಗೆ ಒಲಿದ ಬಹುಮತ; ಕಾಂಗ್ರೆಸ್ ಹಾಗೂ ಎಡಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚನೆಗೆ ಸಜ್ಜು!
x

TVK Vijay | ಕೊನೆಗೂ ವಿಜಯ್‌ಗೆ ಒಲಿದ ಬಹುಮತ; ಕಾಂಗ್ರೆಸ್ ಹಾಗೂ ಎಡಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚನೆಗೆ ಸಜ್ಜು!

ತಮಿಳುನಾಡಿನಲ್ಲಿ ನಟ ವಿಜಯ್ ನೇತೃತ್ವದ TVK ಸರ್ಕಾರ ರಚನೆಗೆ ಹಾದಿ ಸುಗಮ. ಕಾಂಗ್ರೆಸ್, VCK ಮತ್ತು ಎಡಪಕ್ಷಗಳ ಬೆಂಬಲದೊಂದಿಗೆ 118 ಶಾಸಕರ ಬಲ ಪಡೆದ ವಿಜಯ್. ಇಂದು ರಾಜ್ಯಪಾಲರ ಭೇಟಿ ಸಾಧ್ಯತೆ.


ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ ಉಂಟಾಗಿದ್ದ ರಾಜಕೀಯ ಅನಿಶ್ಚಿತತೆಗೆ ಕೊನೆಗೂ ತೆರೆ ಬೀಳುವ ಲಕ್ಷಣಗಳು ಕಾಣಿಸುತ್ತಿವೆ. ನಟ ಹಾಗೂ ರಾಜಕಾರಣಿ ವಿಜಯ್ ನೇತೃತ್ವದ ಟಿವಿಕೆ (TVK) ಪಕ್ಷಕ್ಕೆ ಕಾಂಗ್ರೆಸ್, ವಿಸಿಕೆ (VCK), ಸಿಪಿಐ ಮತ್ತು ಸಿಪಿಐ(ಎಂ) ಪಕ್ಷಗಳು ಬೆಂಬಲ ಘೋಷಿಸಿವೆ. ಈ ಮೂಲಕ ವಿಜಯ್ ಅವರು ಬಹುಮತಕ್ಕೆ ಬೇಕಾದ ಮ್ಯಾಜಿಕ್ ನಂಬರ್ ದಾಟಿದ್ದು, ಸರ್ಕಾರ ರಚಿಸುವ ಹಕ್ಕು ಮಂಡಿಸಲು ಸಜ್ಜಾಗಿದ್ದಾರೆ.

ರಾಜಭವನದತ್ತ ವಿಜಯ್‌ ಪಯಣ:

ಕಳೆದ ಕೆಲವು ದಿನಗಳಿಂದ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರೊಂದಿಗೆ ಉಂಟಾಗಿದ್ದ ಬಿಕ್ಕಟ್ಟು ಈಗ ತಿಳಿಯಾದಂತೆ ಕಾಣುತ್ತಿದೆ. ಇಂದು ಸಂಜೆ 4:30ಕ್ಕೆ ವಿಜಯ್ ಅವರು ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ್ದು, ಪ್ರಮುಖ ವಿರೋಧ ಪಕ್ಷಗಳ ಬೆಂಬಲ ಪತ್ರದೊಂದಿಗೆ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ. ಇದೇ ವೇಳೆ ಬೆಂಬಲ ನೀಡಿದ ಪಕ್ಷಗಳು ಜಂಟಿ ಪತ್ರಿಕಾಗೋಷ್ಠಿ ನಡೆಸಿ ಅಧಿಕೃತ ಘೋಷಣೆ ಮಾಡುವ ಸಾಧ್ಯತೆಯಿದೆ.

ಸಂಖ್ಯಾಬಲದ ಲೆಕ್ಕಾಚಾರ ಹೀಗಿದೆ:

234 ಸದಸ್ಯರ ತಮಿಳುನಾಡು ವಿಧಾನಸಭೆಯಲ್ಲಿ ಸರ್ಕಾರ ರಚಿಸಲು 118 ಸ್ಥಾನಗಳ ಅಗತ್ಯವಿದೆ. ವಿಜಯ್ ಅವರ ಮೈತ್ರಿಕೂಟ ಈಗ ನಿಖರವಾಗಿ ಆ ಗುರಿಯನ್ನು ತಲುಪಿದೆ:

ಪಕ್ಷ ಶಾಸಕರ ಸಂಖ್ಯೆ

ಟಿವಿಕೆ (TVK)- 107

ಕಾಂಗ್ರೆಸ್- 05

ಸಿಪಿಐ (CPI)- 02

ಸಿಪಿಐ(ಎಂ) (CPI-M)- 02

ವಿಸಿಕೆ (VCK)- 02

ಒಟ್ಟು ಬಲ- 118

ದಿನವಿಡೀ ನಡೆದ ಆಂತರಿಕ ಸಭೆಗಳ ನಂತರ ಎಡಪಕ್ಷಗಳು ಮತ್ತು ವಿಸಿಕೆ ವಿಜಯ್ ಅವರಿಗೆ ಬೆಂಬಲ ನೀಡಲು ಒಪ್ಪಿಕೊಂಡಿವೆ. ಈ ಬೆಳವಣಿಗೆಯೊಂದಿಗೆ ತಮಿಳುನಾಡಿನಲ್ಲಿ ಹೊಸ ಯುಗ ಆರಂಭವಾಗುವ ಲಕ್ಷಣಗಳು ದಟ್ಟವಾಗಿವೆ.

Read More
Next Story