
Actor Vijay TVK | ತಮಿಳುನಾಡು ರಾಜಕೀಯ ಹೈಡ್ರಾಮಾ: ವಿಜಯ್ ಪಾರ್ಟಿ ಶಾಸಕರಿಂದ ರಾಜೀನಾಮೆ ಎಚ್ಚರಿಕೆ!
ತಮಿಳುನಾಡಿನಲ್ಲಿ ಸರ್ಕಾರ ರಚನೆಯ ಬಿಕ್ಕಟ್ಟು ತೀವ್ರಗೊಂಡಿದೆ. ನಟ ವಿಜಯ್ ಅವರ ಟಿವಿಕೆ ಪಕ್ಷವು 108 ಸ್ಥಾನ ಗೆದ್ದಿದ್ದರೂ ರಾಜ್ಯಪಾಲರು ಅವಕಾಶ ನಿರಾಕರಿಸಿದ್ದಾರೆ.
ತಮಿಳುನಾಡಿನಲ್ಲಿ ಸರ್ಕಾರ ರಚನೆಯ ಕಸರತ್ತು ತೀವ್ರಗೊಂಡಿದ್ದು, ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು ಸ್ಫೋಟಕ ನಿರ್ಧಾರವೊಂದನ್ನು ಪ್ರಕಟಿಸಿದೆ. ಒಂದು ವೇಳೆ ಡಿಎಂಕೆ (DMK) ಅಥವಾ ಎಐಎಡಿಎಂಕೆ (AIADMK) ಪಕ್ಷಗಳು ಅಡ್ಡಹಾದಿಯಲ್ಲಿ ಸರ್ಕಾರ ರಚಿಸಲು ಮುಂದಾದರೆ, ತಮ್ಮ ಪಕ್ಷದ ಎಲ್ಲಾ 108 ಶಾಸಕರು ರಾಜೀನಾಮೆ ನೀಡುವುದಾಗಿ ಟಿವಿಕೆ ಎಚ್ಚರಿಸಿದೆ.
108 ಸ್ಥಾನಗಳನ್ನು ಗೆದ್ದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಟಿವಿಕೆಯನ್ನು ಸರ್ಕಾರ ರಚಿಸಲು ಆಹ್ವಾನಿಸಲು ರಾಜ್ಯಪಾಲ ಆರ್.ವಿ. ಅರ್ಲೇಕರ್ ನಿರಾಕರಿಸಿದ್ದಾರೆ. ಬಹುಮತಕ್ಕೆ ಅಗತ್ಯವಿರುವ 118 ಶಾಸಕರ ಬೆಂಬಲ ಪತ್ರವನ್ನು ನೀಡುವಂತೆ ಅವರು ವಿಜಯ್ ಅವರಿಗೆ ಸೂಚಿಸಿದ್ದಾರೆ.
ಟಿವಿಕೆ ವಾದವೇನು?
ಬಹುಮತವನ್ನು ವಿಧಾನಸಭೆಯಲ್ಲೇ ಸಾಬೀತುಪಡಿಸಲು ಅವಕಾಶ ನೀಡಬೇಕು. ಪ್ರಮಾಣವಚನಕ್ಕೂ ಮುನ್ನವೇ ಬೆಂಬಲಿತರ ಪಟ್ಟಿ ಕೇಳುವುದು ಸಂವಿಧಾನ ಬಾಹಿರ ಎಂದು ವಿಜಯ್ ಪರಮಾಪ್ತರು ಮತ್ತು ಮೈತ್ರಿ ಪಕ್ಷಗಳಾದ ಕಾಂಗ್ರೆಸ್, ಸಿಪಿಐ ಮತ್ತು ವಿಸಿಕೆ (VCK) ವಾದಿಸಿವೆ.
ಏನಿದು ರಾಜೀನಾಮೆ ಎಚ್ಚರಿಕೆ?
ಮೂಲಗಳ ಪ್ರಕಾರ, ಒಂದು ವೇಳೆ ಜನಾದೇಶವನ್ನು ಕಡೆಗಣಿಸಿ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳು ಕೈಜೋಡಿಸಿ ಸರ್ಕಾರ ರಚಿಸಲು ಮುಂದಾದರೆ, ಟಿವಿಕೆಯ ಎಲ್ಲಾ 108 ಶಾಸಕರು ಸಾಮೂಹಿಕವಾಗಿ ರಾಜೀನಾಮೆ ನೀಡಲಿದ್ದಾರೆ. "ಜನರು ನಮಗೆ ಮತ ನೀಡಿದ್ದಾರೆ, ಅಧಿಕಾರದ ಆಸೆಗೆ ಬಿದ್ದು ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ಬಿಡುವುದಿಲ್ಲ" ಎಂಬುದು ವಿಜಯ್ ಪಡೆಯ ಕಡಕ್ ಸಂದೇಶ.
ಡಿಎಂಕೆ-ಎಐಎಡಿಎಂಕೆ ಮೈತ್ರಿ ಸಾಧ್ಯತೆ?
ವಿಜಯ್ ಅವರ ಜನಪ್ರಿಯತೆಯನ್ನು ಕಂಡು ಆತಂಕಗೊಂಡಿರುವ ಡಿಎಂಕೆ ಮತ್ತು ಎಐಎಡಿಎಂಕೆ ತೆರೆಮರೆಯಲ್ಲಿ ಕೈಜೋಡಿಸುತ್ತಿವೆ ಎಂಬ ಅನುಮಾನ ವ್ಯಕ್ತವಾಗಿದೆ. ಎಡಪ್ಪಾಡಿ ಪಳನಿಸ್ವಾಮಿ ಅವರಿಗೆ ಡಿಎಂಕೆ ಹೊರಗಿನಿಂದ ಬೆಂಬಲ ನೀಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ.
ವಿಜಯ್ ಒಮ್ಮೆ ಅಧಿಕಾರಕ್ಕೆ ಬಂದರೆ, ಅವರನ್ನು ಕೆಳಗಿಳಿಸುವುದು ಅಸಾಧ್ಯ. ಅವರು ದಂತಕಥೆ ಎಂ.ಜಿ. ರಾಮಚಂದ್ರನ್ ಅವರಂತೆ ಸುದೀರ್ಘ ಕಾಲ ಆಡಳಿತ ನಡೆಸಬಹುದು ಎಂದು ಡಿಎಂಕೆಯ ಯುವ ನಾಯಕರು (ಉದಯನಿಧಿ ಸ್ಟಾಲಿನ್ ಬಣ) ಆತಂಕ ವ್ಯಕ್ತಪಡಿಸಿದ್ದಾರೆ.
ನ್ಯಾಯಾಲಯದ ಮೆಟ್ಟಿಲೇರಲು ಸಿದ್ಧತೆ: ರಾಜ್ಯಪಾಲರ ನಿರ್ಧಾರವನ್ನು ವಿರೋಧಿಸಿ ಟಿವಿಕೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಯೋಜಿಸುತ್ತಿದೆ. ಸದ್ಯ ಟಿವಿಕೆಗೆ ಕಾಂಗ್ರೆಸ್‌ನ 5 ಶಾಸಕರ ಬೆಂಬಲವಿದ್ದು, ಬಹುಮತಕ್ಕೆ ಇನ್ನೂ 10 ಸ್ಥಾನಗಳ ಅಗತ್ಯವಿದೆ. ಡಿಎಂಕೆ ತನ್ನ ಎಲ್ಲಾ ಶಾಸಕರನ್ನು ಮೇ 10ರವರೆಗೆ ಚೆನ್ನೈನಲ್ಲೇ ಇರುವಂತೆ ಸೂಚಿಸಿದೆ. ಎಐಎಡಿಎಂಕೆ ಕೂಡ "ಕಾದು ನೋಡುವ" ತಂತ್ರಕ್ಕೆ ಮೊರೆ ಹೋಗಿದ್ದು, ಮುಂದಿನ ಎರಡು ದಿನಗಳು ತಮಿಳುನಾಡು ರಾಜಕಾರಣದಲ್ಲಿ ಅತ್ಯಂತ ನಿರ್ಣಾಯಕವಾಗಿವೆ.

