ತ.ನಾಡಿನ 234 ಶಾಸಕರಿಗೆ ಕಾರು; ತಿಂಗಳಿಗೆ 75 ಸಾವಿರ ರೂ. ಭತ್ಯೆ ಘೋಷಿಸಿದ ಸಿಎಂ ವಿಜಯ್‌
x

ಶಾಸಕರಿಗೆ ವಿಜಯ್ ಸರ್ಕಾರದ ಬಂಪರ್ ಗಿಫ್ಟ್;

ತ.ನಾಡಿನ 234 ಶಾಸಕರಿಗೆ ಕಾರು; ತಿಂಗಳಿಗೆ 75 ಸಾವಿರ ರೂ. ಭತ್ಯೆ ಘೋಷಿಸಿದ ಸಿಎಂ ವಿಜಯ್‌

ತಮಿಳುನಾಡು ಸರ್ಕಾರದ ಶಾಸಕರಿಗೆ ಕಾರು ನೀಡುವ ಘೋಷಣೆಗೆ ಆಡಳಿತ ಪಕ್ಷದ ಶಾಸಕರು ಸ್ವಾಗತ ವ್ಯಕ್ತಪಡಿಸಿದ್ದಾರೆ. ಆದರೆ ಹೆಚ್ಚುವರಿ ಸರ್ಕಾರಿ ವೆಚ್ಚದ ಬಗ್ಗೆ ಡಿಎಂಕೆ ಆಕ್ಷೇಪಿಸಿದೆ.


Click the Play button to hear this message in audio format

ಕ್ಷೇತ್ರದ ಜನರ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಆಲಿಸಿ ಪರಿಹರಿಸಲು ಅನುಕೂಲವಾಗುವಂತೆ ರಾಜ್ಯದ ಎಲ್ಲಾ 234 ಶಾಸಕರಿಗೂ ಸರ್ಕಾರಿ ಕಾರು ನೀಡಲು ತಮಿಳುನಾಡು ಮುಖ್ಯಮಂತ್ರಿ ವಿಜಯ್ ಘೋಷಿಸಿದ್ದಾರೆ. ಇದರ ಜತೆಗೆ ವಾಹನದ ಚಾಲಕ, ಇಂಧನ ಹಾಗೂ ನಿರ್ವಹಣಾ ವೆಚ್ಚಕ್ಕಾಗಿ ಪ್ರತಿ ಶಾಸಕರಿಗೆ ತಿಂಗಳಿಗೆ 75 ಸಾವಿರ ರೂ. ಭತ್ಯೆ ನೀಡುವುದಾಗಿ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ಶಾಸಕರಿಗೆ ಕ್ಷೇತ್ರಗಳಲ್ಲಿ ನಿರಂತರವಾಗಿ ಸಂಚರಿಸಿ ಜನರ ಸಮಸ್ಯೆಗಳನ್ನು ಆಲಿಸುವ ಅಗತ್ಯವಿದೆ. ಸರ್ಕಾರಿ ವಾಹನ ಒದಗಿಸುವುದರಿಂದ ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗಲಿದೆ ಎಂದು ಮುಖ್ಯಮಂತ್ರಿ ವಿಜಯ್ ಹೇಳಿದ್ದಾರೆ. ಈ ವ್ಯವಸ್ಥೆ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಭ್ರಷ್ಟಾಚಾರಮುಕ್ತ ಸೇವೆಗೆ ಸಹಕಾರಿಯಾಗಲಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

ಕಾರ್ಯದರ್ಶಿ ನೇಮಕಕ್ಕೂ 25 ಸಾವಿರ ರೂ.

ಶಾಸಕರಿಗೆ ವಾಹನ ಸೌಲಭ್ಯದ ಜತೆಗೆ ಅಧಿಕೃತ ಕೆಲಸಗಳಿಗಾಗಿ ಕಾರ್ಯದರ್ಶಿಯನ್ನು ನೇಮಿಸಿಕೊಳ್ಳಲು ರಾಜ್ಯ ಸರ್ಕಾರದಿಂದ 25 ಸಾವಿರ ರೂ. ಅನುದಾನ ನೀಡುವುದಾಗಿ ಘೋಷಿಸಲಾಗಿದೆ. ಕ್ಷೇತ್ರದ ಕೆಲಸ, ಸರ್ಕಾರಿ ದಾಖಲೆಗಳು ಹಾಗೂ ಜನರ ಅಹವಾಲುಗಳಿಗೆ ಸಂಬಂಧಿಸಿದ ಕಾರ್ಯಗಳನ್ನು ನಿರ್ವಹಿಸಲು ಈ ನೆರವು ಬಳಸಿಕೊಳ್ಳಬಹುದು.

ಪ್ರಸ್ತುತ ವಿಧಾನಸಭೆಯಲ್ಲಿ ಮೊದಲ ಬಾರಿಗೆ ಆಯ್ಕೆಯಾಗಿರುವ ಹಲವು ಶಾಸಕರು ಸರಳ ಹಿನ್ನೆಲೆಯಿಂದ ಬಂದವರಾಗಿದ್ದಾರೆ. ಜನರ ಪ್ರತಿನಿಧಿಗಳಾಗಿ ತಮ್ಮ ಕರ್ತವ್ಯ ನಿರ್ವಹಿಸಲು ಅಗತ್ಯವಿರುವ ಮೂಲಸೌಕರ್ಯವನ್ನು ಅವರಿಗೆ ಒದಗಿಸಬೇಕಿದೆ ಎಂದು ವಿಜಯ್ ಹೇಳಿದ್ದಾರೆ.

ಶಾಸಕರ ಮನವಿಯ ಬಳಿಕ ಘೋಷಣೆ

ಶಾಸಕರಿಗೆ ಅಗತ್ಯ ಲಾಜಿಸ್ಟಿಕ್ಸ್‌ ಸೌಲಭ್ಯವಿಲ್ಲದೆ ಕ್ಷೇತ್ರದ ಕೆಲಸಗಳನ್ನು ಸಮರ್ಪಕವಾಗಿ ನಿರ್ವಹಿಸಲು ಕಷ್ಟವಾಗುತ್ತಿದೆ ಎಂದು ವಿಐಸಿಕೆ ಶಾಸಕ ಜ್ಯೋತಿಮಣಿ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದರು. ಶಾಸಕರಿಗೆ ಸರ್ಕಾರಿ ಕಾರು ಒದಗಿಸುವಂತೆ ಅವರು ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ಮುಖ್ಯಮಂತ್ರಿ ವಿಜಯ್ ಈ ಮಹತ್ವದ ಘೋಷಣೆ ಮಾಡಿದ್ದಾರೆ.

ಸರ್ಕಾರದ ನಿರ್ಧಾರವನ್ನು ಆಡಳಿತ ಪಕ್ಷದ ಶಾಸಕರು ಸ್ವಾಗತಿಸಿದ್ದಾರೆ. ಟಿವಿಕೆ ಶಾಸಕ ಸಿಂಧು ವಿಧಾನಸಭೆಯಲ್ಲಿ ಎಂಜಿಆರ್ ಅವರ ಹಾಡನ್ನು ಹಾಡುವ ಮೂಲಕ ಮುಖ್ಯಮಂತ್ರಿಗೆ ಧನ್ಯವಾದ ಅರ್ಪಿಸಿದರು. ಇತರ ಶಾಸಕರು ಮೇಜು ತಟ್ಟಿ ನಿರ್ಧಾರಕ್ಕೆ ಬೆಂಬಲ ವ್ಯಕ್ತಪಡಿಸಿದರು.

ಟಿವಿಕೆ ಮಿತ್ರಪಕ್ಷದ ಕಾಂಗ್ರೆಸ್ ಶಾಸಕ ತಾರಕೈ ಕತ್‌ಬರ್ಟ್ ಕೂಡ ಘೋಷಣೆಯನ್ನು ಸ್ವಾಗತಿಸಿದ್ದು, ಈ ನಿರ್ಧಾರದಿಂದ ಶಾಸಕರು ಸಂತಸಗೊಂಡಿದ್ದಾರೆ ಎಂದು ಹೇಳಿದ್ದಾರೆ. ಆಡಳಿತ ಪಕ್ಷದ ಶಾಸಕರಷ್ಟೇ ಅಲ್ಲದೆ ಪ್ರತಿಪಕ್ಷದ ಶಾಸಕರೂ ಈ ಸೌಲಭ್ಯದಿಂದ ಸಂತೋಷಪಡಲಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಉದ್ಯೋಗ ಸೃಷ್ಟಿಗೂ ಸಹಕಾರಿ: ಸಚಿವ

ಶಾಲಾ ಶಿಕ್ಷಣ ಸಚಿವ ರಾಜ್ ಮೋಹನ್ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಶಾಸಕರಿಗೆ ತಮ್ಮ ಕರ್ತವ್ಯ ನಿರ್ವಹಿಸಲು ಅನುಕೂಲವಾಗುವುದರ ಜತೆಗೆ ಚಾಲಕರು ಮತ್ತು ಕಾರ್ಯದರ್ಶಿಗಳ ನೇಮಕದ ಮೂಲಕ ಉದ್ಯೋಗಾವಕಾಶಗಳೂ ಸೃಷ್ಟಿಯಾಗಲಿವೆ ಎಂದು ಹೇಳಿದ್ದಾರೆ.

ಸರ್ಕಾರದ ನಿರ್ಧಾರಕ್ಕೆ ಡಿಎಂಕೆ ವಿರೋಧ

ಆದರೆ ಪ್ರತಿಪಕ್ಷ ಡಿಎಂಕೆ ಸರ್ಕಾರದ ಘೋಷಣೆಯನ್ನು ತೀವ್ರವಾಗಿ ವಿರೋಧಿಸಿದೆ. ಎಲ್ಲಾ 234 ಶಾಸಕರಿಗೂ ಕಾರು ನೀಡುವುದು ಹಾಗೂ ಇಂಧನ, ಚಾಲಕ ಮತ್ತು ನಿರ್ವಹಣೆಗೆ ಹೆಚ್ಚುವರಿ ಭತ್ಯೆ ನೀಡುವುದರಿಂದ ರಾಜ್ಯದ ಬೊಕ್ಕಸಕ್ಕೆ ದೊಡ್ಡ ಹೊರೆಯಾಗಲಿದೆ ಎಂದು ಡಿಎಂಕೆ ವಕ್ತಾರ ಎ. ಶರವಣನ್ ಟೀಕಿಸಿದ್ದಾರೆ.

ಶಾಸಕರಿಗೆ ಇಂತಹ ಸೌಲಭ್ಯಗಳನ್ನು ನೀಡುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿರುವ ಡಿಎಂಕೆ, ಸರ್ಕಾರ ಅನಗತ್ಯ ವೆಚ್ಚಕ್ಕೆ ಮುಂದಾಗಿದೆ ಎಂದು ಆರೋಪಿಸಿದೆ. ಸರ್ಕಾರದ ಈ ನಿರ್ಧಾರ ಆಡಳಿತಾತ್ಮಕ ಸೌಲಭ್ಯವೇ ಅಥವಾ ರಾಜ್ಯದ ಹಣದ ಮೇಲಿನ ಹೆಚ್ಚುವರಿ ಹೊರೆಯೇ ಎಂಬ ಚರ್ಚೆ ಇದೀಗ ತಮಿಳುನಾಡಿನಲ್ಲಿ ಆರಂಭವಾಗಿದೆ.

Read More
Next Story