
ಟಿವಿಕೆ ಮುಖ್ಯಸ್ಥ ವಿಜಯ್ ಹಾಗೂ ಎಎಂಎಂಕೆ ಮುಖ್ಯಸ್ಥ ಟಿ.ಟಿ.ವಿ. ದಿನಕರನ್
ಎಂಎಲ್‌ಎ ಬೆಂಬಲ ಪತ್ರ ನಕಲಿ, ವಿಜಯ್ ಅವರ ಟಿ.ವಿ.ಕೆ ವಿರುದ್ಧ ಪೊಲೀಸ್ ಮೆಟ್ಟಿಲೇರಿದ ಟಿ.ಟಿ.ವಿ. ದಿನಕರನ್
ದಿನಕರನ್ ಅವರ ಆರೋಪದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಟಿ.ವಿ.ಕೆ ಪಕ್ಷ, ಶಾಸಕ ಕಾಮರಾಜ್ ಅವರು ಸ್ವತಃ ತಾವೇ ಕುಳಿತು ಬೆಂಬಲ ಪತ್ರ ಬರೆಯುತ್ತಿರುವ ವಿಡಿಯೋವನ್ನು ಬಿಡುಗಡೆ ಮಾಡಿದೆ.
ತಮಿಳುನಾಡಿನಲ್ಲಿ ಸರ್ಕಾರ ರಚನೆಯ ಕಸರತ್ತು ತೀವ್ರ ಸ್ವರೂಪ ಪಡೆದುಕೊಂಡಿದ್ದು, ರಾಜಕೀಯ ಹೈಡ್ರಾಮಾ ಮುಂದುವರಿದಿದೆ. ತಮ್ಮ ಪಕ್ಷದ ಏಕೈಕ ಶಾಸಕನ ಬೆಂಬಲ ಪತ್ರವನ್ನು ನಕಲಿ ಮಾಡಿ ರಾಜ್ಯಪಾಲರಿಗೆ ನೀಡಲಾಗಿದೆ ಎಂದು ಆರೋಪಿಸಿರುವ ಎಎಂಎಂಕೆ ಮುಖ್ಯಸ್ಥ ಟಿ.ಟಿ.ವಿ. ದಿನಕರನ್ ಅವರು ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಪಕ್ಷದ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ.
ಎಎಂಎಂಕೆ ಪಕ್ಷದ ಏಕೈಕ ಶಾಸಕ ಎಸ್. ಕಾಮರಾಜ್ ಅವರ ಬೆಂಬಲವನ್ನು ಮುಂದಿಟ್ಟುಕೊಂಡು ವಿಜಯ್ ಅವರ ಟಿ.ವಿ.ಕೆ ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಯತ್ನಿಸುತ್ತಿದೆ. ಆದರೆ, ಟಿ.ವಿ.ಕೆ ಹಂಚಿಕೊಂಡಿರುವ ಬೆಂಬಲ ಪತ್ರವು ಸಂಪೂರ್ಣವಾಗಿ 'ನಕಲಿ' (Forged Xerox Copy) ಎಂದು ಆರೋಪಿಸಿರುವ ಟಿ.ಟಿ.ವಿ. ದಿನಕರನ್, ಗಿಂಡಿ ವಲಯದ (Guindy Range) ಸಹಾಯಕ ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಿ ಕ್ರಿಮಿನಲ್ ದೂರು ದಾಖಲಿಸಿದ್ದಾರೆ.
ಟಿ.ವಿ.ಕೆ ತಿರುಗೇಟು - ವಿಡಿಯೋ ರಿಲೀಸ್
ದಿನಕರನ್ ಅವರ ಆರೋಪದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಟಿ.ವಿ.ಕೆ ಪಕ್ಷ, ಶಾಸಕ ಕಾಮರಾಜ್ ಅವರು ಸ್ವತಃ ತಾವೇ ಕುಳಿತು ಬೆಂಬಲ ಪತ್ರ ಬರೆಯುತ್ತಿರುವ ವಿಡಿಯೋವನ್ನು ಬಿಡುಗಡೆ ಮಾಡಿದೆ. ಎಎಂಎಂಕೆ ಪ್ರಧಾನ ಕಾರ್ಯದರ್ಶಿ ದಿನಕರನ್ ಅವರ ಒಪ್ಪಿಗೆಯ ಮೇರೆಗೆ ತಮಿಳಗ ವೆಟ್ರಿ ಕಳಗಂ ಪಕ್ಷಕ್ಕೆ ಬೆಂಬಲ ನೀಡುತ್ತಿರುವುದಾಗಿ ಶಾಸಕ ಕಾಮರಾಜ್ ವಿಡಿಯೋದಲ್ಲಿ ಹೇಳುತ್ತಿರುವುದು ಸೆರೆಯಾಗಿದೆ. "ಯಾವುದೇ ಒತ್ತಡವಿಲ್ಲದೆ ಶಾಸಕರು ಸ್ವಇಚ್ಛೆಯಿಂದ ಮತ್ತು ಸಂತೋಷದಿಂದ ಪತ್ರ ಬರೆದಿದ್ದಾರೆ. ಆದರೆ ದಿನಕರನ್ ಅವರು ಸತ್ಯ ಮುಚ್ಚಿಟ್ಟು ಸುಳ್ಳು ಸುದ್ದಿ ಹರಡುತ್ತಿದ್ದಾರೆ," ಎಂದು ಟಿ.ವಿ.ಕೆ ನಾಯಕರು ತಿರುಗೇಟು ನೀಡಿದ್ದಾರೆ.
ಎಐಎಡಿಎಂಕೆ ಜೊತೆ ದಿನಕರನ್
ಈ ಬೆಳವಣಿಗೆಗಳಿಗೂ ಮುನ್ನ, ಶಾಸಕ ಕಾಮರಾಜ್ 'ನಾಪತ್ತೆಯಾಗಿದ್ದಾರೆ' ಎಂದು ದಿನಕರನ್ ಆರೋಪಿಸಿದ್ದರು. ಆದರೆ ನಂತರ ನಡೆದ ಅಚ್ಚರಿಯ ಬೆಳವಣಿಗೆಯಲ್ಲಿ, ತಾವೇ ಖುದ್ದಾಗಿ ಶಾಸಕ ಕಾಮರಾಜ್ ಅವರನ್ನು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರ ಬಳಿ ಕರೆದೊಯ್ದು, ಎಐಎಡಿಎಂಕೆ ನಾಯಕ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರ ನೇತೃತ್ವದ ಸರ್ಕಾರ ರಚನೆಗೆ ಅಧಿಕೃತವಾಗಿ ಬೆಂಬಲ ಸೂಚಿಸಿದರು. ಎಎಂಎಂಕೆ ಪಕ್ಷವು ಎನ್‌ಡಿಎ ಮತ್ತು ಎಐಎಡಿಎಂಕೆ ಮೈತ್ರಿಕೂಟದೊಂದಿಗೇ ಇರಲಿದ್ದು, ಪಳನಿಸ್ವಾಮಿ ಅವರೇ ನಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಎಂದು ದಿನಕರನ್ ಸ್ಪಷ್ಟಪಡಿಸಿದ್ದಾರೆ.
ತಮಿಳುನಾಡು ಸರ್ಕಾರ ರಚನೆ ಲೆಕ್ಕಾಚಾರ
ಸರ್ಕಾರ ರಚಿಸಲು ಮ್ಯಾಜಿಕ್ ನಂಬರ್ 118ರ ಅಗತ್ಯವಿದ್ದು, ವಿಜಯ್ ಅವರು ಈ ಮೊದಲು 116 ಶಾಸಕರ ಬೆಂಬಲದ ಪಟ್ಟಿಯನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಬಹುಮತಕ್ಕೆ ಕೇವಲ ಎರಡು ಸ್ಥಾನಗಳ ಕೊರತೆಯಿದೆ. ಈ ನಡುವೆ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ಪಕ್ಷವು ಟಿ.ವಿ.ಕೆಗೆ ಬೆಂಬಲ ನೀಡುವ ವಿಚಾರದಲ್ಲಿ ಅಂತರ ಕಾಯ್ದುಕೊಂಡಿದೆ. ಮತ್ತೊಂದೆಡೆ ವಿಡುತ್ತಲೈ ಚಿರುತೈಗಲ್ ಕಚ್ಚಿ (VCK) ಪಕ್ಷವು ಉಪಮುಖ್ಯಮಂತ್ರಿ ಹುದ್ದೆಗೆ ಪಟ್ಟು ಹಿಡಿದಿರುವುದರಿಂದ ಮೈತ್ರಿ ಲೆಕ್ಕಾಚಾರಗಳು ಮತ್ತಷ್ಟು ಜಟಿಲಗೊಂಡಿವೆ. ಇದೀಗ ಎಲ್ಲರ ಕಣ್ಣು ರಾಜಭವನದತ್ತ ನೆಟ್ಟಿದ್ದು, ಸರ್ಕಾರ ರಚಿಸಲು ರಾಜ್ಯಪಾಲರು ಯಾರಿಗೆ ಆಹ್ವಾನ ನೀಡಲಿದ್ದಾರೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.

