
ಗೋಹತ್ಯೆ ಸಂಪೂರ್ಣ ನಿಷೇಧಿಸಿದ ಹೈಕೋರ್ಟ್ ಆದೇಶಕ್ಕೆ ತಮಿಳುನಾಡು ಸರ್ಕಾರ ವಿರೋಧ
ತಮಿಳುನಾಡಿನಲ್ಲಿ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ವಿಜಯ್ ನೇತೃತ್ವದ ತಮಿಳುನಾಡು ಸರ್ಕಾರ ಇದೀಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ತಮಿಳುನಾಡು ರಾಜ್ಯದಲ್ಲಿ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಇದೀಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಹೈಕೋರ್ಟ್‌ನ ಈ ಆದೇಶವು ಕಾನೂನಿನ ಚೌಕಟ್ಟನ್ನು ಮೀರಿದ್ದಾಗಿದೆ ಎಂದು ರಾಜ್ಯ ಸರ್ಕಾರ ತನ್ನ ಅರ್ಜಿಯಲ್ಲಿ ವಾದಿಸಿದೆ.
ತಮಿಳುನಾಡು ಪ್ರಾಣಿ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 4 ರ ಅಡಿಯಲ್ಲಿ ಅನುಮತಿಸಲಾದ ವಿನಾಯಿತಿಗಳನ್ನು ಹೊರತುಪಡಿಸಿ, ರಾಜ್ಯದಲ್ಲಿ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಮದ್ರಾಸ್ ಹೈಕೋರ್ಟ್ ಆದೇಶಿಸಿತ್ತು. ಆದರೆ, ಹೈಕೋರ್ಟ್ ಕಾಯ್ದೆಯಲ್ಲಿ ಉಲ್ಲೇಖಿಸಲಾದ ನಿಬಂಧನೆಗಳ ವ್ಯಾಪ್ತಿಯನ್ನು ಮೀರಿ ಈ ತೀರ್ಪು ನೀಡಿದೆ ಎಂದು ಮುಖ್ಯಮಂತ್ರಿ ವಿಜಯ್ ನೇತೃತ್ವದ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಆಕ್ಷೇಪವೆತ್ತಿದೆ.
ಹೈಕೋರ್ಟ್ ಆದೇಶದಲ್ಲೇನಿದೆ?
ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಮತ್ತು ನ್ಯಾಯಮೂರ್ತಿ ವಿ. ಲಕ್ಷ್ಮೀನಾರಾಯಣ್ ಅವರನ್ನೊಳಗೊಂಡ ಮದ್ರಾಸ್ ಹೈಕೋರ್ಟ್‌ನ ವಿಭಾಗೀಯ ಪೀಠವು ಕಳೆದ ಮೇ 27 ರಂದು ಈ ಮಹತ್ವದ ಆದೇಶ ನೀಡಿತ್ತು. ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಅಥವಾ "ಮತ್ತಾವುದೇ ದಿನದಂದು" ರಾಜ್ಯದಲ್ಲಿ ಯಾವುದೇ ಹಸು ಅಥವಾ ಕರುವನ್ನು ಕೊಲ್ಲದಂತೆ ನೋಡಿಕೊಳ್ಳಬೇಕು ಎಂದು ಹೈಕೋರ್ಟ್ ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕಡಕ್ ನಿರ್ದೇಶನ ನೀಡಿತ್ತು. ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಇಡೀ ರಾಜ್ಯದ ಅಧಿಕಾರಿಗಳಿಗೆ ಸೂಕ್ತ ಸೂಚನೆಗಳನ್ನು ನೀಡುವಂತೆಯೂ ಕೋರ್ಟ್ ಹೇಳಿತ್ತು.
ಕೋರ್ಟ್ ಮೆಟ್ಟಿಲೇರಿದ್ದ 'ಇಂದು ಮಕ್ಕಳ್ ಕಚ್ಚಿ'
ಸಾರ್ವಜನಿಕ ಸ್ಥಳಗಳಲ್ಲಿ ಕಾನೂನುಬಾಹಿರವಾಗಿ ನಡೆಯುತ್ತಿರುವ ಗೋಹತ್ಯೆಯನ್ನು ತಡೆಯಲು ನಿರ್ದೇಶನ ನೀಡಬೇಕು ಎಂದು ಕೋರಿ 'ಇಂದು ಮಕ್ಕಳ್ ಕಚ್ಚಿ' ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸೂರ್ಯ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಹಿಂದೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಸಂವಿಧಾನದ ವಿಧಿ 48 ಅನ್ನು (Article 48) ಉಲ್ಲೇಖಿಸಿತ್ತು. ವಿಧಿ 48 ರ ಪ್ರಕಾರ ಹಸುಗಳು, ಕರುಗಳು ಮತ್ತು ಇತರ ಹಾಲು ಕೊಡುವ ಹಾಗೂ ಸಾಗಣೆಗೆ ಬಳಸುವ ಜಾನುವಾರುಗಳ ಹತ್ಯೆಯನ್ನು ನಿಷೇಧಿಸಲು ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದೆ.
ಕಾಯ್ದೆಯ ನಿಯಮವೇನು? ತಮಿಳುನಾಡು ಸರ್ಕಾರದ ವಾದವೇನು?
ಪ್ರಸ್ತುತ ಜಾರಿಯಲ್ಲಿರುವ ತಮಿಳುನಾಡು ಪ್ರಾಣಿ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 4 ರ ಪ್ರಕಾರ, ಹಸುವಿಗೆ 10 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿದ್ದರೆ, ಅದು ಕೆಲಸಕ್ಕೆ ಅಥವಾ ಸಂತಾನೋತ್ಪತ್ತಿಗೆ ಅನ್ವಯಿಸದಿದ್ದರೆ ಮತ್ತು ಅದಕ್ಕೆ ಸಂಬಂಧಪಟ್ಟ ಸಕ್ಷಮ ಅಧಿಕಾರಿಯಿಂದ ಪ್ರಮಾಣಪತ್ರ ಪಡೆದಿದ್ದರೆ ಮಾತ್ರ ಅಂತಹ ಹಸುವಿನ ಹತ್ಯೆಗೆ ಅವಕಾಶವಿದೆ.
ಕೋರ್ಟ್ ಮತ್ತು ಸರ್ಕಾರದ ಭಿನ್ನಾಭಿಪ್ರಾಯ
ಸಂವಿಧಾನದ ವಿಧಿ 48 ರ ಬೆಳಕಿನಲ್ಲಿ ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಮತ್ತು ನಿಗದಿತ ಪ್ರಮಾಣಪತ್ರ ಪಡೆದ ನಂತರವಷ್ಟೇ ಅಪರೂಪದ ಸಂದರ್ಭದಲ್ಲಿ ಹತ್ಯೆಗೆ ಅನುಮತಿಸಬಹುದು ಎಂದು ಹೈಕೋರ್ಟ್ ಹೇಳಿತ್ತು. ಅಲ್ಲದೆ, ಬಕ್ರೀದ್ ಹಬ್ಬದ ಆಚರಣೆಗೆ ಗೋಹತ್ಯೆಯು ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎಂದು ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿರುವ ತೀರ್ಪುಗಳನ್ನು ಮದ್ರಾಸ್ ಹೈಕೋರ್ಟ್ ನೆನಪಿಸಿತ್ತು.
ಆದರೆ, ಈಗಿನ ತಮಿಳುನಾಡು ಸರ್ಕಾರವು ಕಾಯ್ದೆಯಲ್ಲಿ ಈಗಾಗಲೇ ವಿನಾಯಿತಿಗಳು ಇರುವಾಗ, ಹೈಕೋರ್ಟ್ ಒಟ್ಟಾರೆಯಾಗಿ 'ಸಂಪೂರ್ಣ ನಿಷೇಧ'ದ ಆದೇಶ ನೀಡಿರುವುದು ಕಾನೂನುಬಾಹಿರ ಎಂದು ವಾದಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದೆ.

