Tamil Nadu Floor Test | ತಮಿಳುನಾಡು ವಿಧಾನಸಭೆಯಲ್ಲಿ ಇಂದು ಸಿಎಂ ವಿಜಯ್ ವಿಶ್ವಾಸಮತ ಯಾಚನೆ
x

Tamil Nadu Floor Test | ತಮಿಳುನಾಡು ವಿಧಾನಸಭೆಯಲ್ಲಿ ಇಂದು ಸಿಎಂ ವಿಜಯ್ ವಿಶ್ವಾಸಮತ ಯಾಚನೆ

ಸಿಎಂ ವಿಜಯ್ ಇಂದು ತಮಿಳುನಾಡು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲಿದ್ದಾರೆ. ಶಾಸಕನಿಗೆ ಕೋರ್ಟ್ ತಡೆ ಮತ್ತು ಜ್ಯೋತಿಷಿ ನೇಮಕದ ವಿವಾದದ ನಡುವೆ ದಳಪತಿ ಗೆಲುವು ಸಾಧಿಸುತ್ತಾರಾ?


ತಮಿಳುನಾಡಿನ ನೂತನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಸರ್ಕಾರವು ಇಂದು ವಿಧಾನಸಭೆಯಲ್ಲಿ ತನ್ನ ಬಹುಮತವನ್ನು ಸಾಬೀತುಪಡಿಸಲಿದೆ. ವಿಶ್ವಾಸಮತ ಯಾಚನೆಗೂ ಮುನ್ನ ವಿಜಯ್ ಅವರು ಬೆಂಬಲಿತ ಪಕ್ಷಗಳ ನಾಯಕರೊಂದಿಗೆ ಸತತ ಸಭೆಗಳನ್ನು ನಡೆಸುತ್ತಿದ್ದಾರೆ.

ಸಂಖ್ಯಾಬಲದ ಲೆಕ್ಕಾಚಾರ ಹೇಗಿದೆ?

ವಿಶ್ವಾಸಮತ ಗೆಲ್ಲಲು ವಿಜಯ್‌ಗೆ ಬೇಕಾದ ಸಂಖ್ಯಾಬಲದ ಲೆಕ್ಕಾಚಾರ ಹೀಗಿದೆ: ಮುಖ್ಯಮಂತ್ರಿ ವಿಜಯ್ ಅವರು ತಿರುಚಿರಾಪಳ್ಳಿ ಪೂರ್ವ ಕ್ಷೇತ್ರವನ್ನು ತ್ಯಜಿಸಿದ ನಂತರ ಅವರ ಟಿವಿಕೆ ಪಕ್ಷವು ಪ್ರಸ್ತುತ 107 ಸ್ಥಾನಗಳನ್ನು ಹೊಂದಿದ್ದು, ಇದರ ಜೊತೆಗೆ ಕಾಂಗ್ರೆಸ್, ಐಯುಎಂಎಲ್, ವಿಸಿಕೆ, ಸಿಪಿಐ ಮತ್ತು ಸಿಪಿಎಂ ಪಕ್ಷಗಳ 13 ಶಾಸಕರು ಬೆಂಬಲ ನೀಡಿದ್ದಾರೆ. ಅಚ್ಚರಿಯ ಬೆಳವಣಿಗೆಯಾಗಿ, ಈ ಹಿಂದೆ ನಕಲಿ ದಾಖಲೆ ಆರೋಪ ಮಾಡಿದ್ದ ಎಎಂಕೆಯ ಶಾಸಕ ಎಸ್‌ ಕಾಮರಾಜ್ ಕೂಡ ಈಗ ವಿಜಯ್ ಪರ ನಿಂತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳಿಂದಾಗಿ ವಿಜಯ್ ಸರ್ಕಾರವು ಸದ್ಯಕ್ಕೆ ಒಟ್ಟು 120 ಶಾಸಕರ ಬಲದೊಂದಿಗೆ ಸುಭದ್ರವಾಗಿ ಕಾಣುತ್ತಿದ್ದು, ಬಹುಮತ ಸಾಬೀತುಪಡಿಸಲು ಸಜ್ಜಾಗಿದೆ.

ಟಿವಿಕೆ ಶಾಸಕನಿಗೆ ಕೋರ್ಟ್ ಶಾಕ್!

ತಿರುಪ್ಪತ್ತೂರು ಕ್ಷೇತ್ರದ ಟಿವಿಕೆ ಶಾಸಕ ಶ್ರೀನಿವಾಸ ಸೇತುಪತಿ ಅವರು ವಿಧಾನಸಭೆಯ ವಿಶ್ವಾಸಮತ ಪ್ರಕ್ರಿಯೆಯಲ್ಲಿ ಭಾಗವಹಿಸದಂತೆ ಮದ್ರಾಸ್ ಹೈಕೋರ್ಟ್ ತಡೆ ನೀಡಿದೆ. ಕೇವಲ ಒಂದು ಮತದಿಂದ ಪೆರಿಯಕರುಪ್ಪನ್ ವಿರುದ್ಧ ಗೆದ್ದಿದ್ದ ಸೇತುಪತಿ ಅವರ ಫಲಿತಾಂಶದಲ್ಲಿ ಅಕ್ರಮ ನಡೆದಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಕೋರ್ಟ್ ಈ ಆದೇಶ ನೀಡಿದೆ. ಇದು ವಿಜಯ್ ಸರ್ಕಾರಕ್ಕೆ ಒಂದು ಮತದ ನಷ್ಟವುಂಟು ಮಾಡಿದೆ.

ಜ್ಯೋತಿಷಿ ನೇಮಕಕ್ಕೆ ಮಿತ್ರಪಕ್ಷಗಳ ವಿರೋಧ

ತಮ್ಮ ವೈಯಕ್ತಿಕ ಜ್ಯೋತಿಷಿ ರಾಧನ್ ಪಂಡಿತ್ ವೆಟ್ರಿವೇಲ್ ಅವರನ್ನು ಮುಖ್ಯಮಂತ್ರಿಯವರ ರಾಜಕೀಯ ಸಲಹೆಗಾರ ಹಾಗೂ ವಿಶೇಷ ಕರ್ತವ್ಯಾಧಿಕಾರಿಯನ್ನಾಗಿ (OSD) ನೇಮಿಸಿರುವುದು ಮಿತ್ರಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ. "ಜ್ಯೋತಿಷಿಗೆ ಒಎಸ್‌ಡಿ ಹುದ್ದೆ ಏಕೆ ಬೇಕು?" ಎಂದು ಕಾಂಗ್ರೆಸ್ ಸಂಸದ ಶಶಿಕಾಂತ್ ಸೆಂಥಿಲ್ ಪ್ರಶ್ನಿಸಿದ್ದಾರೆ. ಮತ್ತೊಂದೆಡೆ "ಜಾತ್ಯತೀತ ಸರ್ಕಾರದಲ್ಲಿ ಇಂತಹ ನೇಮಕಾತಿ ಒಪ್ಪಲು ಸಾಧ್ಯವಿಲ್ಲ" ಎಂದು ವಿಸಿಕೆ ಪ್ರಧಾನ ಕಾರ್ಯದರ್ಶಿ ಡಿ. ರವಿಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎಐಎಡಿಎಂಕೆಯಲ್ಲಿ ಬಂಡಾಯ: ವಿಜಯ್‌ಗೆ ಆನೆ ಬಲ!

ಇತ್ತ ಎಐಎಡಿಎಂಕೆ ಪಕ್ಷದಲ್ಲಿ ಭಾರಿ ಸೀಳು ಉಂಟಾಗಿದ್ದು, ಎಡಪ್ಪಾಡಿ ಪಳನಿಸ್ವಾಮಿ (EPS) ವಿರುದ್ಧ ಎಸ್‌ಪಿ ವೇಲುಮಣಿ ಮತ್ತು ಸಿ.ವಿ. ಶಣ್ಮುಗಂ ನೇತೃತ್ವದ ಸುಮಾರು 30 ಶಾಸಕರು ಬಂಡಾಯವೆದ್ದಿದ್ದಾರೆ. ಇಪಿಎಸ್ ಅವರು ಡಿಎಂಕೆ ಜೊತೆ ರಹಸ್ಯ ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿರುವ ಈ ಬಂಡಾಯ ಶಾಸಕರು, ವಿಶ್ವಾಸಮತದ ವೇಳೆ ವಿಜಯ್ ಸರ್ಕಾರವನ್ನು ಬೆಂಬಲಿಸುವ ಸಾಧ್ಯತೆಯಿದೆ. ಇಂದಿನ ವಿಶ್ವಾಸಮತ ಕೇವಲ ವಿಜಯ್ ಸರ್ಕಾರದ ಭವಿಷ್ಯ ಮಾತ್ರವಲ್ಲದೆ, ಎಐಎಡಿಎಂಕೆ ಪಕ್ಷದ ಅಸ್ತಿತ್ವಕ್ಕೂ ದೊಡ್ಡ ಪರೀಕ್ಷೆಯಾಗಿ ಪರಿಣಮಿಸಿದೆ.

Read More
Next Story