
ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಹಾಗೂ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್
ತಮಿಳುನಾಡು ರಾಜಕೀಯ ಕ್ರಾಂತಿ; ಸ್ಟಾಲಿನ್‌ಗೆ ಆಘಾತಕಾರಿ ಸೋಲು, ಸಿಎಂ ಸ್ಥಾನಕ್ಕೆ ರಾಜೀನಾಮೆ
ಮುಂಬರುವ ದಿನಗಳಲ್ಲಿ ಡಿಎಂಕೆ ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಲಿದೆ. ಜನರ ಹಕ್ಕುಗಳಿಗಾಗಿ ನಮ್ಮ ಹೋರಾಟ ನಿರಂತರವಾಗಿರಲಿದೆ ಎಂದು ಎಂ.ಕೆ. ಸ್ಟಾಲಿನ್ ತಿಳಿಸಿದ್ದಾರೆ.
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಡಿಎಂಕೆ ಪಕ್ಷಕ್ಕೆ ಭಾರೀ ಮುಖಭಂಗವಾಗಿದ್ದು, ಸೋಲಿನ ಹೊಣೆ ಹೊತ್ತು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ತಮ್ಮ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ. ಸೋಮವಾರ ತಡರಾತ್ರಿ ಚುನಾವಣಾ ಫಲಿತಾಂಶದ ಸ್ಪಷ್ಟ ಚಿತ್ರಣ ಲಭ್ಯವಾಗುತ್ತಿದ್ದಂತೆ, ಸ್ಟಾಲಿನ್ ರಾಜ್ಯಪಾಲರಾದ ರಾಜೇಂದ್ರ ವಿಶ್ವನಾಥ್ ಅರ್ಲೇಕರ್‌ಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ.
ಕಳೆದ ಐದು ದಶಕಗಳಿಂದ ತಮಿಳುನಾಡು ರಾಜಕಾರಣವನ್ನು ಆಳಿದ್ದ ಸಾಂಪ್ರದಾಯಿಕ ದ್ರಾವಿಡ ಪಕ್ಷಗಳ ಪಾರುಪತ್ಯಕ್ಕೆ ಈ ಬಾರಿ ಬ್ರೇಕ್ ಬಿದ್ದಿದೆ. ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು ರಾಜ್ಯದಲ್ಲಿ ರಾಜಕೀಯ ಕ್ರಾಂತಿ ಮಾಡಿದ್ದು, ಮೊದಲ ಚುನಾವಣೆಯಲ್ಲೇ ಭರ್ಜರಿ ಯಶಸ್ಸು ಸಾಧಿಸಿದೆ.
ತಮ್ಮದೇ ಭದ್ರಕೋಟೆಯಲ್ಲಿ ಸ್ಟಾಲಿನ್‌ಗೆ ಸೋಲು!
ಈ ಬಾರಿಯ ಚುನಾವಣೆಯ ಅತ್ಯಂತ ಆಘಾತಕಾರಿ ಫಲಿತಾಂಶವೆಂದರೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಸೋಲು. ತಮ್ಮ ರಾಜಕೀಯ ಭದ್ರಕೋಟೆಯಾದ 'ಕೊಳತ್ತೂರು' ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಎಂ.ಕೆ. ಸ್ಟಾಲಿನ್, ಟಿವಿಕೆ ಅಭ್ಯರ್ಥಿಯ ವಿರುದ್ಧ ಅನಿರೀಕ್ಷಿತವಾಗಿ ಪರಾಭವಗೊಂಡಿದ್ದಾರೆ. ಮುಖ್ಯಮಂತ್ರಿಯೊಬ್ಬರು ತಮ್ಮದೇ ಕ್ಷೇತ್ರದಲ್ಲಿ ಸೋತಿರುವುದು ಡಿಎಂಕೆ ಕಾರ್ಯಕರ್ತರಲ್ಲಿ ತೀವ್ರ ಆಘಾತ ಮೂಡಿಸಿದೆ.
ಎಂ.ಕೆ. ಸ್ಟಾಲಿನ್ ರಾಜೀನಾಮೆ ಪತ್ರದ ಕುರಿತು ತಮಿಳುನಾಡು ಲೋಕಭವನ ಹೊರಡಿಸಿರುವ ಪ್ರಕಟಣೆ
"ಜನಾದೇಶಕ್ಕೆ ತಲೆಬಾಗುತ್ತೇನೆ" ಸ್ಟಾಲಿನ್ ಭಾವುಕ ಪ್ರತಿಕ್ರಿಯೆ
ರಾಜೀನಾಮೆ ನೀಡಿದ ಬಳಿಕ ಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿದ ಎಂ.ಕೆ. ಸ್ಟಾಲಿನ್, "ಪ್ರಜಾಪ್ರಭುತ್ವದಲ್ಲಿ ಜನರ ತೀರ್ಪ ಅಂತಿಮ. ಜನರ ಈ ಜನಾದೇಶವನ್ನು ನಾನು ವಿನಮ್ರತೆಯಿಂದ ಒಪ್ಪಿಕೊಳ್ಳುತ್ತೇನೆ. ಮುಂಬರುವ ದಿನಗಳಲ್ಲಿ ಡಿಎಂಕೆ ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಲಿದೆ. ಜನರ ಹಕ್ಕುಗಳಿಗಾಗಿ ನಮ್ಮ ಹೋರಾಟ ನಿರಂತರ" ಎಂದು ತಿಳಿಸಿದ್ದಾರೆ.
ತಮಿಳುನಾಡಿನ ಒಟ್ಟು 234 ಕ್ಷೇತ್ರಗಳ ಪೈಕಿ ಟಿವಿಕೆ ಪಕ್ಷವು 108 ಸ್ಥಾನಗಳಲ್ಲಿ ಜಯ ದಾಖಲಿಸಿ ಎಲ್ಲರ ಗಮನ ಸೆಳೆದಿದೆ. ಅಧಿಕಾರರೂಢ ಡಿಎಂಕೆ 59 ಸ್ಥಾನಗಳಿಗೆ ಕುಸಿದಿದ್ದರೆ, ಎಐಎಡಿಎಂಕೆ 47 ಸ್ಥಾನಗಳನ್ನು ಗಳಿಸಿದೆ. ಕಾಂಗ್ರೆಸ್ 5 ಮತ್ತು ಪಿಎಂಕೆ 4 ಸ್ಥಾನಗಳಲ್ಲಿ ಜಯಗಳಿಸಿವೆ.

