ಜನನಾಯಕ ಅಬ್ಬರಕ್ಕೆ ದ್ರಾವಿಡ ಕೋಟೆ ಉಡೀಸ್! ಮ್ಯಾಜಿಕ್ ನಂಬರ್ ಮಿಸ್ ಆದ್ರೆ ವಿಜಯ್ ಮುಂದಿರುವ ಆಯ್ಕೆಗಳೇನು?
x

'ಜನನಾಯಕ' ಅಬ್ಬರಕ್ಕೆ ದ್ರಾವಿಡ ಕೋಟೆ ಉಡೀಸ್! ಮ್ಯಾಜಿಕ್ ನಂಬರ್ ಮಿಸ್ ಆದ್ರೆ ವಿಜಯ್ ಮುಂದಿರುವ ಆಯ್ಕೆಗಳೇನು?

ಮ್ಯಾಜಿಕ್ ನಂಬರ್ ಕೊರತೆಯಿಂದ ಎಐಎಡಿಎಂಕೆ ಅಥವಾ ಸಣ್ಣ ಪಕ್ಷಗಳ ಜೊತೆ ವಿಜಯ್ ಮೈತ್ರಿ ಮಾಡಿಕೊಳ್ಳುತ್ತಾರಾ?


ತಮಿಳುನಾಡು ರಾಜಕೀಯದಲ್ಲಿ ಹೊಸ ಇತಿಹಾಸ ಬರೆದಿರುವ ನಟ ವಿಜಯ್ ಅವರನ್ನು ಮತದಾರರು 'ಜನನಾಯಕ'ನನ್ನಾಗಿ ಸ್ವೀಕರಿಸಿದ್ದಾರೆ. ಆರಂಭಿಕ ಟ್ರೆಂಡ್‌ಗಳಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ದ್ರಾವಿಡ ಭದ್ರಕೋಟೆಯನ್ನು ಭೇದಿಸಿ ಮುನ್ನುಗ್ಗುತ್ತಿದೆ. ಆದರೆ, ಸರ್ಕಾರ ರಚಿಸಲು ಬೇಕಾದ 'ಮ್ಯಾಜಿಕ್ ನಂಬರ್' ತಲುಪಲು ವಿಜಯ್‌ಗೆ ಇತರರ ಬೆಂಬಲ ಅನಿವಾರ್ಯವಾಗುವ ಸಾಧ್ಯತೆ ದಟ್ಟವಾಗಿದೆ.

ಈಗಿನ ಟ್ರೆಂಡ್ ಹೀಗಿದೆ (ಒಟ್ಟು 234 ಸ್ಥಾನಗಳು):

• TVK (ವಿಜಯ್): 100+ ಕ್ಷೇತ್ರಗಳು

• AIADMK (ಎಡಪ್ಪಾಡಿ): 75 ಕ್ಷೇತ್ರಗಳು

• DMK (ಸ್ಟಾಲಿನ್): 47 ಕ್ಷೇತ್ರಗಳು

ಸದ್ಯದ ಪರಿಸ್ಥಿತಿಯಲ್ಲಿ ವಿಜಯ್ 'ಸೋಲೋ ಹೀರೋ' ಇಮೇಜ್ ಬಿಟ್ಟು 'ಮೈತ್ರಿ ರಾಜಕಾರಣದ ಶಿಲ್ಪಿ'ಯಾಗಬೇಕಿದೆ. ತಮಿಳುನಾಡಿನ ಮುಂದಿನ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಮೂರು ಪ್ರಮುಖ ಸಾಧ್ಯತೆಗಳು ಇಲ್ಲಿವೆ.

ಸಾಧ್ಯತೆ 1: ಸಣ್ಣ ಪಕ್ಷಗಳ ಜೊತೆ ಮೈತ್ರಿ

ಒಂದು ವೇಳೆ ಟಿವಿಕೆ ಪಕ್ಷವು 105 ರಿಂದ 112 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ, ವಿಜಯ್ ಅವರು ಸಣ್ಣ ಪಕ್ಷಗಳ ಬೆಂಬಲ ಕೋರಬಹುದು. ಸದ್ಯದ ಟ್ರೆಂಡ್ ಪ್ರಕಾರ ಕಾಂಗ್ರೆಸ್ (3), ಪಿಎಂಕೆ (7), ಸಿಪಿಐ (2) ಮತ್ತು ವಿಸಿಕೆ (2) ಸ್ಥಾನಗಳಲ್ಲಿ ಮುನ್ನಡೆ ಹೊಂದಿವೆ. ದೊಡ್ಡ ಪಕ್ಷಗಳಿಗೆ ಶರಣಾಗದೆ ವಿಜಯ್ 'ಕಿಂಗ್' ಆಗಿ ಮುಂದುವರಿಯಬಹುದು. ಸಣ್ಣ ಪಕ್ಷಗಳು ಪ್ರಮುಖ ಖಾತೆಗಳಿಗಾಗಿ ಪಟ್ಟು ಹಿಡಿಯಬಹುದು, ಇದು ಆಡಳಿತದಲ್ಲಿ ಅಡಚಣೆ ಉಂಟುಮಾಡಬಹುದು.

ಸಾಧ್ಯತೆ 2: ಎಐಎಡಿಎಂಕೆ ಜೊತೆ ಬಲಿಷ್ಠ ಮೈತ್ರಿ

ಎಐಎಡಿಎಂಕೆ (AIADMK) ಸದ್ಯ ರಾಜ್ಯದ ಎರಡನೇ ದೊಡ್ಡ ಶಕ್ತಿಯಾಗಿ ಉಳಿದಿದೆ. ಟಿವಿಕೆ ಮತ್ತು ಎಐಎಡಿಎಂಕೆ ಕೈಜೋಡಿಸಿದರೆ ಒಟ್ಟು ಬಲ 160 ದಾಟಲಿದ್ದು, ಸುಭದ್ರ ಸರ್ಕಾರ ರಚನೆಯಾಗಲಿದೆ.

ಎಡಪ್ಪಾಡಿ ಪಳನಿಸ್ವಾಮಿ ಅವರ ಅನುಭವ ಸರ್ಕಾರಕ್ಕೆ ಶಕ್ತಿ ನೀಡಬಹುದು. ಆದರೆ, ವಿಜಯ್ ಅವರ 'ಜಾತ್ಯತೀತ ಸಾಮಾಜಿಕ ನ್ಯಾಯ'ದ ಸಿದ್ಧಾಂತಕ್ಕೆ ಬಿಜೆಪಿ ಜೊತೆಗಿನ ಎಐಎಡಿಎಂಕೆಯ ಸ್ನೇಹ ಅಡ್ಡಿಯಾಗಬಹುದು. ಈ ಮೈತ್ರಿ ನಡೆಯಬೇಕಾದರೆ ಎಐಎಡಿಎಂಕೆ ಬಿಜೆಪಿಯಿಂದ ದೂರವಾಗಬೇಕೆಂದು ವಿಜಯ್ ಪಟ್ಟು ಹಿಡಿಯುವ ಸಾಧ್ಯತೆಯಿದೆ.

ಸಾಧ್ಯತೆ 3: 'ಇಂಡಿ' (I.N.D.I.A) ಒಕ್ಕೂಟದ ಮೈತ್ರಿ

ವಿಜಯ್ ಅವರು ಡಿಎಂಕೆಯನ್ನು ತಮ್ಮ ನಂಬರ್ 1 ರಾಜಕೀಯ ಶತ್ರು ಎಂದು ಕರೆದಿದ್ದಾರೆ. ಆದರೆ ರಾಜಕೀಯದಲ್ಲಿ ಏನೂ ಅಸಾಧ್ಯವಲ್ಲ. ಕಾಂಗ್ರೆಸ್ ಮಧ್ಯಸ್ಥಿಕೆ ವಹಿಸಿ ವಿಜಯ್ ಅವರನ್ನು ಇಂಡಿ ಒಕ್ಕೂಟಕ್ಕೆ ಸೇರಿಸಿಕೊಳ್ಳಲು ಪ್ರಯತ್ನಿಸಬಹುದು. ಇದು ಅತ್ಯಂತ ಕಡಿಮೆ ಸಾಧ್ಯತೆಯಿರುವ ಆಯ್ಕೆ. ಡಿಎಂಕೆಯ 'ಕುಟುಂಬ ರಾಜಕಾರಣ'ದ ವಿರುದ್ಧವೇ ವಿಜಯ್ ಹೋರಾಟ ಆರಂಭಿಸಿರುವುದರಿಂದ, ಈಗ ಸ್ಟಾಲಿನ್ ಜೊತೆ ಕೈಜೋಡಿಸುವುದು ಮತದಾರರಿಗೆ ಮಾಡುವ ದ್ರೋಹವಾಗಬಹುದು.

ಭಾರತೀಯ ರಾಜಕೀಯದಲ್ಲಿ ಯಾವುದೂ ಶಾಶ್ವತವಲ್ಲ. ಒಮ್ಮೆ ಎನ್‌ಡಿಎ ಮಂತ್ರಿಯಾಗಿದ್ದ ಮಮತಾ ಬ್ಯಾನರ್ಜಿ ಇಂದು ಬಿಜೆಪಿಯ ದೊಡ್ಡ ವಿರೋಧಿಯಾಗಿರುವಂತೆ, ತಮಿಳುನಾಡಿನಲ್ಲೂ ಅಚ್ಚರಿಯ ಮೈತ್ರಿಗಳು ಏರ್ಪಡಬಹುದು. 'ದಳಪತಿ' ವಿಜಯ್ ಅವರ ಮುಂದಿನ ಪ್ರತಿಯೊಂದು ಹೆಜ್ಜೆ ಈಗ ಇಡೀ ದೇಶದ ಕುತೂಹಲಕ್ಕೆ ಕಾರಣವಾಗಿದೆ.

Read More
Next Story