TVK Vijay| ತಮಿಳುನಾಡು ರಾಜಕೀಯದಲ್ಲಿ ಸಂಚಲನ: ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ದಳಪತಿ ವಿಜಯ್!
x

TVK Vijay| ತಮಿಳುನಾಡು ರಾಜಕೀಯದಲ್ಲಿ ಸಂಚಲನ: ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ದಳಪತಿ ವಿಜಯ್!

ತಮಿಳುನಾಡು ಚುನಾವಣೆಯಲ್ಲಿ 108 ಸ್ಥಾನ ಗೆದ್ದ ದಳಪತಿ ವಿಜಯ್ ಸರ್ಕಾರ ರಚನೆಗೆ ಸಜ್ಜಾಗಿದ್ದಾರೆ. ಪಶ್ಚಿಮ ಬಂಗಾಳದಲ್ಲಿ 206 ಸ್ಥಾನಗಳೊಂದಿಗೆ ಬಿಜೆಪಿ ಹೊಸ ಇತಿಹಾಸ ಬರೆದರೆ, ಕೇರಳದಲ್ಲಿ 102 ಸ್ಥಾನಗಳೊಂದಿಗೆ ಯುಡಿಎಫ್ ಅಧಿಕಾರಕ್ಕೆ ಮರಳಿದೆ.


ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ದಳಪತಿ ವಿಜಯ್ ನೇತೃತ್ವದ 'ತಮಿಳಗ ವೆಟ್ರಿ ಕಳಗಂ' (TVK) ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಮೂಲಕ ದ್ರಾವಿಡ ರಾಜಕಾರಣದ ದಿಕ್ಕನ್ನೇ ಬದಲಿಸಿದೆ. ಇದೀಗ ರಾಜ್ಯದಲ್ಲಿ ಸರ್ಕಾರ ರಚನೆಯ ಚಟುವಟಿಕೆಗಳು ಗರಿಗೆದರಿದ್ದು, ಎಲ್ಲರ ಕಣ್ಣು ವಿಜಯ್ ಅವರ ಮುಂದಿನ ನಡೆಯ ಮೇಲಿದೆ.

ತಮಿಳುನಾಡು ವಿಧಾನಸಭಾ ಚುನಾವಣಾ ಫಲಿತಾಂಶದ ಅಂತಿಮ ಚಿತ್ರಣ ಸ್ಪಷ್ಟವಾಗಿದ್ದು, ನಟ ವಿಜಯ್ ನೇತೃತ್ವದ TVK ಒಟ್ಟು 108 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಇನ್ನುಳಿದಂತೆ ಆಡಳಿತಾರೂಢ DMK 59 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡರೆ, AIADMK 47 ಸ್ಥಾನಗಳನ್ನು ಪಡೆದುಕೊಂಡಿದೆ. ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಏರಲು 118 ಸ್ಥಾನಗಳ ಬಹುಮತದ ಮ್ಯಾಜಿಕ್ ನಂಬರ್ ಅಗತ್ಯವಿದ್ದು, ವಿಜಯ್ ಅವರ ಟಿವಿಕೆ ಪಕ್ಷಕ್ಕೆ ಕೇವಲ 10 ಸ್ಥಾನಗಳ ಕೊರತೆಯಿದೆ. ಈ ಫಲಿತಾಂಶವು ದ್ರಾವಿಡ ರಾಜಕಾರಣದಲ್ಲಿ ಹೊಸ ಮೈತ್ರಿ ಸಮೀಕರಣಗಳಿಗೆ ವೇದಿಕೆ ಸಿದ್ಧಪಡಿಸಿದೆ.

ವಿಜಯ್ ಅವರ ಟಿವಿಕೆ 108 ಸ್ಥಾನಗಳನ್ನು ಗೆದ್ದಿದ್ದರೂ, ಬಹುಮತಕ್ಕೆ ಇನ್ನು 10 ಸ್ಥಾನಗಳ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ಮೈತ್ರಿ ರಾಜಕಾರಣದ ಚರ್ಚೆಗಳು ಜೋರಾಗಿವೆ.

ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ವಿಜಯ್

ಹಲವು ಊಹಾಪೋಹಗಳ ನಡುವೆಯೇ, ವಿಜಯ್ ಅವರು ತಮಿಳುನಾಡು ರಾಜ್ಯಪಾಲರಾದ ರಾಜೇಂದ್ರ ಅರ್ಲೇಕರ್ ಅವರಿಗೆ ಇಮೇಲ್ ಮೂಲಕ ಪತ್ರ ಬರೆದಿದ್ದು, ಸರ್ಕಾರ ರಚಿಸಲು ತಮಗೆ ಆಹ್ವಾನ ನೀಡುವಂತೆ ಕೋರಿದ್ದಾರೆ. ಅಷ್ಟೇ ಅಲ್ಲದೆ, ಸದನದಲ್ಲಿ ಎರಡು ವಾರಗಳ ಒಳಗಾಗಿ ತಮ್ಮ ಬಹುಮತವನ್ನು ಸಾಬೀತುಪಡಿಸುವುದಾಗಿ ವಿಜಯ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೈತ್ರಿ ಸಮೀಕರಣಗಳು ಹೇಗಿರಲಿವೆ?

ಬಹುಮತಕ್ಕೆ 10 ಸ್ಥಾನಗಳ ಕೊರತೆ ಇರುವುದರಿಂದ ವಿಜಯ್ ಯಾರ ಜೊತೆ ಕೈಜೋಡಿಸಲಿದ್ದಾರೆ ಎಂಬ ಕುತೂಹಲ ಮೂಡಿದೆ. AIADMK ಜೊತೆ ಮೈತ್ರಿ? ಡಿಎಂಕೆಯನ್ನು ಅಧಿಕಾರದಿಂದ ದೂರವಿಡಲು ಎಐಎಡಿಎಂಕೆ (47 ಸ್ಥಾನ) ವಿಜಯ್ ಅವರಿಗೆ ಬೆಂಬಲ ನೀಡುತ್ತದೆಯೇ ಎಂಬ ಚರ್ಚೆ ನಡೆಯುತ್ತಿದೆ.

ಕಾಂಗ್ರೆಸ್ ಸಾಥ್? ಇನ್ನೊಂದೆಡೆ ಕಾಂಗ್ರೆಸ್ ಈಗಾಗಲೇ ವಿಜಯ್ ಅವರಿಗೆ ಸ್ನೇಹದ ಹಸ್ತ ಚಾಚಿದೆ. ಸ್ವತಃ ರಾಹುಲ್ ಗಾಂಧಿ ಅವರು ವಿಜಯ್ ಜೊತೆ ದೂರವಾಣಿ ಮೂಲಕ ಮಾತನಾಡಿರುವುದು ಮೈತ್ರಿಯ ಮುನ್ಸೂಚನೆ ನೀಡಿದೆ. ಕಾಂಗ್ರೆಸ್ ಮತ್ತು ಪಕ್ಷೇತರ ಅಭ್ಯರ್ಥಿಗಳ ಬೆಂಬಲದೊಂದಿಗೆ ಸರ್ಕಾರ ರಚಿಸುವ ಸಾಧ್ಯತೆಯೂ ಇದೆ.

ಇಂದು ಮಹತ್ವದ ಸಭೆ

ಇಂದು ಬೆಳಿಗ್ಗೆ 11 ಗಂಟೆಗೆ ವಿಜಯ್ ಅವರು ತಮ್ಮ ಪಕ್ಷದ ನೂತನ ಶಾಸಕರೊಂದಿಗೆ ಟಿವಿಕೆ ಕಚೇರಿಯಲ್ಲಿ ಮಹತ್ವದ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಮುಂದಿನ ಮೈತ್ರಿ ಮತ್ತು ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ.

ದಶಕಗಳಿಂದ ಡಿಎಂಕೆ ಮತ್ತು ಎಐಎಡಿಎಂಕೆ ನಡುವೆ ಮಾತ್ರ ನಡೆಯುತ್ತಿದ್ದ ತಮಿಳುನಾಡು ರಾಜಕೀಯದ ಸ್ಕ್ರಿಪ್ಟ್ ಅನ್ನು ವಿಜಯ್ ತಮ್ಮ ಮೊದಲ ಚುನಾವಣೆಯಲ್ಲೇ ಬದಲಿಸಿ ಹೊಸ ಇತಿಹಾಸ ಬರೆದಿದ್ದಾರೆ.

Read More
Next Story